ಹೈದರಾಬಾದ್ ಕರ್ನಾಟಕ ಪ್ರದೇಶ ‘ಕಲ್ಯಾಣ’ ಎನ್ನುವ ಹೆಸರನ್ನು ತನ್ನೊಂದಿಗೆ ಸೇರಿಸಿಕೊಂಡಿದೆ. ಆದರೆ, ನಿಜವಾದ ‘ಕಲ್ಯಾಣ’ ಮರೀಚಿಕೆಯಾಗಿಯೇ ಉಳಿದಿದೆ.

ದೇಶೀಯ ಆಳರಸ ಹೈದರಾಬಾದ್ ನಿಜಾಮನಿಂದ 1948ರ ಸೆ. 17ರಂದು ವಿಮೋಚನೆ ಪಡೆದ ಕನ್ನಡದ ಪ್ರದೇಶಗಳನ್ನು ‘ಹೈದರಾಬಾದ್ ಕರ್ನಾಟಕ’ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಈ ಪರಕೀಯ ಹೆಸರು ವಚನಕಲ್ಯಾಣ ನೆಲದ ಭಾವಪ್ರಜ್ಞೆಗೆ ಉಚಿತ ಎನಿಸುತ್ತಿರಲಿಲ್ಲ. ಹಾಗಾಗಿ, 2019ರ ‘ಹೈದರಾಬಾದ್ ಕರ್ನಾಟಕದ ವಿಮೋಚನಾ ದಿನ’ದ ಸಂದರ್ಭದಲ್ಲಿ, ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ‘ಕಲ್ಯಾಣ ಕರ್ನಾಟಕ’ ಎಂದು ಮರು ನಾಮಕರಣ ಮಾಡಿದರು. ಅದು ಹೆಸರಿನ ಬದಲಾವಣೆ ಆಯಿತಷ್ಟೇ; ಸ್ಥಿತಿಗತಿಯಲ್ಲಿ ಯಾವ ಕಲ್ಯಾಣವೂ ಆಗಲಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲ್ಯಾಣ ಕರ್ನಾಟಕದ ಕಲ್ಯಾಣಕ್ಕಾಗಿ ಆಯವ್ಯಯದಲ್ಲಿ ವಾರ್ಷಿಕ ₹5,000 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಹಣವೇನೋ ಯಥೇಚ್ಛ. ಆದರೆ, ಯೋಜನೆಗಳ ಅನುಷ್ಠಾನದಲ್ಲಿನ ವೈಫಲ್ಯದಿಂದ ‘ಗ್ರಾಮೀಣ ಕಲ್ಯಾಣ ಕರ್ನಾಟಕ’ ಅಭಿವೃದ್ಧಿಯಲ್ಲಿ ಹಿನ್ನಡೆ ಕಾಣುತ್ತಲೇ ಇದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಂತೂ ಇಲ್ಲಿಯ ಜಿಲ್ಲೆಗಳಿಗೆ ಶೋಚನೀಯ ಸ್ಥಾನ.

ನೆನಪಿರಲಿ; ಕಲ್ಯಾಣ ಕರ್ನಾಟಕ ಇಬ್ಬರು ಮುಖ್ಯಮಂತ್ರಿಗಳನ್ನು ಕಂಡಿದೆ. ವೀರೇಂದ್ರ ಪಾಟೀಲರು ಎರಡು ಬಾರಿ ಮತ್ತು ಧರ್ಮಸಿಂಗ್ ಅವರು ಒಮ್ಮೆ ಮುಖ್ಯಮಂತ್ರಿ ಆಗಿದ್ದರು. ಧರ್ಮಸಿಂಗ್, ಜೇವರ್ಗಿ ವಿಧಾನಸಭಾ ಕ್ಷೇತ್ರವನ್ನು ಎಂಟು ಬಾರಿ ಪ್ರತಿನಿಧಿಸಿದ್ದರು, ದೀರ್ಘ ಅವಧಿಗೆ ಮಂತ್ರಿಯೂ ಆಗಿದ್ದರು. ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ತಾವು ಹುಟ್ಟಿ ಬೆಳೆದ ಮಣ್ಣಿನ ಋಣ ತೀರಿಸಲಾದರೂ ಜೇವರ್ಗಿ ಮತಕ್ಷೇತ್ರವನ್ನು ‘ನಂದನವನ’ ಮಾಡಬಹುದಿತ್ತು. ಕಡೆಯಪಕ್ಷ ಹತ್ತಾರು ಕೈಗಾರಿಕೆಗಳನ್ನು ಕ್ಷೇತ್ರಕ್ಕೆ ತರಬಹುದಿತ್ತು. ‘ಮಲ್ಲಾಬಾದಿ ಏತ ನೀರಾವರಿ ಯೋಜನೆ’ ಇಂದಿಗೂ ಪೂರ್ಣಗೊಂಡಿಲ್ಲ.

ಧರ್ಮಸಿಂಗ್ ತರುವಾಯ ಅವರ ಮಗ ಡಾ. ಅಜಯಸಿಂಗ್ ನಿರಂತರ ಮೂರನೇ ಬಾರಿ ಜೇವರ್ಗಿ ಕ್ಷೇತ್ರದ ಶಾಸಕರಾಗಿದ್ದಾರೆ. ಏಳು ಜಿಲ್ಲೆಗಳ ವ್ಯಾಪ್ತಿಯ ‘ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ’ಯ ಅಧ್ಯಕ್ಷರೂ ಆಗಿದ್ದಾರೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ಸಿಂಹಪಾಲು ಅಧಿಕಾರ, ಮಂಡಳಿ ಅಧ್ಯಕ್ಷರ ಕೈಯಲ್ಲೇ ಇರುತ್ತದೆ. ಮೇಲಾಗಿ, ಪಂಚಾಯತ್ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕಲಬುರ್ಗಿಯವರು. ಆದಾಗ್ಯೂ, ಸಕಾರಾತ್ಮಕ ಫಲಿತಾಂಶಗಳು ಏಕೆ ಫಲಿಸುತ್ತಿಲ್ಲ ಎನ್ನುವುದು ಅರ್ಥವಾಗುತ್ತಿಲ್ಲ.

ಜೇವರ್ಗಿ ಕ್ಷೇತ್ರಕ್ಕೆ ಸೇರಿದ ನನ್ನೂರು ಕಡಕೋಳದ ಪರಿಸ್ಥಿತಿಯನ್ನೇ ನೋಡಿ. ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ನಮ್ಮೂರಲ್ಲಿ ಸರ್ಕಾರಿ ಪ್ರೌಢಶಾಲೆ ಇದೆ. ಅದು ಸ್ಥಾಪನೆಯಾಗಿ ಹದಿನೆಂಟು ವರ್ಷ ಕಳೆದರೂ ವಿದ್ಯುತ್ತಿನ ಬೆಳಕನ್ನು ಕಂಡಿಲ್ಲ. ವಿದ್ಯುತ್ ಸಂಪರ್ಕ ಇಲ್ಲದ ಕಾರಣಕ್ಕೆ ‘ಸ್ಮಾರ್ಟ್ ಕ್ಲಾಸ್’ ಸೇರಿದಂತೆ ಅನೇಕ ಮಹತ್ವದ ಅವಕಾಶಗಳಿಂದಲೂ ಶಾಲೆ ವಂಚಿತ. ಸಾರಿಗೆ ಸೌಕರ್ಯ ಇಲ್ಲದ ಕಾರಣ, ಐದಾರು ಹಳ್ಳಿಗಳಿಂದ ಮಕ್ಕಳು ಕಾಲ್ನಡಿಗೆಯಲ್ಲೇ ಶಾಲೆಗೆ ಬರುತ್ತಾರೆ.

ಗ್ರಾಮೀಣ ಜನಾರೋಗ್ಯದ ಜೀವಾಳವೇ ಆಗಬೇಕಿರುವ ‘ಆರೋಗ್ಯ ಉಪಕೇಂದ್ರ’ದ ಕಟ್ಟಡವೇನೋ ಇದೆ. ಆದರೆ, ಮಹಿಳಾ ಸಿಬ್ಬಂದಿ ವಾಸಿಸಲು ಮೂಲ ಸೌಕರ್ಯಗಳಿಲ್ಲದೇ ಅದು ಹುಟ್ಟಿದಾಗಿಂದಲೂ ಸಿಬ್ಬಂದಿ ವಾಸವಾಗಿಲ್ಲ. ಕಟ್ಟಡದ ಸುತ್ತಲಿನ ಪರಿಸರ ತಿಪ್ಪೇಗುಂಡಿ, ಹಂದಿಗಳ ಆವಾಸಸ್ಥಾನ. ಜಡ್ಡುಜಾಪತ್ರೆಗೆ ದೀಡು ಹರದಾರಿ ದೂರದ ಯಡ್ರಾಮಿಯ ಖಾಸಗಿ ದವಾಖಾನೆಗಳೇ ನಮ್ಮೆಲ್ಲ ಹಳ್ಳಿಗಳಿಗೆ ಗತಿ.

ನಮ್ಮೂರ ಹೆಣ್ಣುಮಕ್ಕಳು ದೇಹಬಾಧೆ ತೀರಿಸಿಕೊಳ್ಳಲು ಇವತ್ತಿಗೂ ಕತ್ತಲೆಗಾಗಿ ಕಾಯುತ್ತಾರೆ. ಊರ ಮುಂದೆಯೇ ಹಿರೇಹಳ್ಳ ತುಂಬಿ ಹರಿಯುತ್ತಿದ್ದರೂ ಪರಿಶುದ್ಧ ಕುಡಿಯುವ ನೀರಿನ ಬವಣೆ ತೀರಿಲ್ಲ. ಈ ಬಾರಿಯ ರಣಮಳೆಯಿಂದಾಗಿ ಬೆಳೆಗಳು ಕೊಳೆತಿವೆ. ನಮಗೆ ಅನಾವೃಷ್ಟಿಯ ಒಣ ‘ಬರ’ದಂತೆ ಅತಿವೃಷ್ಟಿಯ ಹಸೀ ‘ಬರ’ವೂ ಘೋರವೇ. ಇವು ಕೇವಲ ನನ್ನೂರಿನ ಕಥೆಗಳು ಮಾತ್ರವಲ್ಲ, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯ ಹಳ್ಳಿಗಳ ವ್ಯಥೆಗಳೂ ಹೌದು. ಕೆಲವು ಊರುಗಳಲ್ಲಿ ಪರಿಸ್ಥಿತಿ ಮತ್ತಷ್ಟು ದಾರುಣ.

ಕಲ್ಯಾಣ ಕರ್ನಾಟಕ ಭಾಗದ ಸವಾಲುಗಳನ್ನು ಎದುರಿಸಲು ಪ್ರತ್ಯೇಕ ‘ಕಲ್ಯಾಣ ಕರ್ನಾಟಕ ಗ್ರಾಮಾಭಿವೃದ್ಧಿ ನೀತಿ’ ರಚನೆಯ ಅಗತ್ಯವಿದೆ. ತನ್ಮೂಲಕವಾದರೂ ನಮ್ಮ ನೆಲದ ಸಂವೇದನಾಶೀಲ ಅನನ್ಯತೆ ಮತ್ತು ಸಂಕಟಗಳನ್ನು ಗುರುತಿಸುವಂತಾಗಬೇಕಿದೆ.

ಕಲ್ಯಾಣ ಕರ್ನಾಟಕ ಭಾಗದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ವಿಶೇಷ ಅವಕಾಶ ಕಲ್ಪಿಸುವ ಆರ್ಟಿಕಲ್ 371 (ಜೆ) ಕಾರಣದಿಂದಾಗಿ ಒಂದಷ್ಟು ಅನುಕೂಲವಾಗಿದೆ. ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಸೀಟುಗಳ ಹಂಚಿಕೆ, ಉದ್ಯೋಗಗಳಲ್ಲಿ ಅವಕಾಶಗಳು ಸಿಗುತ್ತಿವೆ. ಆದರೆ, ಈ ಭಾಗದ ಗ್ರಾಮೀಣರು ಗುಳೆ ಹೋಗುವುದನ್ನು ಯಾವ ಸರ್ಕಾರದಿಂದಲೂ ತಡೆಯಲಾಗಿಲ್ಲ. ಕಾರ್ಪೊರೇಟ್ ಮಾದರಿಯ ವಿಶ್ವವಿದ್ಯಾಲಯ, ವಿಮಾನ ನಿಲ್ದಾಣ ಮೊದಲಾದ ನಗರಮುಖಿ ಅಭಿವೃದ್ಧಿ ಯೋಜನೆಗಳ ಅಬ್ಬರ ಒಂದೆಡೆಯಾದರೆ, ಇನ್ನೊಂದೆಡೆ ಕಲ್ಯಾಣ ಕರ್ನಾಟಕದ ಗ್ರಾಮಗಳು ಬಡತನ ಮತ್ತು ಪತನದ ಹಾದಿಯಲ್ಲಿವೆ.

ಕಣ್ಣಿಗೆ ನೆದರಾಗುವಷ್ಟು ರಾಜಕೀಯ ಅವಕಾಶಗಳು ಕಲ್ಯಾಣ ಕರ್ನಾಟಕಕ್ಕೆ ದೊರೆತಿವೆ. ಅದರಿಂದ, ರಾಜಕಾರಣಿ ಹಾಗೂ ಅಧಿಕಾರಿ ವರ್ಗದ ಕುಟುಂಬಗಳ ಕಲ್ಯಾಣವಾಗಿದೆ ಅಷ್ಟೇ. ನಿಜವಾದ ಕಲ್ಯಾಣ ಆಗುವುದೆಂದು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.