ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಯ್ಡು ನಹೀ... ಗೌಡ್ತಿ ಬೋಲೊ’..

(ಕನ್ವರ್‌ಲಾಲ್‌ನ ಕನವರಿಕೆ)
Last Updated 5 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಓಡುನಡಿಗೆಯಲ್ಲಿ ಬಂದ ಪ್ರಭ್ಯಾ ಕಾಲ್ಮರಿ ಬಿಸಾಕಿ ಒಳಗ್‌ ಬಂದವ್ನ, ‘ಏಯ್‌ ಮಳ್ಳ, ಪೇಪರ್ ಓದುದನ್ನ ಬಿಟ್ಟು ಲಗೂನ ಟಿವಿ ಚಾಲು ಮಾಡು. ‘ನಮೋ’ ಸಾಹೇಬರು ಮಹತ್ವದ ಘೋಷಣೆ ಮಾಡಾವ್ರ ಅದಾರ್‌ ನೀ ಮೊದ್ಲ ಟಿವಿ ಹಚ್ಚು’ ಅಂತ ಜೋರ್‌ ಮಾಡ್ದಾ. ‘ಇವತ್ತೂ ನೋಟ್‌ ರದ್‌ ಆಗ್ತಾವೇನ್‌’ ಅಂದ ಗಾಬರಿ ದನ್ಯಾಗ. ‘ಯಾಕ್‌ ಎಲೆಕ್ಷನ್‌ದಾಗ್ ಹಂಚಾಕಂತ ಪಕ್ಷದೋರು ನಿನ್ನ ಮನ್ಯಾಗ್‌ ದೊಡ್ಡ ಗಂಟ್‌ ಇಟ್ಟಾರೇನ್‌’ ಎಂದೆ. ನನ್ನ ಪ್ರಶ್ನೆಗೆ ಉತ್ತರಿಸದೆ ಉಗುಳು ನುಂಗಿದ.

‘ಪ್ರಧಾನಿ ಅವರಿಂದ ದೇಶ ಉದ್ದೇಶಿಸಿ ಮಹತ್ವದ ಭಾಷಣ, ಕೆಲವೇ ಕ್ಷಣಗಳಲ್ಲಿ ನಿರೀಕ್ಷಿಸಿ’ ಅನ್ನೋ ಬ್ರೇಕಿಂಗ್‌ ನ್ಯೂಸ್‌ ಮೂರ್ಖರ ಪೆಟ್ಟಿಗೆಯಲ್ಲಿ ಬರಾಕತ್ತಿತ್ತು. ಪೋನೆ ಬಾರಾ ಸರ್ದ್‌ ಹೋತು, ಸವ್ವಾ ಬಾರಾ ಹೊಡೀತು. ಕೊನೆಗೂ 12.24ರ ಹೊತ್ತಿಗೆ ‘ನಮೋ’ ಟಿವ್ಯಾಗ್‌ ಪ್ರತ್ಯಕ್ಷರಾದರು. ‘ಮೇರೆ ಪ್ಯಾರೆ ದೇಶವಾಸಿಯೋ ನಮಸ್ಕಾರ್‌, ..ಹಮಾರೆ ವೈಜ್ಞಾನಿಕೋನೆ... ಅಂತ ಸುರು ಹಚ್ಕೊಂಡ ಕೂಡಲೇ, ‘ಭಾಯಿಯೊ ಔರ್ ಬೆಹೆನೊ’ ಶಬ್ದ ಕಿವಿಗೆ ಬೀಳದಿರುವುದು ನೋಡಿ ನಮ್ಮಿಬ್ಬರಿಗೂ ದಂಗ್‌ ಬಡಿದಂಗ್ಹಾತು. ‘ಇದೆನೋ ಬ್ಯಾರೆ ಸುದ್ದಿ ಇದ್ಹಂಗ್‌ ಐತಿಲೇ. ಭಾಳ್‌ ಚಿಂತಿನೂ ಮಾಡ್‌ಬ್ಯಾಡ್‌. ಖುಷಿಯಿಂದ ಕುಣ್ಯಾಕೂ ಹೋಗಬೇಡ’ ಅಂತ ಸಮಾಧಾನಿಸಿದೆ.

‘ನಮೋ ಹೇಳಿದ್ದು ದೊಡ್ಡ ಸುದ್ದಿನ ಖರೇಲೆ. ಆದ್ರ, ವಿಜ್ಞಾನಿಗಳ ಸಾಧನೆಯನ್ನ ತಂದs ಸಾಧನೆ ಥರಾ ಈ ಚೌಕೀದಾರ್‌ ಹೇಳ್ಕೊಂತಾನಲ್ಲ. ಇಂವಾ ನಮ್ಮ ಪ್ರಧಾನಿಯೋ ಅಥವಾ ಪ್ರಚಾರ ಮಂತ್ರಿಯೋ ಗೊತ್ತಾಗ್ದೆ ತಲಿ ಚಚ್ಕೊಳ್ಳಾಂಗ್‌ ಆಗೇದ್‌ ನೋಡ್‌’ ಅಂದೆ. ಪ್ರಭ್ಯಾ ನನ್ನ ಮಾತಿಗೆ ಲಕ್ಷ್ಯ ಕೊಡದೇ ಕಣ್‌– ಕಿವಿ ಅಗಲಿಸಿಕೊಂಡು, ಬಾಯಿ ತೆರ್ಕೊಂಡು ಟಿವಿ ನೋಡ್ತಾನೆ ಇದ್ದ.

ನಮೋ ಭಾಷಣದ ಗುಂಗಿನಿಂದ ಅವನನ್ನ ಹೊರಗ್‌ ತರಾಕ್‌, ‘ಅಲ್ಲಲೇ ತಮಿಳುನಾಡಿನ ಭಟ್ಟಂಗಿ ಸಚಿವನೊಬ್ಬ ‘ನಮೋ’, ಇಡೀ ದೇಶಕ್ಕೆಲ್ಲ ಡ್ಯಾಡಿ ಅಂತ ಹೊಗಳಿದ. ಯೋಗಿಯಂತೂ ‘ಭಾರತೀಯ ಸೇನೆ ಮೋದಿ ಸೇನೆ’ ಅಂತ ಕೊಂಡಾಡಿದ. ನಾಳೆ ಇನ್ನೊಬ್ಬ ಮೂರ್ಖ, ದೇಶದ ಪ್ರಜೆಗಳೆಲ್ಲ ಮೋದಿ ಮಕ್ಕಳು ಅಂತಾನೂ ಹೇಳಬಹ್ದು ಬಿಡು. ಆಗ ವಂಶಾಡಳಿತದ ಪ್ರಶ್ನೇನ ಏಳೂದಿಲ್ಲ ನೋಡ್‌’ ಎಂದೆ.

ನನ್ನ ಮಾತಿನಿಂದ ಕಕ್ಕಾಬಿಕ್ಕಿಯಾದ ಪ್ರಭ್ಯಾ, ‘ಗೌಡರ ಕುಟುಂಬ ರಾಜಕಾರಣದ ಬಗ್ಗೆ ಎಲ್ಲಾ ಕಡೆ ಜನಾ ಛೀ, ಥೂ ಅಂತ ಅನ್ನಾಕತ್ತಾರಲ್ಲ’ ಅಂತ ಮಾತ್ ತಿರುಗಿಸಿದ. ‘ಕಾಂಗ್ರೆಸ್‌ನವರ‍್ದು ವಂಶಾಡಳಿತ, ಜೆಡಿಎಸ್‌– ಗೌಡ್ರ ಕುಟುಂಬದ ಪಕ್ಷ ಅಂತ ಬಾಯಿ ಬಡ್ಕೊಳ್ಳೋರು, ಲಾಲು, ಮುಲಾಯಂ ಕುಟುಂಬದ ವಿರುದ್ಧ ಏನೂ ಮಾತಾಡಲ್ಲ. ತೇಜಸ್ವಿನಿಗೆ ಬಿಜೆಪಿ ಟಿಕೆಟ್‌‌ತಪ್ಪಿದ್ದಕ್ಕ ಕೆಲವ್ರು ಇನ್ನೂ ಮುನಿಸಿಕೊಂಡಾರ್. ರೋಡ್‌ ಶೋದಾಗ ಬಾಯಿ ಬಿಟ್ರ ಬಣ್ಣಗೇಡ್‌ ಆಗ್ತದಂತ ಚಾಣಕ್ಯ ತುಟಿ ಪಿಟಕ್‌ ಅನ್ನಲಿಲ್ಲ. ಮಹಾರಾಷ್ಟ್ರದಾಗ ಕಾಂಗ್ರೆಸ್‌ ಮುಖಂಡರ ಮಕ್ಕಳನ್ನು ಪಕ್ಷಾಂತರ ಮಾಡಿಸಿ ಬಿಜೆಪಿ ಟಿಕೆಟ್‌ ಕೊಟ್ಟಾರಲ್ಲ. ಅದು ಯಾವ ಸೀಮೆ ವಂಶಾಡಳಿತಪಾ’ ಅಂತ ದಬಾಯಿಸಿದೆ.

‘ಅವರವರ ಕುಟುಂಬ ಉದ್ಧಾರ ಆಗೋದ್ರಿಂದ್ರ ನಮಗೇನೂ ಬರುದಿಲ್ಲೇಳ್‌. ಅದೆಲ್ಲ ಒತ್ತಟ್ಟಿಗೆ ಇರ‍್ಲಿ, ಎಲೆಕ್ಷನ್‌ ಮುಗಿದ್‌ ಮ್ಯಾಲೆ ಸಮ್ಮಿಶ್ರ ಸರ್ಕಾರದ ಹಣೆಬರಹ ಏನಾಗ್ತೈತಿ. ನಿಂಗೇನರ ಹೊಸಾ ಕನಸ್‌ ಬಿದ್ದಾವೇನ್‌ ಹೇಳ್‌’ ಅಂದ. ‘ತಾರಾ ಪ್ರಚಾರಕರ ಪಟ್ಟಿಯಲ್ಲಿ ಇಲ್ಲದ, ಬೆಂಕಿ ಉಗುಳುವ ಎಂಪಿ ಮಾತ್‌ ಕೇಳಿ ಇಲ್ಲಲೆ. ಸಿ.ಎಂ ಹುದ್ದೆ ಕನಸು ನನಗಿಲ್ಲ, ಕನಸಿನಲ್ಲಿ ನಂಬಿಕೆಯೂ ಇಲ್ಲಂತ ಹೇಳ್ಯಾನ್‌. ಆದ್ರ, ಆಡಿಯೋರಪ್ಪ, ಈಶ್ವರಪ್ಪಗೆ ಸರ್ಕಾರ ಬಿದ್ದ ಹೋಗೊ ಕನಸುಗಳು ದಿನಾಲೂ ಬೀಳಾಕತ್ತಾವ್‌’.

‘ಈಶ್ವರಪ್ಪನೋರ್‌ ನೆ(ನ)ಗೆದು ಬೀಳೋ ಭಾಷ್ಣಾನೂ ಕೇಳಿ ಇಲ್ಲ. ಸರ್ಕಾರ ನೆಗೆದು ಬಿದ್‌ ಹೋಗ್ತೈತಿ ಅಂತ ಹೇಳೋ ಭರದಾಗ್‌ ಕುಮಾರಣ್ಣನ ಬಗ್ಗೆನೂ ಕೆಟ್ಟದಾಗಿ ಮಾತ್ಯಾಡಾರ್‌. ಆಮ್ಯಾಲೆ ನಾ ಹಂಗ ಹೇಳೇ ಇಲ್ಲಂತ ಹೆಂಡಿ ಸಾರ್‌ಸ್ಯಾರ್‌. ಅವರೊಬ್ಬರದ್ದೇ ಹರಕು ಬಾಯಿ ಅಲ್ಲಲೇ. ಎಲ್ಲಾ ಪಕ್ಷದಾಗೂ ಇಂಥಾವ್ರು ಅದಾರ್‌. ಮನಿ ಸೊಸಿ ಮಂಡ್ಯದ ಗೌಡ್ತಿ ಅಲ್ಲ ಅನ್ನೋ ಅಪಪ್ರಚಾರ ಮಂಡ್ಯದ ಗೌಡ್ರಿಗೆ ಬೇಕಾಗಿತ್ತಾ’ ಎಂದೆ.

‘ನಾನಿದ್ದಾಗ ನಾಯಿ ಹಂಗ್‌ ಬಾಲ ಅಲ್ಲಾಡ್ಸಿಕೊಂಡು ನನ್ನ ಮನಿ ಸುತ್ತ ಠಳಾಯಿಸೋರು, ಈಗ ಎಲ್ಲಾ ಸೇರ್ಕೊಂಡು ಬೊಗಳ್ತಾ ಇದೀರಾ. ಕುತ್ತೇ, ಯಾ ಥೂ, ನಾಯ್ಡು ನಹೀ ಮಂಡ್ಯದ ಗೌಡ್ತಿ ಬೋಲೊ’ ಅಂತ ಕನ್ವರ್‌ಲಾಲ್‌ ಸ್ವರ್ಗದಲ್ಲೇ ಹ್ಞೂಂಕರಿಸುತ್ತಿರಬೇಕು’ ನೋಡ್‌ ಎಂದೆ.

‘ಕನ್ವರ್‌ಲಾಲ್‌ ಆಣೆಗೂ ನೀ ಹೇಳಿದ್ದು ಖರೆ ಐತಿ’ ಅಂತ ಹೇಳಿದ ಪ್ರಭ್ಯಾ, ಮನ್ಯಾಗಿನ ನೋಟು ಭದ್ರ ಇರುವ ಖುಷ್ಯಾಗ್‌ ಎದ್ದ ಹೊಂಟ. ಅದೇ ಹೊತ್ತಿಗೆ ರೇಡಿಯೊದಾಗ್ ಕೇಳಿಬಂದ ‘...ನೇಗಿಲ ಹಿಡಿದಾ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ...’ ಹಾಡು ನನ್ನ ಪಾಲಿಗೆ, ‘ಕಹಳೆ ಊದುತ ಮಂಡ್ಯದಾಗ ಮತ ಬೇಟೆ ಮಾಡೋ ದರ್ಶನ್‌, ಯಶ್ ಭರಾಟೆ ನೋಡಲ್ಲಿ’ ಅಂತ ಕೇಳಿದಂತಾಯಿತು. ‘ನಿಖಿಲ್‌, ಎಲ್ಲಿದ್ದೀಯಪ್ಪಾ. ಹಸ್ತ, ತೆನೆಹೊತ್ತ ಮಹಿಳೆಯನ್ನ ಜತೆಯಾಗಿ ಕರ್ಕೊಂಡ್‌ ಹೋಗದಿದ್ರ ಲೋಕಸಭಾದಾಗ್‌ ನೀ ಇರುದಿಲ್ಲಪ್ಪ, ಸಿನಿಮಾನ ಕಾಯಂ ಯಪ್ಪಾ’ ಅಂತ ಗೊಣಗಿಕೊಳ್ಳುತ್ತ ಪೇಪರ್‌ ತುಂಬ್ಕೊಂಡಿದ್ದ ಮಂಡ್ಯದ ಸುದ್ದಿಗಳನ್ನ ಓದತೊಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT