ಶುಕ್ರವಾರ, ಸೆಪ್ಟೆಂಬರ್ 17, 2021
22 °C
ಎನ್‌ಸಿಇಆರ್‌ಟಿ ಪಠ್ಯಕ್ರಮದ ಚೌಕಟ್ಟಿನಲ್ಲಿ ಆಯಾ ರಾಜ್ಯದ ಭಾಷೆಯಲ್ಲಿ ಆಯಾ ರಾಜ್ಯದ ವಿಜ್ಞಾನ ಲೇಖಕರೇ ಪಠ್ಯಪುಸ್ತಕಗಳನ್ನು ರಚಿಸಿಕೊಳ್ಳುವುದು ಹೆಚ್ಚು ತಾರ್ಕಿಕ

ಸಂಗತ: ಕನ್ನಡ ಮಾಧ್ಯಮವೇ ಕಬ್ಬಿಣದ ಕಡಲೆ!

ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ Updated:

ಅಕ್ಷರ ಗಾತ್ರ : | |

Prajavani

ಕನ್ನಡದಲ್ಲಿ ತಂದಿರುವ ಪಿಯು ವಿಜ್ಞಾನ ಪಠ್ಯಪುಸ್ತಕಗಳ ಗುಣಮಟ್ಟಕ್ಕೆ ಸಂಬಂಧಿಸಿದ ಟಿ.ಆರ್.ಅನಂತರಾಮು ಅವರ ಲೇಖನ (ಪ್ರ.ವಾ., ಸೆ. 12) ಹಲವು ಮೂಲ ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿದೆ. ಲೇಖನದ ಆರಂಭದಲ್ಲಿಯೇ ಅವರು, ‘ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವಿಜ್ಞಾನವನ್ನು ಓದಿ ಪಿಯುಗೆ ಬರುತ್ತಲೇ ಇಂಗ್ಲಿಷಿನಲ್ಲಿ ಓದಬೇಕಾದಾಗ ಸಹಜವಾಗಿಯೇ ಕಷ್ಟವಾಗುತ್ತದೆ’ ಎಂದಿದ್ದಾರೆ.

ಅಂದರೆ, ಕನ್ನಡ ಮಾಧ್ಯಮದಿಂದ ಇಂಗ್ಲಿಷ್ ಮಾಧ್ಯಮಕ್ಕೆ ಯಾವುದಾದರೂ ಒಂದು ಹಂತದಲ್ಲಿ ಶಿಫ್ಟ್‌ ಆಗಬೇಕಲ್ಲ. ಈಗ ಪಿಯು ವಿಜ್ಞಾನವನ್ನು ಕನ್ನಡದಲ್ಲಿ ಓದಿರುವ ವಿದ್ಯಾರ್ಥಿಗಳು ನಂತರ ಸ್ನಾತಕ ಪದವಿ, ಬಿ.ಇ., ಎಂಬಿಬಿಎಸ್‌ನಂತಹ ವೃತ್ತಿಪರ ಕೋರ್ಸುಗಳನ್ನು ಯಾವ ಭಾಷೆಯಲ್ಲಿ ಓದಬೇಕು? ಎರಡು ವರ್ಷದೊಳಗೆ ಅವನ್ನೂ ಕನ್ನಡದಲ್ಲಿ ಓದುವಂತೆ ಮಾಡುತ್ತಾರೆಯೇ? ಇಲ್ಲವಾದರೆ ಯಾವುದೋ ಒಂದು ಹಂತದವರೆಗಷ್ಟೇ ಕನ್ನಡ ಮಾಧ್ಯಮದಲ್ಲಿ ಓದಬೇಕು. ಹೀಗಿರುವಾಗ, ಇಂಗ್ಲಿಷ್ ಮಾಧ್ಯಮಕ್ಕೆ ಶಿಫ್ಟ್ ಆಗಲು ಪಿಯು ಮಟ್ಟ ಹೆಚ್ಚು ಸೂಕ್ತ. ಎರಡು ವರ್ಷ ಸಮಯವಿರುತ್ತದೆ. ಮೊದಲ ವರ್ಷ ವಿದ್ಯಾರ್ಥಿಗಳು ವಿಷಯದ ಜೊತೆ ಇಂಗ್ಲಿಷ್ ಭಾಷೆ ಬಳಕೆಗೂ ಒಗ್ಗಿಕೊಂಡಿರುತ್ತಾರೆ.

ಹೀಗೆ ನಿರ್ಧಾರ ಮಾಡಿದ್ದೇ ಆದರೆ, ಪಿಯುವನ್ನು ಇಂಗ್ಲಿಷಿನಲ್ಲಿಯೇ ನಡೆಸಬೇಕು. ಆದರೆ, ಎಸ್ಎಸ್ಎಲ್‌ಸಿ ಕೊನೆಯಲ್ಲಿ ಅಥವಾ ಪಿಯು ಆರಂಭದಲ್ಲಿ ಒಂದು ಬ್ರಿಜ್ ಕೋರ್ಸ್ ಎಂದಿರಬೇಕು. ಇದು, ಬರೀ ಕನ್ನಡ ಮಾಧ್ಯಮದಲ್ಲಿ ಬಳಕೆಯಾದ ತಾಂತ್ರಿಕ ಪದಗಳು ಮತ್ತು ಕೆಲವು ವಿಶಿಷ್ಟ ವಾಕ್ಯರಚನೆಗಳನ್ನು ಇಂಗ್ಲಿಷಿನಲ್ಲಿ ಕಲಿತು ಗಟ್ಟಿ ಮಾಡಿಕೊಳ್ಳುವ ಉದ್ದೇಶವನ್ನು ಹೊಂದಿರಬೇಕು. ಪಿಯು ಮೊದಲ ವರ್ಷದಲ್ಲಿ ಈ ಮಾಧ್ಯಮ ಬದಲಾವಣೆಯ ಸಮಸ್ಯೆಗಳ ಕುರಿತು ಗಮನಹರಿಸುವ ಪಠ್ಯಕ್ರಮ, ಚಟುವಟಿಕೆ ಇರಬೇಕು. ಆಗ ಎರಡನೆಯ ಪಿಯು ಹೊತ್ತಿಗೆ ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮದ ಮೂಲಕ ಕಲಿಯುವುದನ್ನು ಕಲಿತಿರುತ್ತಾರೆ.

ಒಂದು ವಿಪರ್ಯಾಸ ನೋಡಿ. ಈಗಂತೂ ಇಂಗ್ಲಿಷನ್ನು ಒಂದು ಭಾಷೆಯಾಗಿ ಒಂದನೇ ತರಗತಿಯಿಂದಲೇ ಕಲಿಸುತ್ತಾರೆ. ಅಂದರೆ ಎಸ್ಎಸ್ಎಲ್‌ಸಿ ಮುಗಿಯುವವರೆಗೆ ಸುಮಾರು 2,000 ಗಂಟೆಗಳನ್ನು ಇಂಗ್ಲಿಷ್ ಭಾಷಾ ಬೋಧನೆಗೆ ಕಳೆದಿರುತ್ತೇವೆ. ಆದರೂ ಇಂಗ್ಲಿಷ್ ಭಾಷೆ ಕಲಿಸಿದ್ದು ನಿರರ್ಥಕ ಎನಿಸುವಂತೆ ಇರುತ್ತದೆ. ಇಂಗ್ಲಿಷ್ ಪಠ್ಯಕ್ರಮ, ಪಾಠಕ್ರಮವು ಮುಂದಿನ ಬದುಕಿನಲ್ಲಿ ವ್ಯವಹಾರವನ್ನು ನಡೆಸಲು ಅಥವಾ ಉನ್ನತ ವ್ಯಾಸಂಗದಲ್ಲಿ ವಿಷಯಗಳನ್ನು ಇಂಗ್ಲಿಷಿನಲ್ಲಿ ಕಲಿಯಲು ಸಾಧ್ಯವಾಗುವಂತೆ ಕಲಿಸಿಕೊಡಬೇಕು. ಅದನ್ನು ಮಾಡದೆ ಪಿಯುವನ್ನು ಇಂಗ್ಲಿಷಿನಲ್ಲಿ ಕಲಿಯಲು ಆಗುವುದಿಲ್ಲ, ಕನ್ನಡದಲ್ಲಿ ಕಲಿಸೋಣ ಎನ್ನುತ್ತಾರೆ.

ವಿಜ್ಞಾನ, ಗಣಿತ, ಸಮಾಜವಿಜ್ಞಾನದಂತಹ ವಿಷಯಗಳನ್ನು ಕನ್ನಡದಲ್ಲಿ ಓದುವ, ಬರೆಯುವ ಸಾಮರ್ಥ್ಯವಾದರೂ ವಿದ್ಯಾರ್ಥಿಗಳಿಗೆ ಇರುತ್ತದೆಯೇ? ಕೌಶಲಗಳ ದೃಷ್ಟಿಯಿಂದ ಕನ್ನಡವನ್ನೂ ಅವರು ಪ್ರಯೋಜನಕಾರಿಯಾಗಿ ಕಲಿತಿರುವುದಿಲ್ಲ. ಏಕೆಂದರೆ ಕನ್ನಡ ಪಠ್ಯಕ್ರಮ ಮತ್ತು ಪಾಠಕ್ರಮವೂ ಕೌಶಲಗಳನ್ನು ಕಲಿಸುವುದಕ್ಕಿಂತ ಹೆಚ್ಚಾಗಿ ಸಾಹಿತ್ಯ, ಪರಂಪರೆ, ವ್ಯಾಕರಣ ಇತ್ಯಾದಿ ಕಲಿಸುವ ಉದ್ದೇಶವನ್ನು ಹೊಂದಿರುತ್ತವೆ.

ಪಿಯುಗಾಗಿ ಎನ್‌ಸಿಇಆರ್‌ಟಿ ರಚಿಸುವ ವಿಜ್ಞಾನ ಪಠ್ಯಪುಸ್ತಕಗಳನ್ನು ನಾವು ಕನ್ನಡಕ್ಕೆ ಅನುವಾದಿಸಿಕೊಳ್ಳಬೇಕಂತೆ. ವಿಷಯ ಮತ್ತು ಕನ್ನಡದಲ್ಲಿ ಪರಿಣತಿ ಇದ್ದರೆ ಸ್ವತಂತ್ರವಾಗಿ ಕನ್ನಡದಲ್ಲಿಯೇ ಪಠ್ಯಪುಸ್ತಕಗಳನ್ನು ಬರೆಯುವುದು ಒಳ್ಳೆಯದು. ಇಂಗ್ಲಿಷಿನಲ್ಲಿ ಬರೆದ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಲು ವಿಷಯಜ್ಞಾನ ಆಳವಾಗಿ ಇರಬೇಕು. ಕನ್ನಡ ಭಾಷೆಯ ಮೇಲೆ ಸಮರ್ಥವಾದ ಹಿಡಿತವಿರಬೇಕು, ಅನುವಾದದ ಸಾಮರ್ಥ್ಯವೂ ಇರಬೇಕು. ಎನ್‌ಸಿಇಆರ್‌ಟಿ ಒಟ್ಟಾರೆ ಪಠ್ಯಕ್ರಮವನ್ನು ರೂಪಿಸಿ, ಅದರ ಚೌಕಟ್ಟಿನಲ್ಲಿ ಆಯಾ ರಾಜ್ಯದ ಭಾಷೆಯಲ್ಲಿ ಆಯಾ ರಾಜ್ಯದ ವಿಜ್ಞಾನ ಲೇಖಕರೇ ಪಠ್ಯಪುಸ್ತಕಗಳನ್ನು ರಚಿಸಿಕೊಳ್ಳುವುದು ಹೆಚ್ಚು ತಾರ್ಕಿಕ.

ಪಠ್ಯಪುಸ್ತಕಗಳನ್ನು ರಚಿಸುವಾಗ ಪಾರಿಭಾಷಿಕ ಪದಗಳ ಕುರಿತು ವಹಿಸಬೇಕಾದ ಕ್ರಮಗಳು ಈಗ ಕನ್ನಡದ ಸನ್ನಿವೇಶದಲ್ಲಿ ಹೊಸವೇನಲ್ಲ. ಆದರೆ, ಎಸ್ಎಸ್ಎಲ್‌ಸಿವರೆಗೆ ಒಂದೊಂದು ತರಗತಿಯ ವಿಷಯ ಪುಸ್ತಕಗಳನ್ನು ಬರೆಯುವವರು ಬೇರೆ ಬೇರೆ. ಹೀಗಾಗಿ ಅಲ್ಲಿಯೂ ಕನ್ನಡದಲ್ಲಿ ಪಾರಿಭಾಷಿಕ ಪದಗಳ ಬಳಕೆ ಕುರಿತು ಬೇಕಾದಷ್ಟು ಗೊಂದಲವಿದೆ. ಅಲ್ಲಿಯೂ ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಅನುವಾದಿಸಿ ಬಳಸುವ ಬೌದ್ಧಿಕ ಬಡತನ ನಮ್ಮಲ್ಲಿ ಈಗಾಗಲೇ ಇದೆ.

ಇನ್ನು ಎಸ್‌ಎಸ್ಎಲ್‌ಸಿವರೆಗಿನ ಪಠ್ಯಪುಸ್ತಕಗಳಲ್ಲಿ ಈಗಾಗಲೇ ಬಳಕೆಯಾಗಿರುವ ಪಾರಿಭಾಷಿಕ ಪದಗಳನ್ನು ಪಿಯು ಪಠ್ಯಪುಸ್ತಕಗಳಲ್ಲಿ
ಮುಂದುವರಿಸಬೇಕು. ಹೊಸ ಪದಗಳ ಕುರಿತು ಮಾತ್ರ ಈ ಜಿಜ್ಞಾಸೆ ಉಳಿಯುತ್ತದೆ. ಹೀಗಾಗಿ ಪಾರಿಭಾಷಿಕ ಪದಗಳ ಬಳಕೆಯ ಕುರಿತು ಒಂದು ಮಾದರಿ ನೀತಿಯನ್ನು ಪ್ರೌಢಶಾಲಾ ಹಂತದಲ್ಲಿಯೇ ರೂಪಿಸಬೇಕು. ಇಲ್ಲವಾದರೆ ಎಲ್ಲವೂ ಗೊಂದಲದ ಗೂಡಾಗುತ್ತದೆ. ವಿದ್ಯಾರ್ಥಿಗಳು ಹೇಗೋ ಒಂದು ಇಂಗ್ಲಿಷಿನಲ್ಲಿಯೇ ಓದಿ, ಬರೆದರೆ ಒಳ್ಳೆಯದು ಎಂಬ ನಿರ್ಣಯಕ್ಕೆ ಬರುತ್ತಾರೆ, ಕನ್ನಡ ಮಾಧ್ಯಮವೇ ಕಬ್ಬಿಣದ ಕಡಲೆಯಾಗುತ್ತದೆ. ಹೇಗೂ ಕಂಠಪಾಠ ಮಾಡಿ ಬರೆಯುವುದಲ್ಲವೇ, ಕನ್ನಡವಾದರೇನು, ಇಂಗ್ಲಿಷ್ ಆದರೇನು?! ವೈಜ್ಞಾನಿಕ ವಿಧಾನ ಅನುಸರಿಸಿ, ಜಿಜ್ಞಾಸೆ ಮಾಡಿ ಕಲಿಯುವುದನ್ನು, ಬರೆಯುವುದನ್ನು ನಾವೆಲ್ಲಿ ಕಲಿಸುತ್ತೇವೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು