ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಹಿಜಾಬ್: ಎಷ್ಟೊಂದು ಗಲಭೆ!

Last Updated 17 ಮಾರ್ಚ್ 2022, 22:08 IST
ಅಕ್ಷರ ಗಾತ್ರ

ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಹಿಜಾಬ್ ಧರಿಸುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಕೊಟ್ಟಿರುವ ತೀರ್ಪಿನ ವಿವರಗಳನ್ನು ಓದುತ್ತಿದ್ದಾಗ, ಕೆಲವು ವಿವರಗಳು ನನ್ನನ್ನು ತುಂಬಾ ಗೊಂದಲಕ್ಕೆ ಈಡು ಮಾಡಿದವು. ನಾನೇನೂ ಕಾನೂನು ತಜ್ಞನಲ್ಲ, ಕೋರ್ಟ್‌ಗಳಲ್ಲಿ ವಾದ ಮಾಡುವ ವಕೀಲಿ ವೃತ್ತಿಯೂ ನನ್ನದಲ್ಲ. ಭಾರತೀಯ ಕಾನೂನುಗಳ ಬಗ್ಗೆ ಆಸಕ್ತಿ ಇರುವುದರಿಂದ, ನನ್ನ ಗೊಂದಲವನ್ನು ಪ್ರಾಜ್ಞರು ದೂರ ಮಾಡಬಹುದೆಂಬ ನಿರೀಕ್ಷೆಯಿಂದ ಮಾತ್ರ ಕೆಳಗಿನ ಕೆಲವು ಸಂಗತಿಗಳನ್ನು ಪ್ರಸ್ತಾಪಿಸುತ್ತಿದ್ದೇನೆ.

ಮತ್ತೂ ಒಂದು ಮಾತು ಹೇಳಿ ಮುಂದುವರಿಯುತ್ತೇನೆ: ತಾತ್ವಿಕ ನೆಲೆಯಲ್ಲಿ, ಸ್ತ್ರೀಯರು ಹಿಜಾಬ್‍ ಧರಿಸಲೇಬೇಕು, ಪರದಾ ಪದ್ಧತಿಯನ್ನು ಪಾಲಿಸಲೇಬೇಕು, ಗಂಭೀರ- ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ತ್ರೀಯರು ಸೀರೆಯನ್ನೇ ಉಡಬೇಕು ಇತ್ಯಾದಿ ವಿಧಿ-ನಿಷೇಧಗಳು ಸ್ತ್ರೀಯರ ಸ್ವಾತಂತ್ರ್ಯವನ್ನುಮೊಟಕುಗೊಳಿಸಲು ಪಿತೃಕೇಂದ್ರಿತ ವ್ಯವಸ್ಥೆಗಳು ಯಾವುದೋ ಒಂದು ಕಾಲಘಟ್ಟದಲ್ಲಿ ಜಾರಿಗೆ ತಂದವುಗಳು. ಅವು ಇಂದಿನ ಸಮಾಜಕ್ಕೆ ಪ್ರಸ್ತುತವಲ್ಲ ಎಂಬುದು ನನ್ನ ನಿಲುವು. ಆದರೆ ಈಗೊಂದು ತಿಂಗಳಿನಿಂದ ಹಿಜಾಬ್ ಕುರಿತಾಗಿ ಆಗುತ್ತಿರುವ ವಾದ ವಿವಾದಗಳ ಸಂದರ್ಭಗಳೇ ಬೇರೆ ಎಂದು ನನಗೆ ಕಾಣುತ್ತದೆ.

ಮೊದಲನೆಯದಾಗಿ, ‘ಹಿಜಾಬ್ ಅತ್ಯವಶ್ಯಕ ಧಾರ್ಮಿಕ ಆಚರಣೆಯಲ್ಲ’ ಎಂಬ ನಿರ್ಧಾರವನ್ನು ಒಪ್ಪಿದರೂ, ಹಿಜಾಬ್‍ಗೆ ಸಂಬಂಧಿಸಿದ ಈ ಮೊಕದ್ದಮೆಯಲ್ಲಿ ಉತ್ತರಿಸಬೇಕಾದ ಪ್ರಶ್ನೆ ಅದಲ್ಲವೇ ಅಲ್ಲ ಎಂದು ನನಗನಿಸುತ್ತದೆ. ‘ಹಿಜಾಬ್ ಧರಿಸಿಕೊಂಡು ತರಗತಿಯಲ್ಲಿ ಕೂಡಬಹುದೆ ಅಥವಾ ಇಲ್ಲವೆ’ ಎನ್ನುವುದು ಪ್ರಶ್ನೆ. ಬೋಧನೆ, ಪಠ್ಯಗಳು ಮತ್ತುಪ್ರಶ್ನೆಪತ್ರಿಕೆಗಳು ಸಮಾನವಾಗಿರುವಾಗ, ತರಗತಿಯಲ್ಲಿ ಕುಳಿತು ಬೋಧನೆಯನ್ನು ಕೇಳಲು ಮತ್ತು ಪರೀಕ್ಷೆಗಳಲ್ಲಿ ಉತ್ತರಿಸಲು ಒಂದು ವಿಶಿಷ್ಟ ವಸ್ತ್ರಸಂಹಿತೆ ಏಕೆ ಇರಬೇಕು ಎಂಬುದು ನನಗೆ ಅರ್ಥವಾಗುವುದಿಲ್ಲ.

ನಾನು ನನ್ನ ಶಿಕ್ಷಣ ಕಾಲದಲ್ಲಿ ಬಿ.ಎ. ಆನರ್ಸ್ ಸೇರಿದಂತೆ ಎಲ್ಲಾ ಘಟ್ಟದ ತರಗತಿಗಳಿಗೂ ಪಂಚೆ-ಶರ್ಟ್ ಅಥವಾ ಪೈಜಾಮ-ಶರ್ಟ್ ಮತ್ತು ಚಪ್ಪಲಿಯನ್ನು ಧರಿಸಿಯೇ ಹೋಗುತ್ತಿದ್ದೆ– ಧಾರ್ಮಿಕ ಕಾರಣದಿಂದಲ್ಲ, ನನಗೆ ಪ್ಯಾಂಟ್-ಸೂಟ್ ಹಾಕಲು ಹಣವಿರಲಿಲ್ಲ ಎಂಬ ಒಂದೇ ಕಾರಣಕ್ಕೆ. ಆಗ ಯಾವ ಘಟ್ಟದಲ್ಲಿಯೂ ಶಿಕ್ಷಕರಾಗಲಿ, ಸಹ-ವಿದ್ಯಾರ್ಥಿಗಳಾಗಲಿ ಯಾರೂ ಆ ಉಡುಪನ್ನು ಆಕ್ಷೇಪಿಸುತ್ತಿರಲಿಲ್ಲ. ಈಗ ಕಾಲ ಬದಲಾಗಿದೆ ಎಂದರೂ ನಾವು ಹಾಕುವ ಬಟ್ಟೆಗೂ ನಮ್ಮ ಶಿಕ್ಷಣಕ್ಕೂ ನಿಕಟ ಸಂಬಂಧವಿದೆ ಎಂದು ನನಗೆ ನಂಬಲಾಗುವುದಿಲ್ಲ.

ಹಾಗೆಯೇ, ‘ಮೇಲು-ಕೀಳು, ಬಡವ-ಶ್ರೀಮಂತ ಎಂಬ ತರತಮಗಳನ್ನು ತೊರೆದು ವಿದ್ಯಾರ್ಥಿಗಳು ಅನುಶಾಸನದ ಶಿಕ್ಷಣ ಪಡೆಯಲಿ ಎಂಬ ಉದ್ದೇಶದಿಂದಲೇ ಸಮವಸ್ತ್ರ ಸಂಹಿತೆ ಇದೆ’ ಎಂಬ ಹೇಳಿಕೆ ಚರ್ಚಾರ್ಹ. ಸಮವಸ್ತ್ರ (ಯೂನಿಫಾರ್ಮ್) ಧರಿಸಿದ ಮಾತ್ರಕ್ಕೆ ಮಕ್ಕಳಲ್ಲಿ ಅಥವಾ ವಯಸ್ಕರಲ್ಲಿ ಸರ್ವ ಸಮಾನ ಭಾವನೆ ಹುಟ್ಟುತ್ತದೆ ಎಂಬ ವಾದ ಸತ್ಯದೂರವೆಂದು 40 ವರ್ಷಗಳ ಕಾಲ ಭಿನ್ನ ವಿದ್ಯಾಸಂಸ್ಥೆಗಳಲ್ಲಿ ಹಾಗೂ ಭಿನ್ನ ದೇಶಗಳಲ್ಲಿ ಶಿಕ್ಷಕನಾಗಿ ದುಡಿದಿರುವ ನನಗೆ ಅನುಭವವೇದ್ಯವಾಗಿದೆ. ಪ್ರಾಥಮಿಕ ಶಾಲಾ ಮಕ್ಕಳು ಕೂಡಾ ಯೂನಿಫಾರ್ಮ್ ಧರಿಸಿಯೂ ಕೆಲ ಮಕ್ಕಳು ಕಾರಿನಲ್ಲಿ ಅಥವಾ ಬೈಕ್‍ಗಳಲ್ಲಿ ಅಥವಾ ಬಸ್‍ಗಳಲ್ಲಿ ಶಾಲೆಗೆ ಬರುವುದನ್ನು ಮತ್ತು ಶಾಲೆಯಿಂದ ಮನೆಗೆ ಮರಳುವುದನ್ನು ಗಮನಿಸುತ್ತಾರೆ. ಶಾಲೆಯಿಂದ ಟ್ರಿಪ್ ಹೋಗುವಾಗ, ಟ್ರಿಪ್‍ಗೆ ಕೊಡಬೇಕಾದ ಹಣ ಇಲ್ಲದೆ ಟ್ರಿಪ್‍ಗೆ ಹೋಗದೇ ಉಳಿಯುವವರು ತಮ್ಮ ಹಾಗೂ ಇತರರ ನಡುವೆ ಇರುವ ಅಗಾಧ ವ್ಯತ್ಯಾಸವನ್ನು ಗ್ರಹಿಸುತ್ತಾರೆ. ಇನ್ನು ಹೈಸ್ಕೂಲ್-ಕಾಲೇಜು ವಿದ್ಯಾರ್ಥಿಗಳು ‘ಇಂಗ್ಲಿಷ್ ಚೆನ್ನಾಗಿ ಮಾತನಾಡುವವರು- ಇಂಗ್ಲಿಷ್ ಬಾರದವರು’, ಸ್ಮಾರ್ಟ್‌ಫೋನ್‌ ಇರುವವರು- ಅದಿಲ್ಲದವರು, ಉಳ್ಳವರು- ಬಡವರು ಇತ್ಯಾದಿ ಅಸಮಾನತೆಯ ವಿವಿಧ ಪದರುಗಳನ್ನು ಅನುಭವಿಸುತ್ತಾರೆ. ಪರಿಣಾಮವಾಗಿ, ಒಂದು ಬಗೆಯ ‘ಉಚ್ಚ ಭಾವನೆ’ಯಿಂದ ತಲೆ ಎತ್ತಿ ತಿರುಗುತ್ತಾರೆ ಅಥವಾ ‘ನೈಚ್ಯ ಭಾವನೆ’ಯಿಂದ ನರಳುತ್ತಾರೆ. ಇವಾವುದನ್ನೂ ‘ಸಮಾನ ವಸ್ತ್ರಸಂಹಿತೆ’ ಪರಿಹರಿಸುವುದಿಲ್ಲ.

ಕೊನೆಯದಾಗಿ ಒಂದು ನೆನಪು. 35-40 ವರ್ಷಗಳ ಹಿಂದಿನ ಘಟನೆ. ಬೆಂಗಳೂರಿನ ಒಂದು ಕಾನ್ವೆಂಟ್ ಸ್ಕೂಲಿನಲ್ಲಿ ಹಿಂದೂ ಹುಡುಗಿಯೊಬ್ಬಳು ಒಮ್ಮೆ ಹಣೆಗೆ ಕುಂಕುಮವಿಟ್ಟು ಶಾಲೆಗೆ ಬಂದಿದ್ದಳು. ಈ ಸುದ್ದಿ ಸ್ಕೂಲಿನ ಹೆಡ್ ಮಿಸ್ಟ್ರೆಸ್‍ಗೆ ಮುಟ್ಟಿದಾಗ, ಅವರು ಕೂಡಲೇ ತರಗತಿಗೆ ಬಂದು, ಕುಂಕುಮ ಧರಿಸಿ ತರಗತಿಗೆ ಬರುವುದು ಅವರ ಶಾಲೆಯ ತತ್ವಗಳಿಗೆ ವಿರುದ್ಧವೆಂದು ಹೇಳುತ್ತಾ, ಆಕೆಯ ಹಣೆಯನ್ನು ಒರೆಸಿ, ಶಾಲೆಯ ಶಿಸ್ತನ್ನು ಮುರಿದುದಕ್ಕಾಗಿ ಶಿಕ್ಷೆಯೆಂದು, ಅಳುತ್ತಿದ್ದ ಆ ಹುಡುಗಿಯನ್ನು ಅರ್ಧ ದಿವಸ ಬೆಂಚಿನ ಮೇಲೆ ನಿಲ್ಲಿಸಿದ್ದರು. ಮರುದಿನ ಈ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿದ ಪೋಷಕರು, ಕನ್ನಡ ಸಂಸ್ಥೆಗಳು ಇತ್ಯಾದಿ ಅನೇಕರು ಶಾಲೆಗೆ ನುಗ್ಗಿ, ಹೆಡ್ ಮಿಸ್ಟ್ರೆಸ್ ಎಲ್ಲಾ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಆ ಹುಡುಗಿಯ ಕ್ಷಮೆ ಕೇಳುವಂತೆ ಮಾಡಿದರು.

ಆ ಸುದ್ದಿಯ ಬಗ್ಗೆ ನಾನೊಂದು ಲೇಖನವನ್ನು ‘ಮುಂಗಾರು’ ಪತ್ರಿಕೆಗೆ ಬರೆದಿದ್ದೆ. ಅದರ ಕೊನೆಯ ಸಾಲು, ‘ಅತಿ ಚಿಕ್ಕ ವಿಷಯಕ್ಕೆ ಎಷ್ಟೊಂದು ಗಲಭೆ! ತಿಗಣೆ ಕೊಲ್ಲಲು ಸುತ್ತಿಗೆ ತೆಗೆದುಕೊಂಡಂತೆ’ ಎಂದಿತ್ತು. ಇಂದು ಹಿಜಾಬ್ ವಿವಾದದ ಬಗ್ಗೆಯೂ ನನಗೆ ಹಾಗೇ ಅನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT