ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಉದಾರ ಶಿಕ್ಷಣ ಮತ್ತು ಹೊಸ ನೀತಿ

ಎಷ್ಟೇ ವೃತ್ತಿಪರ ವಿಷಯವೇ ಇರಲಿ ಅದನ್ನು ಉದಾರ ಶಿಕ್ಷಣದ ಪರಿಪ್ರೇಕ್ಷೆಯಲ್ಲಿ ಕಲಿಸುವುದು ಉನ್ನತವಾದ ಧ್ಯೇಯ
Last Updated 7 ನವೆಂಬರ್ 2021, 21:30 IST
ಅಕ್ಷರ ಗಾತ್ರ

ಹೊಸ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿ ಮಾಡಿರುವ ಈ ಸಂದರ್ಭದಲ್ಲಿ ಮುಖ್ಯವಾಗಿ ಕೇಳಿಬಂದಿರುವ ಆರೋಪವೆಂದರೆ, ಇದೊಂದು ಅವಸರದ ನಡೆ, ಇದೇ ಶೈಕ್ಷಣಿಕ ವರ್ಷದಲ್ಲಿ ಅನುಷ್ಠಾನಗೊಳಿಸಲು ನಾವು ಇನ್ನೂ ಅಣಿಯಾಗಿಲ್ಲ ಎಂಬುದು. ಕಲಿಕಾ ವಿಷಯಗಳ ವಿಂಗಡಣೆ, ಪಠ್ಯಕ್ರಮ, ಮೂಲ ಸೌಲಭ್ಯಗಳ ಲಭ್ಯತೆ, ಶಿಕ್ಷಕರ ಕಾರ್ಯಭಾರದಂತಹ ವಿಷಯಗಳು ಆತಂಕವನ್ನು ಮೂಡಿಸಿವೆ. ವ್ಯಾವಹಾರಿಕ ದೃಷ್ಟಿಕೋನದಿಂದ ಇವು ಚಿಂತಿಸಲೇಬೇಕಾದ ಸಂಗತಿಗಳು. ಆದರೆ ಈ ಎಲ್ಲ ತಾಂತ್ರಿಕ ಅಂಶಗಳ ಮಧ್ಯೆ ನಾವು ಕೆಲವು ಬೌದ್ಧಿಕ ಕಾಳಜಿಗಳನ್ನೂ ಮಾಡಬೇಕಾಗಿದೆ. ಅಂದರೆ ಹೊಸ ನೀತಿಯ ಅಂತಃಸತ್ವವನ್ನು ಅರಿತು, ಅದನ್ನು ಅನುಷ್ಠಾನಗೊಳಿಸುವ ಮಾರ್ಗಗಳಾವುವು ಎಂಬ ಪ್ರಶ್ನೆಯನ್ನು ಕೇಳಿಕೊಂಡು ಬೌದ್ಧಿಕ ತಯಾರಿಯೂ ಆಗಬೇಕಾಗಿದೆ.

ಮೇಲ್ನೋಟಕ್ಕೆ ಈ ನೀತಿಯು ಉದಾರ ಶಿಕ್ಷಣದ ಸ್ವರೂಪವನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿರುವುದು ಕಂಡುಬರುತ್ತದೆ. ಆದರೆ ಕೇವಲ ಕೌಶಲಗಳನ್ನು ಕಲಿಸುವ ಸೀಮಿತ ಅರ್ಥದಲ್ಲಿ ಉದಾರ ಶಿಕ್ಷಣವನ್ನು ಅನುಸರಿಸಿದರೆ ಪ್ರಯೋಜನವಿಲ್ಲ. ಹಾಗಾಗಿ ಯೋಜನೆಯು ಉದಾರ ಶಿಕ್ಷಣದ ವಿಶಾಲವಾದ ಅರ್ಥ, ಉದ್ದೇಶ ಮತ್ತು ವ್ಯಾಪ್ತಿಯನ್ನು ಮನನ ಮಾಡಿಕೊಳ್ಳುವುದು ಅತ್ಯವಶ್ಯಕ.

ಅಮೆರಿಕದಲ್ಲಿ ಕಂಡುಬರುವ ಲಿಬರಲ್ ಆರ್ಟ್ಸ್‌ ಆ್ಯಂಡ್ ಸೈನ್ಸ್ ಎಜುಕೇಷನ್‍ನ ಛಾಯೆಯನ್ನು ಹೊಸ ನೀತಿಯಲ್ಲಿ ಕಾಣಬಹುದಾಗಿದೆ. ಯುರೋಪಿನ ಸಂಸ್ಕೃತಿಗಳಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ಈ ಶಿಕ್ಷಣ ಮಾದರಿಯು ಪಶ್ಚಿಮ ದೇಶಗಳಲ್ಲಿ ಯಶಸ್ವಿ ಪ್ರಯೋಗವನ್ನು ಕಂಡಿದೆ. ಈ ಶೈಕ್ಷಣಿಕ ಚೌಕಟ್ಟಿನಲ್ಲಿ ಕಲಿಸುವ ವಿಷಯಗಳನ್ನು ಕಟ್ಟುನಿಟ್ಟಾಗಿ ವಿಜ್ಞಾನ, ಕಲೆ ಮತ್ತು ವಾಣಿಜ್ಯ ಎಂದು ಗೆರೆ ಕೊರೆದು ವಿಂಗಡಿಸದೆ, ವಿದ್ಯಾರ್ಥಿಗಳ ವ್ಯಕ್ತಿತ್ವವು ಸಮಗ್ರವಾಗಿ ಅರಳಲು ಅವುಗಳ ಸಮ್ಮಿಶ್ರಣವನ್ನು ಮಾಡಲಾಗಿರುತ್ತದೆ. ವಿಜ್ಞಾನ ಮತ್ತು ವಾಣಿಜ್ಯದ ವಿಷಯ ಕಲಿಯುವವರಿಗೆ ಕಲಾ ವಿಷಯಗಳ ಸೊಗಡು, ಮನೋಧರ್ಮವನ್ನು ಉಣಬಡಿಸುವುದು ಮತ್ತು ಕಲಾ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಹಾಗೂ ಲೆಕ್ಕಾಚಾರದ ಪರಿಣತಿಯನ್ನು ಒದಗಿಸುವುದು ಇಲ್ಲಿಯ ತರ್ಕ. ಪ್ರಸಕ್ತ ನೀತಿಯಲ್ಲಿ ಇದರ ಅನುರಣನವನ್ನು ಕಾಣಬಹುದು.

ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾದ ಅಂಶವೆಂದರೆ, ಉದಾರ ಶಿಕ್ಷಣ ಕೇವಲ ಜ್ಞಾನಶಿಸ್ತುಗಳಿಗೆ ಸಂಬಂಧಪಟ್ಟ ವಿಷಯವಲ್ಲ. ಅದೊಂದು ಮನೋಧರ್ಮ, ಮೌಲ್ಯ. ಅಂದರೆ ಕಲಿಯಬೇಕಾದ ವಿಷಯಗಳನ್ನು ಪ್ರೀತಿ, ಕಾಳಜಿ, ಪ್ರಾಮಾಣಿಕತೆಯಿಂದ ಕಲಿಯುವುದು. ಶಿಕ್ಷಣವನ್ನು ಕೇವಲ ಉದ್ಯೋಗ ದೊರಕಿಸಿಕೊಳ್ಳುವ ವೃತ್ತಿಪರತೆಯ ಸಾಧನವಾಗಿ ನೋಡದೆ, ನಿರುದ್ದಿಶ್ಯ ಕಲಿಕೆಗೆ ಬದ್ಧರಾಗಿರುವುದು.

ಕೈಗಾರಿಕಾ ಹಾಗೂ ನವ-ವಾಣಿಜ್ಯೀಕರಣದ ಕಾಲಘಟ್ಟದಲ್ಲಿ ನಾವು ಕರಕುಶಲದ ಅರ್ಥವನ್ನು ಕರಕುಶಲಕರ್ಮಿಗಳಿಗೆ ಮಾತ್ರ ಸೀಮಿತಗೊಳಿಸಿ ಬಿಟ್ಟಿದ್ದೇವೆ. ಆದರೆ ಯಾವುದೇ ಕೆಲಸವನ್ನು ಕರಕುಶಲದಿಂದ ಮಾಡುವುದೆಂದರೆ ಅದನ್ನು ಚೆನ್ನಾಗಿ ಮಾಡುವುದೆಂದೇ ಅರ್ಥ. ನಮ್ಮ ಕೆಲಸವನ್ನು ಕಾಳಜಿ ವಹಿಸಿ, ನಯ ನಾಜೂಕು, ಬದ್ಧತೆಯಿಂದ ಮಾಡಿದರೆ ಅದು ಕರಕುಶಲತೆ. ಉದಾರ ಶಿಕ್ಷಣ ಈ ಕೌಶಲ, ಬದ್ಧತೆ ಹಾಗೂ ಸೂಕ್ಷ್ಮ ಅರ್ಥಭೇದ ಮಾಡುವ ನೈಪುಣ್ಯಗಳನ್ನು ಕಲಿಸುತ್ತದೆ.

ಹೀಗೆ ವಿಜ್ಞಾನಿ, ಸಮಾಜವಿಜ್ಞಾನಿ, ಎಂಜಿನಿಯರ್, ಡಾಕ್ಟರ್, ವಿಮರ್ಶಕ, ಲೆಕ್ಕಪರಿಶೋಧಕ, ಶಿಕ್ಷಕ ಮುಂತಾದವರಲ್ಲಿ ಕಲಾಕಾರರನ್ನು ಸೃಷ್ಟಿಸುವುದು ಉದಾರ ಶಿಕ್ಷಣದ ಉದ್ದೇಶ. ಇವರಲ್ಲಿ ಕಲಾಭಿರುಚಿಯನ್ನು ಹುಟ್ಟಿಸುವುದೆಂದರೆ ಅವರಲ್ಲಿ ಕಾಳಜಿ, ಪ್ರಾಮಾಣಿಕತೆ, ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಮೌಲ್ಯಗಳನ್ನು ಬೆಳೆಸುವುದೆಂದರ್ಥ. ಉದಾರ ಶಿಕ್ಷಣವು ಇವರಿಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕೌಶಲಗಳನ್ನು ಕಲಿಸುತ್ತದೆ. ಇವರ ಕೆಲಸಗಳು ಮಾನವೀಯ ಅಂಶಗಳಿಂದ ಕೂಡಿದಷ್ಟೂ ಸಾಮಾಜಿಕ ಸ್ವಾಸ್ಥ್ಯವು ಹೆಚ್ಚಾಗುತ್ತದೆ.

ಹೀಗೆ ಅನುದ್ದಿಶ್ಯವಾಗಿ ಕಲಿತರೆ ಪರೀಕ್ಷೆಗಳಲ್ಲಿ ಅಂಕ ಗಳಿಸಿ, ಉದ್ಯೋಗ ಗಿಟ್ಟಿಸಿಕೊಳ್ಳುವುದು ಕಷ್ಟ ಎಂಬ ವಿಚಾರ ನಮ್ಮ ಭ್ರಮೆ ಅಷ್ಟೇ. ಹಾಗೆ ನೋಡಿದರೆ ಉದಾರ ಮನೋಭಾವದ ಕಲಿಕೆಯಿಂದಲೇ ಹೆಚ್ಚು ವ್ಯಾವಹಾರಿಕ ಲಾಭಗಳುಂಟಾಗುವುದು. ಉದಾರ ಶಿಕ್ಷಣದ ಇನ್ನೊಂದು ಉದ್ದೇಶವೆಂದರೆ, ವಿದ್ಯಾರ್ಥಿಗಳಲ್ಲಿ ಜಿಜ್ಞಾಸೆಯ ಮನೋಭಾವವನ್ನು ಸೃಷ್ಟಿಸುವುದು. ನಮ್ಮ ಸುತ್ತಮುತ್ತಲೂ ಹೆಚ್ಚು ಪೂರ್ವಗ್ರಹಗಳು ತುಂಬಿಕೊಂಡಿರುವಾಗ, ಜಿಜ್ಞಾಸೆಯಿಂದ ಸತ್ಯವನ್ನು ಅರಸುವ ಮನಸ್ಸುಗಳನ್ನು ತಯಾರಿಸುವುದು ಈ ಶಿಕ್ಷಣದ ಗುರಿ.

ಉದಾರ ಶಿಕ್ಷಣದ ಇತಿಹಾಸ ನೋಡಿದರೆ ಅದು ಪ್ರಜಾಪ್ರಭುತ್ವದ ಜೊತೆ ನಿಕಟ ಸಂಬಂಧ ಹೊಂದಿರುವುದು ಕಂಡುಬರುತ್ತದೆ. ಸ್ವತಂತ್ರವಾಗಿ ಆಲೋಚಿಸುವ ವಿಮರ್ಶಾತ್ಮಕ ಮನಸ್ಸುಗಳು ಪ್ರಜಾಪ್ರಭುತ್ವದ ಸ್ವಾಸ್ಥ್ಯವನ್ನು ಕಾಪಾಡಿದರೆ, ವೈಯಕ್ತಿಕವಾಗಿ ಸ್ವಂತಿಕೆ ಎನ್ನುವುದು ಮನುಷ್ಯ ಜೀವಿಗೆ ಇರಬೇಕಾದ ಅರ್ಥಪೂರ್ಣ ಮೌಲ್ಯ.

ಪ್ರಸ್ತುತ ಹೊಸ ಶಿಕ್ಷಣ ನೀತಿಯ ತಿರುಳು ಎಷ್ಟರ ಮಟ್ಟಿಗೆ ಉನ್ನತ ಶಿಕ್ಷಣದ ಈ ಉದಾತ್ತವನ್ನು ಸ್ಫುರಿಸುತ್ತದೆ ಎನ್ನುವುದು ಚರ್ಚಾಸ್ಪದ. ಪಠ್ಯಕ್ರಮ ರಚಿಸುವವರು ಮತ್ತು ಅದನ್ನು ಕಾರ್ಯಗತಗೊಳಿಸುವ ಶಿಕ್ಷಕರು ಉನ್ನತ ಶಿಕ್ಷಣ, ಉದಾರ ಶಿಕ್ಷಣದ ಅಂತಃಸತ್ವವನ್ನು ಅರಿತು ಕ್ರಿಯಾಶೀಲರಾದರೆ, ನಾವು ಬೌದ್ಧಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಮತ್ತಷ್ಟು ಸಬಲರಾಗಬಹುದು.

ಲೇಖಕ: ಸಹಾಯಕ ಪ್ರಾಧ್ಯಾಪಕ,ವಿಶ್ವವಿದ್ಯಾಲಯ ಕಲಾ ಕಾಲೇಜು, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT