ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರಿಕ್ಷಯಾನ: ದಾಖಲೆಯ ಅಧ್ಯಯನ

Last Updated 16 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ (ಐಎಸ್‍ಎಸ್) 328 ದಿನಗಳ ದೀರ್ಘ ಮತ್ತು ನಿರಂತರ ವಾಸ್ತವ್ಯ ಹೂಡಿ, ಸಹಗಗನಯಾತ್ರಿಯ ಜೊತೆ ಹಲವು ಬಾರಿ ನೌಕೆಯಿಂದ ಹೊರಬಂದು ತೇಲಾಡಿ, ಓಡಾಡಿ, ಹಾಳಾಗಿದ್ದ ನೌಕೆಯ ಭಾಗವನ್ನು ರಿಪೇರಿ ಮಾಡಿ, ಸೌಖ್ಯವಾಗಿ ಭೂಮಿಗೆ ಹಿಂತಿರುಗಿರುವ ನಲವತ್ತೊಂದರ ಪ್ರಾಯದ, ನಾಸಾದ ಕ್ರಿಸ್ಟಿನಾ ಹಮಾಕ್ ಕೋಚ್ ಮಹಿಳೆಯೊಬ್ಬರು ಕೈಗೊಂಡ ಅತ್ಯಂತ ದೀರ್ಘ ಗಗನಯಾತ್ರೆಯ ವಿಶ್ವ ದಾಖಲೆ ಬರೆದಿದ್ದಾರೆ.

2019ರ ಮಾರ್ಚ್ 14ರಂದು ನಾಸಾದ ನಿಕ್‍ಹಾಗ್ ಮತ್ತು ರಷ್ಯಾದ ಅಲೆಕ್ಸಿ ಹೊಚಿನಿನ್‍ರ ಜೊತೆಗೆ ಸೂಯಜ್ ನೌಕೆಯ ಮೂಲಕ ನಭಕ್ಕೆ ಚಿಮ್ಮಲ್ಪಟ್ಟು ಐಎಸ್‌ಎಸ್‌ ತಲುಪಿದ ಕೋಚ್, ತಮ್ಮ ವಾಸ್ತವ್ಯದ ಅವಧಿಯಲ್ಲಿ ಸಹಗಗನಯಾತ್ರಿಗಳ ಜೊತೆಗೂಡಿ ಆರು ಬಾರಿ ಸ್ಪೇಸ್‍ವಾಕ್ (ಅಂತರಿಕ್ಷ ನಡಿಗೆ) ಮಾಡಿ, ಹಲವು ಪ್ರಯೋಗಗಳನ್ನು ಮಾಡಿ ಉತ್ತರ ಕಂಡುಕೊಂಡಿದ್ದಾರೆ. ಇದಕ್ಕೂ ಮುಂಚೆ 2016-17ರಲ್ಲಿ 288 ದಿನಗಳ ಕಾಲ ಅಂತರಿಕ್ಷದಲ್ಲಿದ್ದು ಬಂದ ನಾಸಾದ ಪೆಗ್ಗಿ ವಿಟ್‍ಸನ್‍ರ ದಾಖಲೆ ಮುರಿದಿರುವ ಕೋಚ್‌, ಕಳೆದ ಗುರುವಾರ ಯುರೋಪ್ ಸ್ಪೇಸ್ ಏಜೆನ್ಸಿಯ ಲುಕಾಪರ್ಮಿಟಾನೊ ಮತ್ತು ರಷ್ಯಾದ ಅಲೆಗ್ಸಾಂಡರ್ ಸ್ಕೊವೊರ್ಟ್ ಸೋವ್ ಅವರ ಜೊತೆಗೂಡಿ ಕಜಕಿಸ್ತಾನದ ಹಿಮಹಾಸಿನ ಝೆಕಾಗನ್ ಪಟ್ಟಣದ ಹೊರವಲಯದಲ್ಲಿ ಕ್ಷೇಮವಾಗಿ ಲ್ಯಾಂಡ್ ಆಗಿದ್ದಾರೆ. ತಮ್ಮ ವಾಸ್ತವ್ಯ ಮತ್ತು ಪ್ರಯಾಣ ಎರಡನ್ನೂ ಅದ್ಭುತ ಎಂದಿರುವ ಕೋಚ್, 11 ತಿಂಗಳ ಕಾಲ ಗಾಳಿಯಾಡದ ನೌಕೆಯಲ್ಲಿದ್ದು ಈಗ ಮಧ್ಯ ಏಷ್ಯಾದ ಆಹ್ಲಾದಮಯ ಸಿಹಿಗಾಳಿಯನ್ನು ಸೇವಿಸುವ ಆನಂದಕ್ಕೆ ಪಾರವೇ ಇಲ್ಲ ಎಂದು ಖುಷಿಗೊಂಡಿದ್ದಾರೆ.

ಭೂಮಿಯಿಂದ ಮೇಲೆ ಸುಮಾರು 260 ಮೈಲಿ ದೂರದಲ್ಲಿದ್ದು, ಪ್ರತಿ 90 ನಿಮಿಷಕ್ಕೊಮ್ಮೆ ಭೂಮಿಯ ಪ್ರದಕ್ಷಿಣೆ ಹಾಕುವ ಐಎಸ್‍ಎಸ್‍ನಲ್ಲಿದ್ದ ಕ್ರಿಸ್ಟಿನಾ 5,248 ಬಾರಿ ಪ್ರದಕ್ಷಿಣೆ ಹಾಕಿದ್ದಾರೆ. ಪ್ರತೀ ದಿನ 16 ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ಕಂಡ ಕೋಚ್, ಒಟ್ಟು 22.30 ಕೋಟಿ ಕಿ.ಮೀ. ದೂರ ಕ್ರಮಿಸಿದ್ದಾರೆ. ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿರುವ ಕ್ರಿಸ್ಟಿನಾ, ಶೂನ್ಯ ಗುರುತ್ವಾಕರ್ಷಣೆ ಹೊಂದಿರುವ ಅಂತರಿಕ್ಷದ ಲ್ಯಾಬ್‍ಗಳಲ್ಲಿ ಬೆಂಕಿಯ ಗುಣಧರ್ಮ, ವ್ಯವಸಾಯಕ್ಕೆ ಬಳಸಲಾಗುವ ಸ್ಪೇಸ್ ಸ್ಟೇಶನ್ ಕ್ಯಾಮೆರಾ, ನೀರು-ದ್ರವ ಪದಾರ್ಥಗಳು ಹಾಯುವ ತೆಳುವಾದ ರಂಧ್ರದ ಗಾಜಿನ ಕ್ಯಾಪಿಲರಿ, ಸಸ್ಯಗಳ ಅಂಗಾಂಶ, ಕೋಶಗಳ ಬೆಳವಣಿಗೆ, ನೈಜ ಅಂಗಾಂಗಗಳಂತೆ ಕೆಲಸ ಮಾಡುವ ಸಸ್ಯ ಹಾಗೂ ಪ್ರಾಣಿಜನ್ಯ ಅಂಗಾಂಗಗಳ ಬಯೊ ಫ್ಯಾಬ್ರಿಕೇಶನ್, ಅವುಗಳ ಮೇಲೆ ಶೂನ್ಯ ಗುರುತ್ವಾಕರ್ಷಣೆ ಯಾವ ಪರಿಣಾಮಗಳನ್ನುಂಟು ಮಾಡುತ್ತದೆ ಎಂಬುದನ್ನೂ ವಿವರವಾಗಿ ಸಂಶೋಧನೆ ಮಾಡಿದ್ದಾರೆ.

ಗಗನಯಾನ, ಅಂತರಿಕ್ಷವಾಸ್ತವ್ಯ, ಆಹಾರ ಕ್ರಮ, ನೀರಿನ ಬಳಕೆಯು ಮನುಷ್ಯನ ಮೂತ್ರಜನಕಾಂಗಗಳ ಮೇಲೆ ಬೀರುವ ಪರಿಣಾಮ ಮತ್ತು ಅಂತರಿಕ್ಷದಲ್ಲಿರುವಾಗ ಬೆನ್ನುಮೂಳೆಯ ಗಟ್ಟಿತನ ಹಾಗೂ ಅಣುಗಳ ಚಲನೆಯನ್ನು ನಿರ್ಬಂಧಿಸುವ ‘ಕೋಲ್ಡ್ ಆಟಂ ಲ್ಯಾಬೊರೇಟರಿ’ಯಲ್ಲೂ ಕೋಚ್ ಸಂಶೋಧನೆ ನಡೆಸಿದ್ದಾರೆ. ಮಹಿಳೆ ಮತ್ತು ಪುರುಷ ಇಬ್ಬರೂ ಅಂತರಿಕ್ಷದ ವಾತಾವರಣಕ್ಕೆ ಬೇರೆ ಬೇರೆ ರೀತಿ ಹೊಂದಿಕೊಳ್ಳುತ್ತಾರೆ ಮತ್ತು ಶೂನ್ಯ ಗುರುತ್ವಾಕರ್ಷಣೆಯು ಮನುಷ್ಯನ ಮೂಳೆ, ಮಾಂಸಗಳ ಸವಕಳಿ ಉಂಟು ಮಾಡುತ್ತದೆ ಎಂಬುದು ಈಗಾಗಲೇ ಸಾಬೀತಾಗಿದೆ.

ಗುರುತ್ವ ಹೇಗೆ ಕೆಲಸ ಮಾಡುತ್ತದೆ ಎಂದು ಅರಿಯಲು ಕೋಚ್ ತಮ್ಮನ್ನೇ ಪ್ರಯೋಗಕ್ಕೆ ಒಳಪಡಿಸಿಕೊಂಡಿದ್ದಾರೆ. ಜೆಸ್ಸಿಕಾ ಮಿರ್ ಜೊತೆಗೂಡಿ, ಭೂಮಿಯಿಂದ ತೆಗೆದುಕೊಂಡು ಹೋಗಿದ್ದ ಸಾಮಗ್ರಿ ಬಳಸಿ ಪಿಜ್ಜಾ ತಯಾರು ಮಾಡಿ, ನಾಲ್ಕೈದು ಸಲ ಇತರ ಗಗನಯಾತ್ರಿಗಳೊಂದಿಗೆ ‘ಪಿಜ್ಜಾ ನೈಟ್’ ಆಚರಿಸಿದ್ದಾರೆ. ಕ್ರಿಸ್‍ಮಸ್ ಹೊತ್ತಿಗೆ ಸಾಂಟಾಕ್ಲಾಸ್‍ಗಾಗಿ ಸಿಹಿ ಚಾಕೊಲೇಟ್ ತಯಾರಿಸಿ ತಿಂದು ಭೂಮಿಯ ಎಲ್ಲರಿಗೂ ಕ್ರಿಸ್‌ಮಸ್‌ ಶುಭಾಶಯ ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಗಗನಯಾನ, ಚಂದ್ರಯಾನ ಮತ್ತು ಮಂಗಳಯಾನಗಳು ಹೆಚ್ಚಲಿವೆ ಮತ್ತು ಅಲ್ಲಿ ಮನುಷ್ಯನ ನೆಲೆ ಸ್ಥಾಪಿಸುವುದಾದರೆ, ಅಲ್ಲಿನವರಿಗೆ ಬೇಕಾದ ಆಹಾರ ಸಾಮಗ್ರಿಗಳನ್ನು ಅಂತರಿಕ್ಷದಲ್ಲೇ ಬೆಳೆಯಬೇಕಾದ ಪರಿಸ್ಥಿತಿ ಎದುರಾಗುವುದರಿಂದ, ವಿವಿಧ ಆಹಾರಗಳ ಕುರಿತ ಅಧ್ಯಯನ ಮಾಡಲಾಗಿದೆ ಎಂದಿದ್ದಾರೆ ಕೋಚ್.

ತನ್ನ ಗಂಡ ರಾಬರ್ಟ್ ಕೋಚ್ ಕೈಯ್ಯಾರೆ ಬರೆದು ಕಳಿಸಿದ್ದ ಪತ್ರಗಳನ್ನು ಸ್ಪೇಸ್ ಸ್ಟೇಶನ್‍ನ ಏಣಿಯ ಮೇಲೆ ಕೂತು ಓದುವ ಅನುಭವವೇ ಅನನ್ಯ ಎಂದು ಖುಷಿಯಿಂದ ಹೇಳಿದ್ದಾರೆ. ‘ಈ ಗಗನಯಾತ್ರೆ ನನ್ನದೊಬ್ಬಳದಲ್ಲ, ನನ್ನಂಥ ಹಲವಾರು ಮಹಿಳೆಯರ ಕನಸುಗಳ ಪ್ರತಿನಿಧಿಯಾಗಿ ನಾನು ಅಲ್ಲಿದ್ದೆ. ದಾಖಲೆ ಮಾಡುವುದು ಉದ್ದೇಶವಾಗಿರಲೇ ಇಲ್ಲ. ನನ್ನನ್ನು ಹರಸಿ ಹಾರೈಸಿದ ಎಲ್ಲರಿಗೂ ಹೇಗೆ ಕೃತಜ್ಞತೆ ಹೇಳಬೇಕೆಂಬುದೇ ತಿಳಿಯುತ್ತಿಲ್ಲ’ ಎಂದು ಭಾವುಕರಾಗಿ ಟ್ವೀಟ್ ಮಾಡಿದ್ದಾರೆ. ಕೋಚ್‍ರ ಬಹುದಿನದ ವಾಸ್ತವ್ಯದ ದಾಖಲೆಗಿಂತ, ಅವರ ಸಂಶೋಧನೆಗಳ ಮೇಲೆ ನಾವೆಲ್ಲ ಹೆಚ್ಚು ಗಮನಹರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT