ಶನಿವಾರ, ಜುಲೈ 24, 2021
27 °C

ಸಂಗತ | ಗಾಂಧೀಜಿ ಮತ್ತು ಕ್ವಾರಂಟೈನ್‌!

ಡಾ. ಎಚ್.ಬಿ.ಚಂದ್ರಶೇಖರ್ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ನಂತಹ ಜಾಗತಿಕ ಪಿಡುಗುಗಳು ಜಗತ್ತನ್ನು ಈ ಹಿಂದೆಯೂ ಹಲವು ಬಾರಿ ಬಾಧಿಸಿದ್ದು, ಅವುಗಳನ್ನು ಮನುಕುಲವು ಎದೆಗುಂದದೆ ನಿಭಾಯಿಸಿ ಮುನ್ನಡೆದಿದೆ. ಶತಮಾನದ ಹಿಂದೆ ಮಾನವ ಕುಲವನ್ನು ಇನ್ನಿಲ್ಲದಂತೆ ತೊಂದರೆಗೆ ಈಡುಮಾಡಿದ್ದ ಸಾಂಕ್ರಾಮಿಕ ರೋಗವಾದ ಪ್ಲೇಗ್ ಬಾಧಿಸಿದಾಗ, ಆ ಸನ್ನಿವೇಶದಲ್ಲಿ ಗಾಂಧೀಜಿ ಯಾವ ರೀತಿ ತೊಡಗಿಸಿಕೊಂಡಿದ್ದರು ಮತ್ತು ಆರೋಗ್ಯ, ಆಹಾರದ ವಿಷಯಗಳ ಬಗ್ಗೆ ಅವರ ನಿಲುವು ಏನಾಗಿತ್ತು ಎಂಬ ಕುತೂಹಲಕಾರಿ ಅಂಶಗಳು ಅವರ ಆತ್ಮಕತೆಯಲ್ಲಿ ದಾಖಲಾಗಿವೆ.

‘ಕ್ವಾರಂಟೈನ್’ ಎಂಬ ಪದ ನಮಗೆ ಈಗ ಹೊಸತು ಎಂದೆನಿಸುತ್ತಿದೆಯಲ್ಲವೇ? ಆದರೆ ‘ಕ್ವಾರಂಟೈನ್’ ಪದವನ್ನು ಗಾಂಧೀಜಿ ತಮ್ಮ ಆತ್ಮಕತೆಯಲ್ಲಿ ಪ್ರಸ್ತಾಪಿಸುತ್ತಾರೆ. ಅವರು ತಮ್ಮ ಕುಟುಂಬದೊಂದಿಗೆ 1896ರ ಡಿಸೆಂಬರ್ 19ರಂದು ದಕ್ಷಿಣ ಆಫ್ರಿಕಾದ ಡರ್ಬಾನ್ ಅನ್ನು ಹಡಗಿನ ಮೂಲಕ ತಲುಪುತ್ತಾರೆ. ಈ ಸಂದರ್ಭದಲ್ಲಿ ಮುಂಬೈನಲ್ಲಿ ಪ್ಲೇಗ್ ವ್ಯಾಪಿಸಿತ್ತು. ಈ ಸೋಂಕು ವ್ಯಾಪಿಸಬಹುದೆಂಬ ಕಾರಣದಿಂದ ಗಾಂಧೀಜಿ ಮತ್ತು ಇತರರು ಹಡಗಿನಿಂದ ಇಳಿಯಲು ಅವಕಾಶ ನೀಡದೆ ಇಡೀ ಹಡಗನ್ನು ಕ್ವಾರಂಟೈನ್ ಮಾಡಲಾಗುತ್ತದೆ.

ಪ್ಲೇಗ್ ಸೋಂಕು ಹರಡಲು ಮೂರು ವಾರಗಳು ತೆಗೆದುಕೊಳ್ಳುತ್ತಿದ್ದ ಕಾರಣ, ಕ್ವಾರಂಟೈನ್ ಅವಧಿಯನ್ನು ಆಗ ಮೂರು ವಾರಗಳೆಂದು ನಿಗದಿ ಮಾಡಲಾಗಿತ್ತು. ಗಾಂಧೀಜಿ ಇದ್ದ ಹಡಗು ಮೂರು ವಾರಗಳಿಗಿಂತ ಮುಂಚೆಯೇ ಡರ್ಬಾನ್ ತಲುಪಿದ್ದರಿಂದ, ಮೂರು ವಾರ ಮುಗಿಯುವವರೆಗೆ ಕ್ವಾರಂಟೈನ್ ಮಾಡಲಾಗಿರುತ್ತದೆ.

ದಕ್ಷಿಣ ಆಫ್ರಿಕಾದಲ್ಲಿ 1904ರಲ್ಲಿ ಅಪಾಯಕಾರಿಯಾದ ಶ್ವಾಸಕೋಶದ ಪ್ಲೇಗ್ ಕಾಣಿಸಿಕೊಳ್ಳುತ್ತದೆ. ಆಗ ಗಾಂಧೀಜಿ ತಮ್ಮ ಸಂಗಡಿಗರಾದ ಮದನ್‍ಜಿತ್, ಗಾಡ್ ಫ್ರೇ ಮತ್ತಿತರರೊಂದಿಗೆ ಎದೆಗುಂದದೆ ರೋಗಿಗಳ ಶುಶ್ರೂಷಾ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಅಪಾಯಕಾರಿ ಸೋಂಕು ತಗಲುವ ಅಪಾಯವಿದ್ದರೂ ರೋಗಿಗಳಿಗೆ ಔಷಧಿ ನೀಡುವುದು, ಅವರ ಅವಶ್ಯಕತೆಗಳನ್ನು ಗಮನಿಸುವುದು, ಅವರ ಹಾಸಿಗೆ, ಬಟ್ಟೆಗಳನ್ನು ಶುಭ್ರವಾಗಿ ಇಡುವಂತಹ ಕೆಲಸಗಳನ್ನು ಮಾಡುತ್ತಾರೆ.

ಆ ಸನ್ನಿವೇಶದಲ್ಲಿ ನಡೆದ ಒಂದು ಪ್ರಸಂಗ ಕುತೂಹಲಕಾರಿಯಾಗಿದೆ. ಪ್ಲೇಗ್ ರೋಗಿಗಳನ್ನು ನೋಡಿಕೊಳ್ಳಲು ಅಲ್ಲಿಯ ಪುರಸಭೆ ಕಳುಹಿಸಿಕೊಟ್ಟಿದ್ದ ನರ್ಸ್ ಒಬ್ಬಳು ರೋಗಿಗಳಿಗೆ ಪದೇ ಪದೇ ಬ್ರಾಂದಿ ಸೇವಿಸಲು ಪ್ರೇರೇಪಿಸುತ್ತಾಳೆ. ಬ್ರಾಂದಿ ಸೇವನೆಯಿಂದ ರೋಗ ತಹಬಂದಿಗೆ ಬರುತ್ತದೆ ಮತ್ತು ರೋಗ ಬರುವುದನ್ನು ತಡೆಯುತ್ತದೆ ಎಂಬ ನಂಬಿಕೆಯಿಂದ ಗಾಂಧೀಜಿ ಹಾಗೂ ಅವರ ಸಂಗಡಿಗರಿಗೂ ಬ್ರಾಂದಿ ಕುಡಿಯುವಂತೆ ನರ್ಸ್ ಒತ್ತಾಯಿಸುತ್ತಿರುತ್ತಾಳೆ. ಆದರೆ ಇದನ್ನು ಗಾಂಧೀಜಿ ಒಪ್ಪುವುದಿಲ್ಲ. ಅವರು ರೋಗಿಗಳ ಒಪ್ಪಿಗೆ ಪಡೆದು ಪರ್ಯಾಯ ಚಿಕಿತ್ಸೆಯಾದ ಮಣ್ಣಿನ ಚಿಕಿತ್ಸೆ ಮಾಡುತ್ತಾರೆ ಮತ್ತು ಅದರಿಂದ ಇಬ್ಬರು ರೋಗಿಗಳು ಗುಣಮುಖರಾಗುತ್ತಾರೆ. ಆದರೆ ನರ್ಸ್ ಸಾವಿಗೀಡಾಗುತ್ತಾಳೆ.

ಇದೇ ಸಂದರ್ಭದಲ್ಲಿ, ಶ್ವಾಸಕೋಶದ ಪ್ಲೇಗ್ ತಹಬಂದಿಗೆ ಬಾರದೇ ಇದ್ದಾಗ ಡರ್ಬಾನ್‍ನ ಪುರಸಭೆಯು ಪ್ಲೇಗ್‌ಪೀಡಿತ ಭಾರತೀಯ ಕೂಲಿ ಕಾರ್ಮಿಕರನ್ನು ಊರಿನ ಹೊರಗಡೆ ಸ್ಥಳಾಂತರಿಸಿ, ಪ್ರತ್ಯೇಕ ವಾಸಸ್ಥಳ ನಿರ್ಮಿಸಿ ಇಡುತ್ತದೆ. ಆ ಸಂದರ್ಭದಲ್ಲಿ, ಕಾರ್ಮಿಕರು ಕಷ್ಟಪಟ್ಟು ಉಳಿಸಿದ ಹಣವನ್ನು ಬ್ಯಾಂಕ್‍ನಲ್ಲಿ ಇರಿಸದೇ ನೆಲದಲ್ಲಿ ಹೂತಿಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಸೋಂಕಿನ ಭಯದಿಂದ ಬ್ಯಾಂಕ್‍ನವರು ಆ ಹಣವನ್ನು ಸಂಗ್ರಹಿಸಲು ಮುಂದೆ ಬರುವುದಿಲ್ಲ. ಗಾಂಧೀಜಿ ತಮ್ಮ ಸಂಗಡಿಗರ ಜೊತೆ ಸೇರಿ ಪ್ಲೇಗ್ ಪೀಡಿತರಿಂದ 60 ಸಾವಿರ ಪೌಂಡ್ ಹಣ ಸಂಗ್ರಹಿಸಿ, ಆ ಹಣವನ್ನೆಲ್ಲಾ ಕ್ರಿಮಿನಾಶಕದಿಂದ ತೊಳೆದು, ಬ್ಯಾಂಕಿನವರ ಮನವೊಲಿಸಿ ಠೇವಣಿ ಇಡುತ್ತಾರೆ. ಪ್ಲೇಗ್ ತಹಬಂದಿಗೆ ಬಂದ ನಂತರ, ಜನರ ವಾಸಸ್ಥಳದಲ್ಲಿದ್ದ ಎಲ್ಲಾ ವಸ್ತುಗಳು ಮರುಬಳಕೆಗೆ ಯೋಗ್ಯವಾಗಿದ್ದರೂ ಅವುಗಳೆಲ್ಲವನ್ನೂ ಸೋಂಕು ನಿವಾರಣೆಯ ಉದ್ದೇಶದಿಂದ ಪುರಸಭೆ ವತಿಯಿಂದ ಸುಡಲಾಗುತ್ತದೆ.

ಪ್ಲೇಗ್ ಸೋಂಕು ಇದ್ದ ಕಾಲದಲ್ಲಿ ಗಾಂಧೀಜಿ ಮತ್ತು ಸಂಗಡಿಗರು ಮಿತಾಹಾರಿಗಳಾಗಬೇಕೆಂಬ ಸಂಕಲ್ಪ ಮಾಡಿ, ಸಾಯಂಕಾಲದ ಊಟವನ್ನು ತ್ಯಜಿಸುತ್ತಾರೆ. ಶಾಖಾಹಾರದ ಪ್ರತಿಪಾದಕರಾಗಿದ್ದ ಗಾಂಧೀಜಿ ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ಆರೋಗ್ಯ ಕಾಪಾಡಿಕೊಳ್ಳಲು ಮುನ್ನೆಚ್ಚರಿಕೆ ಕ್ರಮವಾಗಿ ಮಣ್ಣು, ನೀರಿನ ಪ್ರಾಕೃತಿಕ ಚಿಕಿತ್ಸೆಯ ಮೊರೆ ಹೋಗುತ್ತಾರೆ. ಕಾಯಿಲೆಗಳಿಗೆ ಔಷಧಿಗಳನ್ನು ತೆಗೆದುಕೊಳ್ಳುವ ಅಗತ್ಯ ಇಲ್ಲ ಎಂದು ಅವರು ಪ್ರತಿಪಾದಿಸುತ್ತಾರೆ. ನಿಯಮಿತವಾದ ಆಹಾರ ಮತ್ತು ನೀರು ಸೇವನೆ, ಮಣ್ಣಿನ ಚಿಕಿತ್ಸೆ ಮತ್ತು ಮನೆಯಲ್ಲಿಯೇ ಸಿದ್ಧಪಡಿಸುವ ಅದೇ ಬಗೆಯ ಇತರ ಸರಳ ಔಷಧಿಗಳಿಂದ ಸಾವಿರದಲ್ಲಿ ಒಂಬೈನೂರ ತೊಂಬತ್ತೊಂಬತ್ತು ರೋಗಗಳನ್ನು ಗುಣಮಾಡಬಹುದು ಎಂದು ಅವರು ಪ್ರತಿಪಾದಿಸುತ್ತಾರೆ. ಮಿತಾಹಾರ ಸೇವನೆ, ನಿಯಮಿತವಾಗಿ ಮಾಡುವ ಉಪವಾಸಗಳ ಮೂಲಕ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು ಎಂಬುದನ್ನು ಗಾಂಧೀಜಿ ಸ್ವತಃ ಅನುಸರಿಸಿ, ಮಾದರಿ ಎನಿಸಿಕೊಳ್ಳುತ್ತಾರೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಈ ಸನ್ನಿವೇಶದಲ್ಲಿ ಗಾಂಧೀಜಿ ತೋರಿದ ಇಂತಹ ಹಾದಿ ಅನುಸರಣೆಯೋಗ್ಯ ಅಲ್ಲವೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು