ಮಂಗಳವಾರ, ಏಪ್ರಿಲ್ 7, 2020
19 °C

ಗಾಂಧಿ ಹಂತಕ ಗೋಡ್ಸೆ ಬೆಂಗಳೂರಿಗೆ ಬಂದಿದ್ದ ಎಂಬ ದೊರೆಸ್ವಾಮಿ ಹೇಳಿಕೆ ಆಧಾರರಹಿತ

ವಾದಿರಾಜ್ Updated:

ಅಕ್ಷರ ಗಾತ್ರ : | |

Prajavani

ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಹಿರಿಯ ಗಾಂಧಿವಾದಿ ಎಚ್‌.ಎಸ್‌. ದೊರೆಸ್ವಾಮಿ ಅವರೊಂದಿಗೆ ಒಳ್ಳೆಯ ಸ್ನೇಹ ಸಂಬಂಧವಿದೆ. ಆರ್‌ಎಸ್‌ಎಸ್‌ ಪ್ರಮುಖರು ಭೇಟಿಯಾಗಿದ್ದಾರೆ, ಮಾತುಕತೆಯನ್ನೂ ನಡೆಸಿದ್ದಾರೆ. ಇಂದಿರಾ ಗಾಂಧಿ ಆಡಳಿತ ಅವಧಿಯ ಸರ್ವಾಧಿಕಾರದ ವಿರುದ್ಧದ ಆರ್‌ಎಸ್‌ಎಸ್‌ ಹೋರಾಟವನ್ನು ದೊರೆಸ್ವಾಮಿ ಮುಕ್ತವಾಗಿ ಮೆಚ್ಚಿದ್ದಾರೆ.

ದೊರೆಸ್ವಾಮಿಯವರು ತಮ್ಮ ಆತ್ಮಕಥೆ ‘ನೆನಪಿನ ಸುರುಳಿ ತೆರೆದಾಗ’ ಕೃತಿಯಲ್ಲಿ ಗಾಂಧೀಜಿಯನ್ನು ಹತ್ಯೆಗೈದ ನಾಥೂರಾಮ ಗೋಡ್ಸೆ ಬೆಂಗಳೂರಿನ ಆರ್‌ಎಸ್‌ಎಸ್‌ ಶಿಬಿರದಲ್ಲಿ ಪಾಲ್ಗೊಂಡಿದ್ದ ಎಂಬಂತೆ (ಪುಟ 61, 62) ಬರೆದಿದ್ದಾರೆ. ಈ ಬಗ್ಗೆ 1999ರಲ್ಲೇ ಆರ್‌ಎಸ್‌ಎಸ್‌ನ ಪ್ರಮುಖರಾದ ಮೈ.ಚ.ಜಯದೇವ್ ಅವರು ದೊರೆಸ್ವಾಮಿ ಅವರನ್ನು ಭೇಟಿ ಮಾಡಿ ಸತ್ಯ ಸಂಗತಿಗಳನ್ನು ವಿವರಿಸಿದ್ದರು. ಮತ್ತೊಬ್ಬ ಪ್ರಮುಖರಾದ ಕೆ. ಸೂರ್ಯನಾರಾಯಣರಾಯರು ಪತ್ರ ಬರೆದು ದಾಖಲೆಗಳನ್ನು ಕೊಟ್ಟಿದ್ದರು. ಈ ಪತ್ರದ ಕೆಲ ಅಂಶಗಳನ್ನು ದೊರೆಸ್ವಾಮಿ ಅವರು ತಮ್ಮ ಆತ್ಮಕಥೆಯ 2003ರ ಸುಧಾರಿತ ಆವೃತ್ತಿಯಲ್ಲಿ ಅನುಬಂಧದ ರೂಪದಲ್ಲಿ ಸೇರಿಸಿ ಪ್ರಕಟಿಸಿದ್ದಾರೆ. ಇದೀಗ ದೊರೆಸ್ವಾಮಿಯವರು ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನದಲ್ಲಿ (ಮಾರ್ಚ್‌ 4) ಗೋಡ್ಸೆಯ ಕಾಲ್ಪನಿಕ ಬೆಂಗಳೂರು ಭೇಟಿ ಬಗ್ಗೆ ಮತ್ತೆ ಪ್ರಸ್ತಾಪಿಸಿರುವುದರಿಂದ ಈ ವಿವರಗಳನ್ನು ಹೇಳಬೇಕಾಗಿದೆ.

ಹಾಗೆ ನೋಡಿದರೆ ಈ ವಿವಾದ ಶುರುವಾಗಿದ್ದು ಆಗ ಸೇವಾದಳದ ಪ್ರಮುಖರಾಗಿದ್ದ ರುಮಾಲೆ ಚೆನ್ನಬಸವಯ್ಯನವರ ಹೇಳಿಕೆಯಿಂದ. ಗಾಂಧಿಹತ್ಯೆಯ ವಿಷಯದಲ್ಲಿ ಆರ್‌ಎಸ್‌ಎಸ್‌ ನಿರ್ದೋಷಿ ಎಂಬ ನ್ಯಾಯಾಲಯದ ತೀರ್ಪು ಬಂದ ತರುವಾಯ ಕೇಂದ್ರ ಸರ್ಕಾರವು ಆರ್‌ಎಸ್‌ಎಸ್‌ ಮೇಲೆ ಹೇರಿದ್ದ ನಿಷೇಧವನ್ನು ಹಿಂದಕ್ಕೆ ಪಡೆಯಿತು. ಆನಂತರ ಚನ್ನಪಟ್ಟಣದ ಸಭೆಯೊಂದರಲ್ಲಿ ರುಮಾಲೆಯವರು ‘ನಾಥೂರಾಮ ಗೋಡ್ಸೆ 1948ರ ಜನವರಿ 17, 18 ಮತ್ತು 19ರಂದು ಬೆಂಗಳೂರಿನಲ್ಲಿ ನಡೆದ ಆರ್‌ಎಸ್‌ಎಸ್‌ ಸಮಾವೇಶದಲ್ಲಿ ಪಾಲ್ಗೊಂಡಿದ್ದ, ಅಲ್ಲಿಯೇ ಗಾಂಧಿಹತ್ಯೆಯ ಸಂಚು ನಡೆದಿದ್ದು’ ಎಂದು ಆರೋಪ ಮಾಡಿದ್ದರು. ರುಮಾಲೆಯವರ ಈ ಆರೋಪ ಮರುದಿನ ‘ತಾಯಿನಾಡು’ ಪತ್ರಿಕೆಯಲ್ಲಿ ಸುದ್ದಿಯಾಗಿ ಪ್ರಕಟವಾಯಿತು. ಆಗ ಸೂರ್ಯನಾರಾಯಣರಾಯರು ಈ ಆಧಾರರಹಿತ ಆರೋಪದ ಬಗ್ಗೆ ಬೆಂಗಳೂರಿನ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು.

ಇದನ್ನೂ ಓದಿದೊರೆಸ್ವಾಮಿ ಸಂದರ್ಶನ: ‘ಗಾಂಧಿ ಹತ್ಯೆಗೆ ಮುನ್ನ ಬೆಂಗಳೂರಿಗೆ ಬಂದಿದ್ದ ಗೋಡ್ಸೆ’

ಈ ಮೊಕದ್ದಮೆಯ ವಿಚಾರಣೆಯಲ್ಲಿ ಸಾಕ್ಷ್ಯ ನುಡಿದ ದೊರೆಸ್ವಾಮಿಯವರು 1948ರ ಜನವರಿ 16ರ ‘ಪೌರವಾಣಿ’ ಪತ್ರಿಕೆಯಲ್ಲಿ ಗೋಡ್ಸೆ ಭೇಟಿಯ ವಿಷಯ ಪ್ರಕಟಿಸಿದ್ದಾಗಿ ಹೇಳಿದ್ದಾರೆ. ರುಮಾಲೆಯವರ ಸಾರ್ವಜನಿಕ ಜೀವನಕ್ಕೆ ಕುಂದು ಬರಬಾರದೆಂದು ವಕೀಲ ಎಸ್.ಕೆ. ವೆಂಕಟರಂಗ ಅಯ್ಯಂಗಾರರ ಮಧ್ಯಸ್ಥಿಕೆಯಿಂದ ಕೇಸು ವಾಪಸ್ ಪಡೆಯಲಾಯಿತು ಮಾತ್ರವಲ್ಲ ರುಮಾಲೆಯವರು ಆನಂತರ ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಶ್ಚಾತಾಪ ವ್ಯಕ್ತಪಡಿಸಿದ್ದರು. ಇದೆಲ್ಲ ಗೊತ್ತಿದ್ದೂ ದೊರೆಸ್ವಾಮಿಯವರು ತಮ್ಮ ಆತ್ಮಕಥೆಯಲ್ಲಿ ಮತ್ತೆ ಅದೇ ಆಧಾರರಹಿತ ವಿಚಾರ ಮುಂದಿಟ್ಟಿದ್ದರು. ದೊರೆಸ್ವಾಮಿಯವರು ನಾಥೂರಾಮ ಗೋಡ್ಸೆಯ ಬೆಂಗಳೂರು ಭೇಟಿಗೆ ಕೊಡುವ ದಾಖಲೆ ‘ಪೌರವಾಣಿ’ ಪತ್ರಿಕೆಯ ಅಂದಿನ ಬಾತ್ಮೀದಾರ ಎಚ್.ಎಸ್. ನಾರಾಯಣರಾಯರು ದೂರವಾಣಿಯಲ್ಲಿ ಕೊಟ್ಟ ಮಾಹಿತಿ. ನಾರಾಯಣರಾಯರು ನಿಸ್ಪೃಹ ಪತ್ರಕರ್ತರಾದ್ದರಿಂದ ಅವರ ಮಾತನ್ನು ನಂಬಲೇಬೇಕು ಅನ್ನುತ್ತಾರೆ ದೊರೆಸ್ವಾಮಿ (ಪುಟ 180, ‘ನೆನಪಿನ ಸುರಳಿ ತೆರೆದಾಗ’) .

ಆದರೆ, 1948ರ ಜನವರಿ 17, 18, 19ರಂದು ಗೋಡ್ಸೆ ದೆಹಲಿಯಲ್ಲಿದ್ದ ಎಂದು ನ್ಯಾಯಾಲಯದ ದಾಖಲೆಗಳು ಸ್ಪಷ್ಟವಾಗಿ ಹೇಳುತ್ತವೆ. Assassination Of Mahatma Gandhi- K L Gauba (ಪ್ರಕಟಣೆ 1969) ಗ್ರಂಥದಲ್ಲಿ ಈ ಎಲ್ಲ ದಾಖಲೆಗಳು ಲಭ್ಯ ಇವೆ.  ಕೋರ್ಟ್ ದಾಖಲೆಗಳ ಪ್ರಕಾರ ಗೋಡ್ಸೆ ಮತ್ತವನ ಸಹಚರ ಆಪ್ಟೆ ಜನವರಿ 17ರಂದು ಮುಂಬೈನಿಂದ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸಿದರು. ದೆಹಲಿಯ ಮರೀನಾ ಹೋಟೆಲ್‌ನಲ್ಲಿ ಜ. 20ರವರೆಗೆ ತಂಗಿದ್ದರು. ಹೀಗಿರುವಾಗ ದೊರೆಸ್ವಾಮಿ ಅವರು ಕೋರ್ಟ್‌ ದಾಖಲೆಗಳನ್ನು ಒಪ್ಪದೆ ‘ಪೌರವಾಣಿ’ಯ ಬಾತ್ಮೀದಾರನ ಮಾಹಿತಿಯೇ ಅಂತಿಮ ಅಂದರೆ ಏನು ಹೇಳುವುದು?

ಆರ್‌ಎಸ್‌ಎಸ್‌ನ ಒಡನಾಟದಲ್ಲಿ ಗೋಡ್ಸೆ ಇದ್ದದ್ದು ನಿಜ, ಆ ಮೊದಲು ಕಾಂಗ್ರೆಸ್‌ ಕಾರ್ಯಕರ್ತನೂ ಆಗಿದ್ದ. ವೈಚಾರಿಕ ಅಸಮಾಧಾನದಿಂದಲೇ ಆರ್‌ಎಸ್‌ಎಸ್ ತೊರೆದ ಗೋಡ್ಸೆ ಆನಂತರ ‘ಅಗ್ರಣಿ’ ಎಂಬ ಮರಾಠಿ ಪತ್ರಿಕೆ ಶುರು ಮಾಡಿದ. ಆ ಪತ್ರಿಕೆಯಲ್ಲಿ ಆರ್‌ಎಸ್‌ಎಸ್‌ ನಾಯಕರ ಧೋರಣೆಗಳನ್ನು ಕಟುವಾಗಿಯೇ ಟೀಕಿಸಿದ್ದ ಸಂಗತಿಗಳೂ ನ್ಯಾಯಾಲಯದಲ್ಲಿ ದಾಖಲಾಗಿವೆ.

‘ಸಹೃದಯಿಗಳೂ ಸ್ನೇಹಪರರೂ ಆದ ಆರ್‌ಎಸ್‌ಎಸ್‌ನ ಹಿರಿಯ ನಾಯಕರು ನಾನು ನನ್ನ ಅಭಿಪ್ರಾಯಕ್ಕೆ ಅಂಟಿಕೊಂಡರೆ, ‘ಇವನು ಹಠಮಾರಿ, ತಾನು ಹಿಡಿದ ಮೊಲಕ್ಕೆ ಮೂರು ಕೊಂಬು ಎಂಬುವವನು’ ಎಂದು ಭಾವಿಸಬಾರದೆಂದು ಕೈಜೋಡಿಸಿ ಬೇಡಿಕೊಳ್ಳುತ್ತೇನೆ’. ಇದು ದೊರೆಸ್ವಾಮಿಯವರು ಆತ್ಮಕಥೆಯಲ್ಲಿ ಹೇಳಿಕೊಂಡ ಮಾತು (ಪುಟ 180). ದೊರೆಸ್ವಾಮಿಯವರ ಈ ಮಾತು ವಿವಾದದ ಎರಡೂ ಮಗ್ಗುಲನ್ನು ತೋರಿಸುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು