ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಭಾಷಾ ವೈವಿಧ್ಯ, ನೀತಿ ರಚನೆಯಾಗಲಿ

ಹಿಂದಿ ಭಾಷಿಕರ ಸಂಖ್ಯೆ ಅಧಿಕವಾಗಿದೆ ಎಂಬ ಕಾರಣಕ್ಕೆ ಹಿಂದಿಯನ್ನು ಅಧಿಕೃತ ಭಾಷೆ ಎಂದು ಕರೆಯುವುದು ಬಹುಭಾಷಿಕ ಭಾರತಕ್ಕೆ ಎಂದಿಗೂ ಒಪ್ಪಿಗೆಯಾಗದ ವಾದ
Last Updated 13 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಸೆಪ್ಟೆಂಬರ್ ಬಂತೆಂದರೆ ಹಿಂದಿಯೇತರ ಸ್ವಾಭಿಮಾನಿಗಳಲ್ಲಿ ಆಕ್ರೋಶ ಮೂಡುತ್ತದೆ. ಅದಕ್ಕೆ ಕಾರಣ, ಕೇಂದ್ರ ಸರ್ಕಾರ ಹಿಂದಿ ಹೇರಿಕೆಯನ್ನು ಅಧಿಕೃತವಾಗಿ ಹೇರಲು ಆಚರಿಸುವ ‘ಹಿಂದಿ ದಿವಸ್’. ಎಲ್ಲಾ ಭಾಷೆಯ ಜನರು ನೀಡುವ ತೆರಿಗೆ ಹಣದಲ್ಲಿ ನಡೆಯುವ ಸರ್ಕಾರವು ಹಿಂದಿ ಭಾಷೆಯನ್ನು ಹಿಂದಿಯೇತರ ರಾಜ್ಯಗಳಲ್ಲಿ ಬಲವಂತವಾಗಿ ಬಳಸುವಂತೆ ಮಾಡಲು, ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ‘ಹಿಂದಿ ದಿವಸ್’, ‘ಹಿಂದಿ ಸಪ್ತಾಹ’, ‘ಹಿಂದಿ ಪಾಕ್ಷಿಕ’, ‘ಹಿಂದಿ ಮಾಸ’ದಂತಹ ಕಾರ್ಯಕ್ರಮಗಳನ್ನು ಆಚರಿಸುತ್ತಿದೆ.

ಕನ್ನಡದ ವಿನಾ ಬೇರೆ ಭಾಷೆಯ ಗಂಧವೇ ಇಲ್ಲದ ಹಳ್ಳಿಗಳಲ್ಲಿರುವ ಬ್ಯಾಂಕ್‌ ಶಾಖೆಗಳಲ್ಲೂ ಇದೀಗ ಹಿಂದಿ ಭಾಷಿಕ ನೌಕರರನ್ನು ಹೇರಲಾಗಿದೆ. ಗ್ಯಾಸ್ ಸಿಲಿಂಡರ್, ರೈಲು, ವಿಮಾನ ಮುಂತಾದಲ್ಲಿನ ಸುರಕ್ಷಾ ನಿರ್ದೇಶನಗಳು ಸ್ಥಳೀಯ ಭಾಷೆಯಲ್ಲಿ ಇಲ್ಲದೆ, ಕನ್ನಡ ಮಾತ್ರ ಬಲ್ಲವರ ಸುರಕ್ಷತೆಯನ್ನು ಕಡೆಗಣಿಸಲಾಗುತ್ತಿದೆ. ಇನ್ನು ಕೇಂದ್ರ ಸರ್ಕಾರದ ಕಚೇರಿ, ಸಂಸ್ಥೆ, ಉದ್ಯಮಗಳಲ್ಲಿ ಹಿಂದಿ ಹೇರಿಕೆಯು ಅತಿರೇಕಕ್ಕೆ ಮುಟ್ಟಿದೆ.

ಭಾರತದ ಸಂವಿಧಾನ ಸಭೆಯು 1949ರ ಸೆ. 14ರಂದು, ದೇವನಾಗರಿ ಲಿಪಿಯಲ್ಲಿ ಬರೆದ ಹಿಂದಿಯನ್ನು ರಾಷ್ಟ್ರದ ಅಧಿಕೃತ ಭಾಷೆಯಾಗಿ ಅಂಗೀಕರಿಸಿತು. ಇದನ್ನು ಸ್ಮರಣೀಯವಾಗಿಸಲು ಪ್ರಧಾನಿ ಜವಾಹರಲಾಲ್ ನೆಹರೂ ಸೆ. 14ರಂದು ಪ್ರತಿವರ್ಷ ‘ಹಿಂದಿ ದಿವಸ್’ ಆಚರಿಸಲು ನಿರ್ಧರಿಸಿದರು. ಇದು ಸಪ್ತಾಹ, ಪಾಕ್ಷಿಕ, ಮಾಸವಾಗಿ ಈಗ ಪ್ರತಿದಿನ ಹಿಂದಿ ಹೇರಿಕೆಯ ದಿನವಾಗಿದೆ.

1975ರ ಜ. 10ರಂದು ನಾಗಪುರದಲ್ಲಿ ನಡೆದ ಮೊದಲ ವಿಶ್ವ ಹಿಂದಿ ಸಮ್ಮೇಳನದ ನೆನಪಿಗಾಗಿ
ಜ.10ರಂದು ‘ವಿಶ್ವ ಹಿಂದಿ ದಿನ’ವನ್ನು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಹಿಂದಿ ಭಾಷೆಯನ್ನು ಪ್ರಚಾರ ಮಾಡುವ ಉದ್ದೇಶದಿಂದ ಇದನ್ನು ಮೊದಲ ಬಾರಿಗೆ 2006ರಲ್ಲಿ ಆಚರಿಸಲಾಯಿತು. ದೊಡ್ಡ ಸಂಖ್ಯೆಯ ಅನಕ್ಷರಸ್ಥರು, ಬಡತನದ ರೇಖೆಗಿಂತ ಕೆಳಗಿರುವ ಜನಸಂಖ್ಯೆ ಶೇ 16ರಷ್ಟಿರುವ ದೇಶದಲ್ಲಿ ಒಂದು ಭಾಷೆಯನ್ನು ಬಲ್ಲ ಜನರ ಮೇಲೆ ಇನ್ನೊಂದು ಭಾಷೆಯನ್ನು ಹೇರುವುದು ಎಷ್ಟು ಸರಿ ಎಂಬ ಬಗ್ಗೆ ಆಳುವವರು ಚಿಂತಿಸಬೇಕಿದೆ.

ದೇಸಿ ಭಾಷೆಗಳನ್ನು ಬೆಳೆಸಲು ತ್ರಿಭಾಷಾ ಸೂತ್ರ ಜಾರಿಗೊಳಿಸುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡ ಕಾರಣಕ್ಕೆ ನಮ್ಮ ವಿದ್ಯಾರ್ಥಿಗಳು ಅನಿವಾರ್ಯವಾಗಿ ಹಿಂದಿ ಭಾಷೆಯನ್ನು ಕಲಿಯಬೇಕಾಗಿದೆ. ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿಯನ್ನು ಶಿಕ್ಷಣದಲ್ಲಿ ಅಳವಡಿಸಿದಂತೆ, ಹಿಂದಿ ರಾಜ್ಯಗಳಲ್ಲಿ ಹಿಂದಿಯೇತರ ಭಾರತದ ಒಂದು ಭಾಷೆಯನ್ನು ಕಲಿಸಬೇಕು ಎಂದು ಹೇಳಲಾಗಿತ್ತು. ಯಾವುದಾದರೂ ಹಿಂದಿ ಭಾಷಿಕ ರಾಜ್ಯದಲ್ಲಿ ಹಿಂದಿಯೇತರ ಭಾರತದ ಭಾಷೆಗಳನ್ನು ಕಲಿಸುವ ವ್ಯವಸ್ಥೆಯಿದೆಯೇ ಎಂದರೆ, ಇಲ್ಲ ಅನ್ನಲು ಹೆಚ್ಚಿನ ಪುರಾವೆಯೇನೂ ಬೇಕಿಲ್ಲ.

ದೇಶವನ್ನಾಳಿದ ಎಲ್ಲಾ ಸರ್ಕಾರಗಳು ಹಿಂದಿಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಹೇರುವ ಕಾರ್ಯವನ್ನು ಅವ್ಯಾಹತವಾಗಿ ಮಾಡುತ್ತ ಬಂದಿವೆ. ಹಿಂದಿ ಹೇರಿಕೆಗೆ ಸ್ವಾತಂತ್ರ್ಯಪೂರ್ವದಲ್ಲೇ ವಿರೋಧ ವ್ಯಕ್ತವಾಗಿತ್ತು. 1965ರಲ್ಲಿ ಹಿಂದಿ ಹೇರಿಕೆ ವಿರುದ್ಧದ ಹೋರಾಟದ ಪರಿಣಾಮವಾಗಿ ತಮಿಳುನಾಡಿ
ನಲ್ಲಿ ಡಿಎಂಕೆ ಅಧಿಕಾರ ಹಿಡಿಯಿತು. ತನ್ನ ರಾಜಕೀಯ ಭದ್ರಕೋಟೆಯಾಗಿದ್ದ ತಮಿಳುನಾಡನ್ನು ಕಾಂಗ್ರೆಸ್ ಶಾಶ್ವತವಾಗಿ ಕಳೆದುಕೊಂಡಿತು. ಈ ಐತಿಹಾಸಿಕ ಸಂಗತಿಯಿಂದ ಬಿಜೆಪಿ, ಕಾಂಗ್ರೆಸ್‌ನಂಥ ರಾಷ್ಟ್ರೀಯ ಪಕ್ಷಗಳು ಪಾಠ ಕಲಿಯಬೇಕಿತ್ತು. ಭಾರತದಲ್ಲಿ ಹಿಂದಿ ಮಾತನಾಡುವ ಜನರ ಸಂಖ್ಯೆ ಬೇರೆ ಭಾಷೆಗಳಿಗಿಂತ ಅಧಿಕ, ಹಾಗಾಗಿ ಹಿಂದಿ ಹೇರಿಕೆಯನ್ನು ಒಪ್ಪಿಕೊಳ್ಳಬೇಕು ಎಂಬುದು ಪ್ರಜಾಪ್ರಭುತ್ವ ತತ್ವಕ್ಕೆ ವಿರುದ್ಧ
ವಾದದ್ದು. ಸಂಖ್ಯಾಬಲವೇ ನಿರ್ಣಾಯಕವಾದರೆ ರಾಷ್ಟ್ರಪಕ್ಷಿ ನವಿಲಿನ ಬದಲು ಕಾಗೆಯಾಗಬೇಕಿತ್ತು. ಹಾಗೇ ನಾಯಿ ರಾಷ್ಟ್ರಪ್ರಾಣಿ ಆಗಬೇಕಿತ್ತು, ಹುಲಿಯಲ್ಲ.

‘ಹಿಂದಿ ದಿವಸ್’ ಅನ್ನು ವಿರೋಧಿಸುವುದರಿಂದ ಹಿಂದಿ ಹೇರಿಕೆ ನಿಲ್ಲುವುದಿಲ್ಲ. ಹಾಗಾಗಬೇಕೆಂದರೆ ಹಿಂದಿಗೆ ಏಕೈಕ ಅಧಿಕೃತ ಭಾಷಾ ಸ್ಥಾನ ನೀಡಿರುವ ಸಂವಿಧಾನದ 351ನೇ ವಿಧಿ, ಹಿಂದಿಯನ್ನು ಒಕ್ಕೂಟ ಸರ್ಕಾರದ ಆಡಳಿತ ಭಾಷೆಯನ್ನಾಗಿಸುವ 343ನೇ ವಿಧಿಯನ್ನು ರದ್ದು ಮಾಡಲು ಒತ್ತಡ ತರಬೇಕಿದೆ.

ಹಿಂದಿ ಭಾಷಿಕರ ಪ್ರಮಾಣ ಹೆಚ್ಚಿಗೆ ಇದೆ ಎಂಬ ಕಾರಣಕ್ಕೆ ಹಿಂದಿಯನ್ನು ಅಧಿಕೃತ ಭಾಷೆ ಎಂದು ಕರೆಯುವುದು ಬಹುಭಾಷಿಕ ಭಾರತಕ್ಕೆ ಎಂದಿಗೂ ಒಪ್ಪಿಗೆಯಾಗದ ವಾದ. ಭಾರತದ ಎಲ್ಲ ಭಾಷೆಗಳು ಉಳಿದು ಬೆಳೆಯುವ ರೀತಿಯಲ್ಲಿ ಡಿಜಿಟಲ್ ತಂತ್ರಜ್ಞಾನ ಮುಂದುವರಿದಿರುವ ಈ ದಿನಗಳಲ್ಲಿ ಒಂದು ಭಾಷಾ ನೀತಿ ರೂಪಿಸುವುದು ಕಷ್ಟವಲ್ಲ.

ಕನ್ನಡಿಗರು ಕನ್ನಡಿಗರಾಗಿಯೇ, ಕನ್ನಡ ಸಂಸ್ಕೃತಿಯನ್ನು ಮುಂದುವರಿಸಿಕೊಂಡೇ ದೇಶದ ಭಾಗವಾಗಿರುವ ಅವಕಾಶ ಇರಬೇಕು. ಜನರ ಭಾವನೆಯನ್ನು ಗೌರವಿಸಿ ಭಾರತ ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ತಂದು, ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳನ್ನೂ ಅಧಿಕೃತ, ಆಡಳಿತ ಭಾಷೆಗಳನ್ನಾಗಿ ಘೋಷಿಸಬೇಕು. ಹಿಂದಿಗೆ ಅನಗತ್ಯವಾಗಿ ವಿಶೇಷ ಮನ್ನಣೆ ನೀಡುವ ಸಂವಿಧಾನದ ವಿಧಿಗಳನ್ನು ರದ್ದುಪಡಿಸುವ ಮೂಲಕ ಎಲ್ಲ ದೇಸಿ ಭಾಷೆಗಳೂ ಸಮಾನ ಎಂದು ಸಾರಬೇಕು. ಹಾಗಾದಾಗ ಮಾತ್ರ ದೇಶದ ಎಲ್ಲ ಭಾಷಿಕರೂ ಸ್ವಾಭಿಮಾನದಿಂದ ಸಮಾನರಾಗಿ ಬದುಕಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT