ಒಳಮೀಸಲಿನಲ್ಲಿ ಆಗಿರುವ ಅನ್ಯಾಯ ಸರಿಪಡಿಸದೆ ಹೋದರೆ, ಅಲೆಮಾರಿ ತಬ್ಬಲಿ ಸಮುದಾಯಗಳು ‘ನಾಗರಿಕ’ ಸಮಾಜವನ್ನೂ ಎಂದೂ ಕ್ಷಮಿಸಲಾರವು.

ಹೌದು, ಅಲೆಮಾರಿಗಳಿಗೆ ಅನ್ಯಾಯವಾಗಿದೆ. ಅನ್ಯಾಯ ಆಗುತ್ತಲೇ ಇದೆ, ಅನ್ಯಾಯ ಆಗುತ್ತಲೇ ಇರುತ್ತದೆ.

‘ನಾಗರಿಕ’ ಸಮಾಜದೊಳಗೆ ಇದ್ದೂ ಇಲ್ಲದಂತಿರುವ ಅಲೆಮಾರಿಗಳನ್ನು ಈಗ ‘ಸಾಮಾಜಿಕ ನ್ಯಾಯ’ದ ಹೆಸರಿನ ರಾಜ್ಯ ಸರ್ಕಾರವೂ ಅಂಚಿಗೆ ತಳ್ಳುತ್ತಿದೆ. ದೇವರಾಜ ಅರಸು ಜನ್ಮದಿನದ ಮುನ್ನಾ ದಿನವಾದ ಆಗಸ್ಟ್ 19ರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆ ತೆಗೆದುಕೊಂಡಿರುವ ಒಳಮೀಸಲಾತಿ ನಿರ್ಣಯವು ಅಲೆಮಾರಿಗಳನ್ನು ಮೂರನೇ ಬುಟ್ಟಿಗೆ ಹಾಕಿ, ಈ ತಬ್ಬಲಿ ಸಮುದಾಯಗಳ ಮೇಲುಚಲನೆಯ ಕಾಲುದಾರಿಗೆ ಗುಡ್ಡಗಟ್ಟಲೆ ಮಣ್ಣು ಸುರಿದಿದೆ.

ಕರ್ನಾಟಕದಲ್ಲಿ ಅಲೆಮಾರಿ ಸಮುದಾಯಗಳ ಬಗ್ಗೆ ಇವತ್ತಿಗೂ ಸಮರ್ಪಕವಾದ ದತ್ತಾಂಶ ಸರ್ಕಾರದ ಬಳಿ ಇಲ್ಲ. ಅಲೆಮಾರಿ ಸಮುದಾಯಗಳಲ್ಲಿ ಆಗಿರುವ ಗತ್ಯಂತರ ಗಳನ್ನು ‘ನಾಗರಿಕ’ ಸಮಾಜವೂ ಸರಿಯಾಗಿ ಗ್ರಹಿಸಿಲ್ಲ. ಇವತ್ತಿಗೂ ನೆಲೆಯೂರಲು ಅಂಗೈ ಅಗಲದ ಜಾಗ ಸಿಗದ ಕಾರಣಕ್ಕೆ ಅದೆಷ್ಟೋ ಅಲೆಮಾರಿಗಳು ಮತದಾರರ ಪಟ್ಟಿಯಲ್ಲೂ ಜಾಗ ಪಡೆಯಲಾಗದ ಪರಿಸ್ಥಿತಿ ಇದೆ. ‘ಅಪರಾಧ ಎಸಗುವ ಬುಡಕಟ್ಟು’ (ಕ್ರಿಮಿನಲ್ ಟ್ರೈಬ್) ಎಂಬ ಹಣೆಪಟ್ಟಿ ಕಟ್ಟಿಸಿಕೊಂಡಿದ್ದ ಅಲೆಮಾರಿ ಸಮುದಾಯಗಳು ಸದ್ದೇ ಇಲ್ಲದಂತೆ ಹೆಸರು ಕಳೆದುಕೊಂಡು ‘ಇನ್ನಿಲ್ಲವಾದ ಸಮುದಾಯ’ಗಳಾಗಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಹೀಗಾಗಿ ಯಾವ ಗುರುತಿನ ಜತೆಗೆ ತಮ್ಮ ಗುರುತನ್ನು ಸೇರಿಸಿಕೊಳ್ಳಬೇಕೆಂಬ ಪ್ರಜ್ಞೆ ಈ ಸಮುದಾಯಗಳಿಗೆ ಇಲ್ಲ. ಇದ್ದಷ್ಟು ದಿನ ಈ ಊರು, ಇಲ್ಲಿ ತಳ ಬಿಟ್ಟ ಮೇಲೆ ಮುಂದಿನ ಊರಿಗೆ ಗುಡಾರ ಎತ್ತುವ ಪರಿಸ್ಥಿತಿಯಲ್ಲಿರುವ ಅಲೆಮಾರಿ ಸಮುದಾಯಗಳಿಗೆ ಈ ಪ್ರಜ್ಞೆ ಸಮುದಾಯದೊಳಗಿಂದಲೇ ಬರಬೇಕೆಂದು ನಿರೀಕ್ಷಿಸುವುದೂ ದೊಡ್ಡ ಕ್ರೌರ್ಯ.

ಅಲೆಮಾರಿ ಸಮುದಾಯಗಳಿಂದ ಬಂದು ನಿಜವಾಗಿಯೂ ಕಷ್ಟಪಟ್ಟು ಶಿಕ್ಷಣ ಪಡೆದು ‘ಉನ್ನತ’ ಹುದ್ದೆಗಳಲ್ಲಿ ಇರುವ ಬೆರಳೆಣಿಕೆಯಷ್ಟು ಜನಕ್ಕೂ ಸಮುದಾಯಗಳನ್ನು ಎಚ್ಚರಗೊಳಿಸಬೇಕೆಂಬ ಪ್ರಜ್ಞೆ ಇವತ್ತಿಗೂ ಬಂದಿಲ್ಲ. ಇದು ‘ಸಂಘಟನೆಯ ದಾರಿಗಿಂತ ಶೈಕ್ಷಣಿಕ ದಾರಿಯೇ ಮುಖ್ಯ’ ಎಂದುಕೊಂಡಿದ್ದರ ಪರಿಣಾಮವೋ, ಗೊತ್ತಿಲ್ಲ. ಇದರಿಂದ ಅಲೆಮಾರಿ ಸಮುದಾಯಗಳಿಂದ ಬಂದ ಬೆರಳೆಣಿಕೆಯ ಜನ ಶಿಕ್ಷಣ, ಉನ್ನತ ಹುದ್ದೆಗಳನ್ನು ಪಡೆದು ತಾವು ‘ದೊಡ್ಡವ’ರಾಗಿ ಬೆಳೆದರೇ ಹೊರತು ತಮ್ಮ ಸಮುದಾಯಗಳ ಕಡೆಗೆ ಹಿಂದಿರುಗಿ ನೋಡಲಿಲ್ಲ; ತಾವು ಬೆಳೆದ ಮೇಲೆ ತಮ್ಮ ಸಮುದಾಯಗಳ ಹೆಸರಿನ ಜತೆಗೆ ಗುರುತಿಸಿಕೊಳ್ಳಲೂ ಇಲ್ಲ. ‘ಆಧುನಿಕ’ ಎನಿಸಿಕೊಂಡ ಸಮಾಜದಲ್ಲಿ ತಮ್ಮ ಗುರುತನ್ನು ಹೇಳಿಕೊಳ್ಳಲಾಗದೆ ತಬ್ಬಲಿ
ಗಳಾಗುವ ಸನಾದಿ ಅಪ್ಪಣ್ಣನ ಮಗನ ಸಂಕೀರ್ಣ ಮನಃಸ್ಥಿತಿ ಇದು. ಶಿಕ್ಷಣ ಪಡೆದು, ಉನ್ನತ ಹುದ್ದೆಯಲ್ಲಿದ್ದೂ ಜಾತಿ ಅವಮಾನವನ್ನು ಅನುಭವಿಸು ವುದಕ್ಕಿಂತ ಜಾತಿಯನ್ನೇ ಮರೆಮಾಚಿ ಬದುಕುವುದು ಒಳ್ಳೆಯದು ಎಂದು ಈ ‘ದೊಡ್ಡಜನ’ಕ್ಕೆ ಅನಿಸಿದ್ದರೆ ತಪ್ಪೇನೂ ಇಲ್ಲ. ಆದರೆ, ತಮ್ಮ ಸಮುದಾಯಗಳಿಂದ ಶಿಕ್ಷಣ ಪಡೆದು ಕೆಲವರಾದರೂ ದೊಡ್ಡವರಾಗಿ ಬೆಳೆದಿದ್ದಾರೆ, ನಾವೂ ಶಿಕ್ಷಣ ಪಡೆದರೆ ಅವರಂತೆ ಬೆಳೆಯಬಹುದು ಎಂಬ ಮಾದರಿಯನ್ನು ರೂಪಿಸಲು ಈ ‘ದೊಡ್ಡಜನ’ ಸೋತದ್ದು ಅಲೆಮಾರಿ ಸಮುದಾಯಗಳ ಪಾಲಿಗೆ ಆದ ದೊಡ್ಡ ನಷ್ಟ.

ಈಗ ನಿವೃತ್ತಿಯ ದಿನಗಳನ್ನು ಕಳೆಯುತ್ತಿರುವ ಅಲೆಮಾರಿ ಸಮುದಾಯಗಳ ‘ದೊಡ್ಡಜನ’ ಈಗಲಾದರೂ ತಮ್ಮ ಸಮುದಾಯಗಳ ಕಡೆಗೆ ಹಿಂದಿರುಗಿ ನೋಡುವ ಮನಸ್ಸು ಮಾಡಬೇಕು. ಸಮುದಾಯಗಳನ್ನು ಸಂಘಟಿಸುವ, ಶಿಕ್ಷಣದ ಮಹತ್ವ ತಿಳಿಸುವ ಕಡೆಗೆ ಕಾಳಜಿ ತೋರಬೇಕು. ಶಿಕ್ಷಣದಿಂದ ವಿಮುಖವಾಗಿರುವ ಅಲೆಮಾರಿ ಸಮುದಾಯಗಳ ಮಕ್ಕಳಿಗೆ ಶಿಕ್ಷಣದ ಬೆಳಕು ತೋರಿಸಲು, ಮೀಸಲಾತಿಯ ಮಹತ್ವವನ್ನು ತಿಳಿಸಲು ಗುಲಗಂಜಿಯಷ್ಟಾ ದರೂ ಕೆಲಸ ಮಾಡಬೇಕು. ತಾವು, ತಮ್ಮ ಕುಟುಂಬ ಚೆನ್ನಾಗಿದ್ದರೆ ಸಾಕು ಎಂದುಕೊಂಡು ಇನ್ನೂ ಈ ‘ದೊಡ್ಡಜನ’ ನೆಮ್ಮದಿಯಾಗಿದ್ದರೆ, ಅದಕ್ಕಿಂತ ದೊಡ್ಡ ಆತ್ಮವಂಚನೆ ಬೇರೊಂದಿಲ್ಲ. ಇದು ಆದರ್ಶದಂತೆ ಕಂಡರೂ ಇಂಥ ಸಣ್ಣ ಸಣ್ಣ ಪ್ರಯತ್ನಗಳಾದರೂ ಆಗದೇ ಹೋದರೆ ಅಲೆಮಾರಿ ಸಮುದಾಯಗಳ ಪರಿಸ್ಥಿತಿ ಇನ್ನಷ್ಟು ಹೀನಾಯವಾಗಲಿದೆ.

ಕಳೆದ ವಾರವಷ್ಟೇ ದೇಶ 79ನೇ ಸ್ವಾತಂತ್ರ್ಯ ದಿನಾಚರಣೆ ಯನ್ನು ಆಚರಿಸಿಕೊಂಡಿದೆ. ‘ಮನೆ ಮನೆಯಲ್ಲೂ ತ್ರಿವರ್ಣ’ ಎಂಬ ಹಿತವಾದ ಘೋಷಣೆಯ ನೆರಳಲ್ಲಿ ಮನೆಗಳೇ ಇಲ್ಲದ ಅಲೆಮಾರಿ ಸಮುದಾಯಗಳು ಈ ದೇಶದಲ್ಲಿ ತಬ್ಬಲಿಗಳಾಗಿ ಬದುಕು ದೂಡುತ್ತಿವೆ. ಮುಂದುವರಿದ ಪ್ರಿವಿಲೇಜ್ಡ್ ಸಮುದಾಯಗಳು ಹೊರ ದೇಶಗಳಲ್ಲಿ ನಿವೇಶನ, ಮನೆ ಮಾಡಿಕೊಂಡು ನೆಲೆಯೂರುವ ಕನಸಿನೊಂದಿಗೆ ಶಿಕ್ಷಣ ಪಡೆಯುತ್ತಿರುವ ಈ ಹೊತ್ತಲ್ಲಿ ಅಲೆಮಾರಿಗಳು ಇನ್ನೂ ‘ವಿಮೋಚನೆ’ಗಾಗಿ ಶಿಕ್ಷಣ ಪಡೆಯಬೇಕಾಗಿರುವುದು ಈ ದೇಶದ ದುರಂತ.

ಶಾಲೆಯ ಮುಖ ನೋಡದ ಅಲೆಮಾರಿ ಸಮುದಾಯಗಳ ಅದೆಷ್ಟೋ ಮಕ್ಕಳು ಹೊಸ ಬಗೆಯ ‘ಕ್ರಿಮಿನಲ್ ಟ್ರೈಬ್’ಗಳ ಹಣೆಪಟ್ಟಿ ಕಟ್ಟಿಕೊಂಡಿದ್ದಾರೆ. ನಗರಗಳಲ್ಲಿ ಏನೇ ಅಪರಾಧ ನಡೆದರೂ ಪೊಲೀಸರು ಸ್ಲಮ್ಗಳನ್ನೇ ತಡಕಾಡುವಂತೆ, ಗ್ರಾಮೀಣ ಭಾಗದಲ್ಲಿ ಏನೇ ಅಪರಾಧ ನಡೆದರೂ ಪೊಲೀಸರು, ಅಲೆಮಾರಿಗಳ ಗುಡಾರಗಳ ಕಡೆಗೇ ಮುಖ ಮಾಡುವ ಪರಿಸ್ಥಿತಿ ಇದೆ. ಇಂಥ ವಿಷಮ ಸ್ಥಿತಿಯಲ್ಲಿ ಒಳಮೀಸಲಾತಿಯ ಅನ್ಯಾಯ ಸರಿಪಡಿಸದೇ ಇದ್ದರೆ ಅದು ತಬ್ಬಲಿ ಸಮುದಾಯಗಳಿಗೆ ಸರ್ಕಾರ ಮಾಡುವ ವಂಚನೆ; ಸಮಾಜ ತನಗೆ ತಾನೇ ಮಾಡಿಕೊಳ್ಳುವ ಅತಿದೊಡ್ಡ ಆತ್ಮವಂಚನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.