ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ಕಷ್ಟ ಕಾಲದಲ್ಲಿ ‘ಮಲ್ಲಿಗೆಯ ಮೋಹ’ವೇಕೆ?

ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಅನಗತ್ಯ ಖರ್ಚಿಗೆ ಕಡಿವಾಣ ಹಾಕಲೇಬೇಕಾಗಿದೆ
Last Updated 16 ಮೇ 2020, 4:30 IST
ಅಕ್ಷರ ಗಾತ್ರ

ಅನಿರೀಕ್ಷಿತವಾಗಿ ಮುತ್ತಿಗೆ ಹಾಕಿದ ಕೊರೊನಾದಿಂದ ಉಂಟಾದ ದಾರಿದ್ರ್ಯದಿಂದ ಕೊಡವಿಕೊಂಡು ಮೇಲೇಳಲು ಬಹುತೇಕ ದೇಶಗಳು ಚಡಪಡಿಸುತ್ತಿವೆ. ಹಾಗೇ ನಮ್ಮ ನಾಡಿನ ಮಟ್ಟಿಗೆ ಯೋಚಿಸುವುದಾದರೆ, ಒಂದೆರಡು ವರ್ಷಗಳ ಅವಧಿಯಲ್ಲಿ ನಾವು ಈ ಪರಿಸ್ಥಿತಿಯಿಂದ ಹೊರಗೆ ಬರುವುದು ಕಷ್ಟಸಾಧ್ಯ. ಸಾವಕಾಶವಾಗಿ ಹಂತ-ಹಂತಗಳಲ್ಲಿ ನಮ್ಮ ಜನರ ಮೂಲಭೂತ ಬೇಡಿಕೆಗಳನ್ನು ಪೂರೈಸುವ ಭರವಸೆಯನ್ನು ನೀಡುತ್ತ, ಮಿತವ್ಯಯಗಳನ್ನು ಯಾವ ವಲಯಗಳಲ್ಲಿ ಸಾಧಿಸಬಹುದು ಎಂದು ತೀವ್ರವಾಗಿ ಯೋಚಿಸಬೇಕಾಗಿದೆ.

ರಾಜ್ಯದಲ್ಲಿ ಇದುವರೆಗೆ ಹತ್ತು-ಹಲವು ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ನಾಲೆಯಲ್ಲಿ ನೀರು ಹರಿದಂತೆ ಬೊಕ್ಕಸದಿಂದ ದುಡ್ಡು ಹರಿದು ಹೋಗಿದೆ. ಇದನ್ನು ಸದ್ಯದ ಪರಿಸ್ಥಿಯಲ್ಲಿ ಸಂಪೂರ್ಣವಾಗಿ ನಿಲ್ಲಿಸಬೇಕಾಗಿದೆ. ಶಿಕ್ಷಣ ಇಲಾಖೆಯ ಯೋಜನೆಗಳಲ್ಲಿ ಹೊಸ ವಿಶ್ವವಿದ್ಯಾಲಯ, ಹೊಸ ಕಾಲೇಜು, ಹೊಸ ಶಾಲೆಗಳನ್ನು ಸ್ಥಾಪಿಸುವ ವಿಚಾರವನ್ನು ಮುಂದಕ್ಕೆ ದೂಡಬಹುದು. ಸರ್ಕಾರವು ಮಹಾಮಹಿಮರ ಹೆಸರಿನಲ್ಲಿ ಆಚರಿಸುತ್ತಿರುವ ಕಾರ್ಯಕ್ರಮಗಳನ್ನು ಕೆಲ ಅವಧಿಯವರೆಗೆ ನಿಲ್ಲಿಸಬಹುದು.

ನಾಡಿನಲ್ಲಿ ಇದುವರೆಗೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಆಚರಿಸುತ್ತಾ ಬಂದಿರುವ ಉತ್ಸವಗಳಾದ ಐಹೊಳೆ, ಹಂಪಿ, ಬೇಲೂರು, ಬನವಾಸಿ ಮುಂತಾದವುಗಳನ್ನು ಎರಡು ವರ್ಷಗಳ ಮಟ್ಟಿಗಾದರೂ ಸ್ಥಗಿತಗೊಳಿಸಬಹುದು. ವಿವಿಧ ಪ್ರಾಧಿಕಾರ ಮತ್ತು ಅಕಾಡೆಮಿಗಳಿಗೆ ಕೊಡಮಾಡುವ ಅನುದಾನದಲ್ಲಿ ಕಡಿತ ಮಾಡಬಹುದು. ಅಲ್ಲದೆ ಸಂಗೀತ, ನೃತ್ಯ, ನಾಟಕ, ಲಲಿತಕಲಾ ಸಂಘ, ಸಂಸ್ಥೆಗಳಿಗೆ ನೀಡುವ ಅನುದಾನಗಳಲ್ಲಿ ಕಡಿತ ಮಾಡಬಹುದು. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಮತ್ತು ಕರ್ನಾಟಕ ರಾಜ್ಯೋತ್ಸವಗಳನ್ನು ಸಾಂಕೇತಿಕವಾಗಿ ಆಚರಿಸಬಹುದು. ಕೆಲವು ಆಟೋಟ ಕೂಟಗಳನ್ನು, ಸ್ಪರ್ಧೆಗಳನ್ನು ಒಂದು ವರ್ಷದ ಮಟ್ಟಿಗಾದರೂ ನಿಲ್ಲಿಸಬಹುದು.

ಹೊಟ್ಟೆಗೆ ಹಿಟ್ಟಿರಲಿ ಆದರೆ ಜುಟ್ಟಿಗೆ ಮಲ್ಲಿಗೆ ಬೇಡ! ಕೃಷಿ, ಶಿಕ್ಷಣ, ಕಾರ್ಮಿಕ ನಿಧಿ, ದಲಿತ, ಕೆಳವರ್ಗದವರ ಅಭಿವೃದ್ಧಿಗಾಗಿ ನೀಡಲಾಗುತ್ತಿರುವ ಅನುದಾನದಲ್ಲಿ ಯಾವ ಕಾರಣಕ್ಕೂ ಕಡಿತ ಬೇಡ. ಜನಸಾಮಾನ್ಯರಿಗೂ
ಮಿತವ್ಯಯದ ಪಾಠವನ್ನು ಸರ್ಕಾರ ನೀಡಬೇಕು. ಉದ್ಯಮಿಗಳು, ಉನ್ನತ ಅಧಿಕಾರಿಗಳು, ಶ್ರೀಮಂತರು ಉದಾರವಾಗಿ ದೇಣಿಗೆ ನೀಡಿ, ಆಪತ್ಕಾಲಕ್ಕಾಗಿ ಧನಸಂಚಯ ಮಾಡಬಹುದು. ಸಾಂಕ್ರಾಮಿಕ ರೋಗ, ನೈಸರ್ಗಿಕ ವಿಕೋಪದ ಸಂದರ್ಭಗಳಲ್ಲಿ ಈ ಹಣ ಬಳಸುವ ಮುಂದಾಲೋಚನೆಯ ಅಗತ್ಯ ಈಗ ತುಂಬಾ ಇದೆ. ಭವಿಷ್ಯದಲ್ಲಿ ಎದುರಾಗಬಹುದಾದ ಎಂಥದ್ದೇ ಸಮಸ್ಯೆ, ಸಂಕಟಗಳಿಗೆ ಮೂಲಾಧಾರವಾಗಿ ಇರಬಲ್ಲ ಆರ್ಥಿಕ ಬಲಗಳು, ಮುಳುಗುವವನಿಗೆ ಹುಲ್ಲುಕಡ್ಡಿಯಂತೆ ರಕ್ಷಣೆಯನ್ನು ನೀಡಬಲ್ಲವು.

- ಮಾಲತಿ ಪಟ್ಟಣಶೆಟ್ಟಿ, ಧಾರವಾಡ

*****

ಕೋವಿಡ್‌ ಸಂಕಷ್ಟದಿಂದಾಗಿ ಸಂಪನ್ಮೂಲ ಕ್ರೋಡೀಕರಿಸಲು ರಾಜ್ಯ ಸರ್ಕಾರಿ ನೌಕರರ ವೇತನ ಕಡಿತಕ್ಕೆ ಚಿಂತನೆ ನಡೆದಿರುವ ಸುದ್ದಿ ಮಾಧ್ಯಮಗಳಲ್ಲಿ
ವರದಿಯಾಗಿದೆ. ಅಂತಹ ಕ್ರಮಕ್ಕೆ ಮುಂದಾಗುವ ಮುನ್ನ, ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಲು ಸರ್ಕಾರ ಮೊದಲು ಸಚಿವಾಲಯ ಕಚೇರಿಗಳಲ್ಲಿರುವ ಅನಗತ್ಯ ಹುದ್ದೆಗಳನ್ನು ರದ್ದು ಮಾಡಲಿ.

ಮುಖ್ಯಮಂತ್ರಿ ಸಚಿವಾಲಯದ ಕಚೇರಿಗಳಲ್ಲೇ ಹಲವು ಹುದ್ದೆಗಳು ರಾಜಕೀಯ ನೇಮಕಾತಿಗಳಾಗಿವೆ. ಉದಾಹರಣೆಗೆ, ಸರ್ಕಾರದ ಕಾರ್ಯಕ್ರಮಗಳ ಪ್ರಚಾರಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇರುವಾಗ, ಮುಖ್ಯಮಂತ್ರಿ ಕಚೇರಿಗೆಂದೇ ಪ್ರತ್ಯೇಕವಾಗಿ ಅಷ್ಟೊಂದು ಜನ ಪತ್ರಿಕಾ ಸಲಹೆಗಾರರು, ಸಂಚಾಲಕರಂತಹ ಹುದ್ದೆಗಳ ಅಗತ್ಯ ಇರದು. ಅದರಲ್ಲೂ ಕೆಲವರಿಗೆ ಸಚಿವ ಸ್ಥಾನಕ್ಕೆ ಸಮನಾದ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಇನ್ನು ಮುಖ್ಯಮಂತ್ರಿ ಕಚೇರಿಯಲ್ಲಿರುವ ರಾಜಕೀಯ ಕಾರ್ಯದರ್ಶಿಗಳು, ಸಂಸದೀಯ ಕಾರ್ಯದರ್ಶಿಗಳ ಹುದ್ದೆಗಳೂ ಅನವಶ್ಯಕ. ಮೂರು ದಶಕಗಳಿಗೂ ಹೆಚ್ಚಿನ ರಾಜಕೀಯ ಅನುಭವ ಇರುವ ಬಿ.ಎಸ್‌.ಯಡಿಯೂರಪ್ಪನವರಿಗೆ ರಾಜಕೀಯ ಕಾರ್ಯದರ್ಶಿಗಳಿಂದ ರಾಜಕಾರಣದ ಸಲಹೆಗಳಾಗಲೀ ಪಾಠಗಳಾಗಲೀ ಅಗತ್ಯವಿಲ್ಲ ಎನಿಸುತ್ತದೆ. ಇನ್ನುಳಿದಂತೆ ನಿಗಮ- ಮಂಡಳಿಗಳಿಗೆ, ಅಕಾಡೆಮಿಗಳಿಗೆ ರಾಜಕೀಯ ನೇಮಕಾತಿಗಳೂ ಒಂದೆರಡು ವರ್ಷದ ಮಟ್ಟಿಗೆ ಬೇಡ. ಇಲಾಖೆಗಳ ಮಟ್ಟದಲ್ಲಿ ಈ ಮೊದಲು ಐಎಎಸ್‌ ಅಧಿಕಾರಿಗಳಾದ ಕಾರ್ಯದರ್ಶಿಗಳೇ ಮುಖ್ಯಸ್ಥರಾಗಿ ಇರುತ್ತಿದ್ದರು. ಆದರೆ ಐಎಎಸ್‌ ಲಾಬಿ ಪ್ರಬಲವಾಗಿದ್ದರಿಂದ ಇಲಾಖಾ ಮಟ್ಟದಲ್ಲಿ ಪ್ರಧಾನ ಕಾರ್ಯದರ್ಶಿಗಳ ಹುದ್ದೆಗಳನ್ನು ಸೃಷ್ಟಿಸಿ, ಹಿರಿಯ ಐಎಎಸ್‌ ಅಧಿಕಾರಿಗಳನ್ನು ನೇಮಕ ಮಾಡಲಾಯಿತು. ಇದು, ಸರ್ಕಾರದ ಬೊಕ್ಕಸಕ್ಕೆ ಖಂಡಿತಾ ಹೊರೆ.

ಹಾರನಹಳ್ಳಿ ರಾಮಸ್ವಾಮಿ ನೇತೃತ್ವದ ಆಡಳಿತ ಸುಧಾರಣಾ ಆಯೋಗವು ಆರ್ಥಿಕ ಹೊರೆಗೆ ಕಾರಣವಾಗುವ ಅನಗತ್ಯ ಹುದ್ದೆಗಳ ರದ್ದತಿಗೆ ಶಿಫಾರಸು ಮಾಡಿತ್ತು. ಅದು ಯಥಾವತ್ತಾಗಿ ಜಾರಿಯಾದರೆ, ಸರ್ಕಾರದ ಖಜಾನೆಗೆ ಒಂದಷ್ಟು ಕೋಟಿ ರೂಪಾಯಿ ಆರ್ಥಿಕ ಹೊರೆ ತಪ್ಪಲಿದೆ.

ಕೆಲವು ಇಲಾಖೆಗಳ ವಿಲೀನಕ್ಕೆ ಸರ್ಕಾರ ನಡೆಸಿರುವ ಚಿಂತನೆ ಶೀಘ್ರವಾಗಿ ಕಾರ್ಯರೂಪಕ್ಕೆ ಬರಲಿ. ಅದು ಬಿಟ್ಟು, ಬದುಕಿನ ರಥ ಸಾಗಿಸಲು ತಿಂಗಳ ವೇತನವನ್ನೇ ನಂಬಿಕೊಂಡಿರುವ ಸರ್ಕಾರಿ ನೌಕರರ ಸಂಬಳಕ್ಕೆ, ವೆಚ್ಚ ಕಡಿತದ ನೆಪದಲ್ಲಿ ಕತ್ತರಿ ಹಾಕುವುದು ಸರಿಯಲ್ಲ.

- ಯಗಟಿ ಮೋಹನ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT