ಹಿಂದೂಗಳೂ ವಿರೋಧಿಸಿದ್ದರು

7
ಸಮಾನ ನಾಗರಿಕ ಸಂಹಿತೆಗೆ ಹಿಂದೂಗಳಿಂದಲೂ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು

ಹಿಂದೂಗಳೂ ವಿರೋಧಿಸಿದ್ದರು

Published:
Updated:

‘ಷರಿಯಾ ನ್ಯಾಯಾಲಯ: ನೆಹರೂ ಮೂರ್ಖತನ’ (ಪ್ರ.ವಾ., ಜುಲೈ 19) ಲೇಖನ ಓದಿ ನೋವಾಯಿತು.  ನೆಹರೂ ನಡೆಯನ್ನು ‘ರಾಕ್ಷಸರೂಪದ ಮೂರ್ಖತನ’ ಎಂದಿರುವುದನ್ನು ಮರೆಯಲಾಗುತ್ತಿಲ್ಲ. ಸಮಾನ ನೀತಿಸಂಹಿತೆಯ ಸುತ್ತಲಿನ ಇನ್ನಿತರ ವಿದ್ಯಮಾನಗಳನ್ನು ಓದುಗರಿಗೆ ತಿಳಿಯಪಡಿಸುವಲ್ಲಿನ ವೈಫಲ್ಯ ಆಕ್ಷೇಪಾರ್ಹ.

ಅಂದು ಸಂವಿಧಾನ ರಚನಾ ಸಭೆಯಲ್ಲಿ ಸಮಾನ ನೀತಿಸಂಹಿತೆಯ ಬಗ್ಗೆ ಚರ್ಚೆಗಳು ನಡೆದಿದ್ದವು. ಹಂಸಮೆಹತಾ, ಅಂಬೇಡ್ಕರ್ ಮೊದಲಾದವರು ಕೌಟುಂಬಿಕ ಕಾನೂನುಗಳಲ್ಲಿ ಸುಧಾರಣೆ ಸರ್ಕಾರದ ಮೂಲಕ ಆಗಬೇಕೆಂದು ವಾದಿಸಿದರೆ, ಮುಸ್ಲಿಂ ಸಂಪ್ರದಾಯವಾದಿಗಳು ಅದರಿಂದ ತಮ್ಮ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಲಿದೆ ಎಂದು ವಾದಿಸಿದರು. ಅಂತಿಮವಾಗಿ ಅಲ್ಪಸಂಖ್ಯಾತರಲ್ಲಿ ಸುರಕ್ಷತೆಯ ಭಾವನೆ ಇರಬೇಕಾದುದು ಮುಖ್ಯ ಎಂದು ನಿರ್ಧರಿಸಲಾಯಿತು. ಸಮಾನತೆಗಿಂತಲೂ ಬಹುತ್ವಕ್ಕೆ ಮಹತ್ವ ನೀಡಿ, ಸಮಾನತೆ ಮತ್ತು ಏಕರೂಪತೆಯ ಗುರಿಯನ್ನು ಮುಂದಕ್ಕೆ ಹಾಕಿ ಸಮಾನ ನಾಗರಿಕ ಸಂಹಿತೆಯನ್ನು ಸಂವಿಧಾನದ ನಿರ್ದೇಶಕ ತತ್ವಗಳಲ್ಲಿ ಸೇರಿಸಲಾಯಿತು. ಆದರೆ ಇದನ್ನು ಮುಸ್ಲಿಮರ ತುಷ್ಟೀಕರಣಕ್ಕಾಗಿ ಮಾಡಲಾಯಿತೆಂದು ಹೇಳುವುದು ಸತ್ಯಕ್ಕೆ ದೂರವಾದ ವಿಚಾರ.

ವಾಸ್ತವದಲ್ಲಿ ಅಂದು ಸಮಾನ ನಾಗರಿಕ ಸಂಹಿತೆಗೆ ಹಿಂದೂಗಳಿಂದಲೂ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು. 1940ರ ದಶಕದಲ್ಲಿ ಸುಧಾರಣೆ ಆಗಬೇಕಾದ ಕಾನೂನುಗಳ ಪಟ್ಟಿಯಲ್ಲಿದ್ದ ಮೊದಲ ಹೆಸರೇ ‘ಹಿಂದೂ ವೈಯಕ್ತಿಕ ಕಾನೂನು’ಗಳದ್ದು. ಇದಕ್ಕೆ ಕಾರಣವೇನೆಂದರೆ ಮುಸ್ಲಿಂ ಕಾನೂನುಗಳಲ್ಲಿ ಗಮನಾರ್ಹ ಸುಧಾರಣೆಗಳನ್ನು 1930ರ ದಶಕದ ಅಂತ್ಯದಲ್ಲಿಯೇ ತರಲಾಗಿತ್ತು. ಸುಧಾರಿತ ಷರಿಯಾ ಕಾಯ್ದೆ ಮುಸ್ಲಿಂ ಮಹಿಳೆಯರಿಗೆ ವಂಶಪಾರಂಪರಿಕ ಆಸ್ತಿಯನ್ನು ಹೊಂದುವ ಹಕ್ಕು, ಗಂಡನಿಂದ ಪ್ರತ್ಯೇಕವಾದ ಕಾನೂನುಬದ್ಧ ಅಸ್ಮಿತೆ, ವಿಚ್ಛೇದನದ ಹಕ್ಕು ನೀಡಿತ್ತು. ಆದುದರಿಂದಲೇ 1945ರಲ್ಲಿ ಕಾನೂನಿನ ಮೂಲಕ ಸುಧಾರಣೆ ಆಗಲು ಉಳಿದವೆಂದರೆ ಹಿಂದೂ ಕಾನೂನುಗಳು, ಅಸ್ಪೃಶ್ಯತಾ ನಿಷೇಧ ಮತ್ತು ಮಂದಿರ ಪ್ರವೇಶಕ್ಕೆ ಸಂಬಂಧಿಸಿದ ಶಾಸನ. ಹಿಂದೂ ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ನೀಡುವ ಹಲವು ಮಸೂದೆಗಳನ್ನು ರಚಿಸಿದವರಾದ ಡಾ.ಜಿ.ವಿ. ದೇಶಮುಖ್, ಷರಿಯಾ ಕಾಯ್ದೆಯನ್ನು ಮೆಚ್ಚಿ ಬೆಂಬಲ ವ್ಯಕ್ತಪಡಿಸಿದ್ದರು. ಏಕೈಕ ಮಹಿಳಾ ಸದಸ್ಯರಾಗಿದ್ದ ರಾಧಾಬಾಯಿ ಸುಬ್ಬರೋಯನ್, ಮುಸ್ಲಿಂಮಹಿಳೆಯರಿಗೆ ವಿಚ್ಛೇದನದ ಹಕ್ಕು ನೀಡಿದುದಕ್ಕಾಗಿ ಮುಸ್ಲಿಂ ಸದಸ್ಯರನ್ನು ಪ್ರಶಂಸಿಸಿದಾಗಲಂತೂ ಸಂಪ್ರದಾಯವಾದಿ ಹಿಂದೂಗಳು ಗಾಬರಿಯಾದರು.

1941ರಲ್ಲಿ ಹಿಂದೂ ಕಾನೂನುಗಳ ಸುಧಾರಣೆಗೆಂದು ಸರ್ ಬಿ.ಎನ್. ರಾವ್ ನೇತೃತ್ವದ ನಾಲ್ವರು ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿತ್ತು. ಸಮಿತಿ ಸಿದ್ಧಪಡಿಸಿದ ಕರಡು ನೀತಿಸಂಹಿತೆಗೆ ಆನಂತರದಲ್ಲಿ ಡಾ. ಅಂಬೇಡ್ಕರ್‌ ಕೆಲವು ತಿದ್ದುಪಡಿಗಳನ್ನು ಮಾಡಿದರು. ಅಂತಿಮವಾಗಿ ಸಮಾನ ನೀತಿಸಂಹಿತೆಯ ಒಂದು ಭಾಗವೇ ಆದ ಹಿಂದೂ ನೀತಿಸಂಹಿತೆಯ ಕರಡು ಮಸೂದೆಯನ್ನು 1949ನೇ ಇಸವಿಯಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ಮಂಡಿಸಲಾಯಿತು. ಇದು ಹಿಂದೂ ಸ್ತ್ರೀಗೆ ವರನನ್ನು ಆರಿಸುವ ಹಕ್ಕು, ಮೃಗೀಯವಾಗಿ ವರ್ತಿಸುವ ಗಂಡನನ್ನು ವಿಚ್ಛೇದಿಸುವ ಹಕ್ಕು, ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ನೀಡುವ ಮತ್ತು ಬಹುಪತ್ನಿತ್ವವನ್ನು ಕಾನೂನುಬಾಹಿರವಾಗಿಸುವ ಮಸೂದೆಯಾಗಿತ್ತು.

  ಈ ನೀತಿಸಂಹಿತೆ,  ‘ಹಿಂದೂ ಧರ್ಮ ಮತ್ತು ಸಂಸ್ಕೃತಿಗಳ ಮೇಲಿನ ದಾಳಿ’ ಎಂದು ಸಂಪ್ರದಾಯವಾದಿ ಹಿಂದೂಗಳು ಟೀಕಿಸಿದ್ದರು. ದೆಹಲಿಯಲ್ಲಿ ಅಂಬೇಡ್ಕರ್ ನಿವಾಸಕ್ಕೆ ಮುತ್ತಿಗೆ ಹಾಕುವ ಯತ್ನವೂ ನಡೆಯಿತು. ಸಂಪ್ರದಾಯವಾದಿ ಹಿಂದೂಗಳು ಮತ್ತು ವಿವಿಧ ಜಾತಿ ಗುಂಪುಗಳು ಸಂವಿಧಾನ ರಚನಾ ಸಭೆಗೆ ಅರ್ಜಿ ಸಲ್ಲಿಸಿ  ಹಿಂದೂಗಳ ಧರ್ಮಶಾಸ್ತ್ರ, ಧಾರ್ಮಿಕ ಆಚರಣೆಗಳಲ್ಲಿ ಸರ್ಕಾರ ಮೂಗು ತೂರಿಸಬಾರದೆಂದು ಹಕ್ಕೊತ್ತಾಯ ಮಂಡಿಸಿದವು. ಕುಂಭಕೋಣಂನ ಹಿಂದೂ ಮಹಿಳಾ ಸಂಘಟನೆ, ವೈಷ್ಣವ ಸಿದ್ಧಾಂತ ಸಭಾ ಮುಂತಾದವು ಅಸ್ಪೃಶ್ಯತೆ ಮುಂದುವರಿಯಬೇಕೆಂದು ವಾದಿಸಿದವು. ಅಖಿಲ ಭಾರತ ವರ್ಣಾಶ್ರಮ ಸಮಾಜ ಸಂಘದವರು ‘ಧಾರ್ಮಿಕ ಆಚರಣೆಗಳಲ್ಲಿ ಮಧ್ಯಪ್ರವೇಶಿಸುವ ಯಾವುದೇ ಕಾನೂನು ಧರ್ಮಗ್ರಂಥಗಳಿಗೆ ವಿರುದ್ಧವಾಗಿದೆಯೇ ಎಂಬುದನ್ನು ತೀರ್ಮಾನಿಸಬೇಕಾದುದು ಧಾರ್ಮಿಕತಜ್ಞರು’ ಎಂದು ವಾದಿಸಿದರು.

ಅಂಬೇಡ್ಕರರು ಮಸೂದೆಯನ್ನು ಮಂಡಿಸಿದಾಗ ಆರೆಸ್ಸೆಸ್ ಸರಸಂಘಚಾಲಕ ಗೋಳ್ವಲಕರ್ ಅತ್ಯುಗ್ರವಾಗಿ ಟೀಕಿಸಿದರು. ಈ ಸುಧಾರಣೆಗಳಲ್ಲಿ ‘ಭಾರತೀಯತೆ ಇಲ್ಲ. ಈ ದೇಶದಲ್ಲಿ ಮದುವೆ, ವಿಚ್ಛೇದನದಂಥ ವಿಷಯಗಳನ್ನು ಅಮೆರಿಕ ಅಥವಾ ಬ್ರಿಟಿಷ್ ಮಾದರಿಯಲ್ಲಿ ಬಗೆಹರಿಸಲು ಸಾಧ್ಯವಿಲ್ಲ. ಹಿಂದೂ ಸಂಸ್ಕೃತಿಯ ಪ್ರಕಾರ ಮದುವೆ ಒಂದು ಸಂಸ್ಕಾರವಾಗಿದ್ದು ಅದನ್ನು ಸಾವಿನ ಬಳಿಕವೂ ಬದಲಾಯಿಸಲಾಗದು...’ ಎಂದು ತಮ್ಮ ಭಾಷಣದಲ್ಲಿ ಹೇಳಿದುದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖವಾಣಿ ಆರ್ಗನೈಸರ್ ಸೆಪ್ಟೆಂಬರ್ 6, 1949ರಂದು ವರದಿ ಮಾಡಿತ್ತು. ಆರ್ಗನೈಸರ್ ತನ್ನ ಡಿಸೆಂಬರ್ 7, 1949ರ ಸಂಪಾದಕೀಯದಲ್ಲಿ ‘ನಾವು ಹಿಂದೂ ನೀತಿಸಂಹಿತೆಯನ್ನು ವಿರೋಧಿಸುತ್ತೇವೆ. ಏಕೆಂದರೆ ಅದೊಂದು ಪರಕೀಯವಾದ ಮತ್ತು ಅನೈತಿಕ ತತ್ವಗಳನ್ನು ಆಧರಿಸಿದ ಅನುಚಿತ ಕ್ರಮ’ ಎಂದು ಬರೆಯಿತು.

1949ರಲ್ಲಿ ಆರೆಸ್ಸೆಸ್‍ನ ಸಂಪೂರ್ಣ ಬೆಂಬಲದೊಂದಿಗೆ ಸ್ವಾಮಿ ಕರಪತ್ರೀಜಿ ಮಹಾರಾಜರ ನೇತೃತ್ವದಲ್ಲಿ ಅಖಿಲ ಭಾರತ ಹಿಂದೂ ನೀತಿಸಂಹಿತೆ ಮಸೂದೆ ವಿರೋಧಿ ಸಮಿತಿಯನ್ನು ರಚಿಸಲಾಯಿತು. ಅದು ಭಾರತದುದ್ದಕ್ಕೂ ನೂರಾರು ಸಭೆ, ಧರಣಿ, ಹರತಾಳ ಇತ್ಯಾದಿಗಳನ್ನು ಆಯೋಜಿಸಿತು.  ಮಸೂದೆಯ ವಿರೋಧಿಗಳು ತಮ್ಮನ್ನು ಧರ್ಮಯುದ್ಧ ಮಾಡುವ ಧರ್ಮವೀರರೆಂದು ಕರೆದುಕೊಂಡರು. 1949ರ ಡಿಸೆಂಬರ್ 11ರಂದು ಆರೆಸ್ಸೆಸ್ ವತಿಯಿಂದ ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಸಭೆಯಲ್ಲಿ ವಿವಿಧ ಮುಖಂಡರು ಮಸೂದೆಯನ್ನು ಖಂಡಿಸಿದರು.

ಹಿಂದೂ ವೈಯಕ್ತಿಕ ಕಾನೂನುಗಳ ಸುಧಾರಣೆಯನ್ನು ಕೆಲವು ಸಂಪ್ರದಾಯವಾದಿ ಕಾಂಗ್ರೆಸಿಗರೂ ವಿರೋಧಿಸಿದ್ದರು.  ಆ ನಂತರ, ಅಂಬೇಡ್ಕರರು ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕೊನೆಗೆ ಸಂಪ್ರದಾಯವಾದಿಗಳ ಒತ್ತಾಯಕ್ಕೆ ಮಣಿದು, 1955-56ರಲ್ಲಿ ಹಿಂದೂ ನೀತಿಸಂಹಿತೆ ಮಸೂದೆಯನ್ನು ನಾಲ್ಕು ಪ್ರತ್ಯೇಕ ದುರ್ಬಲ ಮಸೂದೆಗಳಾಗಿ ವಿಂಗಡಿಸಿ ಹಿಂದೂ ವಿವಾಹ ಕಾಯ್ದೆ, ಹಿಂದೂ ಅಪ್ರಾಪ್ತವಯಸ್ಕ ಮತ್ತು ಪೋಷಕ ಕಾಯ್ದೆ, ಹಿಂದೂ ದತ್ತು ಸ್ವೀಕಾರ ಮತ್ತು ಪೋಷಣೆ ಕಾಯ್ದೆ, ಮತ್ತು ಹಿಂದೂ ಉತ್ತರಾಧಿಕಾರ ಕಾಯ್ದೆಗಳನ್ನು  ನೆಹರೂ ಅನುಷ್ಠಾನಗೊಳಿಸಬೇಕಾಯಿತು. ಐತಿಹಾಸಿಕ ಘಟನೆಗಳ ಕುರಿತು ಬರೆಯುವಾಗ ಅಧಿಕೃತ ದಾಖಲೆಗಳನ್ನು ಬಳಸಿಕೊಂಡು ವಿಷಯದ ಎಲ್ಲಾ ಮಗ್ಗುಲುಗಳನ್ನು ತಿಳಿಸಬೇಕಾದುದು ಲೇಖಕ ಮಾಡಲೇಬೇಕಾದ ಕರ್ತವ್ಯ.

ಬರಹ ಇಷ್ಟವಾಯಿತೆ?

 • 15

  Happy
 • 2

  Amused
 • 1

  Sad
 • 0

  Frustrated
 • 4

  Angry

Comments:

0 comments

Write the first review for this !