ತಾಯ್ನುಡಿಯು ಶಿಕ್ಷಣ ಮಾಧ್ಯಮ ಆಗಿರಬೇಕು ಎನ್ನುವುದು ‘ಸಿಬಿಎಸ್ಇ’ ನಿಲುವು. ಇದು ಕನ್ನಡ ಮಾಧ್ಯಮದ ಹಂಬಲಕ್ಕೆ ಜೀವ ತುಂಬುವಂತಹದ್ದು.

ಮಾತೃಭಾಷೆ ಶಿಕ್ಷಣದ ಮಾಧ್ಯಮವಾಗಬೇಕು ಎಂದು ಹೇಳಿದರೆ, ‘ಅದು ಮುಗಿದುಹೋದ ಕಥೆ’ ಎನ್ನುತ್ತಾರೆ ನನ್ನ ಕನ್ನಡ ಪರ ಹೋರಾಟದ ಮಿತ್ರರು. ಶಿಕ್ಷಣ ಮಾಧ್ಯಮದ ಆಯ್ಕೆ ಪೋಷಕರ ಹಕ್ಕು ಎಂದು ಸುಪ್ರೀಂ ಕೋರ್ಟ್ ತೀರ್ಪಿತ್ತಿರುವುದೇ ಅದಕ್ಕೆ ಕಾರಣ. ‘ಶಿಕ್ಷಣ ಮಾಧ್ಯಮ ಪೋಷಕರ ಹಕ್ಕು’ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಮೇಲೆ, ಅದರಿಂದಾದ ಬಾಧಕಗಳನ್ನು ನಿವಾರಿಸಲು– ಪ್ರಾಥಮಿಕ ಶಿಕ್ಷಣದಲ್ಲಿ (ಒಂದರಿಂದ ಐದನೇ ತರಗತಿವರೆಗೆ) ಮಾತೃಭಾಷೆ ಅಥವಾ ರಾಜ್ಯಭಾಷೆಯನ್ನು ಶಿಕ್ಷಣ ಮಾಧ್ಯಮ ಆಗಿಸುವ ‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (ಕರ್ನಾಟಕ ತಿದ್ದುಪಡಿ) ಮಸೂದೆ 2015’ ಅನ್ನು ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರ ಉಭಯ ಸದನಗಳಲ್ಲೂ ಮಂಡಿಸಿ, ರಾಷ್ಟ್ರಪತಿ ಅವರ ಅಂಗೀಕಾರಕ್ಕಾಗಿ ಕಳಿಸಿತ್ತು. ಅಂತಹ ಮಸೂದೆಯನ್ನು ಅಂಗೀಕರಿಸಿದ ಏಕೈಕ ರಾಜ್ಯ ಕರ್ನಾಟಕ ಆಗಿತ್ತು. ಆದರೆ, ನಂತರದಲ್ಲಿ ರಾಜ್ಯ ಸರ್ಕಾರ ಅದನ್ನು ಸಂಪೂರ್ಣವಾಗಿ ಮರೆಯಿತು. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಅಂಗೀಕಾರ ನೀಡಬೇಕೆಂದು ಮಂಡಿಸಿರುವ ಪಟ್ಟಿಯಲ್ಲಿ ‘ಉಚಿತ ಕಡ್ಡಾಯ ಶಿಕ್ಷಣ ಮಸೂದೆ 2015’ ಮೊದಲ ಸ್ಥಾನ ಪಡೆದಿರುವುದು ಕಗ್ಗತ್ತಲಲ್ಲಿ ಮಿಂಚಿನ ಹೊಳಹು ಕಂಡಂತಾಗಿದೆ.

ಕೇಂದ್ರ ಸರ್ಕಾರದ ಅಧೀನದಲ್ಲಿ ರುವ ‘ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ’ (ಸಿಬಿಎಸ್ಇ) ಕಳೆದ ಮೇ 22ರಂದು ಹೊಸ ಆದೇಶವನ್ನು ಹೊರಡಿಸಿದೆ. ಅದರ ಪ್ರಕಾರ, ಈ ಶೈಕ್ಷಣಿಕ ವರ್ಷದಿಂದಲೇ ‘ಸಿಬಿಎಸ್ಇ’ ಶಾಲೆಗಳಲ್ಲಿ ಮಗುವಿನ ಮೂರರಿಂದ ಎಂಟು ವರ್ಷದವರೆಗಿನ (ಪೂರ್ವ ಪ್ರಾಥಮಿಕದಿಂದ ಎರಡನೇ ತರಗತಿವರೆಗಿನ) ಶಿಕ್ಷಣದಲ್ಲಿ ಕಲಿಕೆಯ ಮಾಧ್ಯಮ ಮನೆಯ ಭಾಷೆ, ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯೇ ಆಗಿರಬೇಕು. ಕಲಿಕೆಯ ಮೂಲಕ ಗ್ರಹಿಕೆ, ಶಬ್ದ ಸಂಪತ್ತಿನ ಗಳಿಕೆ, ಅಂಕಿಗಳ ಪರಿಜ್ಞಾನ, ಇತ್ಯಾದಿ ಅಂಶಗಳೇ ಈ ಆದೇಶದ ಹಿಂದಿರುವ ಉದ್ದೇಶ. ಮಗುವಿನ ಸಂಪರ್ಕಕ್ಕೆ ಮೊದಲು ಬರುವ ಭಾಷೆಯೇ ಶಿಕ್ಷಣ ಮಾಧ್ಯಮವಾಗಬೇಕು. ಅಂದರೆ, ಅದು ಮಾತೃಭಾಷೆ ಆಗಿರುತ್ತದೆ. ಈ ನೀತಿ, ಮಗು ಇನ್ನೊಂದು ಭಾಷೆಯಲ್ಲಿ ಸಾಕ್ಷರತೆ ಗಳಿಸುವವರೆಗೆ ಮುಂದುವರಿಯಬೇಕು ಎಂದು ಆದೇಶ ಪ್ರತಿಪಾದಿಸುತ್ತದೆ. ಆದರೆ, ಭಾರತದಂತಹ ಬಹುಭಾಷಾ ದೇಶದಲ್ಲಿ ಒಂದು ಶಾಲೆಯಲ್ಲಿ ಹಲವು ಮಾತೃಭಾಷೆಗಳಲ್ಲೂ ಕಲಿಕಾ ಮಾಧ್ಯಮ ಒದಗಿಸುವುದು ಸಾಧ್ಯವಾಗದೆ ಹೋಗಬಹುದು. ಆಗ ಮಗುವಿಗೆ ಮಾತೃಭಾಷೆ ನಂತರ ಹೆಚ್ಚು ಪರಿಚಿತವಾಗುವ ಪ್ರಾದೇಶಿಕ ಭಾಷೆ ಅಂದರೆ ರಾಜ್ಯಭಾಷೆ ಬದಲಿ ಶಿಕ್ಷಣ ಮಾಧ್ಯಮ ಆಗಬೇಕು ಎಂದು ‘ಸಿಬಿಎಸ್ಇ’ ಹೇಳುತ್ತದೆ.

ಭಾರತದಲ್ಲಿ ಇಂಗ್ಲಿಷ್ ಯಾರ ಮಾತೃಭಾಷೆಯೂ ಅಲ್ಲ, ರಾಜ್ಯ ಭಾಷೆಯೂ ಅಲ್ಲ. ಕೆಲವರು ತಮ್ಮ ಮಾತೃಭಾಷೆ ಇಂಗ್ಲಿಷ್ ಎಂದು ಸುಪ್ರೀಂ ಕೋರ್ಟ್ನಲ್ಲಿ ನಾಲ್ಕೈದು ದಶಕಗಳ ಹಿಂದೆ ದಾವೆ ಹೂಡಿದಾಗ, ಆಂಗ್ಲೋ ಇಂಡಿಯನ್ನರ ಹೊರತು ಬೇರೆ ಯಾರಿಗೂ ಇಂಗ್ಲಿಷ್ ಮಾತೃಭಾಷೆಯಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ. ಸಿಬಿಎಸ್ಇ ಆದೇಶಕ್ಕೆ ಖಾಸಗಿ ಸಂಸ್ಥೆಗಳಿಂದ ಟೀಕೆಗಳು ವ್ಯಕ್ತವಾಗಿವೆ. ಬಹುಭಾಷಾ ಪರಿಸರದ ನಗರದ ಶಾಲೆಯೊಂದರಲ್ಲಿ ಬಹು ಭಾಷಾ ಮಾಧ್ಯಮದ ತರಗತಿಗಳನ್ನು ನಡೆಸಲು ಸಾಧ್ಯವೇ ಎನ್ನುವುದು ಅವರ ಪ್ರಶ್ನೆ. ತೊಡಕಿನ ನಿವಾರಣೆಗೆ ಇಂಗ್ಲಿಷ್ ಮಾಧ್ಯಮವೇ ಪರಿಹಾರ ಎಂಬುದು ಖಾಸಗಿ ಸಂಸ್ಥೆಗಳ ವಾದ. ಆದರೆ, ಅಜೀಂ ಪ್ರೇಮ್ಜಿ ಪ್ರತಿಷ್ಠಾನದ ಸಿಇಒ ಅನುರಾಗ್ ಬೆಹರ್, ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ ನಿರ್ದೇಶನವನ್ನು ಟೀಕಿಸುವವರು ಅದನ್ನು ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಬಹುಭಾಷೆಗಳ ಸಂಕೀರ್ಣತೆಯ ಹೆಸರಿನಲ್ಲಿ ಮಾತೃಭಾಷೆಯ ಬದಲಿಗೆ ಇಂಗ್ಲಿಷ್ ಮಾಧ್ಯಮ ಕಲ್ಪಿಸುವುದು ಅವೈಜ್ಞಾನಿಕ ಎನ್ನುವುದು ಅವರ ಅಭಿಪ್ರಾಯ.

ಶಾಲೆ ಇರುವ ರಾಜ್ಯದ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಜಾರಿಗೆ ತರುವುದು ವ್ಯಾವಹಾರಿಕವೂ ಹೌದು, ಶೈಕ್ಷಣಿಕ ಪರಿಹಾರವೂ ಹೌದು. ಮಗುವಿನ ಮಾತೃಭಾಷೆ ಯಾವುದೇ ಇದ್ದರೂ, ಇಂಗ್ಲಿಷ್ಗಿಂತಲೂ ರಾಜ್ಯಭಾಷೆ ಹೆಚ್ಚು ಹತ್ತಿರವಾದ ಭಾಷೆಯಾಗಿರುತ್ತದೆ ಎನ್ನುವುದು ಅನುರಾಗ್ ಅವರ ಪ್ರತಿಪಾದನೆ. ಮಾತೃಭಾಷೆಯ ಬದಲಿಗೆ ಮನೆಯಲ್ಲೂ ಇಂಗ್ಲಿಷ್ನಲ್ಲಿ ಮಾತನಾಡುವವರು ದೇಶದ ಜನಸಂಖ್ಯೆಯಲ್ಲಿ ಹೆಚ್ಚೆಂದರೆ ಶೇ 2ರಷ್ಟು ಇರಬಹುದು. ಉಳಿದ ಶೇ 98ರಷ್ಟು ಜನರಿಗೆ, ಇಂಗ್ಲಿಷ್ ಪರಕೀಯ ಭಾಷೆಯಾಗಿರುತ್ತದೆ. ಆದ್ದರಿಂದ, ಸಿಬಿಎಸ್ಇ ನಿರ್ದೇಶನವು ನಮ್ಮ ಬಹುಭಾಷಾ ವಾಸ್ತವದಲ್ಲಿ, ಬಾಯಿಪಾಠ ಮಾಡಿ ಕಲಿಯುವ ವಿಧಾನಕ್ಕಿಂತ, ಪರಿಣಾಮಕಾರಿ ಕಲಿಕೆ ಅಥವಾ ಸಾಕ್ಷರತೆಗೆ ಶೈಕ್ಷಣಿಕವಾಗಿ ಅತ್ಯುತ್ತಮ ವಿಧಾನವಾಗಿದೆ.

ತಾಯ್ನುಡಿ ಮಾಧ್ಯಮದ ಆದೇಶವನ್ನು ಹೊರಡಿಸುವ ಮೊದಲು ‘ಸಿಬಿಎಸ್ಇ’ ಮಾಡಿಕೊಂಡಿರುವ ಪೂರ್ವ ಸಿದ್ಧತೆ ಮೆಚ್ಚುವಂತಹದ್ದು. ಹಿಂದಿ ಹಾಗೂ ಉರ್ದುವಿನಲ್ಲಿ ಆದೇಶದ ಅನುಷ್ಠಾನಕ್ಕೆ ಬೇಕಾಗುವ ಪಠ್ಯಪುಸ್ತಕಗಳನ್ನು ಮುದ್ರಿಸಿದೆ. ಆ ಪುಸ್ತಕಗಳನ್ನು 22 ಭಾರತೀಯ ಭಾಷೆಗಳಲ್ಲಿ ಡಿಜಿಟಲ್ ರೂಪದಲ್ಲಿ ಒದಗಿಸಿದೆ. ಅಷ್ಟೇ ಅಲ್ಲ, ಕೇಂದ್ರೀಯ ಶಾಲೆಗಳಲ್ಲಿ ವಿವಿಧ ಭಾಷಾ ವಿದ್ಯಾರ್ಥಿಗಳ ಗಣತಿ ಮಾಡಿ ಮುಂದಿನ ಕ್ರಮ ಕೈಗೊಳ್ಳಲು ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.