ಸೋಮವಾರ, ಅಕ್ಟೋಬರ್ 18, 2021
24 °C
ವೈದ್ಯಕೀಯ ಶಿಕ್ಷಣಕ್ಕೆ ಸೇರ್ಪಡೆಯಾಗಿರುವ ಹೊಸ ಪಠ್ಯಕ್ರಮ, ಬದಲಾದ ಕಾಲಘಟ್ಟದಲ್ಲಿ ಈ ಇಬ್ಬರ ನಡುವಿನ ಪರಸ್ಪರ ವಿಶ್ವಾಸ ವೃದ್ಧಿಗೆ ಪೂರಕವಾಗಿದೆ

ಸಂಗತ| ವೈದ್ಯ– ರೋಗಿ ಸಂಬಂಧಕ್ಕೆ ಹೊಸ ಭಾಷ್ಯ

ಡಾ. ವಿನಯ ಶ್ರೀನಿವಾಸ್ Updated:

ಅಕ್ಷರ ಗಾತ್ರ : | |

Prajavani

ವೈದ್ಯಕೀಯ ಶಿಕ್ಷಣದಲ್ಲಿ ಈಗ ಹೊಸ ಪಠ್ಯಕ್ರಮ ಸೇರಿಸಲಾಗಿದೆ. ವಿಶೇಷವೆಂದರೆ, ಈ ಪಠ್ಯಕ್ರಮ ವೈದ್ಯ ವಿಷಯಗಳಿಗೆ ಸಂಬಂಧಿಸಿದ್ದಲ್ಲ, ಸಂಪೂರ್ಣ ಬೇರೆಯದು.

ಭಾರತೀಯ ವೈದ್ಯಕೀಯ ಮಂಡಳಿಯು ಇದೀಗ ವೈದ್ಯರ ಜವಾಬ್ದಾರಿಯನ್ನು ಹೆಚ್ಚಿಸುವ ಉದ್ದೇಶದಿಂದ, ವೈದ್ಯ– ರೋಗಿಯ ಸಂಬಂಧವನ್ನು ಮತ್ತಷ್ಟು ಉತ್ತಮವಾಗಿಸಲೆಂದು ಹಾಗೂ ಸಂಘರ್ಷಗಳನ್ನು ಕಡಿಮೆ ಮಾಡಲೆಂದು ಹೊಸ ಅಂಶಗಳನ್ನು ಪಠ್ಯದಲ್ಲಿ ಸೇರಿಸಿದೆ. ಇದರಲ್ಲಿ ಮುಖ್ಯವಾಗಿ ವರ್ತನೆ, ನೈತಿಕತೆ ಮತ್ತು ಸಂವಹನ ಕೌಶಲದ ಬಗ್ಗೆ ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕಿದೆ. ವೈದ್ಯಕೀಯ ಶಿಕ್ಷಣದ ನಾಲ್ಕೂ ವರ್ಷಗಳಲ್ಲಿ ಈ ಪಠ್ಯವನ್ನು ಹಂಚಲಾಗಿದೆ.

ಮೊದಲನೆಯ ವರ್ಷದಲ್ಲಿ, ವೈದ್ಯನೆಂದರೆ ಹೇಗಿರಬೇಕು, ರೋಗಿಯ ಮನಃಸ್ಥಿತಿ ಹೇಗಿರುತ್ತದೆ, ವೈದ್ಯನಿಂದ ಆತನ ನಿರೀಕ್ಷೆಗಳೇನು ಎಂಬುದರ ಬಗ್ಗೆ ಪಾಠಗಳಿವೆ. ಅಂತೆಯೇ ತನ್ನ ದೇಹವನ್ನು ಕತ್ತರಿಸಿಕೊಂಡು ಅಂಗಾಂಗ ರಚನೆಯ ಬಗ್ಗೆ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ತಿಳಿಸಲು ತಯಾರಾದ ಮಾನವ ಕಳೇಬರವನ್ನು ತಮ್ಮ ಮೊದಲ ಗುರು ಎಂದು ಗೌರವಿಸಬೇಕು ಎಂಬ ಅಂಶವನ್ನು ಮನವರಿಕೆ
ಮಾಡಿಕೊಡಲಾಗುತ್ತದೆ.

ಎರಡನೆಯ ವರ್ಷದಲ್ಲಿ ಸಂವಹನ ಕೌಶಲಗಳನ್ನು ಇನ್ನೂ ವಿಸ್ತಾರವಾಗಿ ತಿಳಿಸುತ್ತಾ, ಜೈವಿಕ ನೈತಿಕ ವಿಜ್ಞಾನದ ಬಗ್ಗೆಯೂ ಬೋಧನೆ ಶುರುವಾಗುತ್ತದೆ. ಆರೋಗ್ಯ ರಕ್ಷಣೆ ಪ್ರತಿಯೊಬ್ಬರ ಹಕ್ಕು ಎಂಬುದನ್ನು ಮನದಟ್ಟು ಮಾಡುತ್ತಲೇ ಆರೋಗ್ಯ ರಕ್ಷಣಾ ತಂಡಗಳಲ್ಲಿ ಸೌಹಾರ್ದದಿಂದ ಕಾರ್ಯನಿರ್ವಹಿಸುವ ಸೂಕ್ಷ್ಮಗಳನ್ನು ತಿಳಿಸಲಾಗುತ್ತದೆ. ರೋಗಿಯ ಕುಟುಂಬದ ಸದಸ್ಯರ ಮನಃಸ್ಥಿತಿಯನ್ನು ಅರ್ಥ ಮಾಡಿಕೊಂಡು ಸೂಕ್ತ ಸಾಂತ್ವನ ಹೇಳುವ ರೀತಿನೀತಿಗಳನ್ನು ಹೊಸ ಪಠ್ಯ ತಿಳಿಸುತ್ತದೆ.

ಮೂರನೆಯ ವರ್ಷದಲ್ಲಿಯೂ ಸಂವಹನ ಕೌಶಲ, ಜೈವಿಕ ನೈತಿಕ ವಿಜ್ಞಾನದ ತರಗತಿಗಳು ಮುಂದುವರಿಯುತ್ತವೆ. ಚಿಕಿತ್ಸೆಯ ವೇಳೆ ಆಗಬಹುದಾದ ವೈದ್ಯಕೀಯ ಲೋಪಗಳನ್ನು ಬಹಿರಂಗಪಡಿಸುವ ರೀತಿ ಮತ್ತು ಅದರ ಮಹತ್ವವನ್ನು ತಿಳಿಸಲಾಗುತ್ತದೆ. ರೋಗಿಯ ಆರೈಕೆಯಲ್ಲಿ ಆತನ ಗೋಪ್ಯತೆ ಕಾಪಾಡಿಕೊಳ್ಳುವ ಬಗೆ ಮತ್ತು ಎಂತಹ ಸಂದರ್ಭಗಳಲ್ಲಿ ಅದನ್ನು ಉಲ್ಲಂಘಿಸಬಹುದು ಎಂಬುದರ ಬಗ್ಗೆ ತಿಳಿಹೇಳಲಾಗುತ್ತದೆ. ಕಾನೂನಿನ ಚೌಕಟ್ಟಿಗೆ ಒಳಪಡುವ ವೈದ್ಯಕೀಯ ಪ್ರಕರಣಗಳನ್ನು ನಿರ್ವಹಿಸುವ ರೀತಿ ರಿವಾಜುಗಳನ್ನು ಬೋಧಿಸಲಾಗುತ್ತದೆ.

ಇನ್ನು ಕಡೆಯ ವರ್ಷದ ಹೊಸ ಪಠ್ಯವು ವೈದ್ಯ– ರೋಗಿಯ ನಡುವಿನ ಸಂಬಂಧಕ್ಕೆ ಒತ್ತುಕೊಡುತ್ತದೆ. ರೋಗಿಯ ಆರೈಕೆಯಲ್ಲಿ ಅನುಭೂತಿಯ ಮಹತ್ವವನ್ನು ತಿಳಿಸುತ್ತದೆ. ನಿಷ್ಠಾವಂತ ವೈದ್ಯನಾಗಿ ಕರ್ತವ್ಯ ನಿರ್ವಹಿಸುವುದರ ಬಗ್ಗೆ ತಿಳಿಹೇಳಲಾಗುತ್ತದೆ. ಗಂಭೀರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿರುವ ಅಥವಾ ಸಾವಿನ ಅಂಚಿನಲ್ಲಿರುವ ರೋಗಿಯ ವಿಚಾರವನ್ನು ಆತನ ಸಂಬಂಧಿಕರಿಗೆ ನಿಧಾನವಾಗಿ ತಿಳಿಸುವ ಪರಿಯನ್ನೂ ಕಲಿಸಲಾಗುತ್ತದೆ. ವಿದ್ಯಾರ್ಥಿಗಳು ಪರಿಪೂರ್ಣ ವೈದ್ಯರಾಗುವ ಕಡೆಯ ಹಂತದಲ್ಲಿರುವ ಈ ದಿನಗಳಲ್ಲಿ ವೈದ್ಯ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ಹತ್ತಿರವಾದ ವಿವಿಧ ಉದ್ಯಮಗಳ (ಉದಾಹರಣೆಗೆ, ಔಷಧ ತಯಾರಿಸುವ) ನಡುವಿನ ಸಂಬಂಧ ಹೇಗಿರಬೇಕು, ಅಲ್ಲಿ ವೈದ್ಯ ಎಂತಹ ನೈತಿಕ ಪ್ರಜ್ಞೆ ಹೊಂದಿರಬೇಕು ಎಂಬುದನ್ನು ಬೋಧಿಸಲಾಗುತ್ತದೆ.

ರೋಗಿಯ ಸಾವು ಸಂಭವಿಸಿದಾಗ ಅಹಿತಕರ ಘಟನೆಗೆ ಅವಕಾಶವಿಲ್ಲದೆ ಸನ್ನಿವೇಶವನ್ನು ನಿಭಾಯಿ ಸುವುದರ ಬಗ್ಗೆ ಪ್ರಕರಣಗಳನ್ನು ಆಧರಿಸಿ ಕಲಿಯಲು ಸೂಚಿಸಲಾಗುತ್ತದೆ. ಚಿಕಿತ್ಸೆಯು ವಿಫಲವಾದಾಗ ರೋಗಿಯ ಕಡೆಯವರಿಗೆ ತಿಳಿಸುವ ಬಗೆ ಮತ್ತು ಅದು ಬೀರಬಹುದಾದ ಪರಿಣಾಮಗಳ ನಿರ್ವಹಣೆ ಹೇಗೆ ಎಂಬಂಥ ಅಂಶಗಳನ್ನು ಹೇಳಿಕೊಡಲಾಗುತ್ತದೆ.

ಒಟ್ಟಿನಲ್ಲಿ, ವೈದ್ಯರ ವೃತ್ತಿಪರತೆಗೆ ವಿದ್ಯಾರ್ಥಿ ದೆಸೆಯಿಂದಲೇ ತಳಪಾಯ ಹಾಕುವ ಉದ್ದೇಶ ಈ ಹೊಸ ಪಠ್ಯಕ್ರಮದ್ದಾಗಿದೆ. ಹಾಗೆಯೇ, ವೈದ್ಯನಾಗುವವನು ಕೇವಲ ರೋಗ ಚಿಕಿತ್ಸಕನಾದರೆ ಸಾಲದು, ಸ್ವಸ್ಥ ಸಮಾಜವನ್ನು ಕಟ್ಟುವ ನಾಯಕನಾಗಬೇಕು ಎಂಬ ಅಂಶವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವಿದೆ. ಪರಹಿತ ಚಿಂತನೆ, ಪರಸ್ಪರ ಗೌರವ, ಸ್ಪಂದಿಸುವಿಕೆ ಮೊದಲಾದ ಮೌಲ್ಯಗಳನ್ನು ಬಿತ್ತುವ ಕಾರ್ಯಕ್ಕೆ ಈ ಪಠ್ಯ ಕೈಹಾಕಿದೆ. ಇದನ್ನು ಬೋಧಿಸಲು ವೈದ್ಯ ಶಿಕ್ಷಕರಿಗೆ ಕಡ್ಡಾಯವಾಗಿ ಸೂಕ್ತ ತರಬೇತಿ ಕೊಡಲಾಗುತ್ತಿದೆ.

ಅದೇನೇ ಇರಲಿ, ಹಿಂದೆ ವೈದ್ಯಕೀಯ ವಿಷಯ ಕಲಿಯುತ್ತ ಸ್ವಾಭಾವಿಕವಾಗಿಯೇ ಈ ಮೌಲ್ಯಗಳನ್ನು ಕರಗತ ಮಾಡಿಕೊಂಡ ಎಷ್ಟು ಹಿರಿಯ ವೈದ್ಯರನ್ನು ನಾವು ನೋಡಿಲ್ಲ? ಆದರೆ ಅದು ವೈದ್ಯೋ ನಾರಾಯಣೋ ಹರಿಃ ಎನ್ನುತ್ತಿದ್ದ ಕಾಲ! ವೈದ್ಯರು ಎಂದಿಗೂ ಉದ್ದೇಶಪೂರ್ವಕವಾಗಿ ರೋಗಿಗೆ ಹಾನಿ ಮಾಡುವುದಿಲ್ಲ ಎಂದು ಬಲವಾಗಿ ನಂಬಿದ್ದ ಕಾಲ! ಕಾಲ ಬದಲಾಗಿದೆ. ಜನಸಾಮಾನ್ಯರು ಮೊದಲು ಗೂಗಲ್ ವೈದ್ಯರನ್ನು ಸಂಪರ್ಕಿಸಿದ ನಂತರವೇ ಆಸ್ಪತ್ರೆಗೆ ಭೇಟಿ ನೀಡುವುದು. ಮೂರ್ನಾಲ್ಕು ವೈದ್ಯರ ಅಭಿಪ್ರಾಯ
ವನ್ನು ತೆಗೆದುಕೊಂಡ ನಂತರವೇ ಚಿಕಿತ್ಸೆಯನ್ನು ನಿರ್ಧರಿಸುವುದು. ಕೆಲವು ವೈದ್ಯರೂ ಐಷಾರಾಮಿ ಬದುಕಿನ ಹಿಂದೆ ತೆರಳಿ ಎಡವುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ವೈದ್ಯ– ರೋಗಿ ಇಬ್ಬರಿಗೂ ಮೊದಲಿನ ತಾಳ್ಮೆ– ಸಾವಧಾನ ಇಲ್ಲದಾಗಿದೆ. ಬದಲಾದ ಕಾಲಘಟ್ಟದಲ್ಲಿ ಅವರ ನಡುವೆ ಪರಸ್ಪರ ವಿಶ್ವಾಸ ಕುಂದಿದೆ.

ಕಾರಣಗಳೇನೇ ಇರಲಿ, ಈ ಎಲ್ಲ ಸೂಕ್ಷ್ಮಗಳನ್ನೂ ಪಠ್ಯದ ರೂಪದಲ್ಲಿ ಕಡ್ಡಾಯವಾಗಿ ಕಲಿಸುವಂತಹ ಪರಿಸ್ಥಿತಿ ಬಂದಿರುವುದು ವಿಪರ್ಯಾಸವೇ ಸರಿ.

ಲೇಖಕಿ: ರೋಗಲಕ್ಷಣಶಾಸ್ತ್ರಜ್ಞೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು