ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ‘ದಾನ’ ಮಾಡಬೇಡಿ

ನಾವು ಹಕ್ಕು ಚಲಾಯಿಸುತ್ತೇವೆಯೇ ಅಥವಾ ಅಧಿಕಾರ ದಾನ ಮಾಡುತ್ತೇವೆಯೇ?
Last Updated 9 ಏಪ್ರಿಲ್ 2019, 20:01 IST
ಅಕ್ಷರ ಗಾತ್ರ

ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ‘ಭಾರತದ ಜನರಾದ ನಾವು’ ಎಂಥ ದೇಶವನ್ನು ಕಟ್ಟಲು ಪಣತೊಟ್ಟಿದ್ದೇವೆ ಎಂದು ಹೇಳುವಲ್ಲಿ, ‘ಸಾವೆರಿನ್, ಸೋಷಿಯಲಿಸ್ಟ್, ಸೆಕ್ಯುಲರ್, ಡೆಮಾಕ್ರಟಿಕ್ ‘ರಿಪಬ್ಲಿಕ್’ ಎಂದು ಹೇಳಿದ್ದೇವೆ. ಇಲ್ಲಿ ಸೆಕ್ಯುಲರ್ ಮತ್ತು ಡೆಮಾಕ್ರಟಿಕ್ ಎಂಬ ಎರಡು ಪದಗಳನ್ನು ಚರ್ಚಿಸೋಣ. ನಿಘಂಟುವಿನಲ್ಲಿ ‘ಸೆಕ್ಯುಲರ್’ ಎಂಬ ಪದದ ಅರ್ಥ ‘ಲೌಕಿಕ, ಜಾತ್ಯತೀತ, ಮತಧರ್ಮಾತೀತ, ಆಡಳಿತ ವ್ಯವಸ್ಥೆಯಲ್ಲಿ ಧರ್ಮದ ಪ್ರವೇಶ ಕೂಡದು’ ಎಂಬ ಅರ್ಥಗಳಿವೆ.‘ಡೆಮಾಕ್ರಟಿಕ್’ ಎಂಬ ಪದ‌ ಕನ್ನಡದಲ್ಲಿ ‘ಪ್ರಜಾಸತ್ತಾತ್ಮಕ’ ಎಂದಾಗಿದೆ.

ಅಂದರೆ ಭಾರತದ ಜನರಾದ ನಾವು ಇನ್ನೂ ‘ಪ್ರಜೆ’ಗಳೇ? ಅಥವಾ ಸ್ವತಂತ್ರ ಭಾರತದ ‘ನಾಗರಿಕರೇ’? ಇವರೆಡರಲ್ಲಿ ಬರೀ ಪದಗಳ ಅರ್ಥ ಮಾತ್ರವಲ್ಲ, ಈ ಪದಗಳನ್ನು ಒಪ್ಪಿಕೊಳ್ಳುವ ಮನೋಭಾವದ ಸಮಸ್ಯೆಯೂ ಇರುತ್ತದೆ. ನಾವು ಈ ದೇಶದ ಪ್ರಜೆಗಳಲ್ಲ, ಪ್ರಜೆ ಇದ್ದಲ್ಲಿ ಪ್ರಭುಗಳು ಇರಬೇಕಾಗುತ್ತದೆ, ನಾವು ನಮ್ಮನ್ನು ಆಳುವ ಮಂತ್ರಿಗಳು, ಮುಖ್ಯಮಂತ್ರಿಗಳು, ಪ್ರಧಾನಿಯನ್ನೇ ನಮ್ಮ ಪ್ರಭು ಎಂದು ಭಾವಿಸುವ ಮನೋದಾಸ್ಯ ನಮ್ಮಲ್ಲಿ ಇನ್ನೂ ಅಳಿಸಿಲ್ಲ. ನಮ್ಮದು ‘ಜನಸತ್ತಾತ್ಮಕ’ ಗಣರಾಜ್ಯ. ನಾವು ಈ ದೇಶದ ನಾಗರಿಕರು, ಇದು ಪ್ರಜಾಪ್ರಭುತ್ವವಲ್ಲ, ‘ಜನಸತ್ತೆ’ ಎನ್ನುವ ರೀತಿಯಲ್ಲಿ ಪದಗಳನ್ನು ಬದಲಾಯಿಸುವುದಷ್ಟೇ ಅಲ್ಲ, ಮನೋಭಾವವನ್ನು ತಾಳುವುದೂ ಇಂದಿನ ತುರ್ತು ಅಗತ್ಯವಾಗಿದೆ. ಇನ್ನು ಚುನಾವಣೆಗೆ ಬರೋಣ.

ಗ್ರಾಮ ಪಂಚಾಯಿತಿ ಸದಸ್ಯ ಮಾಡುವಂಥ ಜನೋಪಯೋಗಿ ಕೆಲಸವನ್ನು ಬಹಳ ಜನ ಇತರರು ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ, ಅವರಿಗೆ ನಿರ್ದಿಷ್ಟ ‘ಶಕ್ತಿ’ ಇರುತ್ತದೆ. ಇನ್ನು ಒಬ್ಬ ಶಾಸಕರೋ, ಸಂಸದರೋ, ಸಚಿವರೋ, ಮುಖ್ಯಮಂತ್ರಿ, ಪ್ರಧಾನಿಯೋ ಆಗಿದ್ದರಂತೂ ಅವರಲ್ಲಿ ಎಷ್ಟು ಶಕ್ತಿ ಇರುತ್ತದೆ, ದೇಶದ ಎಷ್ಟೊಂದು ಸಂಪನ್ಮೂಲ ಅವರ ಸುಪರ್ದಿಯಲ್ಲಿರುತ್ತದೆ ಎಂದು ಯೋಚಿಸಿ. ಒಬ್ಬ ಪ್ರಧಾನಿಗೂ ಒಂದೇ ವೋಟು, ರಸ್ತೆ ಬದಿಯಲ್ಲಿ ಕುಳಿತು ಹೊಟ್ಟೆ ಹೊರೆಯುವ ಚಮ್ಮಾರನಿಗೂ ಒಂದೇ ವೋಟು. ಆದರೆ ಒಬ್ಬ ಪ್ರಧಾನಿಗೆ ಇಷ್ಟೊಂದು ಅಗಾಧವಾದ ಶಕ್ತಿ ಎಲ್ಲಿಂದ ಬರುತ್ತದೆ?

ಭಾರತದಂಥ ಜನತಂತ್ರದಲ್ಲಿ ದೇಶದ ಮಾಲೀಕತ್ವ ಇರುವುದು ಜನರ ಕೈಯಲ್ಲಿ. ‘ಭಾರತದ ಜನರಾದ ನಾವು’ ಈ ದೇಶದ ಸಂವಿಧಾನವನ್ನು ಒಪ್ಪಿಕೊಂಡು, ಅದರ ಪ್ರಕಾರ ಜನಸತ್ತಾತ್ಮಕ ಗಣರಾಜ್ಯವನ್ನು ನಡೆಸಿಕೊಂಡು ಹೋಗುತ್ತಿದ್ದೇವೆ. ನಮ್ಮಂಥ ಜನ ಈ ದೇಶದಲ್ಲಿ ಸಂಪತ್ತನ್ನು, ವಸ್ತುಗಳನ್ನು ಉತ್ಪಾದನೆ ಮಾಡುವ ಅಥವಾ ವಿವಿಧ ಸೇವೆಗಳನ್ನು ನೀಡುವ ಕೆಲಸದಲ್ಲಿ ತೊಡಗಿರುತ್ತೇವೆ. ನಮಗೆ ಬೇರೆ ಕೆಲಸಕ್ಕಾಗಿ ಸಮಯವಿರುವುದಿಲ್ಲ. ನಮ್ಮ ಕೆಲಸಗಳೂ ದೇಶವನ್ನು ನಡೆಸುವಷ್ಟೇ ಮುಖ್ಯ. ಆದ್ದರಿಂದ ನಾವೇನು ಮಾಡುತ್ತೇವೆ, ‘ನಮ್ಮ ಪರವಾಗಿ’ ದೇಶದ ಆಡಳಿತವನ್ನು ನಡೆಸಿಕೊಂಡು ಹೋಗಲು ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತೇವೆ.

ಗ್ರಾಮ ಪಂಚಾಯಿತಿಯಿಂದ ಹಿಡಿದು ಸಂಸತ್ತಿನವರೆಗೆ ಇದು ಹೀಗೇ ನಡೆಯುತ್ತದೆ. ಜನರ ಮತಗಳೇ ಪ್ರತಿನಿಧಿಗಳನ್ನು ಗುರುತಿಸುವ ಸಾಧನಗಳು. ರಾಜಕಾರಣಿಗಳು ಯಾವತ್ತಿಗೂ ‘ಜನ ನಾಯಕ’ರಲ್ಲ, ಬರೀ ‘ಜನಪ್ರತಿನಿಧಿಗಳು’. ನಾವು ನಮ್ಮ ಮತದ ಮೂಲಕ ಅಭ್ಯರ್ಥಿಗಳ ಪೈಕಿ ಒಬ್ಬರನ್ನು ‘ಯೋಗ್ಯರು’ ಎಂಬ ‘ಅಭಿಪ್ರಾಯ’ ನೀಡುತ್ತೇವೆ. ಎಂದರೆ ಈ ಮತ ಎನ್ನುವುದು ಜನತಂತ್ರದ ರಚನೆಯಲ್ಲಿ ಎಷ್ಟೊಂದು ಮಹತ್ವದ್ದು ಎಂಬುದು ಅರ್ಥವಾಗುತ್ತದೆ.

ಹಾಗಾದರೆ ನಾವು ಮಾಡುವುದು, ‘ಮತದಾನ’ವಾಗಬೇಕೆ? ನಮ್ಮ ಅಧಿಕಾರವನ್ನು ನಾವು ‘ದಾನ’ ಮಾಡುತ್ತಿದ್ದೇವೆಯೇ? ಅಥವಾ ಮತ ಎಂಬ ನಮ್ಮ ಹಕ್ಕನ್ನು ಚಲಾಯಿಸುತ್ತಿದ್ದೇವೆಯೇ? ಮತ ಎನ್ನುವುದು ಸಂವಿಧಾನದತ್ತವಾದ ನಮ್ಮ ಹಕ್ಕು ಎಂಬುದನ್ನು ನಾಗರಿಕರು ಅರಿತುಕೊಳ್ಳಬೇಕು. ಹಕ್ಕನ್ನು ಮಾರಿಕೊಳ್ಳಬಾರದು, ‘ದಾನ’ ಮಾಡಬಾರದು. ಹಕ್ಕನ್ನು ವಿವೇಚನೆಯಿಂದ ಚಲಾಯಿಸಿದರೆ ಮಾತ್ರ ಯೋಗ್ಯ ಪ್ರತಿನಿಧಿಗಳನ್ನು ಆಯ್ಕೆ ಮಾಡಬಹುದು, ಅವರೆಲ್ಲಾ ಸೇರಿ ಯೋಗ್ಯ ಸರ್ಕಾರ ನಡೆಸಲು ಸಾಧ್ಯವಾಗುತ್ತದೆ.

ನಾವು ಈಗ ಮತ ಚಲಾಯಿಸುವ ಮೂಲಕ, ‘ನೋಡ್ರಪ್ಪಾ, ನೋಡ್ರಮ್ಮಾ, ನಮಗೆ ಬೇರೆ ಮಹತ್ವದ ಕೆಲಸಗಳು ಇರುತ್ತವೆ, ತಗೊಳಿ, ನಿಮ್ಮನ್ನು ನಮ್ಮ ಪ್ರತಿನಿಧಿಗಳು ಎಂದು ಗುರುತಿಸಿದ್ದೇವೆ, ಮಾರ್ಗದರ್ಶನಕ್ಕಾಗಿ ಭಾರತ ಸಂವಿಧಾನವನ್ನು ಕೊಟ್ಟಿದ್ದೇವೆ. ನಿಮಗೆ ಇರಲು ಬಂಗಲೆ, ಆಳುಕಾಳು, ಸಂಬಳ, ಸಾರಿಗೆ, ಇವೆಲ್ಲದರ ಜೊತೆ ಅಗಾಧ ಅಧಿಕಾರವನ್ನು ಮತ್ತು ಅದನ್ನು ಬಳಸಿ ಜನಕಲ್ಯಾಣ ಮಾಡುವುದಕ್ಕಾಗಿ ದೇಶದ ಸಂಪನ್ಮೂಲವನ್ನು ನಿಮ್ಮ ಸುಪರ್ದಿಗೆ ಒಪ್ಪಿಸಿದ್ದೇವೆ. ನ್ಯಾಯಯುತವಾಗಿ ಈ ದೇಶದ ಆಡಳಿತವನ್ನು ನಡೆಸಿ’ ಎಂದು ಹೇಳಿದ ಹಾಗೆ.

ಸಂಸತ್ ಚುನಾವಣೆಯಲ್ಲಿ ನಾವು ನಮ್ಮ ಸಂಸದರನ್ನು ಆಯ್ಕೆ ಮಾಡಬಲ್ಲೆವು, ಈ ದೇಶದ ಪ್ರಧಾನಿಯನ್ನಲ್ಲ. ಸಂಸದರು ಪ್ರಧಾನಿಯ ಆಯ್ಕೆ ಮಾಡುತ್ತಾರೆ. ಸಂಸದನ ಆಯ್ಕೆಯಿಂದ ನಮ್ಮ ಆಯ್ಕೆ ಮುಗಿಯುತ್ತದೆ. ಆದ್ದರಿಂದ ಎಂಥ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂಬ ಎಚ್ಚರಿಕೆ ನಮಗೆ ಬೇಡವೇ? ಮತದ ಮಹತ್ವವನ್ನು ಈ ಮಾದರಿಯಲ್ಲಿ ಅರ್ಥ ಮಾಡಿಕೊಂಡರೆ ಜನ ಅದನ್ನು ಕಾಸಿಗೆ ಮಾರಿಕೊಳ್ಳುವುದಿಲ್ಲ, ಅನುಕಂಪದಿಂದ ದಾನ ಮಾಡುವುದೂ ಇಲ್ಲ. ಜನಸತ್ತಾತ್ಮಕ ಗಣರಾಜ್ಯದಲ್ಲಿ ಮತದಾರರ ಯೋಗ್ಯತೆಗೆ ತಕ್ಕ ಸರ್ಕಾರಗಳು ಬರುತ್ತವೆ. ನಿಮ್ಮ ಯೋಗ್ಯತೆಯನ್ನು ಈಗ ಪ್ರದರ್ಶಿಸಿ, ಯೋಗ್ಯ ಸರ್ಕಾರ ರಚನೆಯಲ್ಲಿ ಭಾಗವಹಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT