ಬಂದೀಖಾನೆಯನ್ನು ಸಾಂಸ್ಕೃತಿಕ ಕೇಂದ್ರವಾಗಿಸಿದ ಹಿರಿಮೆ ನೆಹರೂ ಅವರದು. ಅವರ ಅತ್ಯುತ್ತಮ ಕೃತಿಗಳು ರೂಪುಗೊಂಡಿದ್ದು ಜೈಲುವಾಸದ ಅವಧಿಯಲ್ಲೇ.

ಕರ್ನಾಟಕದಲ್ಲಿ ಕಾರಾಗೃಹಗಳನ್ನು ರೆಸಾರ್ಟ್ ಆಗಿಸಲಾಗಿದೆ ಎನ್ನುವ ಚರ್ಚೆಗಳು ನಡೆಯುತ್ತಿವೆ. ಜೈಲು, ರೆಸಾರ್ಟ್ ಆಗುವುದು ಸಮಸ್ಯೆಯೇ. ಆದರೆ, ಸಾಂಸ್ಕೃತಿಕ ಕೇಂದ್ರ ಆಗಬಹುದಲ್ಲ?

ಸ್ವಾತಂತ್ರ್ಯ ಸಂಗ್ರಾಮದ ದಿನಗಳಲ್ಲಿನ ಕೆಲವು ಜೈಲುಗಳು ಸಾಂಸ್ಕೃತಿಕ ಕೇಂದ್ರಗಳ ಸ್ವರೂಪ ಪಡೆದುಕೊಂಡಿದ್ದವು. ಅದಕ್ಕೆ ಅತ್ಯುತ್ತಮ ಉದಾಹರಣೆ, ಜವಾಹರಲಾಲ್ ನೆಹರೂ ಕೈದಿಯಾಗಿದ್ದ ಮಹಾರಾಷ್ಟ್ರದ ಅಹಮದ್ನಗರದ ಕೋಟೆ ಜೈಲು. ನೆಹರೂ ಅವರು ತಾವು ಶಿಕ್ಷೆ ಅನುಭವಿಸುತ್ತಿದ್ದ ಬಂದೀಖಾನೆಯನ್ನೇ ಕ್ರೀಡಾಂಗಣ, ಉಪವನ, ಸಾಂಸ್ಕೃತಿಕ ಕೇಂದ್ರವಾಗಿ ಮಾರ್ಪಾಡು ಮಾಡಿದ್ದರು. ಆ ಬದಲಾವಣೆ ಅವರ ಕ್ರಿಯಾಶೀಲ ವ್ಯಕ್ತಿತ್ವದ ಅಭಿವ್ಯಕ್ತಿಯಂತಿತ್ತು.

1942ರ ‘ಕ್ವಿಟ್ ಇಂಡಿಯಾ’ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ನೆಹರೂ ಅವರನ್ನು ಬಂಧಿಸಿ ಅಹಮದ್ನಗರ ಕೋಟೆ ಜೈಲಿನಲ್ಲಿ ಇರಿಸಲಾಗಿತ್ತು. 1942ರ ಆಗಸ್ಟ್ 10ರಿಂದ 1945ರ ಮಾರ್ಚ್ 28ರವರೆಗೆ ನೆಹರೂ ಕೈದಿಯಾಗಿದ್ದ ಮಾಹಿತಿಯ ಫಲಕವನ್ನು ಜೈಲಿನ ಮುಂಭಾಗದಲ್ಲಿ ಹಾಕಲಾಗಿದೆ. ಅವರು ಬಳಸುತ್ತಿದ್ದ ಕಟ್ಟಿಗೆಯ ಕುರ್ಚಿ, ಮಂಚ, ಟೇಬಲ್, ಬೆತ್ತದ ಸೋಫಾಗಳನ್ನು ಸಂರಕ್ಷಿಸಿ ಇಡಲಾಗಿದೆ. ಅವರು ಉಪವನ ಬೆಳೆಸಲು ಬಳಸಿದ ಕೃಷಿ ಉಪಕರಣಗಳು ಹಾಗೂ ಅವರು ಬರೆದ ಕೃತಿಗಳನ್ನು ಸಂಗ್ರಹಿಸಿ ಇಡಲಾಗಿದೆ.

ನೆಹರೂ ಅವರು ಸಲಿಕೆ, ಗುದ್ದಲಿಗಳನ್ನು ಬಳಸಿ ನೆಲ ಹದ ಮಾಡಿ ಜೈಲು ಆವರಣದಲ್ಲಿ ಕಾಯಿಪಲ್ಲೆ ಬೆಳೆಯುತ್ತಿದ್ದರು. ಪುಣೆಯ ವೋಚ್ ಬೀಜ ಸಂಸ್ಥೆ ಅವರಿಗೆ ಕಾಯಿಪಲ್ಲೆ ಮತ್ತು ಹೂ ಗಿಡಗಳನ್ನು ಬೆಳೆಸಲು ಬೀಜ ಪೂರೈಸುತ್ತಿತ್ತು. ನೆಹರೂ ಖುದ್ದು ನೀರೆರೆದು ಬೆಳೆಸಿದ ಗುಲಾಬಿ ತೋಟವನ್ನು ಉಳಿಸಿಕೊಂಡು ಬರಲಾಗಿದೆ. ಅವರಿಗೆ ಪ್ರಿಯವಾಗಿದ್ದ ಕೆಲವು ಗುಲಾಬಿ ತಳಿಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಕೂಡ ಅಲ್ಲಿ ಸತತವಾಗಿ ನಡೆಯುತ್ತಿದೆ. ಪುಣೆಯಿಂದ ದಾಳಿಂಬೆ ಸಸಿಗಳನ್ನು ತರಿಸಿ ಬೆಳೆಸಿದ್ದರಂತೆ. ಅತ್ಯಂತ ದೊಡ್ಡದಾದ ಮರಕ್ಕೆ ‘ನೆಹರೂ ಮರ’ ಎಂದು ಅಲ್ಲಿದ್ದವರು ಪ್ರೀತಿಯಿಂದ ಕರೆಯುತ್ತಿದ್ದರಂತೆ. ಆ ಮರದ ಟೊಂಗೆಯನ್ನು ಕಸಿ ಮಾಡಿ ದೆಹಲಿಯ ತೀನ್ಮೂರ್ತಿ ಭವನದಲ್ಲಿ ಬೆಳೆಸಲಾಗಿದೆ.

ತಾಯಿಯನ್ನು ಕಳೆದುಕೊಂಡು ದೂರದಲ್ಲಿದ್ದ ತಮ್ಮ ಮಗಳು ಇಂದಿರಾಗೆ, ಜಗತ್ತಿನ ಇತಿಹಾಸದ ವಿಹಂಗಮ ನೋಟವನ್ನು ಪರಿಚಯಿಸುವ ಪತ್ರಗಳನ್ನು ನೆಹರೂ ಜೈಲಿನಲ್ಲಿದ್ದುಕೊಂಡೇ ಬರೆದರು. ಆ ಪತ್ರಗಳು ಪುಸ್ತಕ ರೂಪದಲ್ಲೂ (ಮಗಳಿಗೆ ತಂದೆಯ ಓಲೆಗಳು) ಪ್ರಕಟವಾಗಿವೆ.

‘ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ’ ಕೃತಿಯನ್ನು ನೆಹರೂ 1936ರಲ್ಲಿ ರಚಿಸಿದಾಗಲೂ ಅವರು ಸೆರೆಮನೆಯಲ್ಲಿಯೇ ಇದ್ದರು. ಮಗಳಿಗೆ ಬರೆದ ಪತ್ರಗಳ ರೂಪದಲ್ಲಿರುವ ಈ ಕೃತಿಯಲ್ಲಿನ ಬರಹಗಳು, ವಿಶ್ವ ಇತಿಹಾಸದ ಪ್ರಮುಖ ಸಂಗತಿಗಳಿಗೆ ಸಂಬಂಧಿಸಿದ್ದಾಗಿವೆ. ಅವರ ಬರಹಗಳ ಸೊಬಗು, ವಿಷಯ ಮಂಡನೆಯ ಒಳನೋಟಗಳು ಗಮನಾರ್ಹವಾಗಿವೆ. ಅವರಲ್ಲಿ ಒಬ್ಬ ಶ್ರೇಷ್ಠ ಬರಹಗಾರ ಇದ್ದ ಎಂಬುದನ್ನು ಈ ಕೃತಿ ಸ್ಪಷ್ಟಪಡಿಸುತ್ತದೆ.

ಅಹಮದ್ನಗರದ ಜೈಲಿನಲ್ಲಿ ಕೈದಿಗಳಾಗಿದ್ದ, ಸ್ವಾತಂತ್ರ್ಯ ಸಂಗ್ರಾಮದ ಸಂಗಾತಿಗಳಾದ ವಲ್ಲಭಭಾಯಿ ಪಟೇಲ್, ನರೇಂದ್ರದೇವ್, ಶಂಕರ್ರಾವ್ ದೇವ್, ಮೌಲಾನಾ ಅಬ್ದುಲ್ ಕಲಾಂ, ಜೆ.ಬಿ. ಕೃಪಲಾನಿ, ಹರೆಕೃಷ್ಣ ಮೆಹತಾಬ್, ಪಟ್ಟಾಭಿ ಸೀತಾರಾಮಯ್ಯ, ಅಸಫ್ ಅಲಿ, ಸೈಯದ್ ಮಹ್ಮದ್ ಮತ್ತು ಪಿ.ಸಿ. ಘೋಷ್ ಅವರೊಂದಿಗೆ ನೆಹರೂ ಬ್ಯಾಡ್ಮಿಂಟನ್ ಆಡಿದ ಮೈದಾನ ಗಮನ ಸೆಳೆಯುತ್ತದೆ. ಅದನ್ನು ಈಗಲೂ ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿದೆ.

ಸಾಹಿತ್ಯ ಮತ್ತು ಸಂಗೀತದ ಪ್ರೇಮಿಯಾಗಿದ್ದ ಮುಲ್ಕರಾಂ ಮೆಹ್ತಾ ಎನ್ನುವವರು ಆಗ ಕಾರಾಗೃಹದ ಹಿರಿಯ ಅಧಿಕಾರಿಯಾಗಿದ್ದರು. ಅವರ ಮಗ ನೆಹರೂ ಅವರಿಗೆ ಊಟದ ಡಬ್ಬಿ ಮತ್ತು ಪುಸ್ತಕಗಳನ್ನು ತಂದುಕೊಡುತ್ತಿದ್ದ. ನೆಹರೂ ಅವನಿಂದ ಹಾಡುಗಳನ್ನು ಕೇಳುತ್ತಿದ್ದರು. ಗಾಂಧೀಜಿಗೆ ಪ್ರಿಯವಾದ ಪ್ರಾರ್ಥನಾ ಗೀತೆಗಳನ್ನು ಅವನಿಗೆ ಹೇಳಿ ಕೊಡುತ್ತಿದ್ದರು.

‘ಡಿಸ್ಕವರಿ ಆಫ್ ಇಂಡಿಯಾ’ ಕೃತಿ ರಚನೆಯಾದುದೂ ಅಹಮದ್ನಗರದ ಜೈಲುವಾಸದ ಸಂದರ್ಭದಲ್ಲಿ. ಆ ಕೃತಿಯ ಮೊದಲ ಪುಟದಲ್ಲಿ ಅಹಮದ್ನಗರ ಕೋಟೆಯ ಚರಿತ್ರೆಯನ್ನು ನೆಹರೂ ಬಹು ಸುಂದರವಾಗಿ ದಾಖಲಿಸಿದ್ದಾರೆ. ಚಾಂದಬೀಬಿ ರಾಣಿಯ ವಿವರಗಳನ್ನು ನೀಡಿದ್ದಾರೆ.

ಪ್ರಧಾನಿಯಾಗಿದ್ದ ಅವಧಿಯಲ್ಲಿ ನೆಹರೂ ಅವರು ಎರಡು ಬಾರಿ ಈ ಜೈಲಿಗೆ ಭೇಟಿ ನೀಡಿದ್ದಾರೆ. ಆ ಸಂದರ್ಭದಲ್ಲಿ ಅವರು ತಮಗೆ ಊಟ ನೀಡಿದವರು, ಕಾಯಿಪಲ್ಲೆ ಬೆಳೆಯಲು ಬೀಜಗಳನ್ನು ಒದಗಿಸಿದವರು, ಬಟ್ಟೆಗಳನ್ನು ತೊಳೆದು ಇಸ್ತ್ರಿ ಮಾಡಿದವರನ್ನು ನೆನಪಿಸಿಕೊಂಡಿದ್ದರು ಹಾಗೂ ಅವರನ್ನು ವೇದಿಕೆಗೆ ಕರೆದು ಗೌರವಿಸಿದ್ದರು. ಆ ಸುಂದರ ಸಂದರ್ಭವನ್ನು ಅಹಮದ್ನಗರದ ಜನ ಅಭಿಮಾನದಿಂದ ಸ್ಮರಿಸುತ್ತಾರೆ.

ಭಾರತದ ಎಲ್ಲ ಜೈಲುಗಳ ವಾತಾವರಣ ಚೆನ್ನಾಗಿರುವಂತೆ ಮರಗಳನ್ನು ಹಾಗೂ ಉಪವನಗಳನ್ನು ಬೆಳೆಸಲು ನೆಹರೂ ಪ್ರಧಾನಿಯಾಗಿದ್ದಾಗ ಕಾಳಜಿ ವಹಿಸಿದ್ದರು. ಜೈಲುಗಳ ಬಗ್ಗೆ ಅವರಿಗೆ ವಿಶೇಷ ಕಾಳಜಿ ಇತ್ತು. ಜೈಲುಗಳನ್ನು ಸಾಂಸ್ಕೃತಿಕ ಕೇಂದ್ರವಾಗಿಸುವ ಅವಕಾಶ ಈಗಲೂ ಇದೆ. ಬೇಕಾದುದು ಸರ್ಕಾರದ ಪ್ರಯತ್ನವಷ್ಟೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.