ಶುಕ್ರವಾರ, ಜುಲೈ 1, 2022
23 °C
ಶೈಕ್ಷಣಿಕ ಸಾಲವನ್ನು ವಿದ್ಯಾರ್ಥಿ ಮತ್ತು ಅವರ ಕುಟುಂಬದ ವೈಯಕ್ತಿಕ ಹೊಣೆಗಾರಿಕೆಗೆ ಸೀಮಿತಗೊಳಿಸಿ ನೋಡುವ ಮನೋಭಾವ ಬದಲಾಗಬೇಕು

ಸಂಗತ: ಶೈಕ್ಷಣಿಕ ಸಾಲ ‘ಹೊರೆ’ ಆಗದಿರಲಿ

ಬಿ.ಎಸ್‌.ಶಿವಣ್ಣ ಮಳವಳ್ಳಿ Updated:

ಅಕ್ಷರ ಗಾತ್ರ : | |

ಶೈಕ್ಷಣಿಕ ಸಾಲ–ಪ್ರಾತಿನಿಧಿಕ ಚಿತ್ರ

ಕೊರೊನಾ ವೈರಾಣು ಸೋಂಕು ಜಗತ್ತಿನ ವಿವಿಧ ರಾಷ್ಟ್ರಗಳನ್ನು ತೀವ್ರವಾಗಿ ಕಾಡುತ್ತಿದೆ. ಭಾರತವೂ ಒಂದೂಕಾಲು ವರ್ಷದಿಂದ ಕೊರೊನಾ ವೈರಾಣುವಿನ ಭೀತಿಯಲ್ಲೇ ಇದೆ. ಈ ಸೋಂಕು ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಸೀಮಿತವಾದ ಆತಂಕವಾಗಿ ಉಳಿದಿಲ್ಲ. ಕೋವಿಡ್‌–19 ಮತ್ತು ಅದರ ಪರಿಣಾಮ ವಾಗಿ ಜಾರಿಗೊಂಡ ಲಾಕ್‌ಡೌನ್‌ಗಳು ಇಡೀ ಜಗತ್ತಿನ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿವೆ. ಭಾರತದ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಕೋವಿಡ್‌ ಸೃಷ್ಟಿಸಿರುವ ಬಿಕ್ಕಟ್ಟಿನಿಂದ ದುಡಿಯುವ ವರ್ಗದ ಜನರು ಹೆಚ್ಚು ತೊಂದರೆಗೆ ಸಿಲುಕಿದ್ದಾರೆ. ಬಡವರು ಮತ್ತು ಮಧ್ಯಮ ವರ್ಗದ ಜನರ ಆರ್ಥಿಕ ಜಂಘಾಬಲವೇ ಉಡುಗಿ ಹೋದಂತಹ ಸ್ಥಿತಿ ನಿರ್ಮಾಣವಾಗಿದೆ.

ಕರ್ನಾಟಕವೂ ಸೇರಿದಂತೆ ದೇಶದ ಬಹುತೇಕ ರಾಜ್ಯಗಳು ಈಗ ಎರಡನೇ ಲಾಕ್‌ಡೌನ್‌ನ ನಡುವೆ ಇವೆ. 2020ರಲ್ಲಿ ಜಾರಿಯಾದ ಮೊದಲ ಲಾಕ್‌ ಡೌನ್‌ನಲ್ಲೇ ಜನರು ಹೈರಾಣಾಗಿದ್ದರು. ಈಗ ಕೋವಿಡ್‌ ನಿಂದ ಸಾವು, ಆಸ್ಪತ್ರೆಗಳ ಹಾಸಿಗೆಗಳಿಗಾಗಿ ಪರದಾಟ ಹೆಚ್ಚಾಗುತ್ತಿದ್ದಂತೆ ಸರ್ಕಾರ ಮತ್ತೆ ಲಾಕ್‌ಡೌನ್‌ ಜಾರಿಗೊಳಿಸಿದೆ. ಪರಿಣಾಮವಾಗಿ ದೇಶದ ಬಹು ತೇಕ ಭಾಗಗಳಲ್ಲಿ ಆರ್ಥಿಕ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಇದು ದೇಶದ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವನ್ನೇ ತೂಗುಯ್ಯಾಲೆಯಲ್ಲಿ ಸಿಲುಕಿಸಿದೆ. ಕೋಟ್ಯಂತರ ಮಂದಿಯ ಉದ್ಯೋಗಕ್ಕೆ ಕತ್ತರಿ ಬಿದ್ದಿದ್ದರೆ, ಹೊಸ ಉದ್ಯೋಗಗಳ ಸೃಜನೆ ಸ್ಥಗಿತಗೊಂಡು ವರ್ಷ ಕಳೆಯುತ್ತಿದೆ.

ಕೋವಿಡ್‌ ಲಾಕ್‌ಡೌನ್‌ ಜಾರಿಗೊಳಿಸಿದ ಬೆನ್ನಲ್ಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ‘ಪರಿಹಾರ ಪ್ಯಾಕೇಜ್‌’ ಘೋಷಣೆಯ ಶಾಸ್ತ್ರ ಮುಗಿಸಿವೆ. ಮೊದಲ ಲಾಕ್‌ಡೌನ್‌ನಲ್ಲಿ ಘೋಷಿಸಿದ್ದಂತೆ ಈ ಬಾರಿಯೂ ಆಗಿದೆ. ಮಾನವೀಯ ಅಂತಃಕರಣದ ಸ್ಪರ್ಶವಿಲ್ಲದ, ಕೇವಲ ತೋರಿಕೆಯ ಪ್ಯಾಕೇಜ್‌ಗಳನ್ನು ಘೋಷಿಸುವ ಕೆಲಸವನ್ನು ನಮ್ಮ ರಾಜ್ಯ ಸರ್ಕಾರವೂ ಮಾಡಿದೆ. ಆದರೆ, ಎರಡೂ ಸಂದರ್ಭಗಳಲ್ಲಿ ಉದ್ಯೋಗ ಕಳೆದು ಕೊಂಡ ಮತ್ತು ಉದ್ಯೋಗ ಸೃಜನೆಗಾಗಿ ಕಾದಿರುವ ಯುವಜನರ ನೆರವಿಗೆ ಬರುವ ಯಾವ ಉಪಕ್ರಮ
ಗಳನ್ನೂ ಸರ್ಕಾರಗಳು ಘೋಷಿಸದೇ ಇರುವುದು ನಮ್ಮ ಆಡಳಿತ ವ್ಯವಸ್ಥೆಯಲ್ಲಿರುವ ದೂರದೃಷ್ಟಿಯ ಕೊರತೆಗೆ ಕನ್ನಡಿ ಹಿಡಿಯುತ್ತಿದೆ.

ದೇಶದಲ್ಲಿ ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳ ಹೆಚ್ಚಿನ ಯುವಕ, ಯುವತಿಯರು ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಉದ್ಯೋಗದ ಭರವಸೆಯ ಆಧಾರದಲ್ಲೇ ಶೈಕ್ಷಣಿಕ ಸಾಲ ಮರುಪಾವತಿಯೂ ನಿಂತಿರುತ್ತದೆ. ಈಗ ಎರಡು ವರ್ಷಗಳಿಂದ ದೇಶದಲ್ಲಿ ನಿರುದ್ಯೋಗದ ಪ್ರಮಾಣ ಏರುತ್ತಲೇ ಇದೆ. ಜೂನ್‌ ಮೊದಲ ವಾರದ ಅಂತ್ಯಕ್ಕೆ ಸರಾಸರಿ ಶೇ 12.8 ತಲುಪಿದೆ. ನಗರ ಪ್ರದೇಶಗಳಲ್ಲಿ ನಿರುದ್ಯೋಗ ದರ ಶೇ 15.5ರಷ್ಟಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಶೇ 11.6ರಷ್ಟಿದೆ ಎಂಬುದನ್ನು ‘ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ’ (ಸಿಎಂಐಇ) ವರದಿ ತಿಳಿಸಿದೆ.

ಕೋವಿಡ್‌ ಲಾಕ್‌ಡೌನ್‌ನ ಪರಿಣಾಮವಾಗಿ ದೇಶದ ಬಹುತೇಕ ಬೃಹತ್‌ ಕಂಪನಿಗಳು ತಮ್ಮ ಮಾನವ ಸಂಪನ್ಮೂಲದ ಬಲವನ್ನು ಕಡಿಮೆ ಮಾಡಿವೆ. ಲಾಕ್‌ಡೌನ್‌ ಮತ್ತು ಅದು ಸೃಷ್ಟಿಸಿದ ಆರ್ಥಿಕ ಕುಸಿತದ ಕಾರಣಗಳಿಂದಾಗಿಯೇ ಕೋಟ್ಯಂತರ ಉದ್ಯೋಗಗಳಿಗೆ ಕತ್ತರಿ ಬಿದ್ದಿದೆ. ಬಹುಪಾಲು ಕಂಪನಿಗಳು ಹೊಸ ನೇಮಕಾತಿಗಳಿಗೆ ವಿದಾಯ ಹೇಳಿ ವರ್ಷ ಕಳೆದಿದೆ. ಇಂತಹ ಸನ್ನಿವೇಶದಲ್ಲಿ ಶೈಕ್ಷಣಿಕ ಸಾಲ ಪಡೆದ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದ ಸದಸ್ಯರು ಕಂಗಾಲಾಗಿದ್ದಾರೆ. ದೇಶದಲ್ಲಿ ಅಂದಾಜು ₹ 1.2 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಶೈಕ್ಷಣಿಕ ಸಾಲ ಮರುಪಾವತಿಗೆ ಬಾಕಿ ಇದೆ ಎಂಬ ವರದಿಗಳಿವೆ. ಎರಡು ವರ್ಷಗಳಿಂದ ಈಚೆಗೆ ವ್ಯಾಸಂಗ ಮುಗಿಸಿ ದವರಿಗೆ ಶೈಕ್ಷಣಿಕ ಸಾಲದ ತಿಂಗಳ ಕಂತು ಪಾವತಿಗೆ ಸಾಕಾಗುವಷ್ಟು ವೇತನವುಳ್ಳ ಉದ್ಯೋಗ ಹುಡುಕಿಕೊಳ್ಳುವುದೂ ಕಷ್ಟವಾಗಿದೆ.

ನಮ್ಮ ಭವಿಷ್ಯದ ತಲೆಮಾರು ಇಂತಹ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿರುವ ಸಂದರ್ಭದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವರು ಮಾನವೀಯ ಅಂತಃಕರಣದಿಂದ ಸ್ಪಂದಿಸುವ ಕೆಲಸ ಮಾಡಬೇಕಿತ್ತು. ಶೈಕ್ಷಣಿಕ ಸಾಲ ಮತ್ತು ಅದರ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ, ಕೆಲವು ವರ್ಷಗಳವರೆಗೆ ಮರು ಪಾವತಿಗೆ ವಿರಾಮ ನೀಡುವ ನಿರ್ಧಾರವನ್ನು ಪ್ರಕಟಿಸಬೇಕಿತ್ತು. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ವಿಚಾರದ ಕಡೆಗೆ ಕಣ್ಣೆತ್ತಿಯೂ ನೋಡದೆ ಇರುವುದು ದುರದೃಷ್ಟಕರ ಬೆಳವಣಿಗೆ. ಆಡಳಿತ ಪಕ್ಷ ಮಾತ್ರವಲ್ಲ ವಿರೋಧ ಪಕ್ಷಗಳೂ ಸೇರಿದಂತೆ ದೇಶದ ಯಾವ ರಾಜಕೀಯ ಪಕ್ಷವೂ ಇದನ್ನು ವರ್ತಮಾನ ದಲ್ಲಿನ ಚರ್ಚೆಯ ಮುನ್ನೆಲೆಗೆ ತರದೇ ಇರುವುದು ಸೋಜಿಗದ ಸಂಗತಿ.

ಶೈಕ್ಷಣಿಕ ಸಾಲವನ್ನು ವಿದ್ಯಾರ್ಥಿ ಮತ್ತು ಅವರ ಕುಟುಂಬದ ವೈಯಕ್ತಿಕ ಹೊಣೆಗಾರಿಕೆಗೆ ಸೀಮಿತಗೊಳಿಸಿ ನೋಡುವ ಮನೋಭಾವ ಬದಲಾಗಬೇಕು. ಅದು ಸಾಮೂಹಿಕ ಹೊಣೆಗಾರಿಕೆ ಎಂದೇ ಭಾವಿಸಬೇಕು. ಶಿಕ್ಷಣಕ್ಕಾಗಿ ಪಡೆದ ಸಾಲವು ಮಕ್ಕಳ ಕುಟುಂಬಗಳನ್ನು ಬಾಧಿಸುವುದನ್ನು ತಡೆಯುವ ಕ್ರಮಗಳನ್ನು ಕೈಗೊಳ್ಳಬೇಕಿರುವುದು ಆಡಳಿತದ ಚುಕ್ಕಾಣಿ ಹಿಡಿದಿರುವವರ ಹೊಣೆಗಾರಿಕೆ. ವಿರೋಧ ಪಕ್ಷಗಳೂ ಸೇರಿದಂತೆ ಎಲ್ಲರೂ ಈ ವಿಚಾರದಲ್ಲಿ ದನಿಗೂಡಿಸಬೇಕಿದೆ.

ಲೇಖಕ: ಅಧ್ಯಕ್ಷ, ರಾಮಮನೋಹರ ಲೋಹಿಯಾ ವಿಚಾರ ವೇದಿಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು