ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಗ್ರಂಥಾಲಯ: ಸಾರ್ವಜನಿಕರ ಕೊರತೆಯೇಕೆ?

Last Updated 6 ನವೆಂಬರ್ 2022, 19:32 IST
ಅಕ್ಷರ ಗಾತ್ರ

ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಗ್ರಂಥಾಲಯ ಸಪ್ತಾಹ ವನ್ನು ಆಚರಿಸಲಾಗುತ್ತದೆ. ವಾರಪೂರ್ತಿ ಪುಸ್ತಕ ಪ್ರದರ್ಶನ, ಪರಿಣತರಿಂದ ವಿಶೇಷ ಉಪನ್ಯಾಸಗಳನ್ನು ಆಯೋಜಿಸಲಾಗುತ್ತದೆ. ಈ ಮೂಲಕ ಓದುಗರನ್ನು ಗ್ರಂಥಾಲಯದತ್ತ ಆಕರ್ಷಿಸುವ ಪ್ರಯತ್ನ ಸಾರ್ವಜನಿಕ ಗ್ರಂಥಾಲಯ ಇಲಾಖೆಯದ್ದು.

ಇದೇ ಸಂದರ್ಭ ಸಾರ್ವಜನಿಕ ಗ್ರಂಥಾಲಯಗಳಿಗೆ ಬರುವ ಓದುಗರ ಸಂಖ್ಯೆ ಏಕೆ ಇಳಿಮುಖವಾಗು ತ್ತಿದೆ ಎಂದು ಯೋಚಿಸಬೇಕಿದೆ. ಜನರಲ್ಲಿ ಓದುವ ಅಭಿರುಚಿ ಕಡಿಮೆಯಾಗುತ್ತಿದೆ ಎಂದು ಆರೋಪಿಸು ವುದರಲ್ಲಿ ಯಾವುದೇ ಹುರುಳಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸರತಿಸಾಲಿನಲ್ಲಿ ನಿಂತು ಪುಸ್ತಕಗಳನ್ನು ಖರೀದಿಸುವ ಚಿತ್ರಣ ನಮ್ಮ ಕಣ್ಣೆದುರಿಗಿದೆ. ಅದೆಷ್ಟೋ ಪ್ರಕಾಶನ ಸಂಸ್ಥೆಗಳು ತಮ್ಮ ಪುಸ್ತಕಗಳ ಮಾರಾಟಕ್ಕಾಗಿ ಪ್ರಜ್ಞಾವಂತ ಓದುಗರನ್ನು ನೆಚ್ಚಿಕೊಂಡಿವೆಯೇ ವಿನಾ ಸಾರ್ವಜನಿಕ ಗ್ರಂಥಾಲಯಗಳನ್ನಲ್ಲ.

ಸನ್ನಿವೇಶ ಹೀಗಿರುವಾಗ, ಸಾರ್ವಜನಿಕ ಗ್ರಂಥಾ ಲಯಗಳಲ್ಲೇಕೆ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಇದಕ್ಕೆ ಉತ್ತರವಾಗಿ, ಓದುಗರಿಗೆ ಗುಣಮಟ್ಟದ ಪುಸ್ತಕಗಳು ಗ್ರಂಥಾಲಯಗಳಲ್ಲಿ ಸಿಗುತ್ತಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ. ಈ ಆರೋಪ ಸತ್ಯಕ್ಕೆ ಹತ್ತಿರವಾಗಿದೆ. ಏಕೆಂದರೆ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಪುಸ್ತಕಗಳ ಖರೀದಿಯ ಒಟ್ಟು ವಿಧಾನವೇ ಅವೈಜ್ಞಾನಿಕವಾಗಿದೆ. ಪ್ರಕಾಶಕರಿಂದ ಇಂತಿಷ್ಟು ಪ್ರಮಾಣದಲ್ಲಿ ಪುಸ್ತಕಗಳ ಪ್ರತಿಗಳನ್ನು ಖರೀದಿಸಬೇಕೆಂಬ ನಿಯಮ ಚಾಲ್ತಿ ಯಲ್ಲಿದೆ. ಪ್ರಕಾಶಕರಿಗೆ ಉತ್ತೇಜನ ಕೊಡಲು ಜಾರಿ ಯಲ್ಲಿರುವ ಈ ವಿಧಾನದಿಂದಾಗಿ ಗುಣಮಟ್ಟದ ಪುಸ್ತಕ ಗಳ ಕೊರತೆ ಗ್ರಂಥಾಲಯಗಳಲ್ಲಿ ಎದ್ದುಕಾಣುತ್ತಿದೆ.

ಅದೆಷ್ಟೋ ಪ್ರಕಾಶಕರು ಸಾರ್ವಜನಿಕ ಗ್ರಂಥಾಲಯ ಗಳಿಗೆಂದೇ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಒಬ್ಬರೇ ಪ್ರಕಾಶಕರು ಬೇರೆ ಬೇರೆ ಹೆಸರುಗಳಲ್ಲಿ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಾಶನ ಸಂಸ್ಥೆಗಳನ್ನು ಹುಟ್ಟು ಹಾಕಿ ಪುಸ್ತಕಗಳನ್ನು ಪ್ರಕಟಿಸುತ್ತಿರುವುದೂ ಇದೆ. ಕೆಲವು ವರ್ಷಗಳ ಹಿಂದೆ, ಹಿಂದುಳಿದ ಭಾಗವೆಂಬ ಕಾರಣದಿಂದ ಹೈದರಾಬಾದ್‌ ಕರ್ನಾಟಕ ಭಾಗದ (ಈಗಿನ ಕಲ್ಯಾಣ ಕರ್ನಾಟಕ) ಪ್ರಕಾಶಕರಿಂದ ಪ್ರತೀ ಪುಸ್ತಕದ 1,500 ಪ್ರತಿಗಳನ್ನು ಖರೀದಿಸಬೇಕೆನ್ನುವ ಆದೇಶವನ್ನು ಸರ್ಕಾರ ಹೊರಡಿಸಿತ್ತು. ಇದಕ್ಕಾಗಿ ಪ್ರಕಟಣಾ ವರ್ಷದ ನಿರ್ಬಂಧವನ್ನು ಕೂಡ ತೆಗೆದುಹಾಕ ಲಾಗಿತ್ತು. ಪರಿಣಾಮವಾಗಿ, ಆ ಭಾಗದ ಪ್ರಕಾಶಕರು ತಮ್ಮ ಪ್ರಕಟಣೆಯ ಅಳಿದುಳಿದ ಸರಕನ್ನೆಲ್ಲ ಮಾರಾಟ ಮಾಡಿ ಧನ್ಯರಾದರು. ಪುಸ್ತಕದಂತಹ ಸಂಸ್ಕೃತಿಗೆ ಈ ರೀತಿಯ ವಿನಾಯಿತಿ ಮತ್ತು ಔದಾರ್ಯವನ್ನು ತೋರಿ ಸುವ ಅಗತ್ಯವಿತ್ತೇ ಎನ್ನುವ ಸಂದೇಹ ಕಾಡದೇ ಇರದು.

ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲೇ ಗ್ರಂಥಾ ಲಯಗಳು ಅವ್ಯವಸ್ಥೆಯ ಆಗರವಾಗಿರುವಾಗ ಇನ್ನು ಗ್ರಾಮೀಣ ಭಾಗದಲ್ಲಿನ ಗ್ರಂಥಾಲಯಗಳು ಚಿಂತಾ ಜನಕ ಸ್ಥಿತಿಯಲ್ಲಿವೆ. ಸ್ಥಳೀಯರನ್ನೇ ಮೇಲ್ವಿಚಾರಕ ರೆಂದು ನೇಮಕ ಮಾಡಿಕೊಳ್ಳುತ್ತಿರುವುದರಿಂದ ಅಲ್ಲಿನ ಗ್ರಂಥಾಲಯಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸ್ಥಳೀಯರ ಬೆಂಬಲವಿರುವುದರಿಂದ ಮೇಲ್ವಿಚಾರಕರು ಗ್ರಂಥಾಲಯಗಳಿಗೆ ಬೀಗಹಾಕಿ ಖಾಸಗಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಈ ಮೊದಲು ಗ್ರಾಮೀಣ ಗ್ರಂಥಾಲಯಗಳಲ್ಲಿ ಕಾರ್ಯನಿರ್ವಹಿಸುವ ಮೇಲ್ವಿಚಾರಕರಿಗಾಗಿ ಪುನಶ್ಚೇತನ ಶಿಬಿರಗಳನ್ನು ಆಯೋಜಿಸಲಾಗುತ್ತಿತ್ತು. ಮೇಲ್ವಿಚಾರಕರಲ್ಲಿ ವಿಷಯಜ್ಞಾನ ಮತ್ತು ತರಬೇತಿಯ ಕೊರತೆ ಎದ್ದು ಕಾಣುತ್ತಿದ್ದುದನ್ನು ಇಂತಹ ಶಿಬಿರಗಳ ಸಂಪನ್ಮೂಲ ವ್ಯಕ್ತಿಯಾಗಿ ನಾನು ಕಂಡಿದ್ದೇನೆ. ಈಗ ಶಿಬಿರ ಆಯೋಜಿಸುತ್ತಿಲ್ಲವೋ ಅಥವಾ ಸರ್ಕಾರದ ದಸ್ತಾವೇಜುಗಳ ಮಟ್ಟದಲ್ಲಿ ಮಾತ್ರ ದಾಖಲಾಗುತ್ತಿದೆಯೋ ತಿಳಿಯುತ್ತಿಲ್ಲ.

ಈ ನಡುವೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಪುಸ್ತಕಗಳ ಡಿಜಿಟಲೀಕರಣಕ್ಕೆ ಮುಂದಾಗಿದೆ. ಇದರಿಂದ ಪುಸ್ತಕಗಳನ್ನು ಅಸಂಖ್ಯಾತ ಓದುಗರಿಗೆ ತಲುಪಿಸಬಹುದು ಎನ್ನುವುದು ತಪ್ಪು ನಿರ್ಣಯವಾಗುತ್ತದೆ. ಜೊತೆಗೆ ಡಿಜಿಟಲೀಕರಣಗೊಳ್ಳುತ್ತಿರುವ ಪುಸ್ತಕಗಳು ಯಾವುವು ಮತ್ತು ಯಾವ ವಯೋಮಾನದ ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಯೋಚನೆ ಮಾಡಬೇಕಾಗಿದೆ. ಡಿಜಿಟಲೀಕರಣಕ್ಕೆ ಖರ್ಚಾಗುವ ಹಣವನ್ನೇ ಯೋಗ್ಯ ಗುಣಮಟ್ಟದ ಪುಸ್ತಕಗಳ ಖರೀದಿಗಾಗಿ ವಿನಿಯೋಗಿಸಿದ್ದರೆ ಗ್ರಂಥಾಲಯಗಳನ್ನು ಪುನಶ್ಚೇತನಗೊಳಿಸಿದಂತೆ ಆಗುತ್ತಿತ್ತು.

ಒಂದುಕಡೆ ಅತಿಯಾದ ಮೊಬೈಲ್ ಬಳಕೆಯಿಂದ ಪುಸ್ತಕಗಳ ಓದಿನಿಂದ ವಿಮುಖವಾಗುತ್ತಿರುವ ಯುವ ಪೀಳಿಗೆ. ಇನ್ನೊಂದು ಕಡೆ, ಗ್ರಂಥಾಲಯಗಳನ್ನು ತಮ್ಮ ಹೊತ್ತುಗಳೆಯುವ ತಾಣಗಳೆಂದು ಭಾವಿಸಿರುವ ಕೆಲವು ವಯೋವೃದ್ಧರು. ಮತ್ತೊಂದು ಕಡೆ ಸಂಚಾರಿ ಗ್ರಂಥಾಲಯ ಸೇವೆ ಸ್ಥಗಿತಗೊಂಡು, ಧಾರಾವಾಹಿಗಳ ವೀಕ್ಷಕರಾಗಿ ಬದಲಾಗಿರುವ ಮನೆಯ ಗೃಹಿಣಿಯರು. ಈ ಎಲ್ಲರ ನಡುವೆ ಪುಸ್ತಕ ಮಳಿಗೆಗಳೇ ತಮ್ಮ ಓದಿನ ಶಮನಕ್ಕಿರುವ ಏಕೈಕ ಪರ್ಯಾಯ ಮಾರ್ಗವೆಂದು ಪುಸ್ತಕಗಳನ್ನು ಖರೀದಿಸಿ ಓದುತ್ತಿರುವ ಓದುಗರು. ಹೀಗೆ ಸಾರ್ವಜನಿಕ ಗ್ರಂಥಾಲಯಗಳ ಓದುಗ ವರ್ಗ ವಿಭಿನ್ನ ಕವಲುಗಳಾಗಿ ಒಡೆದುಹೋಗಿದೆ.

ಇಂಥ ಸನ್ನಿವೇಶದಲ್ಲಿ ಪುಸ್ತಕಗಳ ಓದಿನ ಸಂಸ್ಕೃತಿ ಯನ್ನು ಬಿತ್ತಿ ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಗ್ರಂಥಾಲಯ ಇಲಾಖೆ ಮಹತ್ವದ ಪಾತ್ರ ನಿರ್ವಹಿಸಬೇಕಿದೆ. ಕೊನೆಗೂ ಇಲಾಖೆ ಉತ್ತರದಾಯಿಯಾಗಿ ಇರಬೇಕಾದದ್ದು ತೆರಿಗೆ ಕಟ್ಟುತ್ತಿರುವ ಸಾರ್ವಜನಿಕರಿಗೆ ಎನ್ನುವ ಸತ್ಯ ಅರಿವಾಗಬೇಕು.

ಲೇಖಕ: ಮುಖ್ಯ ಗ್ರಂಥಪಾಲಕ, ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT