ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಮಹಿಳಾ ಸುರಕ್ಷತೆ... ಇನ್ನೂ ಎಷ್ಟು ದೂರ?

ಮಹಿಳೆಗೆ ಇಂದು ಇರುವ ಅಸುರಕ್ಷಿತ ವಾತಾವರಣದಲ್ಲಿ ಮಹಿಳಾ ದಿನಾಚರಣೆಯ ಹೆಸರಿನಲ್ಲಿ ನಾವು ಸಂಭ್ರಮಿಸುವುದಾದರೂ ಹೇಗೆ?
Last Updated 6 ಮಾರ್ಚ್ 2023, 19:31 IST
ಅಕ್ಷರ ಗಾತ್ರ

ಮತ್ತೊಂದು ಮಹಿಳಾ ದಿನಾಚರಣೆ (ಮಾರ್ಚ್‌ 8) ಬಂದಿದೆ! ಮಹಿಳಾ ದಿನಾಚರಣೆಯ ಹೆಸರಿನಲ್ಲಿ ಅದ್ಧೂರಿ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತವೆ, ಚರ್ವಿತಚರ್ವಣ ಭಾಷಣಗಳು ಮೊಳಗುತ್ತವೆ. ಆದರೆ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಹೆಣ್ಣುಮಕ್ಕಳ ಮೇಲಿನ ವಿವಿಧ ಬಗೆಯ ದೌರ್ಜನ್ಯಗಳು ಮಾತ್ರ ಆಘಾತಕಾರಿ ಎನಿಸುವಷ್ಟು ಪ್ರಮಾಣದಲ್ಲಿ ಸದ್ದಿಲ್ಲದೇ ಏರುತ್ತಿವೆ.

ಪುರುಷಕೇಂದ್ರಿತ ಸಮಾಜದಲ್ಲಿ ಅನುಭವಿಸಬೇಕಾಗಿರುವ ಅಸಮಾನತೆಯ ತಳಮಳ, ತಾರತಮ್ಯದ ಕಳವಳದೊಂದಿಗೆ ಏಗಿಯೇ ಬಸವಳಿದಿದೆ ಹೆಣ್ಣು ಸಂಕುಲ. ಅದರೊಂದಿಗೆ ಇಂದು ಜಾಗತೀಕರಣದ ಕರಾಳತೆ, ಜಾತಿ–ಮತಗಳ ಹುನ್ನಾರ, ವ್ಯಾಪಾರಿ ಜಗತ್ತಿನ ಕ್ರೌರ್ಯ, ಭ್ರಷ್ಟತೆಯ ಗಾಳ, ರಾಜಕೀಯದ ಷಡ್ಯಂತ್ರ, ಮಿತಿಮೀರಿದ ದೌರ್ಜನ್ಯ, ಕ್ರೌರ್ಯದ ಸಂಕಟಗಳೂ ಸೇರಿಕೊಂಡಿವೆ. ಇವೆಲ್ಲಕ್ಕೆ ಅರಿವಿದ್ದೋ ಇಲ್ಲದೆಯೋ ಬಲಿಪಶುವಾಗಬೇಕಿರುವ ಹೆಣ್ಣಿನ ಸ್ಥಿತಿ ಸೂಕ್ಷ್ಮವೂ ಸಂಕೀರ್ಣವೂ ಆಗುತ್ತಾ ಸಾಗುತ್ತಿದೆ.

ಅತ್ಯಾಚಾರ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಈಗ ನಮ್ಮ ದೇಶದಲ್ಲಿ ಪ್ರತೀ 15 ನಿಮಿಷಕ್ಕೊಬ್ಬ ಹೆಣ್ಣುಮಗಳು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾಳೆಂದೂ ಕಳೆದೊಂದು ದಶಕದಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಹಲವು ಪಟ್ಟು ಹೆಚ್ಚಳವಾಗಿದೆ ಎಂದೂ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ (ಎನ್‌ಸಿಆರ್‌ಬಿ) ವರದಿಗಳು ಹೇಳುತ್ತವೆ. ಇಂತಹ ಅಸುರಕ್ಷಿತ ವಾತಾವರಣದಲ್ಲಿ ಮಹಿಳಾ ದಿನಾಚರಣೆಯ ಹೆಸರಿನಲ್ಲಿ ಸಂಭ್ರಮಿಸುವುದಾದರೂ ಹೇಗೆ? ಅಮಾನುಷ ದೌರ್ಜನ್ಯಗಳೆಲ್ಲವೂ ಇಂದು ವ್ಯಾಪಕವಾಗಿ ಎಲ್ಲೆಂದರಲ್ಲಿ ಸಂಭವಿಸುತ್ತಾ ಸಹಜ ಪ್ರಕ್ರಿಯೆಯೇ ಆಗಿಹೋಗುತ್ತಿರುವುದನ್ನು ಅರಗಿಸಿಕೊಳ್ಳುವುದು ಹೇಗೆ?

ಭೀಕರ ಪ್ರಕರಣವೊಂದು ನಡೆದು, ಅದು ದೃಶ್ಯಮಾಧ್ಯಮಗಳ ಕೃಪಾಕಟಾಕ್ಷಕ್ಕೆ ಬಿದ್ದರೆ ಮಾತ್ರ, ಮಾಧ್ಯಮಗಳಲ್ಲೊಂದಿಷ್ಟು ದಿನ ಅಬ್ಬರದ, ಮಸಾಲೆಭರಿತ ಸುದ್ದಿಯಾಗುತ್ತದೆ. ಅದರಲ್ಲಿ ಹೆಣ್ಣಿನ ಸಂಕಟಕ್ಕಿಂತ, ‘ನಮ್ಮಲ್ಲೇ ಮೊದಲು’ ಎಂಬ ಕ್ಷುದ್ರ ಪಂದ್ಯಾಟವೇ ಮೇಲುಗೈ ಸಾಧಿಸುತ್ತದೆ!

ಮಹಿಳಾ ಪರ ಹೋರಾಟಗಾರರ ಒತ್ತಡಗಳಿಂದಲೇ, ಮಹಿಳಾ ಸುರಕ್ಷತೆಯನ್ನು ಖಾತರಿಗೊಳಿಸಲು ದಶಕಗಳ ಹಿಂದೆಯೇ ರೂಪುಗೊಳಿಸಿರುವ ಅನೇಕ ಸರ್ಕಾರಿ ಆದೇಶಗಳೂ ಸಶಕ್ತವಾಗಿ ಅನುಷ್ಠಾನಗೊಳ್ಳದೆ ಮೂಲೆ ಹಿಡಿದಿರುವುದು ದುರಂತ. ಇದರಿಂದ ಆಡಳಿತ ವ್ಯವಸ್ಥೆಯಲ್ಲಿ ವಿಕೇಂದ್ರಿತವಾಗಿ ದೌರ್ಜನ್ಯಕ್ಕೆ ತಡೆ ಒಡ್ಡಬಹುದಾಗಿದ್ದ ದಾರಿಗಳು ಮುಚ್ಚಿಹೋಗುತ್ತಿವೆ. ಉದಾಹರಣೆಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ನಿಯಂತ್ರಣಕ್ಕಾಗಿ ಕಾಲಕಾಲಕ್ಕೆ ರೂಪಿಸಲಾಗಿದ್ದ ವಿವಿಧ ಸರ್ಕಾರಿ ಆದೇಶಗಳನ್ನು ವಿಲೀನಗೊಳಿಸಿ 2019ರ ಜುಲೈ 5ರಂದು ಹೊರಡಿಸಿದ್ದ ಒಂದು ಸಶಕ್ತ ಆದೇಶ ಸಮರ್ಪಕವಾಗಿ ಅನುಷ್ಠಾನಗೊಳ್ಳದೆ, ಮೂಲಮಟ್ಟದಲ್ಲಿ ಕೆಲಸ ನಿರ್ವಹಿಸದೆ, ದೌರ್ಜನ್ಯ ನಿಯಂತ್ರಣ ಗಗನಕುಸುಮವಾಗಿದೆ.

ಈ ಆದೇಶದ ಅನ್ವಯ, ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟಲು, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು, ಬಾಲ್ಯವಿವಾಹ ತಡೆಗಟ್ಟಲು, ಬಾಲ ಕಾರ್ಮಿಕತೆ ನಿಗ್ರಹಿಸಲು ಹಾಗೂ ಮಕ್ಕಳ ಸಮಗ್ರ ರಕ್ಷಣೆಗಾಗಿ ಇದ್ದ ಸಮಿತಿಗಳನ್ನು ವಿಲೀನಗೊಳಿಸಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿ’ಯನ್ನು ರಚಿಸಲು ಸೂಚಿಸಲಾಗಿದೆ. ಇದರಲ್ಲಿ ಗಸ್ತು ಪೊಲೀಸರನ್ನೂ ಒಳಗೊಂಡು ಸಂಬಂಧಿಸಿದ ಇಲಾಖೆಯ ಪ್ರತಿನಿಧಿಗಳೂ ಸೇರಿ ಗ್ರಾಮ ಪಂಚಾಯಿತಿ ಮಹಿಳಾ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಮೂರು ತಿಂಗಳಿಗೊಮ್ಮೆ ಅಥವಾ ತುರ್ತು ಉಂಟಾದಾಗಲೆಲ್ಲಾ ಸಭೆ ಸೇರಬಹುದಾಗಿದೆ.

ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿ, ಗ್ರಾಮಲೆಕ್ಕಿಗರು, ಸ್ಥಳೀಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಾಯರು, ವಿದ್ಯಾರ್ಥಿ ಪ್ರತಿನಿಧಿಗಳು, ಮಕ್ಕಳ ಸಮಗ್ರ ರಕ್ಷಣಾ ಘಟಕದ ಮೇಲ್ವಿಚಾರಕಿ, ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆ, ಸ್ತ್ರೀಶಕ್ತಿ ಸಂಘದ ಪ್ರತಿನಿಧಿ, ಮಹಿಳಾ ಸ್ವಯಂ ಸೇವಾಸಂಸ್ಥೆಯ ಪ್ರತಿನಿಧಿ... ಹೀಗೆ ತಳಮಟ್ಟದಿಂದ ಎಲ್ಲ ಆಯಾಮಗಳಲ್ಲೂ, ಎಲ್ಲರನ್ನೂ ಒಳಗೊಂಡ ಇಂತಹ ಸಮಿತಿ ರೂಪುಗೊಂಡು, ಸಮರ್ಪಕವಾಗಿ ಕಾರ್ಯನಿರ್ವಹಿಸುವಂತಾದರೆ ಗ್ರಾಮಮಟ್ಟದಿಂದಲೇ ಮಹಿಳಾ ಮತ್ತು ಮಕ್ಕಳ ದೌರ್ಜನ್ಯಕ್ಕೆ ಒಂದು ಹಂತದ ತಡೆ ಒಡ್ಡಲು ಸಾಧ್ಯವಾಗುತ್ತದೆ. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ತಹಶೀಲ್ದಾರ್ ಅಂತಹವರ ಅಧ್ಯಕ್ಷತೆಯಲ್ಲಿ ದೌರ್ಜನ್ಯ ತಡೆಗಾಗಿ ಮೇಲ್ವಿಚಾರಣಾ ಸಭೆ ನಡೆಸಲು ಇಲ್ಲಿ ಅವಕಾಶವಿದೆ. ಆದರೆ ಇಂತಹ ಹಲವು ಸರ್ಕಾರಿ ಆದೇಶಗಳು ಹೆಚ್ಚಿನ ಸರ್ಕಾರಿ ಅಧಿಕಾರಿಗಳಿಗೇ ತಿಳಿಯದೆ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಈಗಲಾದರೂ ಎಚ್ಚೆತ್ತು ಮರು ಅನುಷ್ಠಾನಗೊಳಿಸಲು ಮುಂದಾಗಬೇಕಿದೆ.

ಸಮತ್ವ ಮತ್ತು ಸಮತೋಲನದ ಘನತೆಯ ಕನಸಿನ ಸಾಕಾರಕ್ಕಾಗಿ ಕ್ರೌರ್ಯವನ್ನು ಹಿಮ್ಮೆಟ್ಟಿಸುವ ದಾರಿಗಳನ್ನು ತುರ್ತಾಗಿ ಕಂಡುಕೊಳ್ಳಲೇಬೇಕಿದೆ. ಪ್ರತೀ ಹೆಣ್ಣಿಗೆ ಸಂಬಂಧಿಸಿದ ಯಾವುದೇ ಪ್ರತ್ಯೇಕ ಘಟನೆಯನ್ನೂ ಬಿಡಿ ಘಟನೆಯಾಗಿ ನೋಡುತ್ತಾ, ಅದಕ್ಕೆ ಸ್ಪಂದಿಸುತ್ತಾ ಅದನ್ನು ಕಾಲ ಮತ್ತು ಇತಿಹಾಸದ ಪ್ರಕ್ರಿಯೆಯೊಂದಿಗೆ ಸಮಗ್ರವಾಗಿ ಅರ್ಥೈಸಿಕೊಳ್ಳುವ ತುರ್ತು ಇಂದು ಹೆಚ್ಚಾಗಿದೆ. ಆಗಮಾತ್ರ ಮೂಲಮಟ್ಟದಲ್ಲಿ ಇವುಗಳನ್ನು ನಿಯಂತ್ರಿಸುವ ಹೊಸ ಸಶಕ್ತ ದಾರಿಗಳು ಹೊಳೆದಾವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT