ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿ ಇತ್ತೀಚೆಗೆ ಹುಚ್ಚುನಾಯಿಯೊಂದು ಮಕ್ಕಳು, ದೊಡ್ಡವರು ಸೇರಿದಂತೆ 37 ಜನರಿಗೆ ಕಚ್ಚಿ ಸಾರ್ವಜನಿಕರಲ್ಲಿ ಭೀತಿ ಮೂಡಿಸಿತು. ಇನ್ನು ಅದು ಕಚ್ಚಿರುವ ನಾಯಿ, ಜಾನುವಾರುಗಳ ಸಂಖ್ಯೆ ಲೆಕ್ಕಕ್ಕೆ ಸಿಗದಷ್ಟು. ಕಾಕತಾಳೀಯವಾಗಿ ಈ ಆತಂಕಕಾರಿ ವಿದ್ಯಮಾನ ನಡೆದಿರುವುದು ವಿಶ್ವ ರೇಬಿಸ್ ದಿನದಂದು (ಸೆ. 28). ಮಾರಕ ಪ್ರಾಣಿಜನ್ಯ ರೋಗವಾದ ರೇಬಿಸ್ ನಿಯಂತ್ರಿಸುವ ಕಾರ್ಯಕ್ರಮಗಳಿಗೆ ಸಡ್ಡು ಹೊಡೆಯುವ ರೀತಿಯಲ್ಲಿ ಈ ಪ್ರಕರಣ ನಡೆದಿದೆ.
ಸಾಕುಬೆಕ್ಕಿನ ಕಡಿತದಿಂದ ಹಳ್ಳಿಯೊಂದರ ಮಹಿಳೆ ಇತ್ತೀಚೆಗೆ ಮೃತಪಟ್ಟಳು. ರೇಬಿಸ್ ರೋಗದ ಅಪಾಯಗಳ ಅರಿವಿಲ್ಲದ ಆಕೆ ಸರಿಯಾಗಿ ಚುಚ್ಚುಮದ್ದು ತೆಗೆದುಕೊಳ್ಳದೆ ಹಲವು ಶತಮಾನಗಳಷ್ಟು ಹಳೆಯ ಕಾಯಿಲೆಗೆ ಬಲಿಯಾಗಿದ್ದು ದುರದೃಷ್ಟಕರ! ಹುಚ್ಚುನಾಯಿ ಕಚ್ಚಿದ್ದರಿಂದ ಒಬ್ಬ ಹೆಣ್ಣುಮಗಳು ಮರಣ ಹೊಂದಿದ ಪ್ರಕರಣ ಮಾಸುವ ಮುನ್ನವೇ ಈ ಪ್ರಕರಣ ನಡೆದಿದೆ. ಈ ಎರಡು ಪ್ರಕರಣಗಳು ನಡೆದಿರುವುದು ಸಹ ಶಿವಮೊಗ್ಗ ಜಿಲ್ಲೆಯಲ್ಲಿ.
ದೇಶದ ಒಂದಲ್ಲ ಒಂದು ಕಡೆಯಿಂದ ಇಂಥ ಪ್ರಕರಣಗಳು ವರದಿಯಾಗುತ್ತಲೇ ಇವೆ. ಲಸಿಕೆಯಿಂದ ಅತಿ ಸುಲಭವಾಗಿ ತಡೆಗಟ್ಟಬಹುದಾದ ಕಾಯಿಲೆಯೊಂದಕ್ಕೆ ಜನ- ಜಾನುವಾರುಗಳು ಗಣನೀಯ ಸಂಖ್ಯೆಯಲ್ಲಿ ಬಲಿಯಾಗುತ್ತಿರುವುದು ವ್ಯವಸ್ಥೆಯ ದೋಷವೇ ಸರಿ.
ಕೇಂದ್ರ ನರವ್ಯೂಹವನ್ನು ಬಾಧಿಸುವ, ರೋಗಲಕ್ಷಣಗಳು ಕಾಣಿಸಿಕೊಂಡ ನಂತರ ಯಾವುದೇ ಚಿಕಿತ್ಸೆಯಿಲ್ಲದೆ ಮರಣ ನಿಶ್ಚಿತವಾಗಿರುವ ರೇಬಿಸ್ (ಹುಚ್ಚುನಾಯಿ ರೋಗ) ಪ್ರಾಣಿಜನ್ಯ ರೋಗಗಳಲ್ಲೇ ಅತಿ ಮಾರಕವಾದದ್ದು. ವಿಶ್ವದ ಒಟ್ಟು ರೇಬಿಸ್ ಸಾವುಗಳಿಗೆ ಮೂರನೇ ಒಂದರಷ್ಟು ಕೊಡುಗೆ ನಮ್ಮ ದೇಶದ್ದೆ. ನಮ್ಮಲ್ಲಿ ಈ ರೋಗಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ವರ್ಷಕ್ಕೆ ಇಪ್ಪತ್ತು ಸಾವಿರಕ್ಕೂ ಅಧಿಕ ಎಂಬ ಅಂದಾಜಿದೆ. ಇಂತಹ ಶೋಚನೀಯ ಸ್ಥಿತಿಗೆ ಪ್ರಮುಖ ಕಾರಣ ಅರಿವಿನ ಕೊರತೆ ಜೊತೆಗೆ ಅನಿಯಂತ್ರಿತ ನಾಯಿಗಳ ಸಂಖ್ಯೆ. ಪ್ರಾಣಿಗಳ ಮೇಲಿನ ದಯೆ, ಅನುಕಂಪ, ಹೊರಗಡೆ ಆಹಾರ ಚೆಲ್ಲುವುದು, ತ್ಯಾಜ್ಯ ವಿಲೇವಾರಿಯಲ್ಲಿ ನಿರ್ಲಕ್ಷ್ಯತನ, ಸಾಕಣೆಯ ನಿಯಮ ಪಾಲಿಸದಿರುವುದು, ಜನನ ನಿಯಂತ್ರಣದ ಕ್ರಮಗಳನ್ನು ಅನುಸರಿಸದೆ ಹುಟ್ಟುವ ನಾಯಿಮರಿಗಳನ್ನು ಬೀದಿಗೆ ಬಿಡುವಂತಹ ಕಾರಣಗಳಿಂದ ಬೀಡಾಡಿ ನಾಯಿಗಳ ಸಂಖ್ಯೆ ಆರು ಕೋಟಿ ದಾಟಿದೆ ಎನ್ನುತ್ತಿದೆ ಸಮೀಕ್ಷೆಯೊಂದು! ಇನ್ನು ಸಾಕುನಾಯಿಗಳ ಸಂಖ್ಯೆಯೂ ಇದರ ಅರ್ಧದಷ್ಟಿದೆ. ಪರಿಣಾಮ, ವರ್ಷದಿಂದ ವರ್ಷಕ್ಕೆ ನಾಯಿ ಕಡಿತದ ಪ್ರಕರಣಗಳ ತೀವ್ರ ಹೆಚ್ಚಳ. ನಮ್ಮ ರಾಜ್ಯವೊಂದರಲ್ಲೇ ಈ ಸಾಲಿನ ಜನವರಿಯಿಂದ ದಾಖಲಾದ ನಾಯಿ ಕಡಿತಗಳ ಸಂಖ್ಯೆ 2.4 ಲಕ್ಷ! ಇನ್ನು ವರದಿಯಾಗದ ಪ್ರಕರಣಗಳು ಅವೆಷ್ಟೊ!
ನಾಯಿ ಕಡಿತಕ್ಕೆ ಸಾಮಾನ್ಯವಾಗಿ ಒಳಗಾಗುವವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಹದಿನೈದು ವರ್ಷದೊಳಗಿನ ಮಕ್ಕಳೆ. ನಾಯಿಯು ಮರಿ ಹಾಕಿರುವಾಗ, ಹಸಿದಿರುವಾಗ, ಆಹಾರ ತಿನ್ನುವಾಗ, ಗಾಯ, ನೋವು, ಅನಾರೋಗ್ಯದಂತಹ ಸಮಸ್ಯೆಗಳಿಂದ ಬಳಲುವಾಗ ಬೇಗ ಸಿಟ್ಟಿಗೇಳುತ್ತದೆ. ನಿರಂತರ ಆಟ, ಕೀಟಲೆ, ಹಿಂಸೆಯಿಂದಲೂ ಕೆರಳುವ ಶ್ವಾನಗಳು ಸ್ವರಕ್ಷಣೆಗಾಗಿ ಕಚ್ಚುತ್ತವೆ. ನಾಯಿಗಳು ಬೆದೆಗೆ ಬಂದಾಗ, ಹಿಂಡಲ್ಲಿರುವಾಗ, ಅಪರಿಚಿತರನ್ನು ಕಂಡಾಗ ಉದ್ರೇಕಗೊಳ್ಳುವ ಸಂಭವವಿದೆ. ಅದರಲ್ಲೂ ಸಣ್ಣ ಮಕ್ಕಳನ್ನು ನಾಯಿಯೊಂದಿಗೆ ಆಟವಾಡಲು ಬಿಡುವುದು ಅತಿ ಅಪಾಯಕಾರಿ. ಚಿಕ್ಕ ಮಕ್ಕಳು ನಾಯಿಗಳಿಗೆ ಅವುಗಳ ಜನ್ಮಸ್ವಭಾವದ ಕಾರಣದಿಂದ ಬಲಿ ಪ್ರಾಣಿಗಳಂತೆ ಕಾಣಬಹುದು! ನಾಯಿಗಳ ಇಂತಹ ವರ್ತನೆಯ ಬಗ್ಗೆ ಪಾಲಕರಿಗಾಗಲಿ, ಮಕ್ಕಳಿಗಾಗಲಿ ತಿಳಿವಳಿಕೆ ಇಲ್ಲದಿರುವುದೇ ಕಡಿತದ ಪ್ರಕರಣಗಳ ಹೆಚ್ಚಳಕ್ಕೆ ಕಾರಣ.
ಗಾಯಗಳ ಸಮರ್ಪಕ ನಿರ್ವಹಣೆ ಸಂಭವನೀಯ ರೇಬಿಸ್ ಅಪಾಯವನ್ನು ಕನಿಷ್ಠ ಮಟ್ಟಕ್ಕಿಳಿಸುವಲ್ಲಿ ಪ್ರಮುಖ ಅಂಶ. ಗಾಯವನ್ನು ತಕ್ಷಣ ಸ್ವಚ್ಛ ನೀರಿನಲ್ಲಿ ಸಾಬೂನು ಬಳಸಿ ಚೆನ್ನಾಗಿ ತಿಕ್ಕಿ ತೊಳೆಯಬೇಕು. ನಂತರದಲ್ಲಿ ಅಯೋಡಿನ್, ಸ್ಪಿರಿಟ್‌ನಂತಹ ನಂಜು ನಿವಾರಕ ದ್ರಾವಣ ಅಥವಾ ಮುಲಾಮು ಹಚ್ಚಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಗಾಯಕ್ಕೆ ಸುಣ್ಣ, ಖಾರದ ಪುಡಿ, ನೀಲಿ ಪುಡಿ, ಎಣ್ಣೆ, ಗಿಡಮೂಲಿಕೆಗಳ ಮಿಶ್ರಣ ಹಾಕಬಾರದು. ಪಟ್ಟಿ ಸುತ್ತಬಾರದು. ವಿಳಂಬ ಮಾಡದೆ ವೈದ್ಯಕೀಯ ನೆರವು ಪಡೆಯುವುದು ಅಗತ್ಯ. ಲಸಿಕೆಯ ಜೊತೆಗೆ ಗಾಯ ತೀವ್ರವಾಗಿದ್ದಲ್ಲಿ ಸುತ್ತಲೂ ರೇಬಿಸ್ ಇಮ್ಯುನೊಗ್ಲೋಬುಲಿನ್ ಚುಚ್ಚುಮದ್ದಿನ ಅವಶ್ಯಕತೆಯಿದೆ.
ವಿಶ್ವ ಸ್ಯಾಸ್ಥ್ಯ ಸಂಸ್ಥೆಯು ನಾಯಿಗಳಿಂದ ಬರಬಹುದಾದ ರೇಬಿಸ್ ಕಾಯಿಲೆಯನ್ನು 2030ರೊಳಗೆ ಸಂಪೂರ್ಣವಾಗಿ ತೊಡೆದುಹಾಕುವ ಗುರಿ ನೀಡಿದೆ. ಆದರೆ ರೋಗಪತ್ತೆಯಲ್ಲಿನ ತೊಡಕುಗಳು, ಜಾಗೃತಿಯ ಕೊರತೆ, ನಿರ್ಲಕ್ಷ್ಯತನ, ರೇಬಿಸ್ ಇಮ್ಯುನೊಗ್ಲೋಬುಲಿನ್ ಚುಚ್ಚುಮದ್ದು, ಲಸಿಕೆಗಳ ದುಬಾರಿ ದರ, ಅನಿಯಂತ್ರಿತ ಬೀದಿ ನಾಯಿಗಳ ಸಂಖ್ಯೆ, ಇಚ್ಛಾಶಕ್ತಿಯ ಅಭಾವದಿಂದಾಗಿ ಗುರಿಯತ್ತಲಿನ ನಡೆ ಕುಂಟುತ್ತಾ ಸಾಗಿದೆ!
ಬೀಡಾಡಿ ನಾಯಿಗಳ ಸಂಖ್ಯೆಯನ್ನು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯ ಮೂಲಕ ನಿಯಂತ್ರಿಸುವುದು ಅತ್ಯಂತ ಕಠಿಣ ಕಾರ್ಯ. ಇದಕ್ಕೆ ಮಾನವ ಸಂಪನ್ಮೂಲವೂ ಸೇರಿದಂತೆ ದೊಡ್ಡ ಪ್ರಮಾಣದ ಹಣಕಾಸಿನ ಅಗತ್ಯವಿದೆ. ಜೊತೆಗೆ ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರಬೇಕು. ಹಾಗಾಗಿ, ಸಾಮೂಹಿಕ ಲಸಿಕಾ ಕಾರ್ಯಕ್ರಮಗಳನ್ನು ಯೋಜನಾಬದ್ಧವಾಗಿ ನಡೆಸುವುದು, ಜನಜಾಗೃತಿ ಮೂಡಿಸುವುದು ನಮ್ಮ ಮುಂದಿನ ಸದ್ಯದ ದಾರಿಗಳು.
ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ ಸರ್ಕಾರಿ ಪಶುಆಸ್ಪತ್ರೆ, ತೀರ್ಥಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.