ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಕತ್ತಲ ಲೋಕದ ಗೌರವಾರ್ಹರು

ಮಹಿಳಾ ದಿನದಂದು ನಾವು ನಿಜವಾಗಿ ನೆನಪು ಮಾಡಿಕೊಳ್ಳಬೇಕಾದುದು, ದನಿಯಿಲ್ಲದ, ಸಮಾಜದ ಮುಖ್ಯವಾಹಿನಿಯನ್ನು ಇನ್ನೂ ತಲುಪದ ಲೈಂಗಿಕ ಕಾರ್ಯಕರ್ತೆಯರನ್ನು
Last Updated 7 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ವಿಶ್ವ ಮಹಿಳಾ ದಿನದ ನೆಪದಲ್ಲಿ, ಈ ಆಚರಣೆ ಮತ್ತು ಅರಿವಿನ ಪರಿಧಿಯೊಳಗೆ ಯಾವೆಲ್ಲಾ ವರ್ಗದ ಮಹಿಳೆಯರಿದ್ದಾರೆ ಮತ್ತು ಹೊರಗೆ ಇನ್ನೂ ಎಷ್ಟು ಜನರಿದ್ದಾರೆಂದು ಕಾಲಕಾಲಕ್ಕೆ ವಿಶ್ಲೇಷಿಸುವ ಅಗತ್ಯವಿದೆ. ಸಾವಿರಾರು ವರ್ಷಗಳಿಂದಲೂ ನಡೆದು ಬಂದಿರುವ ಪದ್ಧತಿಯಂತೆ, ಮಹಿಳಾ ಹಕ್ಕುಗಳ ಚೌಕಟ್ಟಿನ ಹೊರಗಿದ್ದು, ಹಗಲಲ್ಲಿ ಅಸ್ಪೃಶ್ಯರಂತೆ ಪರಿಗಣಿಸಲ್ಪಟ್ಟ, ಆದರೆ ಕತ್ತಲ ಜಗತ್ತಿನ ಅನಿವಾರ್ಯ ಭಾಗವಾಗಿರುವ ಒಂದು ವರ್ಗದ ಮಹಿಳೆಯರೆಂದರೆ, ಲೈಂಗಿಕ ಕಾರ್ಯಕರ್ತೆಯರು.

ಈ ಅನಿಷ್ಟ ವೃತ್ತಿಯನ್ನು ಕೊನೆಗಾಣಿಸುವ ಯಾವುದೇ ಮುನ್ಸೂಚನೆಯಂತೂ ಕಾಣಿಸುತ್ತಿಲ್ಲ. ಆದರೆ, ಕಾನೂನಿನ ಪರಿಧಿಯೊಳಗೆ ತರುವ ಪ್ರಯತ್ನಗಳು ನಡೆಯುತ್ತಿವೆ. ಮಹಿಳಾ ಸಬಲೀಕರಣದ ದೃಷ್ಟಿಯಿಂದ ಇದೊಂದು ಗುಣಾತ್ಮಕ ಬೆಳವಣಿಗೆಯೇನಲ್ಲ. ಮಹಿಳೆಯ ದೇಹವನ್ನು ಭೋಗದ ವಸ್ತುವಾಗಿ ಪರಿಗಣಿಸುವ ಈ ವೃತ್ತಿಗೆ ಕಾನೂನಿನ ಬೆಂಬಲ ಕೊಡುವ ಬದಲಾಗಿ, ಸಂಪೂರ್ಣವಾಗಿ ಕೊನೆಗಾಣಿಸಬೇಕಾದ ಅಗತ್ಯವಿದೆ.

ಮೊದಲನೆಯದಾಗಿ, ಲೈಂಗಿಕ ಕಾರ್ಯಕರ್ತೆಯರಿಲ್ಲದ ಸಮಾಜವಿಲ್ಲವೆಂದು ಹೇಳಬಹುದು. ಆದರೆ, ಅವರದ್ದು ಯಾವಾಗಲೂ ಕತ್ತಲಿನ, ಮೌನದ ಪ್ರಪಂಚ. ಅವಳ ನಿಯಂತ್ರಣ ಸಂಪೂರ್ಣ ತಪ್ಪಿದ, ಮನುಷ್ಯ ಸಂಬಂಧಗಳ ಆಚೆಯ ಮತ್ತು ಸಮಾಜದ ಪರಿಧಿಯ ಹೊರಗಿನ ಅಸ್ತಿತ್ವವಿದು. ಇಲ್ಲಿ ಹೆಣ್ಣು ಕೇವಲ ಆಸೆ ಪೂರೈಸುವ ವಸ್ತುವಾಗುತ್ತಾಳೆ. ಅವಳ ದೇಹದೊಂದಿಗೆ ನಡೆಯುವ ಕ್ರಿಯೆಗೆ, ಮನಸ್ಸು ಬೆರೆತು ಹೋಗದಂತೆ ಎಚ್ಚರ ಕಾಯ್ದುಕೊಳ್ಳುವುದು ಅವಳ ಜವಾಬ್ದಾರಿ. ಮನಸ್ಸು ಒಪ್ಪಿಸಿಬಿಟ್ಟರೆ, ದೇಹದ ವ್ಯಾಪಾರ ಹೇಗೆ ಸಾಧ್ಯವಾಗುತ್ತದೆ?

ಹೆಚ್ಚಾಗಿ ಪುರುಷ ಕೊಡುವ ಸಮಜಾಯಿಷಿ ಯೆಂದರೆ, ತನ್ನ ಸಂಗಾತಿಯಿಂದ ದೊರಕದ ವಿಚಿತ್ರ ಆಸೆಗಳನ್ನು ತೀರಿಸಿಕೊಳ್ಳಲು ಹಣ ಚೆಲ್ಲಿ ಪಡೆಯುವ ವ್ಯಾಪಾರವಿದು. ದುಡ್ಡಿನ ಅಹಂಕಾರವೂ ಸೇರಿರುವುದರಿಂದ, ಇಲ್ಲಿ ಹೆಣ್ಣಿನ ದೇಹಕ್ಕಾಗುವ ದೈಹಿಕ ಮತ್ತು ಮಾನಸಿಕ ಗಾಸಿಗೆ ಬೆಲೆಯಿಲ್ಲ. ಬೆಡ್ ರೂಮಿನಲ್ಲಿ ಸಿಗದ ಆಪ್ಯತೆ ಮತ್ತು ಪ್ರೀತಿ ಇಲ್ಲಿ ಸಿಗುತ್ತದೆಯೆನ್ನುವ ಭ್ರಮೆಯಲ್ಲಿ ಇಲ್ಲಿಗೆ ಭೇಟಿ ನೀಡುವುದನ್ನು ಸಮರ್ಥಿಸುವ ಗಂಡಸರನ್ನು ನಾವು ಕಾಣುತ್ತೇವೆ.

ವಿಚಿತ್ರವೆಂದರೆ, ಲೈಂಗಿಕ ಕಾರ್ಯಕರ್ತೆಯ ಆಪ್ತ ನಡವಳಿಕೆ ಸಹಜವಲ್ಲ, ಭಯ ಮತ್ತು ತರಬೇತಿಯಿಂದ ಸೃಷ್ಟಿಯಾದುದು. ಇಲ್ಲಿ ಮುಖಾಮುಖಿಯಾಗುವ ಹೆಣ್ಣಿನ ಮನಸ್ಸು ಎಂದೋ ಕಲ್ಲಾಗಿ ಹೋಗಿದೆ. ಮಾತ್ರವಲ್ಲ, ಹೆಣ್ಣಿನ ಸಹಜ ಸ್ಥಿತಿ, ಮುಕ್ತ ಪರಿಸರದಲ್ಲಷ್ಟೇ ಕಾಣ ಸಿಗುತ್ತದೆ, ಇಂತಹ ನಿಯಂತ್ರಣದ ವಾತಾವರಣದಲ್ಲಲ್ಲ ಎನ್ನುವ ಸತ್ಯ ಅರಿವಿಗೆ ಬರುವುದಿಲ್ಲ.

ದುಡ್ಡಿನ ಅಹಂಕಾರದ ಮೂಲಕ ಹೆಣ್ಣಿನ ದೇಹದ ಒಡೆತನ ಪಡೆಯುವುದು ತನ್ನ ಹಕ್ಕೆಂದು ಪರಿಭಾವಿಸುವ ಪುರುಷನಿಗೆ, ಸೆಕ್ಸ್ ಒಂದು ದೈಹಿಕ ಕ್ರಿಯೆಯಾಗಿಯಷ್ಟೇ ಕಾಣಿಸುತ್ತದೆ. ಇಲ್ಲಿ ಮುಖಾಮುಖಿಯಾಗುವ ಹೆಣ್ಣಿಗೆ ಮನಸ್ಸೊಂದಿದೆ, ಬಹುಶಃ ಇದು ಅವಳ ಇಷ್ಟದ ವೃತ್ತಿಯಾಗಿರಲಿಕ್ಕಿಲ್ಲ, ಜೊತೆಗೆ, ಅವಳು ತನ್ನ ದೈಹಿಕ ಗ್ರಾಹಕರೆದುರು ಪ್ರದರ್ಶಿಸುವ ನಗು, ಒಲವು ಅಥವಾ ಹಾಸ್ಯಪ್ರಜ್ಞೆ ಸ್ವಂತದ್ದಲ್ಲ, ಬದಲಾಗಿ, ಅವಳನ್ನು ನಿಯಂತ್ರಿಸುವ ಶಕ್ತಿಗಳ ಹಿಡಿತದಲ್ಲಿದೆಯೆನ್ನುವುದು ಗಮನಕ್ಕೆ ಬಾರದೇ ಹೋಗಬಹುದು.

2020ರ ಅಂಕಿಅಂಶದ ಪ್ರಕಾರ, ಭಾರತದಲ್ಲಿ ಸುಮಾರು 8 ಲಕ್ಷ ಲೈಂಗಿಕ ಕಾರ್ಯಕರ್ತೆಯರಿದ್ದಾರೆ. ಗಣತಿಗೆ ಸಿಗದ ಸಂಖ್ಯೆ ಇನ್ನೂ ದೊಡ್ಡದಿದೆ. ಇವರಲ್ಲಿ ಶೇ 95ರಷ್ಟು ಮಹಿಳೆಯರು ಬಲವಂತವಾಗಿ ಈ ವೃತ್ತಿಗೆ ತಳ್ಳಲ್ಪಟ್ಟವರು. ಮಾನಸಿಕ ಸ್ಥಿತಪ್ರಜ್ಞೆ ಮತ್ತು ಸ್ವಅರಿವು ಕಂಡುಕೊಂಡ ಯಾವ ಹೆಣ್ಣುಮಕ್ಕಳೂ ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲಾರರು. ಹೆಚ್ಚಿನ ಯುವತಿ ಯರನ್ನು ದೂರದ ಹಳ್ಳಿಗಳಿಂದ ಹಣದ, ಪ್ರೀತಿಯ, ಕೆಲಸದ ಆಸೆ ತೋರಿಸಿ ಈ ಖೆಡ್ಡಾಕ್ಕೆ ಬೀಳಿಸಲಾಗುತ್ತದೆ. ಅದಕ್ಕೆ ಮುನ್ನ ನಾನಾ ರೀತಿಯ ದೈಹಿಕ, ಮಾನಸಿಕ ಚಿತ್ರಹಿಂಸೆ ಕೊಟ್ಟು, ಹಸಿವೆಗೆ ತಳ್ಳಿ, ಭಾವನೆ ಗಳನ್ನು ಮುರಿದು, ವೃತ್ತಿಗೆ ಸಾಕಷ್ಟು ತರಬೇತಿ ಕೊಟ್ಟು ಸಿದ್ಧಪಡಿಸಲಾಗುತ್ತದೆ.

ಹೊರಜಗತ್ತಿನ ಹೆಣ್ಣುಮಕ್ಕಳಿಗೆ ಲೈಂಗಿಕ ಶೋಷಣೆ ಯಾದರೆ ದೂರು ಕೊಡಲು ಪೊಲೀಸ್ ಠಾಣೆಯಿದೆ. ಆದರೆ, ಲೈಂಗಿಕ ಕಾರ್ಯಕರ್ತೆಯರಿಗೆ ಆಗುವ ದೈಹಿಕ ಮತ್ತು ಮಾನಸಿಕ ಶೋಷಣೆ ಇನ್ನೂ ಕಾನೂನಿನ ಪರಿಧಿಯೊಳಗೆ ಬಂದಿಲ್ಲ. ಅವಳ ದೇಹವನ್ನು ಸಾರ್ವ ಜನಿಕರು ದುಡ್ಡು ಕೊಟ್ಟು ಉಪಯೋಗಿಸಬಹುದಾದ ವಸ್ತುವೆಂದು ಪರಿಗಣಿಸಲ್ಪಟ್ಟ ಮೇಲೆ, ಇಲ್ಲಿ ಗ್ರಾಹಕನೇ ರಾಜನಾಗುತ್ತಾನೆ ಹೊರತು ಅವಳ ಪ್ರತಿಭಟನೆಗೆ ಬೆಲೆಯಿಲ್ಲ.

ಎಲ್ಲಿಯವರೆಗೆ ಗ್ರಾಹಕರ ಲಭ್ಯತೆಯಿರುತ್ತದೋ ಅಲ್ಲಿಯವರೆಗೆ ಈ ದಂಧೆಗೆ ಹೆಣ್ಣುಮಕ್ಕಳನ್ನು ಹಿಂಸಿಸಿ ಸೇರಿಸಲಾಗುತ್ತದೆ. ಆದ್ದರಿಂದ, ಇದನ್ನು ಕೊನೆಗಾಣಿಸುವ ಜವಾಬ್ದಾರಿ ಮುಖ್ಯವಾಗಿ ಗಂಡಸಿನದ್ದು. ಮಹಿಳೆಯ ದೇಹವೆಂಬ ಉದ್ಯಮದ ಸೂತ್ರಧಾರರು ನಮ್ಮ ತಿರಸ್ಕಾರಕ್ಕೆ ಅರ್ಹರು. ಆದರೆ, ನಮ್ಮ ವ್ಯವಸ್ಥೆಯಲ್ಲಿ ಅವರಾರಿಗೂ ಶಿಕ್ಷೆಯಾಗುವುದಿಲ್ಲ.

ಮಹಿಳಾ ದಿನದಂದು ನಿಜವಾಗಿ ನೆನಪನ್ನು ಮಾಡಿಕೊಳ್ಳಬೇಕಾದುದು, ಈ ದನಿಯಿಲ್ಲದ, ಕತ್ತಲಲ್ಲಿ ಬದುಕುವ ಮತ್ತು ಸಮಾಜದ ಮುಖ್ಯವಾಹಿನಿಯನ್ನು ಇನ್ನೂ ತಲುಪದ ಲೈಂಗಿಕ ಕಾರ್ಯಕರ್ತೆಯರನ್ನು. ಅವರು ಗೌರವದ ಬಾಳಿಗೆ ಅರ್ಹರು.

ಸೆಕ್ಸ್ ಎನ್ನುವುದು ಬರೀ ದೇಹಗಳ ನಡುವೆ ನಡೆಯುವ ಯಾಂತ್ರಿಕ ಕ್ರಿಯೆಯಲ್ಲ, ಮನಸ್ಸುಗಳ ಮಿಲನ ಅಗತ್ಯ. ಜೊತೆಗೆ, ಇದೊಂದು ಹಣದಿಂದ ಖರೀದಿಸಬಹುದಾದ ವಸ್ತುವಲ್ಲ ಎನ್ನುವ ಅರಿವು ಜಾಗೃತಗೊಂಡಲ್ಲಿ, ಮಹಿಳೆ ವಸ್ತುವಾಗುವುದು ತಪ್ಪುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT