ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ಗೀಳು ಮುಗ್ಧತೆ ಕಸಿದೀತು

Last Updated 26 ಮೇ 2020, 20:00 IST
ಅಕ್ಷರ ಗಾತ್ರ

ಅಶ್ಲೀಲ ವಿಡಿಯೊಗಳತ್ತ ಮಕ್ಕಳನ್ನು ಸೆಳೆದು, ಆ ಮೂಲಕ ಪೋಷಕರನ್ನು ವಂಚಿಸುವ ಸೈಬರ್‌ ಅಪರಾಧದ ಬಗ್ಗೆ ಎಚ್ಚರ ವಹಿಸಬೇಕಿದೆ

ಜಾಲತಾಣಗಳ ಮೂಲಕ ಜರುಗುವ ಅಪರಾಧಗಳ ಬಗ್ಗೆ ನಮಗೆ ತಿಳಿದಿದೆ. ‘ನಿಮಗೆ ಹತ್ತು ಲಕ್ಷ ರೂಪಾಯಿಗಳ ಲಾಟರಿ ಹೊಡೆದಿದೆ. ಕೂಡಲೇ ನಿಮ್ಮ ಬ್ಯಾಂಕಿನ ವಿವರ ತಿಳಿಸಿ. ನಾವು ನಿಮ್ಮ ಅಕೌಂಟಿಗೆ ಹಣ ಪಾವತಿಸುತ್ತೇವೆ’ ಎಂಬ ಎಸ್ಎಂಎಸ್ ಓದಿ, ಸಂಭ್ರಮದಿಂದ ಆ ಮೊಬೈಲ್‍ಗೆ ಕರೆ ಮಾಡಿದಿರಿ ಎಂದುಕೊಳ್ಳಿ. ಮಾರನೇ ದಿನವೇ ನಿಮ್ಮ ಬ್ಯಾಂಕಿನ ಅಕೌಂಟಿನಲ್ಲಿ ಇದ್ದ ಹಣ ಪೂರ್ತಿ ಖಾಲಿ.

‘ಇದು ಬ್ಯಾಂಕ್ ಮ್ಯಾನೇಜರ್ ಮಾತಾಡ್ತಿರೋದು. ನಿಮಗೆ ಹೊಸ ಕ್ರೆಡಿಟ್ ‌ಕಾರ್ಡ್ ಕೊಡಬೇಕಿದೆ. ಈಗಿನ ನಂಬರ್ ಹೇಳುತ್ತೀರಾ ಸಾರ್’ ಎಂಬ ದೂರವಾಣಿ ಕರೆಯನ್ನು ಕೇಳಿ, ತಮ್ಮ ಕ್ರೆಡಿಟ್ ಕಾರ್ಡ್ ನಂಬರ್ ಹೇಳಿದ ಮರುದಿನವೇ ಅವರ ಖಾತೆಯಲ್ಲಿದ್ದ ಹಣ ಗುಳುಂ ಆದ ಎಷ್ಟೋ ಉದಾಹರಣೆಗಳಿವೆ. ಹೀಗೆ ಜಾಲತಾಣಗಳಲ್ಲಿ ನಾವು ನೋಡುವ ಅಪರಾಧಗಳು ಬೇರೆ ಬೇರೆ ಬಗೆಯವು.

ಇತ್ತೀಚಿನ ವಿಶಿಷ್ಟವಾದ ಜಾಲತಾಣ ಅಪರಾಧ ಬಹಳ ಅಪಾಯಕಾರಿಯಾದದ್ದು. ಅದು ಮಕ್ಕಳ ಭವಿಷ್ಯವನ್ನೇ ಹಾಳುಗೆಡಹುವಂತಹುದು. ಮೊಬೈಲ್ ಫೋನ್‌ ಬಳಸುವ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಅಶ್ಲೀಲ ಚಿತ್ರಗಳಿರುವ ಆನ್‍ಲೈನ್ ಲಿಂಕ್ ಕಳುಹಿಸಿ, ಅವರನ್ನು ವ್ಯಸನಿಗಳನ್ನಾಗಿಸುವ ಮೂಲಕ ಅವರ ಪೋಷಕರನ್ನು ಬ್ಲ್ಯಾಕ್‍ಮೇಲ್ ಮಾಡುವ ಜಾಲವೊಂದು ಈಗ ಪ್ರಾರಂಭವಾಗಿದೆ.

ಅನಾಮಧೇಯ ವ್ಯಕ್ತಿಯೊಬ್ಬ ವ್ಯಾಟ್ಸ್‌ಆ್ಯಪ್ ಗ್ರೂಪ್ ರಚಿಸಿ, ಅದರಲ್ಲಿ ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳ ಗಣನೀಯ ಸಂಖ್ಯೆಯ ಮಕ್ಕಳ ಮೊಬೈಲ್‌ ಫೋನ್‌ ನಂಬರುಗಳನ್ನು ಪತ್ತೆ ಹಚ್ಚಿ, ಅವುಗಳಿಗೆ ಮಹಿಳೆಯರ ಅಶ್ಲೀಲ ಚಿತ್ರಗಳು ಮತ್ತು ಅಶ್ಲೀಲ ಸಂಭಾಷಣೆಗಳ ಆನ್‍ಲೈನ್ ಲಿಂಕ್ ಕೊಟ್ಟು, ಆ ಮಕ್ಕಳ ಎಳೆಯ ಮನಸ್ಸನ್ನು ಸೆಳೆಯುತ್ತಿರುವುದು ತಿಳಿದುಬಂದಿದೆ. ಕೊರೊನಾ ಸೋಂಕಿನ ಆತಂಕದ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಾರಂಭಿಸಲಾದ ಆನ್‍ಲೈನ್ ಪಾಠಕ್ಕಾಗಿ ಪೋಷಕರು ತಮ್ಮ ಮಕ್ಕಳಿಗೆ ಕೊಡಿಸಿರುವ ಸ್ಮಾರ್ಟ್ ಫೋನ್‍ಗಳ ನಂಬರುಗಳು ಇದರಲ್ಲಿ ಸೇರಿವೆ ಎಂಬುದು ಮತ್ತೂ ಕಳವಳದ ಸಂಗತಿ. ಆ ವ್ಯಕ್ತಿ ತನ್ನ ವಾಟ್ಸ್‌ಆ್ಯಪ್ ಗುಂಪಿಗೆ ಇಟ್ಟಿರುವ ತಲೆಬರಹವೂ ಮಕ್ಕಳಿಗೆ ಅತ್ಯಾಕರ್ಷಕ ಎನಿಸುವ ‘ಫೈಂಡ್‌ ಯುವರ್‌ ಲವ್‌ 2083’ ಎಂಬ ಶೀರ್ಷಿಕೆಯನ್ನು ಹೊಂದಿದೆ. ಇದನ್ನು ನೋಡಿದ ಮಕ್ಕಳಿಗೆ, ಅದರಲ್ಲೂ ಹದಿಹರೆಯದವರಿಗೆ ಒಂದು ಕ್ಷಣ ರೋಮಾಂಚನವಾಗುವುದು ಸಹಜ. ಕುತೂಹಲದಿಂದ ಅದನ್ನು ತೆರೆದುನೋಡಿ, ಅಲ್ಲಿನ ಲಿಂಕ್‍ ಓಪನ್ ಮಾಡಿದಾಗ ಕಾಣುವ ಲೈಂಗಿಕ ದೃಶ್ಯಗಳು, ಸಂಭಾಷಣೆಗಳು ಮಕ್ಕಳನ್ನು ಸೆಳೆಯುತ್ತವೆ. ಕ್ರಮೇಣ ಅದರಲ್ಲಿಯೇ ಮಗ್ನರಾಗಿ, ಆನ್‍ಲೈನ್ ಕೋಚಿಂಗ್ ಕಡೆ ಏಕಾಗ್ರತೆ ಕಡಿಮೆಯಾಗುತ್ತದೆ.

ಇಂತಹ ಗೀಳಿಗೆ ಒಳಗಾದ ಮಕ್ಕಳು ಹಂತ ಹಂತವಾಗಿ, ಆ ಗುಂಪಿನ ವ್ಯವಸ್ಥಾಪಕ ಹೇಳಿದಂತೆ ಕೇಳತೊಡಗುತ್ತಾರೆ. ಹೀಗೆ ಅವಲಂಬನೆಗೆ ಒಳಗಾದ ಮಕ್ಕಳಿಂದ ಅವರ ವಿಡಿಯೊ ಹಾಗೂ ಫೋಟೊ, ಪೋಷಕರ ಬ್ಯಾಂಕ್ ವಿವರ, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‍ಗಳ ವಿವರ ಪಡೆದುಕೊಂಡು ಹಣ ದೋಚುವ ಉದ್ದೇಶವಿರಬಹುದೆಂಬುದು ಸೈಬರ್‌ ಪೊಲೀಸರ ಅನಿಸಿಕೆ. ಸೈಬರ್ ಕಳ್ಳರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅಂತಹ ಮಕ್ಕಳಿಂದ ಕುಟುಂಬದ ಸದಸ್ಯರ ಫೋಟೊ ಮತ್ತು ವಿಡಿಯೊಗಳನ್ನು ಪಡೆದುಕೊಂಡು, ಪೋಷಕರನ್ನು ಬ್ಲ್ಯಾಕ್‍ಮೇಲ್ ಮಾಡಿ ಹಣ ಕೀಳುವ ಸಾಧ್ಯತೆಯೂ ಇರಬಹುದೆಂದು ಶಂಕಿಸಲಾಗಿದೆ.

ಈ ವಿಧದಲ್ಲಿ ಮಕ್ಕಳು ಶೋಷಣೆಗೆ ಒಳಗಾಗುವುದನ್ನಷ್ಟೇ ಅಲ್ಲ, ಹಣ ಕಳೆದುಕೊಳ್ಳುವುದನ್ನೂ ತಪ್ಪಿಸಲು ಪೋಷಕರು ಜಾಗೃತರಾಗಿ ಇರಬೇಕೆಂದು ಸಿ.ಸಿ.ಬಿ. ಪೊಲೀಸರು ಎಚ್ಚರಿಸಿದ್ದಾರೆ. ಈ ದಿಸೆಯಲ್ಲಿ ಅವರು ನೀಡಿರುವ ಕೆಳಗಿನ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು. ಅವೆಂದರೆ: ಸ್ಮಾರ್ಟ್ ಫೋನ್‌, ಕಂಪ್ಯೂಟರ್, ಲ್ಯಾಪ್‍ಟಾಪ್ ಮತ್ತು ಟ್ಯಾಬ್‍ಗಳಿಗೆ ಸೆಕ್ಯುರಿಟಿ ಸೆಟ್ಟಿಂಗ್ ಮಾಡಿಸಬೇಕು, ಆನ್‍ಲೈನ್ ಮೂಲಕ ಹರಿದುಬರುವ ಅನವಶ್ಯಕ ವೆಬ್‌ಸೈಟ್‍ಗಳನ್ನು ನಿಷ್ಕ್ರಿಯಗೊಳಿಸಬೇಕು, ಪೋಷಕರ ಅನುಮತಿ ಇಲ್ಲದೆ ವಾಟ್ಸ್‌ಆ್ಯಪ್‌ ಗ್ರೂಪಿಗೆ ಸೇರಿಸದೆ ಇರಲು ಸೆಟ್ಟಿಂಗ್ಸ್ ಅಳವಡಿಸಬೇಕು, ಸೆಕ್ಯೂರಿಟಿ ಸೆಟ್ಟಿಂಗ್‌ ಬದಲಾಯಿಸಿರುವುದು ಮಕ್ಕಳಿಗೆ ಗೊತ್ತಾಗದಿರಲಿ, ಅನಾಮಿಕರ ಜೊತೆ ಚಾಟ್ ಮಾಡದಂತೆ ಮಕ್ಕಳಿಗೆ ಅರಿವು ಮೂಡಿಸಬೇಕು, ಮಕ್ಕಳು ದಿನನಿತ್ಯ ಫೋನ್‌ ಬಳಕೆ ಮಾಡಿರುವ ಅವಧಿಯನ್ನು ಪರಿಶೀಲಿಸಬೇಕು, ಮಕ್ಕಳು ಮೊಬೈಲ್ ‘ಗೀಳಿಗೆ’ ಒಳಗಾಗಿರುವುದು ಕಂಡುಬಂದರೆ ಕೂಡಲೇ ಮನೋವೈದ್ಯರ ಸಲಹೆ ಪಡೆಯಬೇಕು, ಮೊಬೈಲ್‌ನಲ್ಲಿ ಬರುವ ಲಿಂಕ್‍ಗಳನ್ನು ಓಪನ್ ಮಾಡದಂತೆ ಎಚ್ಚರಿಕೆ ನೀಡಬೇಕು. ಅದಕ್ಕೂ ಮಿಗಿಲಾಗಿ, ಮಕ್ಕಳನ್ನು ಸ್ನೇಹಿತರಂತೆ ಕಂಡು ಅವರ ಸಂದೇಹ ಮತ್ತು ಕುತೂಹಲಗಳಿಗೆ ಆತ್ಮೀಯವಾಗಿ ಸ್ಪಂದಿಸಿ, ಮಕ್ಕಳು- ಪೋಷಕರ ಬೆಸುಗೆಯನ್ನು ಗಟ್ಟಿ ಮಾಡಬೇಕು. ಆಗ ಮಕ್ಕಳು ಬಿಚ್ಚುಮನಸ್ಸಿನಿಂದ ತಂದೆ ತಾಯಿಯೊಂದಿಗೆ ತಮ್ಮ ಸಂದೇಹ ಮತ್ತು ಕುತೂಹಲಗಳನ್ನು ಹಂಚಿಕೊಳ್ಳುತ್ತಾರೆ ಎಂಬುದು ನೆನಪಿಡಬೇಕಾದ ಅಂಶ.

ಲೇಖಕ: ಮನೋವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT