ಮಂಗಳವಾರ, ಜನವರಿ 28, 2020
29 °C
ಈ ಸಾಧಕಿಯ ಬದುಕನ್ನು ಹೊಸ ತಲೆಮಾರಿಗೆ ಪರಿಚಯಿಸುವ ರಾಜ್ಯ ಸರ್ಕಾರದ ಪ್ರಯತ್ನ ಫಲಕಾರಿಯಾಗಲಿ

ಘನತೆಯ ಬದುಕಿಗೆ ‘ಸಾವಿತ್ರಿ ಮಾದರಿ’

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

Prajavani

ಭಾರತೀಯ ಪರಂಪರೆಯಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ಎರಡು ‘ಸಾವಿತ್ರಿ ಮಾದರಿ’ಗಳಿವೆ. ಒಂದು, ಯಮನನ್ನು ಮೆಚ್ಚಿಸಿ ಗಂಡನ ಪ್ರಾಣವನ್ನು ಮರಳಿ ಪಡೆದ ಪುರಾಣದ ಸಾವಿತ್ರಿಯ ಸತಿತ್ವದ ಮಾದರಿ. ಘನತೆಯ ಬದುಕಿಗೆ ಶಿಕ್ಷಣವೊಂದೇ ದಾರಿ ಎಂದು ನಂಬಿದ ಸಾವಿತ್ರಿಬಾಯಿ ಫುಲೆ ಅವರದು ಮತ್ತೊಂದು ಮಾದರಿ. ಲಿಂಗಭೇದ, ಲೈಂಗಿಕ ಶೋಷಣೆ ಗಳಿಗೆ ಸಂಬಂಧಿಸಿದಂತೆ ಅನುದಿನದ ಮಾಧ್ಯಮ ವರದಿಗಳನ್ನು ನೋಡಿದರೆ, ಯಾವ ದಾರಿ ಇಂದಿನ ಅಗತ್ಯ ಎನ್ನುವುದನ್ನು ನಿರ್ಣಯಿಸುವುದು ಸುಲಭ.

ದಲಿತ ಸಮುದಾಯದಲ್ಲಿ ಜನಿಸಿದ ಸಾವಿತ್ರಿಬಾಯಿ ಫುಲೆ (1831, ಜ. 3– 1897, ಮಾರ್ಚ್‌ 10) ಮಹಾರಾಷ್ಟ್ರದ ಹೆಣ್ಣುಮಗಳು. ಹಿಂದುಳಿದ ಸಮುದಾಯಕ್ಕೆ ಶಿಕ್ಷಣ ನಿಷಿದ್ಧವಾಗಿದ್ದ ಸಾಮಾಜಿಕ ಸಂದರ್ಭದಲ್ಲಿ ಒಂಬತ್ತರ ಬಾಲಕಿಯಾಗಿದ್ದಾಗಲೇ ಮದುವೆಯಾಯಿತು. ಅವರಿಗೆ ಜೋಡಿಯಾದ ಜ್ಯೋತಿರಾವ್‌ ಫುಲೆ ಅವರಿಗಾಗ ಹದಿಮೂರು ವರ್ಷ. ಗಂಡಾದ ಕಾರಣದಿಂದಾಗಿ ಶಾಲೆಗೆ ಹೋಗುವ ಅವಕಾಶ ದೊರೆತಿದ್ದ ಜ್ಯೋತಿ ಫುಲೆ ಅವರು ತಮ್ಮ ಪತ್ನಿಗೆ ಅಕ್ಷರ ತಿದ್ದಿಸಿದರು, ಶಾಲೆಗೆ ಹೋಗಲು ಪ್ರೋತ್ಸಾಹಿಸಿದರು.

ಹೆಣ್ಣುಮಕ್ಕಳು ಮನೆಯ ಚೌಕಟ್ಟಿಗೆ ಸೀಮಿತವಾದ ಭಾರತೀಯ ಸಮಾಜದಲ್ಲಿ ಕ್ರಾಂತಿ ಎನ್ನುವುದು ಪುರುಷರಿಗೆ ಭೂಷಣವಾದ ಸಂಗತಿ. ಆದರೆ, ಸಾವಿತ್ರಿ ಫುಲೆ ಹೆಣ್ಣು ಮಕ್ಕಳಿಗೆ ಕಲಿಸಲು ನಿರ್ಧರಿಸಿದರು. ಪುಣೆಯಲ್ಲಿ ‘ಬಾಲಕಿಯರ ಶಾಲೆ’ ಆರಂಭಿಸಿದರು. ಹೆಣ್ಣುಮಕ್ಕಳಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಫುಲೆ ದಂಪತಿ ಅಕ್ಷರಾಭ್ಯಾಸ ಮಾಡಿಸುವುದು ಅಂದಿನ ಮುಂದುವರಿದ ಸಮಾಜದ ಕೆಂಗಣ್ಣಿಗೆ ಗುರಿಯಾಗಿ, ಇಬ್ಬರೂ ಸಾಮಾಜಿಕ ಬಹಿಷ್ಕಾರಕ್ಕೆ ಗುರಿಯಾಗಬೇಕಾಯಿತು. ಸಮಾಜದ ಸಿಟ್ಟಿಗೆ ಅಂಜಿದ ಜ್ಯೋತಿಬಾ ಅವರ ತಂದೆ, ಮಗ–ಸೊಸೆಯನ್ನು ಮನೆಯಿಂದ ಹೊರಹಾಕಿದರು. ಈ ಬಹಿಷ್ಕಾರವು ಯುವ ದಂಪತಿಯ ‘ಕಟ್ಟುವ ಕೆಲಸ’ವನ್ನು ಮತ್ತಷ್ಟು ಚುರುಕಾಗಿಸಿತು.

ಕಲಿಸುವ ದಾರಿ ಸಾವಿತ್ರಿ ಅವರಿಗೆ ಸುಲಭದ್ದೇನು ಆಗಿರಲಿಲ್ಲ. ನೌಖಾಲಿಯಲ್ಲಿ ಗಾಂಧೀಜಿ ಎದುರಿಸಿದ ಪ್ರತಿರೋಧವನ್ನು ಅವರು ಪುಣೆಯ ಬೀದಿಗಳಲ್ಲಿ ಅನುಭವಿಸಿದರು. ಇಬ್ಬರ ಹಾದಿಯಲ್ಲೂ ಮಲ ಮೂತ್ರದ ರೂಪದಲ್ಲಿ ಸಮಾಜದ ಕಂದಾಚಾರ, ಜಡ ಸನಾತನಿಗಳ ಒಣಪ್ರತಿಷ್ಠೆ ಹರಡಿಕೊಂಡಿದ್ದವು. ಆದರೆ, ಮುಟ್ಟಬೇಕಿದ್ದ ಗುರಿಯಷ್ಟೇ ಮುಖ್ಯವಾಗಿದ್ದಾಗ ದಾರಿಯಲ್ಲಿನ ಕೊಳಕು ಹೇಗೆ ತಡೆದೀತು? ಸಾವಿತ್ರಿ ಅವರ ಪಾಲಿಗೆ ಇಡೀ ಸಮಾಜವೇ ಪ್ರಯೋಗಶಾಲೆಯಾಗಿತ್ತು. ಅಂತರ್ಜಾತಿ ವಿವಾಹ, ವಿಧವಾವಿವಾಹ, ಶಿಶುಪಾಲನಾ ಗೃಹಗಳ ಸ್ಥಾಪನೆ– ಇವೆಲ್ಲವೂ ಅವರ ಚಟುವಟಿಕೆಗಳಾಗಿದ್ದವು.

ಫುಲೆ ದಂಪತಿಯ ಬಗ್ಗೆ ಮಾತನಾಡುವಾಗ ಗಾಂಧಿ– ಕಸ್ತೂರಬಾ ಜೋಡಿ ನೆನಪಾಗುತ್ತದೆ. ಈ ಜೋಡಿಗಳಲ್ಲಿ ಸಾಮ್ಯತೆಗಳಿವೆ. ಎರಡು ಜೋಡಿಗಳದೂ ಬಾಲ್ಯ ವಿವಾಹ. ಕಸ್ತೂರರಿಗೆ ಅಕ್ಷರ ಕಲಿಸಬೇಕೆಂದು ಗಾಂಧಿ ಹಂಬಲಿಸಿದರೂ ತಮ್ಮ ಪ್ರಯತ್ನದಲ್ಲಿ ವಿಫಲರಾದರು. ಆದರೆ, ತಮ್ಮ ಸಂಗಾತಿಯನ್ನು ಸಾಕ್ಷರರಾಗಿಸುವಲ್ಲಿ ಜ್ಯೋತಿಬಾ ಯಶಸ್ವಿಯಾದರು. ಗಾಂಧೀಜಿಯ ಸತ್ಯಾನ್ವೇಷಣೆಯ ದಾರಿಯ ಆರಂಭದ ರೂಪದಲ್ಲಿ ಫುಲೆ ದಂಪತಿಯನ್ನು ನೋಡಲಿಕ್ಕೂ ಸಾಧ್ಯವಿದೆ. ಫುಲೆ ಜೋಡಿಗೆ ಸತ್ಯಶೋಧದ ಮಾರ್ಗವಾಗಿ ಶಿಕ್ಷಣ ಒದಗಿ ಬಂದರೆ, ಗಾಂಧೀಜಿ ಅವರ ಸತ್ಯಾನ್ವೇಷಣೆಯ ಪ್ರಮುಖ ನೆಲೆ ಸ್ವಾತಂತ್ರ್ಯ ಚಳವಳಿ. ಇಡೀ ದೇಶ ಮಹಾತ್ಮನೆಂದು ಗಾಂಧಿಯನ್ನು ಗೌರವಿಸಿತು; ಆದರೆ, ಗಾಂಧಿ ‘ಮಹಾತ್ಮ’ನೆಂದು ಕರೆದದ್ದು ಜ್ಯೋತಿ ಫುಲೆ ಅವರನ್ನು.

ಫುಲೆ ದಂಪತಿಗೆ ಮಕ್ಕಳಿರಲಿಲ್ಲ ಎನ್ನುವುದಕ್ಕಿಂತಲೂ ಅಸಹಾಯಕ ಸಮುದಾಯವನ್ನೇ ತಮ್ಮ ಸಂತತಿಯನ್ನಾಗಿ ಭಾವಿಸಿದ್ದ ಅವರಿಗೆ, ಸ್ವಂತ ಮಕ್ಕಳ ಅಗತ್ಯ ಕಂಡುಬಂದಿರಲಿಲ್ಲ ಎಂದು ಹೇಳುವುದೇ ಸರಿ. ಸಾವಿತ್ರಿ ಅವರು ವಿಧವೆಯೊಬ್ಬರ ಪುತ್ರನನ್ನು ದತ್ತು ಪಡೆದಿದ್ದರು. ಜ್ಯೋತಿಬಾ ಅವರ ಸಾವಿನ ಸಂದರ್ಭದಲ್ಲಿ, ಅಂತ್ಯಸಂಸ್ಕಾರ ಯಾರು ಮಾಡಬೇಕೆನ್ನುವ ಗೊಂದಲ ಎದುರಾದಾಗ, ಸಾವಿತ್ರಿ ಅವರೇ ಗಂಡನ ಅಂತಿಮಸಂಸ್ಕಾರ ನಡೆಸಿದ್ದು ಅವರ ವ್ಯಕ್ತಿತ್ವದ ಗಟ್ಟಿತನಕ್ಕೆ ಉದಾಹರಣೆಯಂತಿತ್ತು. ಪ್ಲೇಗ್‌ ರೋಗಿಗಳ ಶುಶ್ರೂಷೆ ಮಾಡುತ್ತ, ಆ ಸೋಂಕು ತಗುಲಿ ಸಾವಿತ್ರಿ ಅವರು ಸಾವಿಗೀಡಾದ ಘಟನೆ; ಇಂಥ ಸೇವಾಮಾರ್ಗವಲ್ಲದೆ ಬೇರೆ ರೀತಿಯಲ್ಲಿ ಆ ತಾಯಿ ಕೊನೆಯುಸಿರೆಳೆಯಲಿಕ್ಕೆ ಸಾಧ್ಯವೇ ಇಲ್ಲವೆನ್ನುವಷ್ಟು ಸಹಜವಾಗಿತ್ತು.

ದೇಶದ ಮೊದಲ ಶಿಕ್ಷಕಿ ಎನ್ನುವ ಹೆಮ್ಮೆಯ ಹಾಗೂ ಶಿಕ್ಷಕ ವೃತ್ತಿಗೆ ಘನತೆ ತಂದುಕೊಟ್ಟ ಈ ಮಹಾತ್ಮಳ ಜನ್ಮದಿನವನ್ನು ಶಾಲೆಗಳಲ್ಲಿ ಆಚರಿಸುವ ಒಳ್ಳೆಯ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಆ ನಿರ್ಧಾರವನ್ನು ಅಭಿನಂದಿಸುತ್ತಲೇ, ‘ಹಿಂದೂ ಸ್ತ್ರೀಯೊಬ್ಬಳು ಶಿಕ್ಷಕಿಯಾಗುವುದು ಧರ್ಮಕ್ಕೂ ಸಮಾಜಕ್ಕೂ ದ್ರೋಹ ಬಗೆದಂತೆ ಎನ್ನುವ ಬ್ರಿಟಿಷ್‌ ಸಾಮ್ರಾಜ್ಯಶಾಹಿಯ ವಿರುದ್ಧ ಸಮರ ಸಾರಿದವರು’ ಎನ್ನುವ ಶಿಕ್ಷಣ ಸಚಿವರ ಟಿಪ್ಪಣಿಯ ಅಪಸವ್ಯದ ಬಗ್ಗೆ ಹೇಳಬೇಕು. ಬಾಲಕಿಯರು ಹಾಗೂ ಹಿಂದುಳಿದ ಜಾತಿಗಳಿಗೆ ಸೇರಿದವರ ಕಲಿಕೆಗೆ ವಿರೋಧವಿದ್ದ ಪುರೋಹಿತಶಾಹಿಯ ವಿರುದ್ಧ ಫುಲೆ ಹೋರಾಡಿದರೇ ಹೊರತು ವಿದೇಶಿಯರೊಂದಿಗಲ್ಲ. ಈ ಸತ್ಯವನ್ನು ಮರೆ
ಮಾಚುವುದು, ಸಾವಿತ್ರಿ ತಾಯಿಗೆ ಸಲ್ಲಿಸುವ ನೈಜ ಗೌರವವಾಗಲಾರದು. ಈ ಅಚಾತುರ್ಯದ ನಡುವೆಯೂ ಸಾವಿತ್ರಿ ಅವರ ಸಾಧನೆ– ಬದುಕನ್ನು ಹೊಸ ತಲೆಮಾರಿಗೆ ಪರಿಚಯಿಸಲು ಹೊರಟ ಸರ್ಕಾರಕ್ಕೆ ಅಭಿನಂದನೆ ಸಲ್ಲಬೇಕು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು