ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಕಲೆಗೆಲ್ಲಿಯದು ಗಡಿಯ ಎಲ್ಲೆ?

ಸಾಹಿತ್ಯ, ಲಲಿತಕಲೆ, ನಾಟಕ, ಜಾನಪದ ಕಲೆಗಳೆಲ್ಲವೂ ಸೀಮಾತೀತವಾದವು
Last Updated 5 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

‘ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು/ ಕೋಳಿ ಒಂದು ಕುಟುಕ ಕಂಡಡೆ ಕೂಗಿ ಕರೆಯದೆ ತನ್ನ ಕುಲವನೆಲ್ಲವ/ ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ ಕಾಗೆ ಕೋಳಿಂದ ಕರಕಷ್ಟ ಕೂಡಲಸಂಗಮದೇವಾ’... ಇವು ಬಸವಣ್ಣನವರ ವಚನದ ಸಾಲುಗಳು. ಕಾಗೆ ಮತ್ತು ಕೋಳಿಗಳಿಗಿರುವ ಕೂಡಿ ಉಣ್ಣುವ, ಬಾಳುವ ತಿಳಿವು, ಸಾಮೂಹಿಕ ಬದುಕು ಹಾಗೂ ಸಹಬಾಳ್ವೆಯ ಪ್ರಜ್ಞೆ ಮನುಷ್ಯನಿಗೆ ಇಲ್ಲವಲ್ಲ ಎಂದು ವಿಷಾದವುಂಟಾಗುತ್ತದೆ. ಅಂತಹ ಪ್ರೀತಿಯ ನಡೆಯನ್ನು ಮನುಷ್ಯ ಅನುಸರಿಸುವ ಅಗತ್ಯ ಇದೆ.

ವಿಜಯಪುರದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮರಾಠಿ ಚಿತ್ರದ ಲಾವಣಿ ಹಾಡು, ನೃತ್ಯಕ್ಕೆ ಬಂದ ವಿರೋಧದ ಕಾರಣಕ್ಕಾಗಿ ಇದನ್ನು ಪ್ರಸ್ತಾಪಿಸಬೇಕಾಯಿತು. ಅದಕ್ಕೆ ಚಪ್ಪಾಳೆ ತಟ್ಟಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂ ಪೀರ್ ವಾಲಿಕಾರ ಪ್ರೋತ್ಸಾಹಿಸಿದರು. ಇದು ಕನ್ನಡಿಗರಿಗೆ ಆದ ಅವಮಾನ, ಈ ಮರಾಠಿ ಹಾಡಿಗೆ ಕನ್ನಡಿಗರು ತೀವ್ರ ಅಸಮಾಧಾನಗೊಂಡಿದ್ದಾರೆ, ಇದು ಕನ್ನಡ ವಿರೋಧಿ ನಡೆ, ಈ ದುಃಸ್ಥಿತಿಗೆ ವಾಲಿಕಾರ ಅವರು ಕ್ಷಮೆ ಕೇಳಬೇಕು ಇಲ್ಲವೇ ರಾಜೀನಾಮೆ ನೀಡಬೇಕೆಂಬ ಆಗ್ರಹ ಕೇಳಿಬಂದಿದೆ ಎಂದೆಲ್ಲ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ
ಗಳಲ್ಲಿ ಚರ್ಚೆಯಾಗುತ್ತಿದೆ. ಈ ಕಾರಣಗಳನ್ನೇ ಎದುರಿಟ್ಟುಕೊಂಡು ಕಸಾಪ ರಾಜ್ಯ ಘಟಕದ ಅಧ್ಯಕ್ಷ ಮಹೇಶ್‌ ಜೋಶಿ ಅವರು ವಿವರಣೆ ಕೇಳಿ ವಾಲಿಕಾರ ಅವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.

‘...ನೀವು ಮರಾಠಿ ನೃತ್ಯ ಆಯೋಜಿಸಿದ್ದು ಪರಿಷತ್ತಿನ ಶತಮಾನಕ್ಕೂ ಮೀರಿದ ಇತಿಹಾಸದಲ್ಲಿ ಕಪ್ಪುಚುಕ್ಕೆ. ಮಾಧ್ಯಮದವರು, ಕನ್ನಡಪರ ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸಿ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ. ನೀವು ಈ ಕುರಿತು ತಕ್ಷಣ ವಿಷಾದ ವ್ಯಕ್ತಪಡಿಸಿ ಹೇಳಿಕೆಯನ್ನು ಮಾಧ್ಯಮಗಳಿಗೆ ನೀಡಬೇಕು ಮತ್ತು ಸಮರ್ಥನೀಯವಲ್ಲದ ಘಟನೆಯ ವಿವರಣೆಯನ್ನು ಪರಿಷತ್ತಿಗೆ ನೀಡಲು ಸೂಚಿಸಿದೆ’- ಹೀಗೆಂದು ಜೋಶಿ ಫರ್ಮಾನು ಹೊರಡಿಸುತ್ತಾರೆ.

ಸಾಹಿತ್ಯ, ಸಂಸ್ಕೃತಿ ಬಗ್ಗೆ ತಿಳಿವಿಲ್ಲದೆ ಅಪ್ರಬುದ್ಧತೆ ಮತ್ತು ಅಸಹಿಷ್ಣುತೆ ಮೆರೆದರೆ ಏನೆಲ್ಲ ಘಟಿಸಲು ಸಾಧ್ಯ ಎನ್ನುವುದಕ್ಕೆ ಇದನ್ನೊಂದು ಪ್ರಕರಣವಾಗಿಸಿರುವುದೇ ಸಾಕ್ಷಿ. ಭಾಷೆ, ಸಂಸ್ಕೃತಿಗಳು ಸೂಕ್ಷ್ಮಸಂವೇದಿ ರೂಪದಲ್ಲಿ ನಿರಂತರ ಸಂಚಾರಿಭಾವದಲ್ಲಿ ತೇಲುವಂಥವು. ಆದ್ದರಿಂದ ಸ್ವೀಕರಣ ಮತ್ತು ವಿಸರ್ಜನೆ ಪ್ರಕ್ರಿಯೆ ಕೂಡ ಸಹಜ ಕ್ರಿಯೆ. ಅದಕ್ಕಾಗಿ ಸಾಂಸ್ಕೃತಿಕ ಬಾಂಧವ್ಯ ಮತ್ತು ಕೊಡುಕೊಳ್ಳುವಿಕೆಯ ನೈಸರ್ಗಿಕ ರೂಢಿ ಪರಂಪರೆಯ ಕನಿಷ್ಠ ಪ್ರಜ್ಞೆ ಇರಬೇಕಾಗುತ್ತದೆ. ಅದಿರದಿದ್ದರೆ ರಾದ್ಧಾಂತಗಳು ನಿಲ್ಲುವುದಿಲ್ಲ.

ಜೋಶಿ ಅವರು ಒಂದು ಭಾಷೆಯ ಜನಪದ ನೃತ್ಯಕಲೆಯ ಬಗ್ಗೆ ಸಂಕುಚಿತ ನಿಲುವು ತಳೆದು, ಅದನ್ನು ಕಪ್ಪುಚುಕ್ಕೆ ಎಂದಿದ್ದಾರೆ. ಭಾಷೆಯ ರಾಜಕಾರಣ ಮಾಡುವ ದಾಂದಲೆಕೋರರನ್ನು ನಾವೆಲ್ಲರೂ ಕಠೋರ ಶಬ್ದಗಳಲ್ಲಿ ಖಂಡಿಸುತ್ತಲೇ ಬಂದಿದ್ದೇವೆ. ಸಾಹಿತ್ಯ, ಲಲಿತಕಲೆ, ರಂಗಭೂಮಿ, ಜಾನಪದ ಕಲೆಗಳೆಲ್ಲವೂ ಸೀಮಾತೀತವಾದವು. ಈ ಹಿಂದೆ ಕನ್ನಡದ ಲೇಖಕರಾದ ಗಿರೀಶ ಕಾರ್ನಾಡ ಮತ್ತು ಎಸ್.ಎಲ್.ಭೈರಪ್ಪ ಅವರನ್ನು ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನಕ್ಕೆ ಅತಿಥಿಗಳನ್ನಾಗಿ ಮರಾಠಿ ಭಾಷಿಕರು ಆಹ್ವಾನಿಸಿದ್ದನ್ನು ನೆನೆಯಬೇಕು.

ಇವತ್ತು ತಕರಾರು ಎತ್ತಿ ವಿಷಾದ ವ್ಯಕ್ತಪಡಿಸಲು ಒತ್ತಡ ಹೇರಿದ ಲಾವಣಿ ನೃತ್ಯವು ಮರಾಠಿಯ ‘ತಮಾಶಾ’ ಜನಪದ ನಾಟಕದ ಮೂಲದ್ದು. ಆ ತಮಾಶಾ ಲೋಕನಾಟ್ಯದ ಎಳೆಯನ್ನು ಇಟ್ಟುಕೊಂಡು ಪ್ರಸಿದ್ಧ ಸಾಹಿತಿ ಡಾ. ಆನಂದ ಯಾದವ ಕಾದಂಬರಿ ರಚಿಸಿದರು. ಅದನ್ನು ಆಧರಿಸಿ ‘ನಟರಂಗ’ ಎಂಬ ಚಿತ್ರ 2010ರಲ್ಲಿ ಬಂತು. ಇಪ್ಪತ್ತಕ್ಕೂ ಅಧಿಕ ಪುರಸ್ಕಾರಗಳನ್ನು
ಪಡೆಯಿತು.

ಕನ್ನಡ– ಮರಾಠಿ ಜಾನಪದ ರಂಗಭೂಮಿಯಲ್ಲಿ ಬಹಳಷ್ಟು ಕೊಡುಕೊಳ್ಳುವಿಕೆಯಾಗಿದೆ. ತಮಾಶಾ ಲೋಕನಾಟ್ಯವು ಕನ್ನಡದ ಸಣ್ಣಾಟಗಳ ಜನ್ಮಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದ ‘ತಮಾಶಾ’ದ ಅನುಕರಣೆಯಿಂದ ಬೆಳಗಾವಿ ಜಿಲ್ಲೆಯ ಬಸರಿಗೆ ಗ್ರಾಮದ ಜನಪದ ಕವಿಯಿಂದ ‘ರಾಧಾನಾಟ’ ಜನ್ಮತಾಳಿತು. ರಾಧಾನಾಟದ ಚಿಮಣಾ, ಗಲಪೋಜಿ, ಸಖಾರಾಮ ತಾತ್ಯಾ ಪಾತ್ರಗಳ ಹೆಸರೇ ಮರಾಠಿ ಆಗಿವೆ. ‘ಗೊಲ್ಲತಿ’ ಪ್ರಕರಣವು ತಮಾಶಾದ ‘ಗೌಳಣ’ದಿಂದ ಬಂದಿದ್ದು. ಅದು ಶ್ರೀಕೃಷ್ಣ ಪಾರಿಜಾತದಲ್ಲೂ ಇದೆ. ಮಥುರೆಗೆ ಹಾಲು, ಮೊಸರು ಮಾರಲು ಹೊರಟ ಗೊಲ್ಲತಿಯರನ್ನು ಕೃಷ್ಣ ತಡೆದು ಶೃಂಗಾರಿಕವಾಗಿ ಛೇಡಿಸುವನು.

ನೂರೈವತ್ತು ವರ್ಷಗಳಿಗಿಂತ ಹೆಚ್ಚು ಕಾಲದ ಪರಂಪರೆಯ ತಮಾಶಾ ಮೊದಲು ಭೇದಿಕವಾಗಿತ್ತು (ಆಧ್ಯಾತ್ಮಿಕ). ಪೇಶ್ವೆಗಳ ಕಾಲದಲ್ಲಿ ಅದು ಶೃಂಗಾರಕ್ಕೆ ಹೊರಳಿತು. ತಮಾಶಾದ ಜೀವವೇ ಲಾವಣಿ ನೃತ್ಯ ಮತ್ತು ಢೋಲಕಿ. ಧಾರವಾಡ ರಂಗಾಯಣ ಐದಾರು ವರ್ಷಗಳ ಹಿಂದೆ ‘ತಮಾಶಾ’- ಮರಾಠಿ ಮಣ್ಣಿನ ಕನ್ನಡ ಗಮ್ಮತ್ತು ಎಂದು ಈ ಜನಪದ ನಾಟಕವನ್ನು ಕನ್ನಡದಲ್ಲೇ ಆಡಿಸಿತು. ಮೂಲದ ಕೆಲವು ಮರಾಠಿ ಲಾವಣಿಗಳನ್ನೇ ಯಥಾವತ್ತಾಗಿ ಬಳಸಲಾಗಿತ್ತು. ಗಡಿಭಾಗದಲ್ಲಿ ಆಡುವ ‘ಸಂಗ್ಯಾ ಬಾಳ್ಯಾ’ ಪಠ್ಯದ ಲಿಪಿಯು ಮರಾಠಿಯಾದರೆ, ಭಾಷೆ ಕನ್ನಡವಾಗಿರುತ್ತದೆ.
ಇದು ವಾಸ್ತವ.

ಹೀಗೆ ಕನ್ನಡ– ಮರಾಠಿ ಕೊಡುಕೊಳ್ಳುವಿಕೆ ಪ್ರಕ್ರಿಯೆ ಅತ್ಯಂತ ಸಹಜ ರೂಪದಲ್ಲಿದೆ. ಈ ಸತ್ಯವನ್ನರಿತು ಪರಸ್ಪರ ಸಂಸ್ಕೃತಿಗಳನ್ನು ಗೌರವಿಸಬೇಕು. ಅದೊಂದೇ ನಮ್ಮೆದುರಿನ ಸಹಿಷ್ಣು ಮತ್ತು ಸಹಬಾಳ್ವೆಯ ದಾರಿ.

(ಲೇಖಕ: ನಾಟಕಕಾರ, ಚಿತ್ರಕಲಾವಿದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT