ಗುರುವಾರ , ಅಕ್ಟೋಬರ್ 22, 2020
24 °C
ಈ ವರ್ಷ ರಾಜ್ಯೋತ್ಸವ ನಡೆಸುವ ಬಗ್ಗೆ ಸರ್ಕಾರ ಮತ್ತು ಜನ ಬಹಳ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾದ ಅಗತ್ಯವಿದೆ

ಪ್ರಶಸ್ತಿ ಬಯಕೆ ಬದಿಗಿರಿಸೋಣ

ಪುರುಷೋತ್ತಮ ಬಿಳಿಮಲೆ Updated:

ಅಕ್ಷರ ಗಾತ್ರ : | |

Prajavani

ನವೆಂಬರ್‌ ತಿಂಗಳು ಹತ್ತಿರವಾಗುತ್ತಿರುವಂತೆ ಸಹಜವಾಗಿಯೇ ಕರ್ನಾಟಕ ರಾಜ್ಯೋತ್ಸವ ಎಲ್ಲರಿಗೂ ನೆನಪಾಗುತ್ತದೆ. ರಾಜ್ಯೋತ್ಸವ ಪ್ರಶಸ್ತಿ ಪಡೆಯಬಯಸುವ ಆಕಾಂಕ್ಷಿಗಳು ಚುರುಕಾಗುತ್ತಾರೆ. ಪ್ರಶಸ್ತಿ ಕೊಡಿಸಲು ಓಡಾಡುವವರ ಸಂಖ್ಯೆಯೂ ಗಮನಾರ್ಹವಾಗಿ ಹೆಚ್ಚುತ್ತದೆ. ರಾಜಕಾರಣಿಗಳು, ಅಧಿಕಾರಿಗಳು, ಲೇಖಕರು, ಕನ್ನಡ ಹೋರಾಟಗಾರರು ತಮ್ಮ ಭಾಷಣಗಳನ್ನು ಸಿದ್ಧಪಡಿಸಿಕೊಳ್ಳಲು ಆರಂಭಿಸುತ್ತಾರೆ.

ಕಾರ್ಯಕ್ರಮದ ಖರ್ಚಿಗಾಗಿ ಚಂದಾ ವಸೂಲಿ ಮಾಡುವ ಕಾರ್ಯವೂ ಆರಂಭವಾಗುತ್ತದೆ. ಕನ್ನಡ ಶಾಲೆಗಳು ಮುಚ್ಚುತ್ತಿರುವಾಗ ಮೌನವಾಗಿದ್ದವರೂ ಅತಿಥಿಗಳಾಗಲು ತಯಾರಾಗುತ್ತಾರೆ. ಕರ್ನಾಟಕ ಏಕೀಕರಣದ ಕಷ್ಟಸುಖಗಳ ಬಗ್ಗೆ ಓದಿಕೊಂಡ ನನ್ನಂತಹವನಿಗೂ ಏನೋ ರೋಮಾಂಚನ.

ಆದರೆ ಈ ವರ್ಷ ಮಾತ್ರ ರಾಜ್ಯೋತ್ಸವ ನಡೆಸುವ ಬಗ್ಗೆ ಸರ್ಕಾರ ಮತ್ತು ಜನ ಬಹಳ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾದ ಅಗತ್ಯವಿದೆ. ಅನಿರೀಕ್ಷಿತವಾಗಿ ಅಪ್ಪಳಿಸಿದ ಕೋವಿಡ್‌- 19ರಿಂದಾಗಿ ಭಾರತದಲ್ಲಿ ಲಕ್ಷಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಎಂಟು ಲಕ್ಷಕ್ಕೂ ಹೆಚ್ಚು ಜನ ಈಗಲೂ ಕೋವಿಡ್‌ ಸೋಂಕಿತರಾಗಿದ್ದಾರೆ. ಸಾರ್ವಜನಿಕ ಆರೋಗ್ಯ ಎಂಬ ವಿಷಯವೇ ಅನಾರೋಗ್ಯಕ್ಕೀಡಾಗಿದೆ. ಜೊತೆಗೆ ಈ ಮಹಾ ಸಾಂಕ್ರಾಮಿಕ ಉಂಟು ಮಾಡಿದ ಇತರ ಪರಿಣಾಮಗಳೂ ಗಹನವಾಗಿವೆ. ಸರ್ಕಾರಗಳು ಈ ವಿಷಯದಲ್ಲಿ ಪಾರದರ್ಶಕವಾಗಿಲ್ಲವಾದ್ದರಿಂದ ಕೋವಿಡ್‌ ಉಂಟು ಮಾಡಿದ ಅನಾಹುತಗಳ ಬಗ್ಗೆ ನಮ್ಮಲ್ಲಿ ನಿಖರವಾದ ತಿಳಿವಳಿಕೆ ಮೂಡುವುದೂ ಅಸಾಧ್ಯವಾಗಿದೆ.

ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ, ದೇಶದ ಅಭಿವೃದ್ಧಿ ಕಾರ್ಯಕ್ರಮಗಳೆಲ್ಲಾ ನಿಂತು ಹೋಗಿವೆ. ರಾಜ್ಯ ಸರ್ಕಾರಗಳಿಗೆ ಸಲ್ಲಬೇಕಾಗಿದ್ದ ಜಿಎಸ್‌ಟಿ ಹಣ ವನ್ನೂ ಕೊಡಲು ಕೇಂದ್ರ ಸರ್ಕಾರಕ್ಕೆ ಅಸಾಧ್ಯವಾಗಿದೆ. ಅಸಮರ್ಪಕ ಅರ್ಥನೀತಿಯಿಂದಾಗಿ ಬಡವರು ಮತ್ತು ಶ್ರೀಮಂತರ ನಡುವಣ ಅಂತರ ಬಹಳ ಹೆಚ್ಚಾಗಿದೆ. ಅನೇಕ ವಸ್ತುಗಳ ಬೆಲೆ ಶೇಕಡ 30ರಷ್ಟು ಏರಿಕೆಯಾಗಿದೆ. ಕೆಲವು ಆಸ್ಪತ್ರೆಗಳಲ್ಲಿನ ಅಮಾನವೀಯ ಸುಲಿಗೆಯಿಂದಾಗಿ ಮಧ್ಯಮ ವರ್ಗದವರು ಬಡವರಾಗಿ ಪರಿವರ್ತನೆ ಹೊಂದಿದ್ದಾರೆ.

ಶಿಕ್ಷಣ ಕ್ಷೇತ್ರವು ಇಡಿಯಾಗಿ ಕುಸಿದಿದೆ. ಬಡವರಿಗೆ ಸರ್ಕಾರಿ ಶಾಲೆಗಳಿಗೂ ಹೋಗಲಾಗುತ್ತಿಲ್ಲ. ಖಾಸಗಿ ಶಾಲೆಗಳೂ ಏದುಸಿರು ಬಿಡುತ್ತಿವೆ. ಯಾವುದೇ ಸಿದ್ಧತೆ, ತರಬೇತಿ ಅಥವಾ ತಯಾರಿಯಿಲ್ಲದೆ ಡಿಜಿಟಲ್‌ ತರಗತಿ ಗಳನ್ನೇನೋ ಆರಂಭಿಸಲಾಯಿತು. ಆದರೆ ಅದರಿಂದ ಗ್ರಾಮೀಣ ಪ್ರದೇಶದ ಶೇಕಡ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊರಗುಳಿದರು. ಅವರಿಗೆ ಸರಿಯಾದ ವೈಫೈ ವ್ಯವಸ್ಥೆ ಇರಲಿಲ್ಲ. ಕಂಪ್ಯೂಟರ್‌ ಅಥವಾ ಮೊಬೈಲ್‌ಗಳ ಕೊರತೆಯಿತ್ತು. ಅನೇಕರಿಗೆ ಕುಳಿತು ಪಾಠ ಕೇಳಲು ಮನೆಗಳೇ ಇರಲಿಲ್ಲ. ಅಂಗವಿಕಲರ ಸಮಸ್ಯೆ ಇನ್ನೂ ಗಹನವಾಗಿತ್ತು. ಅವರಲ್ಲಿ ಶೇಕಡ 43ರಷ್ಟು ವಿದ್ಯಾರ್ಥಿಗಳಿಗೆ ಯಾವ ಸವಲತ್ತುಗಳೂ ಇರಲಿಲ್ಲ.

ಅನೇಕ ಕೈಗಾರಿಕೆಗಳಿಗೆ ತಮ್ಮ ಮುಚ್ಚಿದ ಬಾಗಿಲುಗಳನ್ನು ತೆರೆಯಲು ಇನ್ನೂ ಸಾಧ್ಯವಾಗಿಲ್ಲ. ಜನರ ಓಡಾಟ ಕಡಿಮೆಯಾದ್ದರಿಂದ ಪ್ರವಾಸೋದ್ಯಮ ನೆಲ ಕಚ್ಚಿದೆ. ಕ್ರೀಡಾ ಕ್ಷೇತ್ರ ಕುಸಿದಿದೆ. ವಿಶೇಷವೆಂದರೆ, ಧಾರ್ಮಿಕ ಕ್ಷೇತ್ರಗಳನ್ನೂ ಕೇಳುವವರಿಲ್ಲವಾಗಿದೆ.

ರಿಕ್ಷಾ ಓಡಿಸುವವರು, ಬಾಡಿಗೆ ವಾಹನಗಳನ್ನು ಚಲಾಯಿಸುವ ಡ್ರೈವರುಗಳು ಮತ್ತು ಲಕ್ಷಾಂತರ ಉದ್ಯೋಗಿಗಳು ಬೀದಿಗೆ ಬಿದ್ದಿದ್ದಾರೆ. ಯುವಕರು ನಿಧಾನವಾಗಿ ಹತಾಶೆಯತ್ತ ಜಾರುತ್ತಿದ್ದಾರೆ. ಅಳಿದುಳಿದ ವಲಸೆ ಕಾರ್ಮಿಕರಿಗೆ ಇನ್ನೂ ತಮ್ಮ ನೆಲೆಗಳನ್ನು ಕಂಡುಕೊಳ್ಳಲಾಗಿಲ್ಲ.

ಜಿಡಿಪಿ ಮತ್ತೆ ಮೊದಲಿನಂತಾಗಲು ದಶಕಗಳೇ ಬೇಕು. ಏನು ಕೇಳಿದರೂ ದುಡ್ಡಿಲ್ಲ ಎಂದು ಸರ್ಕಾರಗಳೇ ಸಮಜಾಯಿಷಿ ನೀಡುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯು ಹೇಳುವ ಪ್ರಕಾರ, ಕೊರೊನಾದಿಂದ ಜನ ಮಾನಸಿಕ ಒತ್ತಡಗಳಿಗೆ ಒಳಗಾಗಿದ್ದು, ಅದು ಆತ್ಮಹತ್ಯೆಗಳಿಗೂ ಕಾರಣವಾಗಿದೆ ಮತ್ತು ಅನೇಕ ಕಡೆಗಳಲ್ಲಿ ಹಿಂಸೆಯನ್ನೂ ಹೆಚ್ಚು ಮಾಡಿದೆ.

ಇಂಥ ಅತೀವ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರಗಳು ಹೆಚ್ಚು ಸಂವೇದನಾಶೀಲವಾಗಿ ಕೆಲಸ ಮಾಡಬೇಕು. ವೋಟ್‌ ಬ್ಯಾಂಕ್‌ ರಾಜಕಾರಣವನ್ನು ಮರೆತು ಜನರ ಕಷ್ಟಗಳಿಗೆ ಮಿಡಿಯುವ ಹೃದಯವಂತಿಕೆಯನ್ನು ತೋರಬೇಕು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ತಮ್ಮ ಮಾಮೂಲಿ ರಾಜಕಾರಣ ವನ್ನು ಬದಿಗೆ ಸರಿಸಿ, ರಾಜ್ಯವನ್ನು ಸಂಕಷ್ಟದಿಂದ ಪಾರು ಮಾಡಲು ವಿಶೇಷವಾದ ಕಾರ್ಯಕ್ರಮಗಳನ್ನು ರೂಪಿಸಲು ಜೊತೆಯಾಗಿ ಕೆಲಸ ಮಾಡುತ್ತಾ ಕಾಲಬದ್ಧ ಕಾರ್ಯಸೂಚಿಯನ್ನು ಸಿದ್ಧಪಡಿಸಬೇಕು. ಅಧಿಕಾರಿಗಳು ವಾಸ್ತವಾಂಶಗಳನ್ನು ಜನರ ಮುಂದಿಡಬೇಕು. ಹೀಗೆ ಸಮರೋಪಾದಿಯಲ್ಲಿ ಎಲ್ಲರೂ ಕೆಲಸ ಮಾಡದ ಹೊರತು ಈ ಮಹಾರೋಗ ಉಂಟು ಮಾಡಿದ ಅನಾಹುತಗಳಿಂದ ಪಾರಾಗುವುದು ಕಷ್ಟ.

ಕಾರಣ, ಈ ವರ್ಷ ಸರ್ಕಾರವು ರಾಜ್ಯೋತ್ಸವದ ಸಂದರ್ಭದಲ್ಲಿ ಯಾವುದೇ ಪ್ರಶಸ್ತಿ ನೀಡಬಾರದು. ಅದಕ್ಕೆ ಎಷ್ಟು ಖರ್ಚಾಗುತ್ತದೆ ಎಂಬುದು ಪ್ರಶ್ನೆಯಲ್ಲ. ಈ ಹೊತ್ತಿಗೆ ಅದೊಂದು ಅನೈತಿಕ ಪ್ರಕ್ರಿಯೆಯಾಗುತ್ತದೆ. ಪ್ರಶಸ್ತಿ ತೆಗೆದುಕೊಳ್ಳಬಯಸುವವರೂ ತಮ್ಮ ಆಸೆಗಳನ್ನು ತಾತ್ಕಾಲಿಕವಾಗಿಯಾದರೂ ತಡೆಹಿಡಿದು ಘನತೆಯನ್ನು ಮೆರೆಯಬೇಕು. ನಾವೆಲ್ಲರೂ ಅತ್ಯಂತ ಸರಳವಾಗಿ ರಾಜ್ಯೋತ್ಸವವನ್ನು ಆಚರಿಸಿ, ರಾಜ್ಯದ ಮಾನ ಕಾಪಾಡೋಣ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.