ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡವಾದೀತೇ ಕೈಬರಹದ ಕೌಶಲ?

ಕೈಬರಹದ ಅಭ್ಯಾಸ ತ‍ಪ್ಪಿಸುವುದು ಮೆದುಳಿನ ಚಟುವಟಿಕೆಗಾಗುವ ನಷ್ಟವೇ ಸರಿ
Last Updated 29 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಆರನೇ ತರಗತಿಯಿಂದ ಶಾಲೆಗಳು ಪುನರಾರಂಭ ವಾಗಿವೆ. ಆದರೂ ಮಕ್ಕಳು ಶಾಲೆಗೆ ಹೋಗಲು ತುಂಬಾ ಉತ್ಸುಕರಾಗಿಲ್ಲ! ಏಕೆ? ಈವರೆಗೆ ಆನ್‍ಲೈನ್‍ ತರಗತಿಗಳು ಇದ್ದುದರಿಂದ ತಮ್ಮನ್ನು ಹೆಚ್ಚು ಕಾಡದಿದ್ದ, ನೋಟ್ಸ್- ಹೋಂವರ್ಕ್ ‘ಬರೆದು’ಮುಗಿಸಿ ಒಪ್ಪಿಸುವ ಬಗ್ಗೆ ಈಗ ಅಪ್ಪ-ಅಮ್ಮ-ಶಿಕ್ಷಕರಿಗಿಂತ ಮಕ್ಕಳೇ ಹೆಚ್ಚು ಕೆಲಸ ಮಾಡಬೇಕು!

ಈವರೆಗೆ ಆನ್‍ಲೈನ್‍ ತರಗತಿಗಳು ಇದ್ದುದರಿಂದ ಕೈಬರಹದ ಬಗ್ಗೆ ಹೆಚ್ಚು ಗಮನಹರಿಸದ ಮಕ್ಕಳು, ಇದೀಗ ಈ ವಿಷಯದಲ್ಲಿ ಮತ್ತೆ ಹೆಚ್ಚು ಕೆಲಸ ಮಾಡಬೇಕಾಗಿದೆ!

ಕಳೆದ 10 ವರ್ಷಗಳಲ್ಲಿ ಪತ್ರಗಳು ಇ-ಮೇಲ್- ಟೆಕ್ಸ್ಟ್‌- ವಾಯ್ಸ್ ಮೆಸೇಜ್‍ಗಳಾಗಿ ಬದಲಾದರೂ ವಿದ್ಯಾರ್ಥಿಗಳಿಗೆ ಮಾತ್ರ ನಾವು ಬೋಧಿಸುತ್ತಿದ್ದದ್ದು ಕೈಯಲ್ಲಿ ಪೆನ್ನು-ಪೆನ್ಸಿಲ್ ಹಿಡಿದು ಬರೆಯಬೇಕೆಂಬು ದನ್ನೇ. ಒಂದೂವರೆ ವರ್ಷದಿಂದ ಈ ಪರಿಸ್ಥಿತಿ ಬದಲಾಗಿ ಬಿಟ್ಟಿದೆ. ಮಕ್ಕಳು ಮೊಬೈಲ್- ಕಂಪ್ಯೂಟರ್ ಸ್ಕ್ರೀನ್‍ಗಳ ಮುಂದೆ ಕುಳಿತು, ‘ಅಕ್ಷರ ಬರೆದೇ ಕಲಿಯಬೇಕು ಏಕೆ’ ಎಂದು ಪ್ರಶ್ನಿಸುತ್ತಿದ್ದಾರೆ. ಆಟೊ ಕರೆಕ್ಟಾಗಿ ತನ್ನಿಂತಾನೇ ಸರಿಗೊಳ್ಳುವ ‘ಸ್ಪೆಲ್ಲಿಂಗ್- ಕಾಗುಣಿತ’ ನೋಡಿ, ‘ನಾವು ಸ್ಪೆಲ್ಲಿಂಗ್ ಕಲಿಯಬೇಕಾದ ಅಗತ್ಯವಾದರೂ ಏನು’ ಎಂದು ಹೆತ್ತವರನ್ನು ಪ್ರಶ್ನಿಸುತ್ತಿದ್ದಾರೆ!

ಭಾರತದಂತಹ ಬೃಹತ್ ಜನಸಂಖ್ಯೆಯ ದೇಶ ದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಹಠಾತ್ತನೆ ಬದಲಾವಣೆ ಗಳನ್ನು ತರುವುದು ಸುಲಭವಲ್ಲ. ಫಿನ್ಲೆಂಡ್ ಮತ್ತು ನಾರ್ವೆಯಂತಹ ದೇಶಗಳು ಈಗಾಗಲೇ ಕೈಬರಹದ ಕೌಶಲವನ್ನು ಮಕ್ಕಳಿಗೆ ಹೇಳಿಕೊಡುವುದನ್ನೇ ನಿಲ್ಲಿಸಿ ಬಿಟ್ಟಿವೆ. ಅಲ್ಲಿ ಎಲ್ಲವೂ ‘ಡಿಜಿಟಲ್’ ಶಾಲೆಗಳೇ. ಮಕ್ಕಳಿಗೆ ಪೆನ್ನು-ಪೆನ್ಸಿಲ್‍ಗಿಂತ, ಕಡಿಮೆ ಸವಾಲುಗಳನ್ನು ಕೀಬೋರ್ಡ್ ಒಡ್ಡುತ್ತದೆ, ಕಲಿಕೆಯನ್ನು ಸುಲಭವಾಗಿ ಸುತ್ತದೆ ಎಂದು ಅಲ್ಲಿನ ಶಿಕ್ಷಕರು ಹೇಳುತ್ತಿದ್ದಾರೆ. ಭಾರತದಲ್ಲಿಯೂ ಮಕ್ಕಳು ಹಾಗೂ ಪೋಷಕರಿಗೆ ಇದು ಸತ್ಯ ಎನಿಸಬಹುದು. ಆದರೆ ಈಗ ಸದ್ಯಕ್ಕೆ ಶಿಕ್ಷಣ ಕ್ರಮ ಹೇಗಿದೆಯೆಂದರೆ, ಒಂಬತ್ತನೇ ತರಗತಿಯ ವರೆಗಂತೂ ಕೈಬರಹದಲ್ಲಿ ಪರೀಕ್ಷೆ ಬರೆಯಬೇಕು. ಹಾಗೆಂದು ಮಕ್ಕಳು ಕೈಬರಹವನ್ನು ಚೆನ್ನಾಗಿ ಕಲಿತರೆನ್ನಿ. ಮುಂದೆ ಸಿಇಟಿ, ನೀಟ್ ಬರೆದರೆ ಅದು ಏತಕ್ಕೂ ಬೇಡ! ಹಿಂದೆ ನಮ್ಮ ಪ್ರಶ್ನೆಪತ್ರಿಕೆಗಳಲ್ಲಿ ಇರುತ್ತಿದ್ದ ‘ಅಂದವಾದ ಬರವಣಿಗೆಗೆ 5 ಅಂಕಗಳು’ ಇಂದು ಮಕ್ಕಳಿಗೆ ಹೇಳಬಹುದಾದ ಹಿಂದಿನ ಕಥೆಯಷ್ಟೇ ಆಗಿ ನಿಂತಿದೆ.

ಇಂಥ ಪರಿಸ್ಥಿತಿ ಇದೀಗ ಕೋವಿಡ್‍ನಿಂದಾಗಿ ಮತ್ತಷ್ಟು ಬಲವಾಗಿದೆ. ಕೈಬರಹ-ಬರವಣಿಗೆಯ ಪ್ರಕ್ರಿಯೆಯನ್ನು, ವಾಹನ ಚಲಾಯಿಸುವ ಪ್ರಕ್ರಿಯೆ ಯಂತೆಯೇ ನೋಡಬಹುದು. ರಸ್ತೆ ನಿಯಮಗಳು-ಟ್ರಾಫಿಕ್ ಸಂಕೇತ-ನಿಯಂತ್ರಣಗಳು, ಕಾರಿನ ಬ್ರೇಕ್-ಕ್ಲಚ್ ಇವೆಲ್ಲವನ್ನೂ ನಾವು ಮೊದಲು ಕಲಿಯಬೇಕಷ್ಟೆ. ಈ ಆರಂಭಿಕ ಕೌಶಲಗಳು ಒಮ್ಮೆ ಕರಗತವಾದ ವೆಂದರೆ, ನಾವು ಎಲ್ಲಿಗೆ ಹೋಗಬೇಕು ಎಂಬುದರ ಮೇಲಷ್ಟೇ ಗಮನ ಕೇಂದ್ರೀಕರಿಸಿ, ಪ್ರಯಾಣವನ್ನು ಆರಾಮವಾಗಿ ಮಾಡಲು ಸಾಧ್ಯವಾಗುತ್ತದೆ.

ಇದೇರೀತಿ ಕೈಯಿಂದ ಬರೆಯುವುದೂ ಒಂದು ಸಂಕೀರ್ಣ ಪ್ರಕ್ರಿಯೆ. ಅಕ್ಷರವನ್ನು ಬರೆಯುವ ಬಗೆ, ಅದರ ಓರೆ, ವಾಲುವಿಕೆ, ಅಕ್ಷರ-ಅಕ್ಷರ, ಪದ-ಪದಗಳ ನಡುವಿನ ಅಂತರ ಇವು ಕೇವಲ ಕಾಗದದ ಮೇಲೆ, ಪೆನ್ನು -ಪೆನ್ಸಿಲ್ಲುಗಳಿಂದ ನಾವು ಮೂಡಿಸುವಂತಹವಲ್ಲ. ಅವು ನಮ್ಮ ಮಿದುಳಿನಿಂದ ನಡೆಯುವ ಪ್ರಕ್ರಿಯೆಗಳು. ಕೈಯಿಂದ ಬರೆಯುವಾಗ ನಾವು ಪ್ರತೀ ಅಕ್ಷರಕ್ಕೂ ಬೇರೆ ಬೇರೆ ರೀತಿಯಲ್ಲಿ ಚಲಿಸಬೇಕಾಗುತ್ತದೆ. ಅದೇ ಟೈಪ್ ಮಾಡುವಾಗ ಅಥವಾ ಸ್ಕ್ರೀನ್ ಮೇಲೆ ಅಕ್ಷರ ಗಳನ್ನು ‘ಟಚ್’ ಮಾಡುವಾಗ ಪ್ರತೀ ಅಕ್ಷರಕ್ಕೂ ಒಂದೇ ರೀತಿಯ ಚಲನೆಯಾಗಿಬಿಡುತ್ತದೆ. ಇದು ಮಿದುಳಿನ ಪ್ರಚೋದನೆಗಾಗುವ ನಷ್ಟವಾದರೆ, ‘ಬರೆಯುವ’ ಪ್ರಕ್ರಿಯೆಯ ಮೂಲಕ ಏಕಕಾಲಕ್ಕೆ ನಡೆಯುವ ವಿವಿಧ ಕಲಿಕೆಗಳೂ ಮಕ್ಕಳಲ್ಲಿ ಕ್ರಮೇಣ ಮರೆಯಾಗುತ್ತವೆ ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ.

ಟ್ಯಾಬ್ಲೆಟ್‍ನಲ್ಲಿ ಬರೆಯುವುದು, ಕೀಬೋರ್ಡ್‌ನಲ್ಲಿ ಟೈಪ್ ಮಾಡುವುದು ಮತ್ತು ಕೈಬರಹ ಈ ಮೂರನ್ನು ಹೋಲಿಸಿ ನೋಡಿದಾಗಲೂ ಕೈಬರಹವೇ ಮಿದುಳಿಗೆ ಅತ್ಯಂತ ಉಪಯುಕ್ತ ಎಂದು ಕಂಡುಬಂದಿರುವುದು ಗಮನಾರ್ಹ. ಕಾಗದ-ಪೆನ್ನು ಉಪಯೋಗಿಸುವ ಮಕ್ಕಳ ಓದುವ ಸಾಮರ್ಥ್ಯ, ಒಂದು ವರ್ಷದ ನಂತರ ಅವರು ಹೊಸತನ್ನು ಬರೆಯುವ ಸಾಮರ್ಥ್ಯ ಎರಡೂ, ಹಾಗೆ ಉಪಯೋಗಿಸದ ಮಕ್ಕಳಿಗಿಂತ ಹೆಚ್ಚು ಎಂಬುದು ಉಲ್ಲೇಖಾರ್ಹ ಅಂಶ.

ಮಕ್ಕಳು ಇಂದು ‘ಟೆಕ್‍ಸ್ಯಾವಿ’ ಆಗಿದ್ದಾರೆ. ಆದರೆ ಅದರರ್ಥ ಹಳೆಯ ಕೌಶಲಗಳನ್ನು ಬಿಟ್ಟು ಮಿದುಳು ‘ಕಲಿಕೆ’ಯನ್ನು ಕಳೆದುಕೊಳ್ಳಬೇಕೆಂದಲ್ಲ. ಹಾಗಿದ್ದರೆ ಶಾಲೆ ಆರಂಭವಾಗದ, ಬರವಣಿಗೆಯ ತಂತ್ರವನ್ನು ಕಲಿಯುವ ಅಗತ್ಯವಿರುವ ಹತ್ತು ವರ್ಷದವರೆಗಿನ ಮಕ್ಕಳು ಬರೆಯುವಂತೆ ಮಾಡುವುದಾದರೂ ಹೇಗೆ?

ಇಂಗ್ಲೆಂಡಿನಲ್ಲಿ ನಡೆದ ಅಧ್ಯಯನವೊಂದು, ಅಲ್ಲಿಯ ಪ್ರೌಢಶಾಲಾ ಮಕ್ಕಳು ಲಾಕ್‍ಡೌನ್ ಅವಧಿ ಯಲ್ಲಿ ತಾವು ತುಂಬಾ ಬರೆದೆವೆಂದೂ, ಅದನ್ನು ಎಂಜಾಯ್‌ ಮಾಡಿದೆವೆಂದೂ ಹೇಳಿದ್ದನ್ನು ದಾಖಲಿ ಸಿದೆ. ಅಂದರೆ ಹತ್ತು ವರ್ಷದವರೆಗಿನ ಮಕ್ಕಳಲ್ಲಿಯೂ ಕೇವಲ ಅನುಕರಿಸಿ ಬರೆಯುವುದಕ್ಕೆ, ಕಾಪಿರೈಟಿಂಗ್ ಪುಟಗಟ್ಟಲೆ ಬರೆಯುವುದಕ್ಕೆ ಒತ್ತಾಯಿಸದೆ, ‘ತಪ್ಪಾ ದರೂ ಪರವಾಗಿಲ್ಲ, ನಿಮಗನಿಸಿದ್ದನ್ನು ಬರೆಯಿರಿ, ಚಿತ್ರ ಬರೆಯಿರಿ, ‘ಇ’ ಅಕ್ಷರದಿಂದ ಇಲಿಯ ಚಿತ್ರ ಬರೆಯಲು ಸಾಧ್ಯವೇ ನೋಡಿ’ ಇತ್ಯಾದಿ ಅವಕಾಶಗಳನ್ನು ನೀಡಿ ದರೆ ಮಕ್ಕಳಲ್ಲಿ ಬರೆಯುವ ಬಗ್ಗೆ ಆಸಕ್ತಿ ಹುಟ್ಟಲು ಸಾಧ್ಯವಿದೆ.

ಪಾಠ ಕೇಳುತ್ತಾ ನೋಟ್ಸ್ ಮಾಡಬೇಕಾದಾಗ, ಲೆಕ್ಕ ಮಾಡುವಾಗ ಪೇಪರ್- ಪೆನ್ನು ಹಿಡಿದು ಮಧ್ಯೆ ಮಧ್ಯೆ ಬರೆಯುವುದು, ಅದೇ ಒಂದು ಪ್ರಬಂಧ ಬರೆಯಬೇಕಾದಾಗ ಟೈಪು ಮಾಡಿ ಸಮಯ ಉಳಿ‌ಸುವುದು ಇವು ಇಂದು ಹಿರಿಯರು ಮಕ್ಕಳಿಗೆ ಹಾಕಿಕೊಡಬೇಕಾದ ಮಾದರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT