ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹಿಂಡುವ ಮಿಡತೆ ಹಿಂಡು

ಕೇಂದ್ರ– ರಾಜ್ಯ ಸರ್ಕಾರಗಳ ಜಂಟಿ ಕಾರ್ಯನಿರ್ವಹಣೆಯಿಂದ ಮಾತ್ರ ಮಿಡತೆ ಹಾವಳಿ ನಿಯಂತ್ರಿಸಬಹುದು ಎನ್ನುತ್ತಾರೆ ತಜ್ಞರು
ಅಕ್ಷರ ಗಾತ್ರ

ಇಡೀ ಜಗತ್ತು ಕೊರೊನಾದಿಂದ ತಲ್ಲಣಿಸಿ ಹೋಗಿರುವಾಗ, ನಮ್ಮ ಉತ್ತರ ಭಾರತವು ಇದರ ಜೊತೆಗೆ ಮಿಡತೆ ಹಾವಳಿಯಿಂದಲೂ ಕಂಗೆಟ್ಟು ಕೂತಿದೆ. ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಉತ್ತರಪ್ರದೇಶ, ಜಾರ್ಖಂಡ್ ರಾಜ್ಯಗಳ ರೈತರ ಬೆಳೆಯು ಪಾಕಿಸ್ತಾನ ಮತ್ತು ಇರಾನ್‍ಗಳಿಂದ ಬಂದು ದಾಳಿ ಮಾಡುತ್ತಿರುವ ಕೋಟ್ಯಂತರ ಮಿಡತೆಗಳ ಪಾಲಾಗುತ್ತಿದೆ. ಒಂದು ಅಂದಾಜಿನಂತೆ, ಸುಮಾರು ಹತ್ತು ಸಾವಿರ ಕೋಟಿ ರೂಪಾಯಿ ಮೌಲ್ಯದ ಹೆಸರುಕಾಳು ಮತ್ತು ಇತರ ಹಸಿರು ಬೆಳೆ ಧ್ವಂಸವಾಗುತ್ತಿದೆ. ಮಹಾರಾಷ್ಟ್ರಕ್ಕೆ ಬಂದಿರುವ ಮಿಡತೆಗಳ ಹಿಂಡು ಪೂರ್ವ ದಿಕ್ಕಿನತ್ತ ಬೀಸಲಿರುವ ಗಾಳಿಯೊಂದಿಗೆ ಸಂಚರಿಸುವ ಸಾಧ್ಯತೆ ಇರುವುದರಿಂದ, ದಕ್ಷಿಣಕ್ಕಿರುವ ಕರ್ನಾಟಕದತ್ತ ಬರಲಾರವು ಎಂದು ಅಂದಾಜಿಸಲಾಗಿದೆ. ಆದರೂ ನಮ್ಮ ರೈತರಲ್ಲಿ ಅಂತಹದ್ದೊಂದು ಆತಂಕ ಇದ್ದೇ ಇದೆ.

ಮಾನ್ಸೂನ್‌ ಮಾರುತದ ಆಗಮನ ಮತ್ತು ನಿರ್ಗಮನದ ಸಮಯಗಳಲ್ಲಿ ಏರುಪೇರಾದಾಗಲೆಲ್ಲ ಮಿಡತೆಗಳು ಬೆಳೆಗಳ ಮೇಲೆ ದಾಳಿ ಮಾಡುತ್ತಿರುವುದು ವರದಿಯಾಗಿದೆ. ಉತ್ತರದ ರಾಜ್ಯಗಳಿಗೆ ದಾಳಿಯಿಟ್ಟಿರುವ ಮಿಡತೆಗಳು ಬೆಳೆದದ್ದನ್ನೆಲ್ಲಾ ನುಂಗಿಹಾಕಿ, ರೈತರನ್ನು ತೀವ್ರ ಸಂಕಷ್ಟಕ್ಕೀಡು ಮಾಡಿವೆ. ಕಳೆದ 26 ವರ್ಷಗಳಲ್ಲೇ ಇಂಥ ದೊಡ್ಡ ಪ್ರಮಾಣದ ದಾಳಿ ನಡೆದಿರಲಿಲ್ಲ ಎಂದಿರುವ ಕೃಷಿ- ಹವಾಮಾನ ತಜ್ಞರು, ಇದಿನ್ನೂ ಆರಂಭ, ಮುಂದಿನ ತಿಂಗಳ ಅಂತ್ಯಕ್ಕೆ ಮಿಡತೆಗಳ ಉಪಟಳ ಅಂಕೆ ಮೀರಬಹುದೆಂದು ಎಚ್ಚರಿಸಿದ್ದಾರೆ.

ಪ್ರತಿವರ್ಷ ಜೂನ್ ಸಮಯದಲ್ಲಿ ಪ್ರಾರಂಭವಾಗುತ್ತಿದ್ದ ಈ ದಾಳಿ ಈ ಬಾರಿ ಸ್ವಲ್ಪ ಮುಂಚಿತವಾಗಿಯೇ ಶುರುವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಕಾರ್ಯನಿರ್ವಹಿಸಿದಲ್ಲಿ ಮಾತ್ರ ಮಿಡತೆ ಹಾವಳಿಯನ್ನು ನಿಯಂತ್ರಣಕ್ಕೆ ತರಬಹುದು ಎನ್ನುವ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿದೆ.

ಸ್ಕಿಸ್ಟೊಸೆರ್ಕ ಗ್ರಿಗೇರಿಯ ಎಂಬ ಹೆಸರಿನ ಮರುಭೂಮಿ ಮಿಡತೆಗಳು ಪ್ರತಿವರ್ಷ ನಮ್ಮ ರಾಜ್ಯಗಳ ಬೆಳೆಯ ಮೇಲೆ ದಾಳಿ ನಡೆಸುತ್ತವೆ. ದಾಳಿಯ ಪ್ರಕರಣಗಳು ವಾರ್ಷಿಕ ಎಂಟೋ ಹತ್ತೋ ಇರುತ್ತಿದ್ದವು. 2019ರಲ್ಲಿ ದಾಳಿಯ ಪ್ರಮಾಣ ಸುಮಾರು 200ರಷ್ಟಿತ್ತು. ಕೇಂದ್ರ ಸರ್ಕಾರವು ಜೋಧಪುರದಲ್ಲಿ ಸ್ಥಾಪಿಸಿರುವ ಮಿಡತೆ ನಿಗಾ ಕೇಂದ್ರದ ಅಧಿಕಾರಿಗಳು ‘ಕಳೆದ ವರ್ಷ ಮಾನ್ಸೂನ್‌ ಮಾರುತಗಳು ಪಶ್ಚಿಮ ರಾಜಸ್ಥಾನಕ್ಕೆ ಮೇ ಮಾಹೆಯಲ್ಲೇ ಆಗಮಿಸಿದ್ದು ಮಿಡತೆಗಳ ವಂಶಾಭಿವೃದ್ಧಿಗೆ ಪೂರಕವಾಯಿತು ಮತ್ತು ಸೆಪ್ಟೆಂಬರ್‌ಗೆ ಕೊನೆಯಾಗಬೇಕಿದ್ದ ಮಳೆ ಮಾರುತಗಳು ನವೆಂಬರ್‌ವರೆಗೆ ಮುಂದುವರಿದದ್ದು ಅವುಗಳ ಪಾಲಿಗೆ ವರದಾನವಾಯಿತು’ ಎಂದಿದ್ದರು. ಬಿರುಬಿಸಿಲಿನ ದಿನಗಳಲ್ಲಿ ಮಳೆಯಾದರೆ ಮಿಡತೆಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗುತ್ತದೆ. ಸಾಮಾನ್ಯ ಮಿಡತೆ ಹಿಂಡಿನಲ್ಲಿ ಕನಿಷ್ಠ 80 ಲಕ್ಷ ಮಿಡತೆಗಳಿದ್ದು, ದಿನವೊಂದಕ್ಕೆ ಎರಡೂವರೆ ಸಾವಿರ ಜನ ಸೇವಿಸುವ ಆಹಾರವನ್ನು ಗುಳುಂ ಮಾಡುತ್ತವೆ. 90 ದಿನಗಳ ಜೀವಿತಾವಧಿ ಹೊಂದಿರುವ ಮರುಭೂಮಿ ಮಿಡತೆಗಳು ಲಕ್ಷಾಂತರ ಕಿ.ಮೀ. ಸಂಚರಿಸಬಲ್ಲವು.

ಮಿಡತೆ ಹಾವಳಿ ನಿಯಂತ್ರಣಕ್ಕೆ ಕೇಂದ್ರ ಸರ್ಕಾರವು ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ತಲಾ ಹತ್ತು ಮಿಡತೆ ನಿಗಾ ಕೇಂದ್ರಗಳನ್ನು ಸ್ಥಾಪಿಸಿ ಕೀಟಬಾಧೆಯ ಪ್ರದೇಶಗಳ ಸಮೀಕ್ಷೆ ನಡೆಸಲು ನೂರಾರು ತಂಡಗಳನ್ನು, ಸುಮಾರು 450 ಟ್ರ್ಯಾಕ್ಟರ್‌ಗಳಿಗೆ ಕೀಟನಾಶಕ ಸಿಂಪಡಿಸುವ ಯಂತ್ರಗಳನ್ನು ಒದಗಿಸಿದೆ. ರಾಜಸ್ಥಾನದ ಬಾರಮರ್ – ಜೈಸಲ್ಮೇರ್ ಗಡಿ ಭಾಗದಲ್ಲಿ ಮಿಡತೆ ಹಾವಳಿ ತೀವ್ರವಾಗುತ್ತಿದ್ದು ಅಲ್ಲಿಗೆ ನೂರಕ್ಕೂ ಹೆಚ್ಚು ಸಿಂಪಡಣಾ ಯಂತ್ರಗಳ ಅವಶ್ಯಕತೆ ಇದೆ. ಆದರೆ ಇರುವುದು ಕೇವಲ ಎರಡು. ಅವು 25 ವರ್ಷ ಹಳೆಯವಾದ್ದರಿಂದ ಸಿಂಪಡಿಸುವ ಔಷಧ ಹೆಚ್ಚು ಎತ್ತರ ತಲುಪುವುದಿಲ್ಲ ಎಂಬ ಅಳಲು ಅಲ್ಲಿನ ರೈತರದು. ಕಳೆದ ಸಾಲಿನಲ್ಲಿ ಗುಜರಾತ್ ಸರ್ಕಾರವು 285 ಹಳ್ಳಿಗಳ ಹನ್ನೊಂದು ಸಾವಿರ ರೈತರಿಗೆ ಕೋಟ್ಯಂತರ ರೂಪಾಯಿ ಬೆಳೆ ಪರಿಹಾರ ನೀಡಿತ್ತು.

ಈಗ ಮಿಡತೆ ನಿಯಂತ್ರಣಕ್ಕೆ ಬಳಸಲಾಗುತ್ತಿರುವ ಆರ್ಗಾನೋಫಾಸ್ಫೇಟ್‍ಗಳನ್ನು ಹಿಟ್ಲರ್‌ನ ಕಾಲದಲ್ಲಿ ಶತ್ರುಗಳ ನರಮಂಡಲವನ್ನು ಧ್ವಂಸಗೊಳಿಸಲು ಬಳಸಲಾಗುತ್ತಿತ್ತು. ಕ್ಲೋರೊಫೈರಿಫೋಸ್, ಮಲಾಥಿಯಾನ್ ಮತ್ತು ಫೆನಿಟ್ರೊಥಿಯೋನ್ ಹೊಂದಿರುವ ಔಷಧವನ್ನು ಕೀಟನಾಶಕದಂತೆ ಈಗ ಬಳಸಲಾಗುತ್ತಿದ್ದು ಅವು ಹೊಲ- ಗದ್ದೆಗಳ ಆಸುಪಾಸಿನ ನೀರಿನ ಮೂಲಗಳಲ್ಲಿ ಸೇರ್ಪಡೆಯಾಗುವುದರಿಂದ ಜನ– ಜಾನುವಾರುಗಳ ದೇಹ ಸೇರಿ ಆರೋಗ್ಯ ಸಮಸ್ಯೆ ತರುತ್ತವೆ ಎನ್ನಲಾಗಿದೆ.

ಮಿಡತೆಯ ಆಗಮನವಾಗುತ್ತಿದ್ದಂತೆ ಕ್ಲೋರೊಫೈರಿಫೋಸ್ ಬಳಸಿದರೆ ಕೇವಲ 3 ತಾಸುಗಳಲ್ಲಿ ಅರ್ಧದಷ್ಟು ಮಿಡತೆಗಳು ಸಾಯುತ್ತವೆ ಇಲ್ಲವೆ ನಿಷ್ಕ್ರಿಯಗೊಳ್ಳುತ್ತವೆ ಎಂದಿದ್ದಾರೆ. ಪ್ರತಿವರ್ಷ ರಾಜಸ್ಥಾನಕ್ಕೆ ವಲಸೆ ಬರುವ ಲಕ್ಷಾಂತರ ವಲಸೆ ಹಕ್ಕಿಗಳಿಗೂ ಈ ನೀರಿನಿಂದ ಅಪಾಯ ತಪ್ಪಿದ್ದಲ್ಲ ಎನ್ನುವ ಜೋಧಪುರ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮದನ್ ಮೋಹನ್, ಮಿಡತೆಗಳ ಸಂತಾನವೃದ್ಧಿ ತಡೆಯಲು ಆರ್ಗಾನೋಫಾಸ್ಫೇಟ್ ಬದಲಿಗೆ ಕಡಿಮೆ ಹಾನಿಕಾರಕ ಕೀಟನಾಶಕಗಳನ್ನು ಬಳಸಿ ಅಪರೂಪದ ಹಕ್ಕಿ ಸಂಕುಲವನ್ನು ರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ. ಡ್ರೋನ್ ತಂತ್ರಜ್ಞಾನ ಬಳಸಿ, ಎಲ್ಲೆಲ್ಲಿ ಮಿಡತೆ ಹಾವಳಿ ದಟ್ಟವಾಗಿದೆಯೋ ಆ ಪ್ರದೇಶಗಳಿಗೆ ಮಾತ್ರ ಔಷಧ ಸಿಂಪಡಿಸಿ ಮಿಡತೆ ನಿಯಂತ್ರಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT