ಇಂಗ್ಲಿಷ್ ಕವಿ ವರ್ಡ್ಸ್‌ವರ್ಥ್ ಹೇಳುವಂತೆ, ‘ಮಗು ಮನುಷ್ಯನ ತಂದೆ’. ಅಂದರೆ, ಮಗುವಿನ ನಿಷ್ಕಳಂಕ ಮುಗ್ಧತನದಲ್ಲಿಯೇ ನಿಜವಾದ ಮನುಷ್ಯತ್ವದ ಎಲ್ಲಾ ಅಂಶಗಳು ಅಡಕವಾಗಿರುತ್ತವೆ. ಅಲ್ಲಿ ಜಾತಿ, ಧರ್ಮ, ಲಿಂಗದಂತಹ ಸಮಾಜನಿರ್ಮಿತ ತಾರತಮ್ಯಗಳ ಅರಿವು ಇರುವುದಿಲ್ಲ. ಹಾಗಾಗಿ, ಸಹಜವಾದ ವಿಶ್ವಮಾನವ ದೃಷ್ಟಿಕೋನವಿರುತ್ತದೆ. ಆದರೆ, ಜೀವನದ ದೊಡ್ಡ ದುರಂತವೆಂದರೆ, ಮಗು ಬೆಳೆಯುತ್ತಾ ತನ್ನ ಮುಗ್ಧತೆ ಯನ್ನು ಕಳೆದುಕೊಂಡು ‘ನಾಗರಿಕ ಮನುಷ್ಯ’ನಾಗುವುದು. ಅಂದರೆ, ತನ್ನ ಕಾಲಘಟ್ಟದ ಪ್ರಪಂಚದಲ್ಲಿರುವ ಅಪಭ್ರಂಶಗಳಿಗೆ ಇನ್ನಷ್ಟು ಹೊಸತನ್ನು ಸೇರಿಸಿ, ಚೆನ್ನಾಗಿ ವ್ಯವಹರಿಸುವುದನ್ನು ಕಲಿಯುವುದು.
ಹಾಗಾಗಿಯೇ, ತತ್ವಶಾಸ್ತ್ರಜ್ಞ ನೀಷೆ ಹೇಳುವಂತೆ, ಮನುಷ್ಯನ ನಿಜವಾದ ಪ್ರಬುದ್ಧತೆ, ತಾನು ಬಾಲ್ಯದಲ್ಲಿ ಕಳೆದುಕೊಂಡ ಮುಗ್ಧತೆಯನ್ನು ಮರಳಿ ಪಡೆಯುವುದರಲ್ಲಿದೆ. ಇದು ಫಲಿಸಬೇಕೆಂದರೆ, ಮನುಷ್ಯಜೀವನದ ಕುರಿತು ಪರಂಪರಾಗತವಾಗಿ ಸಮಾಜ ಕಟ್ಟಿ ಬೆಳೆಸಿರುವ ಭ್ರಮೆಗಳನ್ನು ಪ್ರಶ್ನಿಸಿ, ಸ್ವವಿಮರ್ಶೆಯ ಮೂಲಕ ಕಳಚಿಕೊಳ್ಳುವುದು ಅನಿವಾರ್ಯವಾಗುತ್ತದೆ.
ಹಾಗಿದ್ದಲ್ಲಿ ಈ ಭ್ರಮೆಗಳು ಯಾವುವು? ಇವು ಗಳಿಂದ ಮುಕ್ತಿ ಪಡೆದ ಮನುಷ್ಯಜೀವನ ಹೇಗಿರುತ್ತದೆ ಎನ್ನುವುದಕ್ಕೆ ಉತ್ತಮ ನಿದರ್ಶನವೆಂದರೆ, ಪ್ರಪಂಚದ ಮೊದಲ ಆಧುನಿಕ ಕಾದಂಬರಿಯೆಂದು ಹೆಗ್ಗಳಿಕೆ ಗಳಿಸಿರುವ, ಸ್ಪ್ಯಾನಿಷ್ ಕಾದಂಬರಿಕಾರ ಸರ್ವಾಂಟಿಸ್ ಬರೆದಿರುವ ‘ಡಾನ್ ಕಿಹೋತ್ತೆ’. ಈ ಬೃಹತ್ ಕಾದಂಬರಿಯನ್ನು ಎರಡು ಭಾಗಗಳಲ್ಲಿ ಪ್ರಕಟಿಸಿದ ಸರ್ವಾಂಟಿಸ್ (1605 ಮತ್ತು 1615), ಮಾಡಿದ ಸಾಲ ತೀರಿಸಲಾಗದೆ ಜೈಲು ಸೇರಿದ್ದಾಗ ಅದರ ಮೊದಲ ಭಾಗವನ್ನು ಬರೆದಿದ್ದ. ಬಹುಶಃ, ಈ ದೈಹಿಕ ಬಂಧನವೇ ಸಾಮಾಜಿಕ ಕಟ್ಟುಕಟ್ಟಲೆಯ ಬಂಧನಗಳಿಂದ ಅವನ ಮನಸ್ಸನ್ನು ಬಿಡುಗಡೆಗೊಳಿ
ಸಲು ಸಹಾಯ ಮಾಡಿತು.
ಈ ಮೂಲಕ, ಸಾಹಿತ್ಯ ಕೃತಿಯೊಂದರಲ್ಲಿ ಒಬ್ಬ ಸಾಮಾನ್ಯ ಮನುಷ್ಯ ಮೊದಲ ಬಾರಿಗೆ ನಾಯಕನಾದ. ಅಲ್ಲಿಯವರೆಗೆ, ಹೀರೊಗಳಾಗಿ ವಿಜೃಂಭಿಸಿದ್ದ ಕಾಲ್ಪನಿಕ ಯೋಧರಂತೆ, ತಾನು ಕೂಡ ಹೀರೊ ಆಗಲು ಶಕ್ತಿ ಮೀರಿ ಪ್ರಯತ್ನಿಸಿದ, ಅದೂ ಯಾವುದೇ ವೈಭವದ ಪರಿಕರಗಳಿಲ್ಲದೆ. ಅಂದರೆ, ಒಬ್ಬ ಸಾಮಾನ್ಯ ಮನುಷ್ಯ ಕೂಡ, ತನ್ನ ದೈಹಿಕ, ಆರ್ಥಿಕ ಹಾಗೂ ಸಾಮಾಜಿಕ ದೌರ್ಬಲ್ಯಗಳನ್ನು ಮೀರಿ, ಮುಗ್ಧತೆಯಿಂದ ಒಂದು ಸುಂದರ ಕಾಲ್ಪನಿಕ ಜಗತ್ತನ್ನು ಸೃಷ್ಟಿಸಿ, ಅಲ್ಲಿ ಖುಷಿಯಾಗಿ ಇರಬಹುದೆಂದು ಈ ಕಾದಂಬರಿ ಸೂಚಿಸುತ್ತದೆ.
ಈ ಕಾದಂಬರಿಯ ನಾಯಕ, ಡಾನ್ ಕಿಹೋತ್ತೆ ಒಬ್ಬ ಸಾಮಾನ್ಯ ಮನುಷ್ಯ. ಅವನು ತನ್ನನ್ನೇ ಹೀರೊ ಎಂದು ಭ್ರಮಿಸಿ, ಅದರಂತೆ ಬದುಕಲು ಪ್ರಯತ್ನಿಸುತ್ತಾನೆ. ತನ್ನ ಸಮಕಾಲೀನ ಪ್ರಪಂಚದ ದೃಷ್ಟಿಕೋನಕ್ಕಿಂತ ಭಿನ್ನವಾಗಿ ಬದುಕು ಕಟ್ಟಿಕೊಳ್ಳುತ್ತಾನೆ. ಅವನ ಆಲೋಚನೆಯಲ್ಲಿ ದೃಢತೆಯಿದೆ, ಬದ್ಧತೆಯಿದೆ ಹಾಗೂ ನಿಯತ್ತಿದೆ. ಅವನು, ತನ್ನ ಜೀವನದ ಪ್ರತೀ ಕ್ಷಣವನ್ನೂ ಸವಾಲಾಗಿ ಸ್ವೀಕರಿಸುತ್ತಾನೆ ಹಾಗೂ ಉತ್ಸಾಹದಿಂದ ಬದುಕುತ್ತಾನೆ. ಮಾಡುವ ಕೆಲಸವನ್ನು ಹೃದಯಪೂರ್ವಕವಾಗಿ ಮಾಡಬೇಕೆನ್ನುವ ಅವನ ಪ್ರಕಾರ, ಪ್ರೀತಿಯು ಹೃದಯದ ಭೇಷರತ್ ಅಭಿವ್ಯಕ್ತಿ. ಇಲ್ಲಿ ದ್ವೇಷಕ್ಕೆ ಅವಕಾಶವಿಲ್ಲ.
ತನ್ನನ್ನು ಯೋಧನೆಂದು ಭ್ರಮಿಸುವ ಡಾನ್, ನೊಂದ ಜನರನ್ನು ರಕ್ಷಿಸುವುದು ತನ್ನ ಜವಾಬ್ದಾರಿ ಯೆಂದು ತಿಳಿಯುತ್ತಾನೆ. ಅವನ ಈ ಸಾಹಸ ಪಯಣಕ್ಕೆ ಜೊತೆಗಾರನಾಗಲು ತನ್ನ ಸುತ್ತಲಿನ ಪ್ರಪಂಚದ ಸಾಮಾನ್ಯವನ್ನೇ ಅಸಾಮಾನ್ಯಗೊಳಿಸುತ್ತಾನೆ. ಹಾಗಾಗಿ, ಅವನ ಸಣಕಲು ಕುದುರೆಯು ಪ್ರಯಾಣಯೋಗ್ಯ ದಷ್ಟಪುಷ್ಟ ಕುದುರೆಯಾಗಿ ಕಾಣಿಸುತ್ತದೆ. ಊರಿನ ಬಡ ರೈತ, ಸೈನಿಕನ ಸಹಾಯಕನಂತೆ ಕಾಣಿಸು ತ್ತಾನೆ. ಹಳ್ಳಿಯ ಸಾಮಾನ್ಯ ಹುಡುಗಿ, ತಾನು ರಕ್ಷಿಸ ಬೇಕಾದ ರಾಜಕುಮಾರಿಯಂತೆ ಕಾಣಿಸುತ್ತಾಳೆ. ಗಾಳಿ ಯಂತ್ರಗಳು, ತಾನು ಸೋಲಿಸಬೇಕಾದ ದೈತ್ಯರಂತೆ ಕಾಣಿಸುತ್ತವೆ. ಹೀಗೆ, ಕಾದಂಬರಿಯುದ್ದಕ್ಕೂ ಅವನ ತುಡಿತವೆಂದರೆ, ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸಲು ಶಕ್ತಿಮೀರಿ ಪ್ರಯತ್ನಿಸುವುದು ಹಾಗೂ ಈ ಮೂಲಕ ಜಗತ್ತನ್ನು ಸುಂದರಗೊಳಿಸುವುದು.
ಇದಕ್ಕೆ ಹೋಲಿಸಿದರೆ, ನಾವಿಂದು ವಾಸ್ತವ ಜಗತ್ತಿನ ಅತಿಯಾದ ನಿರೀಕ್ಷೆಗಳು ಹಾಗೂ ಯಶಸ್ಸನ್ನು ಹೇಗಾದರೂ ಸಾಧಿಸಬೇಕೆಂಬ ಒತ್ತಡದ ನಡುವೆ ಬಾಳುತ್ತಿದ್ದೇವೆ. ವಿಸ್ಮಯವೆಂದರೆ, ಡಾನ್ ಇದ್ಯಾವುದರ ಗೋಚರವಿಲ್ಲದೆ, ತನ್ನ ಕನಸಿನ ಪ್ರಪಂಚದಲ್ಲಿ, ವೈಫಲ್ಯಗಳ ಮೇಲೆ ವೈಫಲ್ಯವನ್ನು ಎದುರಿಸಿದರೂ ಕುಗ್ಗದೆ, ಮರಳಿ ಯತ್ನ ಮಾಡುತ್ತಾ ತನ್ನ ಸೃಜನಶೀಲ ಚಿಂತನೆಯೊಂದಿಗೆ ತನ್ನದೇ ಸುಂದರ ಜಗತ್ತನ್ನು ಸೃಷ್ಟಿಸಿದ.
ವಾಸ್ತವವಾದಿಗಳಾದ ನಮಗೆ, ಡಾನ್ ನಗು ತರಿಸುವ ಹುಚ್ಚನಂತೆ ಕಾಣಿಸುತ್ತಾನೆ. ಅವನ ನಡವಳಿಕೆ ಅಪಹಾಸ್ಯವಾಗಿ ಕಾಣಿಸುತ್ತದೆ. ಯಾಕೆಂದರೆ, ಪ್ರಪಂಚವನ್ನು ನಾವು ಕಾಣುವ ರೀತಿ ಹಾಗೂ ಅವನ ದೃಷ್ಟಿಕೋನ ಭಿನ್ನವಾಗಿವೆ. ಆದರೂ ಅವನ ಬದ್ಧತೆಯ ಬಗ್ಗೆ ನಮಗೆ ಗೌರವ ಮೂಡುತ್ತದೆ. ಹಲವಾರು ವಿಮರ್ಶಕರು ಕಂಡುಕೊಂಡಂತೆ, ಈ ಕಾದಂಬರಿಯು ಮನುಷ್ಯ ಜೀವನಕ್ಕೆ ಒಂದು ಕೈಪಿಡಿ ಹಾಗೂ ಕನ್ನಡಿಯಂತೆ. ಯಾಕೆಂದರೆ, ನಮ್ಮ ಕಲ್ಪನೆಯೇ ನಮ್ಮನ್ನು ವಾಸ್ತವ ಜಗತ್ತಿನ ಜಂಜಾಟಗಳು ಹಾಗೂ ಅಸಂಬದ್ಧ ನಿರೀಕ್ಷೆಗಳಿಂದ ಮುಕ್ತಗೊಳಿಸುವುದು. ಈ ರೀತಿ, ಮುಗ್ಧತೆ ಹಾಗೂ ಹಾಸ್ಯಪ್ರಜ್ಞೆಯನ್ನು ನಿರಂತರವಾಗಿ ಉಳಿಸಿಕೊಳ್ಳುವುದು. ‘ಒಂದು ವೇಳೆ ನನಗೆ ಹಾಸ್ಯಪ್ರಜ್ಞೆ ಇಲ್ಲದಿದ್ದಲ್ಲಿ, ನಾನೆಂದೋ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ’ ಎಂದು ಗಾಂಧೀಜಿ ಹೇಳಿದ್ದಾರೆ. ಹಾಸ್ಯಪ್ರಜ್ಞೆಗೆ ಇನ್ನೊಂದು ಹೆಸರು, ಮುಗ್ಧತೆಯನ್ನು ಹಾಗೆಯೇ ಉಳಿಸಿಕೊಂಡ ಡಾನ್ ಕಿಹೋತ್ತೆ.
ಅದಕ್ಕಾಗಿಯೇ ಕುವೆಂಪು ಹೇಳಿರುವುದು, ಪ್ರತಿ ಯೊಂದು ಮಗುವೂ ಹುಟ್ಟುತ್ತಲೇ ವಿಶ್ವಮಾನವ...
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.