ಕಾಂಗ್ರೆಸ್ ಪ್ರಣಾಳಿಕೆ: ನಾವೇನು ನಂಬಬೇಕು?

ಶುಕ್ರವಾರ, ಏಪ್ರಿಲ್ 19, 2019
22 °C
ಮತದಾರರು ತನ್ನ ಹೆಜ್ಜೆಗುರುತನ್ನು ಮರೆಯಲಿ ಎಂದು ಪಕ್ಷ ಬಯಸಿದಂತಿದೆ

ಕಾಂಗ್ರೆಸ್ ಪ್ರಣಾಳಿಕೆ: ನಾವೇನು ನಂಬಬೇಕು?

ಎ. ಸೂರ್ಯ ಪ್ರಕಾಶ್
Published:
Updated:

ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಭಾರತದ ಅತ್ಯಂತ ಹಳೆಯ ಹಾಗೂ ದೇಶದ ಎಲ್ಲ ಭಾಗಗಳಲ್ಲೂ ಅಸ್ತಿತ್ವ ಹೊಂದಿರುವ ಪಕ್ಷ ಕಾಂಗ್ರೆಸ್ ಆಗಿರುವ ಕಾರಣ, ಕಾಂಗ್ರೆಸ್ಸಿನ ಪ್ರಣಾಳಿಕೆಯನ್ನು ಅತ್ಯಂತ ಗಂಭೀರವಾಗಿ ನೋಡಬೇಕು. ಹಾಗೆ ಮಾಡುವ ಸಮಯದಲ್ಲಿ, ಪ್ರಣಾಳಿಕೆಯಲ್ಲಿಹೇಳಿರುವುದನ್ನು, ನೀಡಿರುವ ಭರವಸೆಗಳನ್ನು ಸತ್ಯದ ನೆಲೆಗಟ್ಟಿನಲ್ಲಿ ಪರೀಕ್ಷೆಗೆ ಒಳಪಡಿಸಬೇಕು. ಪ್ರಜಾತಂತ್ರ ಭಾರತದ ಇತಿಹಾಸ ಆರಂಭವಾಗಿದ್ದು 2014ರಿಂದ ಎಂದು ನಾವು ನಂಬಬೇಕು ಎಂದು ಈ ಪಕ್ಷ ಬಯಸುತ್ತಿದೆ ಎನ್ನುವುದು ಪ್ರಣಾಳಿಕೆ ಓದುವಾಗ ಅನಿಸುತ್ತದೆ.

ಪ್ರಣಾಳಿಕೆಯ ಇಡೀ ಸಂಕಥನ ಈ ನೆಲೆಯ ಮೇಲೆಯೇ ನಿಂತಿದೆ. ಏಕೆಂದರೆ, ಅದಕ್ಕಿಂತ ಹಿಂದಿನ ಅವಧಿಯತ್ತ ನೋಟ ಹರಿಸಿದರೆ, ಕಾಂಗ್ರೆಸ್ ತಾನು ಹಿಂದೆ ಮಾಡಿದ ಪಾಪಗಳನ್ನು ಪರಿಗಣಿಸಬೇಕಾಗುತ್ತದೆ. ಪಕ್ಷವು ಪ್ರಜಾತಂತ್ರದ ಮೌಲ್ಯಗಳ ಬಗ್ಗೆ, ಸಂವಿಧಾನದ ಬಗ್ಗೆ, ಒಕ್ಕೂಟ ವ್ಯವಸ್ಥೆ ಪರ ಹಾಗೂ ಭ್ರಷ್ಟಾಚಾರದ ವಿರುದ್ಧ ಅತ್ಯಂತ ಉದಾತ್ತವಾದ ಘೋಷಣೆಗಳನ್ನು ಮಾಡಿದೆ. ಆದರೆ, 1975–77ರ ನಡುವೆ ದೇಶದ ಮೇಲೆ ಸರ್ವಾಧಿಕಾರ ಹೇರಿದ್ದನ್ನು, ಹೇಳಿದಂತೆ ಕೇಳುವ ರಾಜ್ಯಪಾಲರನ್ನು ಬಳಸಿ ಕಾಂಗ್ರೆಸ್ಸೇತರ ಸರ್ಕಾರಗಳನ್ನು ದಶಕಗಳ ಕಾಲ ಮತ್ತೆ ಮತ್ತೆ ಹತ್ತಿಕ್ಕಿದ್ದನ್ನು, ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಮಾಧ್ಯಮಗಳ ಬಾಯಿಮುಚ್ಚಿಸಲು ವಿಷಕಾರಿ ಮಾನನಷ್ಟ ಮಸೂದೆ ತಂದಿದ್ದನ್ನು ಹಾಗೂ ತಾನು ಬೊಫೋರ್ಸ್‌ ಲಂಚ ಹಗರಣದಲ್ಲಿ ಸಿಲುಕಿದ್ದನ್ನು ದೇಶ ಮರೆತುಬಿಡಬೇಕು ಎಂದು ಕೂಡ ಬಯಸುತ್ತಿದೆ.

2014ರ ನಂತರದ ಆಡಳಿತ ಮತ್ತು ರಾಜಕೀಯದ ಬಗ್ಗೆ ಮಾತ್ರ ಮಾತನಾಡಿ, ಮತದಾರರು ಕಾಂಗ್ರೆಸ್ಸಿನ 60 ವರ್ಷಗಳ ಹೆಜ್ಜೆಗುರುತುಗಳ ಬಗ್ಗೆ ಅನುಕಂಪದ ವಿಸ್ಮೃತಿ ತೋರಿಸಲಿ ಎಂದು ಕಾಂಗ್ರೆಸ್ಸಿನ ಪ್ರಣಾಳಿಕೆ ಬಯಸಿದೆ. ಹಾಗಾಗಿ, ಸಾರ್ವಜನಿಕರ ಸ್ಮರಣೆಯನ್ನು ಉದ್ದೀಪಿಸಿ, ಹಿಂದೆ ನಡೆದ ವಿದ್ಯಮಾನಗಳನ್ನು ಮರೆಯಬೇಕೋ ನೆನಪಿನಲ್ಲಿ ಇಟ್ಟುಕೊಳ್ಳಬೇಕೋ ಎಂಬುದನ್ನು ಅವರ ವಿವೇಚನೆಗೇ ಬಿಟ್ಟುಬಿಡುವ ಕಾಲ ಬಂದಿದೆ.

ಪ್ರಣಾಳಿಕೆ ಆರಂಭವಾಗುವುದು ಕಾಂಗ್ರೆಸ್ಸಿನ ಅಧ್ಯಕ್ಷ ರಾಹುಲ್ ಗಾಂಧಿ ಮುನ್ನುಡಿಯ ಮೂಲಕ. ಅದರಲ್ಲಿ, ‘ಭಾರತ ಮುಕ್ತ ಪ್ರಜಾತಂತ್ರದ ದೇಶವಾಗುತ್ತದೆಯೇ, ಭಾರತೀಯರು ಭೀತಿಯಿಂದ ಮುಕ್ತರಾಗುತ್ತಾರೆಯೇ? ಅಥವಾ ಜನರ ಹಕ್ಕುಗಳನ್ನು, ಸಂಸ್ಥೆಗಳನ್ನು ತುಳಿಯುವ ಮಾರಕ ಸಿದ್ಧಾಂತ ಭಾರತವನ್ನು ಆಳಲಿದೆಯೇ...’ ಎನ್ನುವ ಆಡಂಬರದ ಪ್ರಶ್ನೆಗಳು ಇವೆ. ತುರ್ತು ಪರಿಸ್ಥಿತಿ ವೇಳೆ ಕಾಂಗ್ರೆಸ್, ದೇಶದ ಮೇಲೆ ಫ್ಯಾಸಿಸ್ಟ್‌ ಆಡಳಿತ ಹೇರಿದಾಗ ಪ್ರತಿ ಭಾರತೀಯನ ಮನಸ್ಸಿನಲ್ಲೂ ಇದ್ದ ಪ್ರಶ್ನೆಗಳು ಇವೇ ಆಗಿದ್ದವು.

ತಮ್ಮ ಪಕ್ಷ ‘ಸತ್ಯ, ಸ್ವಾತಂತ್ರ್ಯ, ಘನತೆ, ಆತ್ಮಾಭಿಮಾನ ಮತ್ತು ಜನರಲ್ಲಿ ಸಮೃದ್ಧಿ ತರುವುದಕ್ಕೆ’ ಬದ್ಧವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನು ಕೂಡ ಸತ್ಯದ ಒರೆಗೆ ಹಚ್ಚಿ ನೋಡಬೇಕು. ‘ಸ್ವಾತಂತ್ರ್ಯವೆಂಬುದು ನಮ್ಮ ಮುಕ್ತ ಹಾಗೂ ಪ್ರಜಾತಂತ್ರ ವ್ಯವಸ್ಥೆಯ ಗಣರಾಜ್ಯದ ಹೆಗ್ಗುರುತು’ ಎಂದು ಪ್ರಣಾಳಿಕೆ ಗರ್ವದಿಂದ ಹೇಳಿಕೊಂಡಿದೆ. ‘ಕಾನೂನುಗಳು ನ್ಯಾಯಸಮ್ಮತವಾಗಿರಬೇಕು, ಅವು ಸಾಂವಿಧಾನಿಕ ಮೌಲ್ಯಗಳನ್ನು ‍ಪ್ರತಿಫಲಿಸಬೇಕು’ ಎಂದೂ ಹೇಳಲಾಗಿದೆ.

ಈ ಪ್ರಜಾತಾಂತ್ರಿಕ ಮೌಲ್ಯಗಳ ಬಗ್ಗೆ ಚರ್ಚಿಸುವ ನೈತಿಕ ಹಕ್ಕಾದರೂ ಕಾಂಗ್ರೆಸ್ಸಿಗೆ ಇದೆಯೇ ಎಂದು ನಾವು ಕೇಳಿಕೊಳ್ಳಬೇಕು. ಸ್ವಾತಂತ್ರ್ಯವು ನಮ್ಮ ಗಣತಂತ್ರದ ಹೆಗ್ಗುರುತಾಗಿದ್ದರೆ ಪಕ್ಷ ತುರ್ತು ಪರಿಸ್ಥಿತಿ ಹೇರಿ, ಜನರ ಮೂಲಭೂತ ಹಕ್ಕುಗಳನ್ನೆಲ್ಲ ಕಿತ್ತುಕೊಂಡಿದ್ದು ಏಕೆ? ಕಾನೂನುಗಳು ಸಾಂವಿಧಾನಿಕ ಆಶಯಗಳನ್ನು ಪ್ರತಿಬಿಂಬಿಸಬೇಕು ಎಂದಾದರೆ, 1975–77ರ ಅವಧಿಯಲ್ಲಿ ಕರಾಳ ‘ಮೀಸಾ’ ಕಾಯ್ದೆಯನ್ನು ಜಾರಿಗೆ ತಂದಿದ್ದೇಕೆ? ಇಂದಿರಾ ಗಾಂಧಿ ಅವರನ್ನು ಇತರೆಲ್ಲ ನಾಗರಿಕರಿಗಿಂತ ಎತ್ತರದ ಸ್ಥಾನದಲ್ಲಿ ಇರಿಸುವ, ಅವರಿಗೆ ಸಂಬಂಧಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆಗೆ ಕೈಗೆತ್ತಿಕೊಳ್ಳದಂತೆ ಮಾಡುವ 39ನೇ ತಿದ್ದುಪಡಿಯನ್ನು ಸಂವಿಧಾನಕ್ಕೆ ತಂದಿದ್ದೇಕೆ?

ಈಗ ಮಾಧ್ಯಮ, ಸಂಸ್ಥೆಗಳು ಹಾಗೂ ನ್ಯಾಯಾಂಗದ ಕಡೆ ತಿರುಗಿ ನೋಡೋಣ. ‘ಮಾಧ್ಯಮಗಳು ಮುಕ್ತವಾಗಿರಬೇಕು, ಸ್ವಯಂ ನಿಯಂತ್ರಣ ಹೊಂದಿರಬೇಕು’ ಎನ್ನುವುದು ಪಕ್ಷದ ನಂಬಿಕೆ ಎಂದು ಪ್ರಣಾಳಿಕೆ ಹೇಳುತ್ತದೆ. ‘ಸಂಪಾದಕೀಯ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲಾಗುವುದು, ಸರ್ಕಾರದ ಹಸ್ತಕ್ಷೇಪದಿಂದ ರಕ್ಷಣೆ ನೀಡಲಾಗುವುದು’ ಎಂದು ಅದರಲ್ಲಿ ಹೇಳಲಾಗಿದೆ. ನಿಜವಾ? 1975ರ ಜೂನ್‌ 25ರಂದು ನವದೆಹಲಿಯ ಪತ್ರಿಕಾ ಕಚೇರಿಗಳಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡಿ, 253 ಸ್ವತಂತ್ರ ಪತ್ರಕರ್ತರನ್ನು ಜೈಲಿಗೆ ತಳ್ಳಿ, ಹಲವು ವಿದೇಶಿ ವರದಿಗಾರರ ಮೇಲೆ ನಿರ್ಬಂಧ ಹೇರಿ, ಮಾಧ್ಯಮಗಳ ಮೇಲೆ ಸೆನ್ಸಾರ್‌ ವಿಧಿಸಿ, ಕರ್ನಾಟಕದಲ್ಲಿ ಸೆನ್ಸಾರ್ ಮಾಡುವ ಕೆಲಸಕ್ಕೆ ಮುಖ್ಯಸ್ಥರನ್ನಾಗಿ ಪೊಲೀಸ್ ಐಜಿಪಿಯನ್ನು ನೇಮಕ ಮಾಡಿದ ಪಕ್ಷ ಕಾಂಗ್ರೆಸ್. ಮಾಧ್ಯಮ ಸ್ವಾತಂತ್ರ್ಯದ ವಿಚಾರದಲ್ಲಿ ಈ ಪಕ್ಷವನ್ನು ನಂಬಬಹುದೇ?

ಕೇಂದ್ರ ಚುನಾವಣಾ ಆಯೋಗದಂತಹ ಸಂಸ್ಥೆಗಳ ‘ಘನತೆ, ಅಧಿಕಾರ ಮತ್ತು ಸ್ವಾಯತ್ತತೆಯನ್ನು’ ಪುನರ್‌ ಸ್ಥಾಪಿಸಲಾಗುವುದು ಎಂದು ಕಾಂಗ್ರೆಸ್ ಪ್ರಣಾಳಿಕೆ ಭರವಸೆ ನೀಡಿದೆ. ಇದನ್ನು ನಂಬಬಹುದೇ?

ತುರ್ತು ಪರಿಸ್ಥಿತಿ ಸಂದರ್ಭದ ಅತಿರೇಕಗಳ ಬಗ್ಗೆ ಶಾ ಆಯೋಗ ವಿಚಾರಣೆ ನಡೆಸಿದಾಗ, ‘ರಾಜಕೀಯ ಕೈದಿಗಳನ್ನು ಆ್ಯಸ್‌ಬೆಸ್ಟಾಸ್‌ ಹೊದಿಕೆ ಇರುವ ಕೋಣೆಗಳಿಗೆ ತಳ್ಳಿ, ಅವರು ಬೇಯುವಂತೆ ಮಾಡಿ ಎಂದು ನವೀನ್ ಚಾವ್ಲಾ ಹೇಳಿದ್ದರು’ ಎನ್ನುವ ಹೇಳಿಕೆಯನ್ನು ತಿಹಾರ್‌ ಜೈಲಿನ ಸೂಪರಿಂಟೆಂಡೆಂಟ್‌ ನೀಡಿದ್ದರು. ನವೀನ್ ಚಾವ್ಲಾ ಬಗ್ಗೆ ಉಲ್ಲೇಖಿಸಿ ಶಾ ಆಯೋಗವು ‘ಚಾವ್ಲಾ ಅವರು ಸರ್ವಾಧಿಕಾರಿಯಂತೆ ವರ್ತಿಸಿದ್ದರು. ಯಾವುದೇ ಸಾರ್ವಜನಿಕ ಹುದ್ದೆ ಹೊಂದಲು ಅನರ್ಹ ಎನ್ನುವ ರೀತಿಯಲ್ಲಿ ನಡೆದುಕೊಂಡಿದ್ದರು’ ಎಂದು ಹೇಳಿದೆ. ಚಾವ್ಲಾ ಅವರನ್ನು 2005ರಲ್ಲಿ ಚುನಾವಣಾ ಆಯುಕ್ತರನ್ನಾಗಿ ನೇಮಿಸಿದ ಪಕ್ಷವು ಈಗ ಚುನಾವಣಾ ಆಯೋಗದ ‘ಘನತೆ, ಅಧಿಕಾರ ಮತ್ತು ಸ್ವಾಯತ್ತತೆ’ ಪುನರ್‌ ಸ್ಥಾಪಿಸುವುದಾಗಿ ಹೇಳಿಕೊಳ್ಳುತ್ತಿದೆ.

ಈಗ ನ್ಯಾಯಾಂಗದ ಬಗ್ಗೆ ಗಮನಹರಿಸೋಣ. ಈ ವಿಚಾರದಲ್ಲಿ ಕಾಂಗ್ರೆಸ್ಸಿನ ಇತಿಹಾಸ ಭಯ ಹುಟ್ಟಿಸುವಂತಿದೆ. 1970ರ ದಶಕದಲ್ಲಿ ಕಾಂಗ್ರೆಸ್ ಪಕ್ಷವು ಸಂಸತ್ತಿನಲ್ಲಿ ನ್ಯಾಯಮೂರ್ತಿಗಳ ವಿರುದ್ಧ ಬೆದರಿಕೆಯ ಮಾತು ಆಡಿತ್ತು. ಸರ್ಕಾರಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಉದ್ಧಟತನ ನ್ಯಾಯಮೂರ್ತಿಗಳಿಗೆ ಇದ್ದಿದ್ದಾದರೆ, ಅಂತಹ ನ್ಯಾಯಮೂರ್ತಿಗಳ ಜೊತೆ ವ್ಯವಹಾರ ನಡೆಸಲು ಪಕ್ಷಕ್ಕೆ ತನ್ನದೇ ಆದ ರೀತಿ ಮತ್ತು ವ್ಯವಸ್ಥೆ ಇದೆ ಎಂದು ಕಾಂಗ್ರೆಸ್ಸಿನ ಸಂಸದರೊಬ್ಬರು 1976ರಲ್ಲಿ ಲೋಕಸಭೆಯಲ್ಲಿ ಹೇಳಿದ್ದರು. ಈಗ, 2019ರಲ್ಲಿ, ಕಾಂಗ್ರೆಸ್ ಪಕ್ಷವು ‘ನ್ಯಾಯಾಂಗದ ಸ್ವಾತಂತ್ರ್ಯ ಕಾಯ್ದುಕೊಳ್ಳಲಾಗುವು ದವರನ್ನು ವಾಪಸ್ ಕರೆತರಲು ಬದ್ಧತೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಣಾಳಿಕೆ ಹೇಳಿದೆ.

ಸೋನಿಯಾ ಗಾಂಧಿ ಅವರ ಸ್ನೇಹಿತ, ಇಟಲಿಯ ಉದ್ಯಮಿ ಒಟ್ಟಾವಿಯೊ ಕ್ವಟ್ರೋಕಿ ಅವರು ದೇಶದಿಂದ ತಪ್ಪಿಸಿಕೊಳ್ಳುವಂತೆ ನೋಡಿಕೊಂಡ ಪಕ್ಷ ಇದೇ. ಸಂವಿಧಾನದ ಬಗ್ಗೆ ತನಗಿರುವ ಬದ್ಧತೆಯ ಬಗ್ಗೆ ಮಾತನಾಡಿರುವ ಪಕ್ಷವು ‘ನಮ್ಮ ಇತಿಹಾಸವೇ ಇದರ ಬಗ್ಗೆ ಹೇಳುತ್ತಿದೆ, ನಾವು ಹಿಂದೆಯೂ ಇದನ್ನು ಮಾಡಿದ್ದೇವೆ. ಮುಂದೆಯೂ ಮಾಡಲಿದ್ದೇವೆ’ ಎಂದು ಹೇಳಿದೆ. ಪಕ್ಷದ ಇತಿಹಾಸ ಗಮನಿಸಿದರೆ, ಇದು ಅಶುಭದ ಮಾತಿನಂತೆ ಕಾಣುವುದಿಲ್ಲವೇ?

(ಇಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ವೈಯಕ್ತಿಕ)

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !