ಮಂಗಳವಾರ, ಜನವರಿ 21, 2020
29 °C
ಈ ಭಾಗದ ಸಮಗ್ರ ನೀರಾವರಿಗೆ ವಿಪುಲ ಅವಕಾಶಗಳಿದ್ದರೂ ಇಚ್ಛಾಶಕ್ತಿಯ ಕೊರತೆಯಿಂದ ಅದು ಸಾಧ್ಯವಾಗುತ್ತಿಲ್ಲ

ಉ.ಕ.: ಸಮೃದ್ಧ ಕೃಷಿ ಸಾಧ್ಯ

ಸಂಗಮೇಶ ಆರ್. ನಿರಾಣಿ Updated:

ಅಕ್ಷರ ಗಾತ್ರ : | |

Prajavani

ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಬಹುತೇಕ ನೀರಾವರಿ ಯೋಜನೆಗಳು ಕರ್ನಾಟಕ ಏಕೀಕರಣದ ನಂತರವೇ ಪ್ರಾರಂಭವಾಗಿವೆ. ಆದರೆ ಈ ಯೋಜನೆಗಳ ನಡುವೆ ಬಹಳಷ್ಟು ತಾರತಮ್ಯವಾಗಿದೆ. ಅಧಿಕಾರಿಗಳು ಹಾಗೂ ಅಧಿಕಾರಸ್ಥ ರಾಜಕಾರಣಿಗಳು ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಬಗ್ಗೆ ಪ್ರಾರಂಭದಿಂದಲೂ ವಿಶೇಷ ಗಮನ ಹರಿಸಿಲ್ಲ. 3-4 ದಶಕಗಳಿಂದ ಬಹುತೇಕ ಯೋಜನೆಗಳು ನನೆಗುದಿಗೆ ಬಿದ್ದಿವೆ. ಆಡಳಿತಾತ್ಮಕ ಅನುಮೋದನೆ, ಗಂಭೀರ ಮೇಲ್ವಿಚಾರಣೆ, ಮಾರ್ಗದರ್ಶನ, ಸಕಾಲಿಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹಾಗೂ ಯೋಜನೆಗೆ ಅಗತ್ಯ ಹಣಕಾಸು ಸೌಲಭ್ಯ ಒದಗಿಸುವುದು ಅತ್ಯವಶ್ಯ.

ಉತ್ತರ ಕರ್ನಾಟಕವು ರಾಜಧಾನಿ ಬೆಂಗಳೂರಿನಿಂದ ದೂರದಲ್ಲಿದೆ. ತುಂಬಾ ಜೋರಾಗಿ ಕೂಗಿದರೆ ಮಾತ್ರ ಪ್ರಭುತ್ವಕ್ಕೆ ನಮ್ಮ ನೋವು ಕೇಳಿಸುತ್ತದೆ.

ಈ ಭಾಗದಲ್ಲಿ ಹರಿಯುವ ಕೃಷ್ಣಾ ನದಿಯು ದೇಶದ ನಾಲ್ಕನೇ ಅತಿದೊಡ್ಡ ಮತ್ತು ದಕ್ಷಿಣ ಭಾರತದ ಎರಡನೇ ಅತಿದೊಡ್ಡ ನದಿ. ಕರ್ನಾಟಕದಲ್ಲಿ ಕೃಷ್ಣೆಯ ಜಲಾನಯನ ಪ್ರದೇಶ 1,13,271 ಚ.ಕಿ.ಮೀ. ಅಂದರೆ ಒಟ್ಟು ಜಲಾನಯನ ಪ್ರದೇಶದ ಶೇ 43ರಷ್ಟು ಹಾಗೂ ಕಾವೇರಿ ಜಲಾನಯನ ಪ್ರದೇಶದ ಮೂರು ಪಟ್ಟು ಹೆಚ್ಚು. ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ 1969ರ ಬಚಾವತ್ ಆಯೋಗದ ತೀರ್ಪು 1976ರಲ್ಲಿ ಬಂದಿತ್ತು. ಎರಡನೇ ಹಂತದ ನೀರಿನ ಬಳಕೆಗೆ 20 ವರ್ಷಗಳ ಕಾಲಾವಕಾಶ ನೀಡಿ, 1997ರ ವೇಳೆಗೆ ಯೋಜನೆ ಪೂರ್ಣಗೊಳಿಸಲು ಸ್ಪಷ್ಟ ಸೂಚನೆ ಇದ್ದರೂ 1994ರವರೆಗೆ ಯೋಜನೆ ಕುಂಟುತ್ತಾ ಸಾಗಿತ್ತು. ನಂತರ ಕೆಲಸದ ವೇಗ ಹೆಚ್ಚಾದರೂ ಪೂರ್ಣ ಪ್ರಮಾಣದ ಯೋಜನೆ ಅನುಷ್ಠಾನ ಇಲ್ಲಿಯವರೆಗೂ ಸಾಧ್ಯವಾಗಿಲ್ಲ.

ಕರ್ನಾಟಕದ ಕೃಷಿ ಭೂಮಿಯ ಸುಮಾರು ಶೇ 62ರಷ್ಟು ಬಯಲುಸೀಮೆ ಪ್ರದೇಶವು ಉತ್ತರ ಕರ್ನಾಟಕದಲ್ಲಿದೆ. ಸುದೈವದಿಂದ, ದಕ್ಷಿಣ ಕರ್ನಾಟಕದಲ್ಲಿ ಹುಟ್ಟುವ ತುಂಗಭದ್ರಾ, ವರದಾ ಸೇರಿದಂತೆ ಒಟ್ಟು 74 ನದಿಗಳು ಉತ್ತರ ಕರ್ನಾಟಕದಲ್ಲಿ ಹರಿಯುತ್ತಿವೆ. ಆದರೆ, ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದಲ್ಲಿ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳ ಹಾಗೂ ಉಪಯೋಜನೆಗಳು ಸೇರಿದಂತೆ ಕೃಷ್ಣಾ ಕಣಿವೆಯ 40ಕ್ಕೂ ಅಧಿಕ ಯೋಜನೆಗಳು ನನೆಗುದಿಗೆ ಬಿದ್ದಿವೆ. ದೂಧ್‌ಗಂಗಾ, ರಾಮಥಾಳ, ಸೊಂತಿ, ಬಸಾಪೂರ, ಬಳ್ಳಾರಿ ನಾಲಾ, ತಿಮ್ಮಾಪೂರ, ಗುಡ್ಡದ ಮಲ್ಲಾಪೂರ, ಹಿರಣ್ಯಕೇಶಿ, ದಂಡಾವತಿ ಏತ ನೀರಾವರಿ ಯೋಜನೆಗಳಲ್ಲಿ ಕೆಲವು ಅಪೂರ್ಣವಾಗಿವೆ. ಕೆಲವು ಪ್ರಾರಂಭವೇ ಆಗಿಲ್ಲ. ಮಹದಾಯಿ ಯೋಜನೆ ದಿನೇ ದಿನೇ ಕಗ್ಗಂಟಾಗುತ್ತಿದೆ. ಈ ಕುರಿತು ಸರ್ಕಾರದ ನಿರ್ಲಕ್ಷ್ಯ ಧೋರಣೆ ಮುಂದುವರಿದಿದೆ.

ಕೃಷ್ಣಾ ಕಣಿವೆಯ ಲಭ್ಯವಿರುವ ಒಟ್ಟು ಜಲಸಂಪನ್ಮೂಲದ ಜೊತೆಗೆ ಹೊಸ ನೀರಾವರಿ ಯೋಜನೆಗಳೊಂದಿಗೆ ಹೊಸ ಅಚ್ಚುಕಟ್ಟು ಪ್ರದೇಶವನ್ನು ಸೃಷ್ಟಿಸಲು ಬಹುದೊಡ್ಡ ಅವಕಾಶಗಳಿವೆ. ಪಶ್ಚಿಮಘಟ್ಟದಲ್ಲಿ ಹುಟ್ಟುವ ಕಾಳಿ ನದಿಯ 50 ಟಿಎಂಸಿ ಅಡಿ ನೀರಿನಿಂದ ಘಟಪ್ರಭಾ-ಮಲಪ್ರಭಾ ನದಿಗಳನ್ನು ಸದೃಢಗೊಳಿಸಬಹುದು ಹಾಗೂ ಶರಾವತಿ ನದಿಯಿಂದ ವರದಾ ನದಿಗೆ 50 ಟಿಎಂಸಿ ಅಡಿ ನೀರು ಹರಿಸುವ ಮೂಲಕ ತುಂಗಭದ್ರೆಯನ್ನು ಸದೃಢಗೊಳಿಸಬಹುದು.

ಹಿರಣ್ಯಕೇಶಿ ನದಿಯ 10 ಟಿಎಂಸಿ ಅಡಿ ಪ್ರವಾಹದ ನೀರನ್ನು ಹಿಡಕಲ್ ಜಲಾಶಯದಲ್ಲಿ ಸದ್ಬಳಕೆ ಮಾಡಿಕೊಳ್ಳಬಹುದು. ಗೋದಾವರಿ- ಮಹಾನದಿ- ಕೃಷ್ಣಾ- ಕಾವೇರಿ ನದಿ ಜೋಡಣೆ ಯೋಜನೆಯಡಿ ದೊರೆಯಬೇಕಾದ ನ್ಯಾಯಯುತವಾದ ಪಾಲನ್ನು ಪಡೆದುಕೊಂಡು ಹಾಗೂ ಮಹಾಪೂರದ ನೀರನ್ನು ಸದ್ಬಳಕೆ ಮಾಡಿಕೊಂಡು ಕೃಷ್ಣೆಯ ನೀರನ್ನು ಘಟಪ್ರಭೆ, ಮಲಪ್ರಭೆಗೆ ಸೇರಿಸಬಹುದು. ಬಚಾವತ್ ಆಯೋಗದ ಸ್ಕೀಂ ‘ಬಿ’ ತೀರ್ಪಿನ ಅನ್ವಯ, 130 ಟಿಎಂಸಿ ಅಡಿ ನೀರು ಬಳಸುವ ಯೋಜನೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದಿಂದ ಅಧಿಸೂಚನೆ ಹೊರಡಿಸಿ ಶೀಘ್ರ ಕೆಲಸ ಪ್ರಾರಂಭಿಸಬೇಕು.

ಮಹಾರಾಷ್ಟ್ರವು ಕೊಯ್ನಾ ಜಲಾಶಯದಲ್ಲಿ ವಿದ್ಯುತ್ ಉತ್ಪಾದಿಸಿ ಸಮುದ್ರ ಸೇರಿಸುವ 67.5 ಟಿಎಂಸಿ ಅಡಿ ನೀರನ್ನು ಕರ್ನಾಟಕವು ಪಡೆದು, ಆ ನೀರನ್ನು ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ಬರಡು ಭೂಮಿಯನ್ನು ನೀರಾವರಿ ಮಾಡಲು ಉಪಯೋಗಿಸಬೇಕು. ಪ್ರಧಾನಿ ಮಧ್ಯಸ್ಥಿಕೆಯಲ್ಲಿ ಕರ್ನಾಟಕ, ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆ ಕರೆದು ಮಹದಾಯಿ ವಿವಾದ ಇತ್ಯರ್ಥಪಡಿಸಬೇಕು. ತುಂಗಭದ್ರಾ ಜಲಾಶಯದಲ್ಲಿ ಹೂಳು ತೆಗೆಯಲು ಅಥವಾ ಪರ್ಯಾಯವಾಗಿ ಮತ್ತೊಂದು ಕಿರು ಅಣೆಕಟ್ಟು ನಿರ್ಮಿಸಲು ಸರ್ಕಾರದ ಮಟ್ಟದಲ್ಲಿ ನಡೆಯುತ್ತಿರುವ ಚಿಂತನೆಯು ಶೀಘ್ರ ಅನುಷ್ಠಾನಕ್ಕೆ ಬರಬೇಕು.

ಈ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತಂದರೆ, ಉತ್ತರ ಕರ್ನಾಟಕ ಭಾಗಕ್ಕೆ ಸುಲಭವಾಗಿ 458 ಟಿಎಂಸಿ ನೀರು ಪಡೆಯಬಹುದು. ಸುಮಾರು 45 ಲಕ್ಷ ಎಕರೆ ಭೂಮಿಗೆ ಮೊದಲ ಹಂತದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಬಹುದು. 11 ಜಿಲ್ಲೆಗಳ ಹಳ್ಳಿಗಳಿಗೆ ಸಂಪೂರ್ಣವಾಗಿ ಕುಡಿಯುವ ನೀರಿನ ಸೌಲಭ್ಯ ಒದಗಿಸಬಹುದು. ಈ ಕಾರ್ಯಕ್ಕೆ ನಮ್ಮ ಜನಪ್ರತಿನಿಧಿಗಳು, ರಾಜ್ಯ ಮಟ್ಟದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಗಟ್ಟಿತನ ತೋರಬೇಕು. 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು