ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ಅರಿಯಬೇಕಿದೆ ‘ಒಳೇಟು’ ಮರ್ಮ

ವಿರೋಧ ಪಕ್ಷಗಳ ನಾಯಕರನ್ನು ಮಣಿಸುವ ‘ಚಾಣಕ್ಯ ತಂತ್ರ’ವನ್ನು ತಾವು ಸಹಿಸುವುದಿಲ್ಲ ಎಂಬುದನ್ನು ಮತದಾರರು ಸ್ಪಷ್ಟಪಡಿಸಿದ್ದಾರೆ
Published 7 ಜೂನ್ 2024, 23:39 IST
Last Updated 7 ಜೂನ್ 2024, 23:39 IST
ಅಕ್ಷರ ಗಾತ್ರ

ಬಹುಪಾಲು ಎಲ್ಲ ರಾಜಕೀಯ ಪಕ್ಷಗಳಲ್ಲೂ ಗೆಲ್ಲುವ ಅವಕಾಶ ಇರುವ ಅಭ್ಯರ್ಥಿಗಳು ಟಿಕೆಟ್‌ ವಂಚಿತರ ಒಳ ಏಟಿನಿಂದಲೇ ಸೋಲುವ ಸಾಧ್ಯತೆ ಇರುವುದು, ಭಾರತದ ಅಧಿಕಾರ ರಾಜಕಾರಣದ ವಿಶಿಷ್ಟ ಲಕ್ಷಣ. 2024ರ ನಿರ್ಣಾಯಕ ಮಹಾ ಚುನಾವಣೆಯ ಹಲವು ಕ್ಷೇತ್ರಗಳಲ್ಲಿ ಇಂತಹದ್ದೊಂದು ಬೆಳವಣಿಗೆ ಕಂಡು
ಬಂದಿದೆ. ಪಕ್ಷಗಳ ನಾಯಕತ್ವದ ಪರಮಾಧಿಪತ್ಯಕ್ಕೆ ಮಣಿದು ಕೆಲವು ಅರ್ಹ ಅಭ್ಯರ್ಥಿಗಳು ಹಿಂದೆ ಸರಿದಿರುವ ಉದಾಹರಣೆಗಳೂ ಇವೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ, ಈ ಚುನಾವಣೆಯಲ್ಲಿ ಭಾರತದ ಸಾರ್ವಭೌಮ ಮತದಾರರು ‘ಒಳೇಟು’ ಎಂಬ ಈ ರಾಜಕೀಯ ಪರಿಭಾಷೆಗೆ ಹೊಸ ಅರ್ಥವನ್ನೇ ನೀಡಿರುವುದು ಸ್ಪಷ್ಟವಾಗಿ ತಿಳಿಯುತ್ತದೆ.

‘ಏನೇ ಆದರೂ ನಾವು 400 ಸ್ಥಾನಗಳನ್ನು ಗೆಲ್ಲುತ್ತೇವೆ’, ‘ಏಕರೂಪ ನಾಗರಿಕ ಸಂಹಿತೆಯೂ ಒಳಗೊಂಡಂತೆ ಹಲವು ಕಾಯ್ದೆಗಳನ್ನು ಜಾರಿಗೊಳಿಸಿಯೇ ತೀರುತ್ತೇವೆ’ ಎಂದೆಲ್ಲ ಆರ್ಭಟಿಸುತ್ತಿದ್ದ ಬಿಜೆಪಿ ನಾಯಕತ್ವಕ್ಕೆ ಈ ಬಾರಿ ಮತದಾರರೇ ದೊಡ್ಡ ‘ಒಳೇಟು’ ನೀಡಿದ್ದಾರೆ.

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಸ್ಥಾನಗಳನ್ನು ಖಚಿತವಾಗಿ ಗಳಿಸುವ ವಿಶ್ವಾಸದಿಂದಲೇ ಬಿಜೆಪಿಯ ಕೆಲವು ಮುಖಂಡರು ಬಿಜೆಪಿಯೇತರ ಪಕ್ಷಗಳ ನೇತೃತ್ವದ ಸರ್ಕಾರಗಳನ್ನು
ಉರುಳಿಸುವ ಮಾತುಗಳನ್ನಾಡಿದ್ದರು. ಕರ್ನಾಟಕದಲ್ಲಿ ಸಹ ಬಿಜೆಪಿ ನಾಯಕರು 25ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳಲ್ಲಿ ಜಯ ಗಳಿಸಿ, ರಾಜ್ಯದಲ್ಲಿನ ಕಾಂಗ್ರೆಸ್‌ ನೇತೃತ್ವದ ಸರ್ಕಾರವನ್ನು ಪದಚ್ಯುತಗೊಳಿಸುವ ಮಹದಾಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಆದರೆ ಕರ್ನಾಟಕವನ್ನು ರಾಜಕೀಯವಾಗಿ ಮಹಾರಾಷ್ಟ್ರ ಮಾಡುವ ಈ ನಾಯಕರ ಕನಸಿಗೆ ಮತದಾರರ ಒಳೇಟು ತಣ್ಣೀರು ಎರಚಿದೆ.

ಅಪ್ರಜಾತಾಂತ್ರಿಕ ಮಾರ್ಗಗಳ ಮೂಲಕ ಚುನಾಯಿತ ಸರ್ಕಾರಗಳನ್ನು ಪಲ್ಲಟಗೊಳಿಸಲು ಬಿಜೆಪಿ ಪ್ರಾಯೋಜಿಸಿದ್ದ ‘ಮಹಾರಾಷ್ಟ್ರ ಮಾದರಿ’ಗೆ ಅಲ್ಲಿನ ಮತದಾರರೇ ದೊಡ್ಡ ಒಳೇಟು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಒಳಗೊಂಡಂತೆ ಬಿಜೆಪಿ ಅನುಸರಿಸಿದ ಮಂಗಳಸೂತ್ರ, ಮುಜ್ರಾ (ನೃತ್ಯ), ಮೀನು, ಮಟನ್‌, ಪಾಕಿಸ್ತಾನದಂತಹ ವಿಷಯಗಳ ಪ್ರಸ್ತಾಪ ಎಲ್ಲವೂ ಜನಸಾಮಾನ್ಯರನ್ನು ಪಕ್ಷದಿಂದ ಇನ್ನೂ ದೂರ ಸರಿಸಿರುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ.

ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಧರ್ಮರಾಜಕಾರಣಕ್ಕಿಂತಲೂ ಜಾತಿರಾಜಕಾರಣವೇ
ಪ್ರಧಾನ ಎನ್ನುವುದನ್ನು ಮತದಾರರು ಈ ಒಳೇಟಿನ ಮುಖಾಂತರ ಖಚಿತಪಡಿಸಿದ್ದಾರೆ.
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಸಂಘ ಪರಿವಾರದ ಕನಸಿನ ಕೂಸು ಅಯೋಧ್ಯೆಯ ರಾಮಮಂದಿರದ ಸಂಗತಿಯೂ ಬಿಜೆಪಿಗೆ ರಾಜಕೀಯವಾಗಿ ನೆರವಾಗದಿರುವುದು, ಅಯೋಧ್ಯೆ
ಯನ್ನು ಒಳಗೊಂಡ ಫೈಜಾಬಾದ್‌ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿರುವುದು ಒಬಿಸಿ-ದಲಿತ-ಮುಸ್ಲಿಂ ಸುತ್ತಲಿನ ತಳಸಮುದಾಯ ರಾಜಕಾರಣದ ದ್ಯೋತಕವಾಗಿದೆ. ತಳಮಟ್ಟದ ಸಮಾಜದಲ್ಲಿ ಶ್ರೀಸಾಮಾನ್ಯರಿಗೆ ಮಂದಿರ, ಮಸೀದಿ, ಸೆಂಗೋಲು, ಪಾಕಿಸ್ತಾನಕ್ಕಿಂತಲೂ
ಮುಖ್ಯವಾಗಿ ಬೇಕಿರುವುದು ರೋಟಿ, ಕಪಡಾ ಮತ್ತು ಮಕಾನ್‌ ಎನ್ನುವುದನ್ನು ಉತ್ತರಪ್ರದೇಶ, ರಾಜಸ್ಥಾನ, ಪಂಜಾಬ್‌, ಹರಿಯಾಣ, ಮಹಾರಾಷ್ಟ್ರದ ಮತದಾರರು ಮತ್ತೆ ನೆನಪಿಸಿದ್ದಾರೆ. 

ಮತ್ತೊಂದೆಡೆ, ಇಡೀ ಭಾರತವನ್ನು ಆಕ್ರಮಿಸಿಕೊಂಡು ‘ಒಂದು ದೇಶ, ಒಂದು ಭಾಷೆ, ಒಂದು ಚುನಾವಣೆ’ ಎಂಬ ಘೋಷಣೆಯ ಮೂಲಕ ಏಕಕಾಲಕ್ಕೆ ಮತದಾರರ ಬಳಿಗೆ ಹೋಗುವ ಬಿಜೆಪಿಯ ಮಹತ್ವಾಕಾಂಕ್ಷೆಗೆ ದಕ್ಷಿಣ ರಾಜ್ಯಗಳ ಮತದಾರರು ದೊಡ್ಡ ಒಳೇಟು ನೀಡಿದ್ದಾರೆ. ಆಂಧ್ರಪ್ರದೇಶವನ್ನು ಹೊರತುಪಡಿಸಿದರೆ ದಕ್ಷಿಣದ ಯಾವುದೇ ರಾಜ್ಯದಲ್ಲೂ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸದೇ ಇರುವುದರ ಹಿಂದೆ, ಒಕ್ಕೂಟ ವ್ಯವಸ್ಥೆಯನ್ನು ಶಿಥಿಲಗೊಳಿಸುವ ಹಿಂದಿನ ಸರ್ಕಾರದ ಪ್ರಯತ್ನಗಳೂ ಕಾರಣ ಎನ್ನುವುದು ಸುಸ್ಪಷ್ಟ. ಇದು
ಪ್ರಜಾಪ್ರಭುತ್ವ ವ್ಯವಸ್ಥೆಯು ಪಕ್ಷಕ್ಕೆ ಕಲಿಸಿರುವ ಪಾಠ. 

ಹಾಗೆಯೇ ಭಾರತದ ಮತದಾರರು ಇತರ ಪಕ್ಷಗಳಿಗೂ ಪಾಠ ಕಲಿಸಿದ್ದಾರೆ. ಒಡಿಶಾದಲ್ಲಿ 24 ವರ್ಷಗಳ ಕಾಲ ರಾಜ್ಯಭಾರ ಮಾಡಿದ ನವೀನ್‌ ಪಟ್ನಾಯಕ್‌ ತಮ್ಮನ್ನು ಶಾಶ್ವತ ಮುಖ್ಯಮಂತ್ರಿ ಎಂದೇ ಭಾವಿಸಿ ನಿಶ್ಚಿತ ಗೆಲುವಿಗಾಗಿ ಎದುರುನೋಡುತ್ತಿದ್ದರು. ಮತ್ತೊಂದೆಡೆ, ಆಂಧ್ರಪ್ರದೇಶದ ಜಗನ್ಮೋಹನ್‌ ರೆಡ್ಡಿ ಚುನಾವಣೆ ಹೊಸಿಲಲ್ಲಿದ್ದಾಗ ವಿರೋಧ ಪಕ್ಷದ ನಾಯಕ ಜೈಲು ಸೇರುವಂತೆ ಮಾಡುವ ಮೂಲಕ ತಮ್ಮ ನಿರಂಕುಶಾಧಿಕಾರವನ್ನು ಪ್ರದರ್ಶಿಸಿದ್ದರು. ಜಗನ್ಮೋಹನ್‌ ಈ ಪ್ರಜಾತಂತ್ರ ವಿರೋಧಿ ಕಲೆಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದಲೇ ರೂಢಿಸಿಕೊಂಡಿದ್ದಿರಬಹುದು. ಆದರೆ ಎರಡೂ ರಾಜ್ಯಗಳ ಮತದಾರರು ನೀಡಿರುವ ಒಳೇಟಿಗೆ ನವೀನ್‌ ಮತ್ತು ಜಗನ್‌ ಇಬ್ಬರೂ ಅಧಿಕಾರದಿಂದ ಕೆಳಗಿಳಿಯುವಂತಾಗಿದೆ.

ಮತದಾರರ ಈ ಒಳೇಟು ಎಲ್ಲ ಪಕ್ಷಗಳಿಗೂ ಎಚ್ಚರಿಕೆಯ ಗಂಟೆಯಾಗಿದೆ. ವಿರೋಧ ಪಕ್ಷಗಳ ನಾಯಕರನ್ನು, ಮುಖ್ಯಮಂತ್ರಿಗಳನ್ನು ಅಸಾಂವಿಧಾನಿಕ ಮಾರ್ಗಗಳ ಮೂಲಕ ಮಣಿಸುವ ಚಾಣಕ್ಯ ತಂತ್ರವನ್ನು ತಾವು ಸಹಿಸುವುದಿಲ್ಲ ಎಂದು ಮತದಾರರು ಸ್ಪಷ್ಟವಾಗಿ ಹೇಳಿದ್ದಾರೆ. ಅನ್ನ, ನೀರು, ಸೂರು, ಉದ್ಯೋಗ ಕಲ್ಪಿಸದ ಸರ್ಕಾರಗಳನ್ನು ಯಾವತ್ತಾದರೂ ಕೆಳಗಿಳಿಸಿಯೇ ತೀರುತ್ತೇವೆ ಎಂಬ ಮತದಾರರ ಸಂದೇಶದಿಂದ ರಾಜಕೀಯ ನಾಯಕರು ಇನ್ನಾದರೂ ಪಾಠ ಕಲಿಯಬೇಕಿದೆ. ಪ್ರಜಾಪ್ರಭುತ್ವದಲ್ಲಿ ಕುರ್ಚಿ ಶಾಶ್ವತವಲ್ಲ ಎಂಬ ವಾಸ್ತವವನ್ನು ಎಲ್ಲ ಪಕ್ಷಗಳೂ ಅರಿಯಬೇಕಿದೆ. 2024ರ ಸಂದೇಶವೂ ಇದೇ ಆಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT