ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಸದ್ದನ್ನೇ ನೆಚ್ಚಿದವರಿಗೆ ಮೌನದ ಹಂಗಿಲ್ಲ

ರಾಜಕಾರಣದಲ್ಲಿ ಭಾಷೆಯು ಇನ್ನಿಲ್ಲದಂತೆ ದುರ್ಬಳಕೆ ಆಗುತ್ತಿದೆ
Published 15 ಏಪ್ರಿಲ್ 2024, 19:07 IST
Last Updated 15 ಏಪ್ರಿಲ್ 2024, 19:07 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಪ್ರಚಾರದ ಭರಾಟೆ ತಾರಕಕ್ಕೇರಿದೆ. ವಿವಿಧ ಪಕ್ಷಗಳ ಅಭ್ಯರ್ಥಿ
ಗಳಿಂದ ಆರೋಪ, ಪ್ರತ್ಯಾರೋಪ, ವೈಯಕ್ತಿಕ ನಿಂದನೆ ಅವ್ಯಾಹತವಾಗಿ ಮುಂದುವರಿದಿವೆ. ರಾಜಕಾರಣ
ದಲ್ಲಿ ಭಾಷೆ ಹೇಗೆ ದುರ್ಬಳಕೆಯಾಗುತ್ತದೆ ಎನ್ನುವುದಕ್ಕೆ ನಿದರ್ಶನವಾಗಿ ನಿಲ್ಲುತ್ತದೆ ಚುನಾವಣೆಯ ಸಂದರ್ಭ. ಬದುಕಿನ ಅಸ್ತಿತ್ವದ ಅರ್ಥವನ್ನು ಗ್ರಹಿಸುವ ಸಮರ್ಥ ಮಾಧ್ಯಮವಾಗಿರುವ ಭಾಷೆಯನ್ನು ವ್ಯತಿರಿಕ್ತ ಉದ್ದೇಶ ಗಳಿಗಾಗಿ ಬಳಸುತ್ತಿರುವ ಶಕ್ತಿಯಾಗಿ ರಾಜಕಾರಣವು ವಿಜೃಂಭಿಸುತ್ತಿದೆ.

ಸದ್ದನ್ನೇ ತುಂಬ ನೆಚ್ಚಿಕೊಂಡ ರಾಜಕಾರಣಕ್ಕೆ ಮೌನದ ಪರಿಚಯವಿಲ್ಲ ಎನ್ನುವ ಮಾತು ಸತ್ಯಕ್ಕೆ ಹತ್ತಿರ ವಾಗಿದೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಜಕಾರಣಿಗಳಿಂದ ಮಾತಿನ ವಾಗ್ಝರಿ ಹರಿಯುತ್ತದೆ. ತಮ್ಮ ಮಾತಿನ ವಾಗ್ಬಾಣಗಳಿಂದ ಎದುರಾಳಿಗಳ ಚಾರಿತ್ರ್ಯ ಹರಣಗೊಳಿಸುತ್ತಾರೆ. ಪ್ರತಿಸ್ಪರ್ಧಿಗಳ ತೇಜೋ ವಧೆಗಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಮಾತ್ರವಲ್ಲದೆ ಫೇಸ್‍ಬುಕ್ ಮತ್ತು ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿಯೂ ರಾಜಕಾರಣಿಗಳಿಂದ ಭಾಷೆಯ ದುರ್ಬಳಕೆಯಾಗುತ್ತಿದೆ. ಜೊತೆಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳದ ರಾಜಕಾರಣಿಗಳು ಭಾಷೆಯನ್ನು ಭ್ರಷ್ಟವಾಗಿಸುತ್ತಿದ್ದಾರೆ.

ಯಾವ ಮಾರಕಾಸ್ತ್ರಗಳಿಲ್ಲದೆ ರಾಜಕಾರಣವು ಹಿಂಸೆಯನ್ನು ಭಾಷೆಯ ಮೂಲಕ ಹರಡುತ್ತಿದೆ. ಹಿಂಸೆಗೆ ಕುಮ್ಮಕ್ಕು ನೀಡುವಂತಹ ಪದಗಳು ಪುಂಖಾನು ಪುಂಖವಾಗಿ ಬಳಕೆಯಾಗುತ್ತಿವೆ. ಹೊಡಿ, ಬಡಿ, ಕಡಿ, ಕತ್ತರಿಸು, ತುಂಡರಿಸು ಎಂಬಂತಹ ಪದಗಳನ್ನು ರಾಜಕಾರಣಿಗಳು ಎಗ್ಗಿಲ್ಲದೆ ಬಳಸುತ್ತಾರೆ. ಭಾಷೆಯನ್ನು ದ್ವೇಷ ಸಾಧನೆಯ ವಾಹಕವಾಗಿ ಬಳಸುತ್ತಿರುವವರಲ್ಲಿ ರಾಜಕಾರಣಿಗಳ ಸಂಖ್ಯೆ ಅಧಿಕವಾಗಿದೆ. ಹಿಂಸೆಗೆ ಪ್ರಚೋದನೆ ನೀಡುವಂತಹ ಪದಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ನೇತಾರರು ಬಳಸುತ್ತಿರುವುದರಿಂದ ನವಪೀಳಿಗೆಯಲ್ಲಿ ಭಾಷೆ ಎನ್ನುವುದು ದ್ವೇಷ ಬಿತ್ತುವ ಸಾಧನ ಎನ್ನುವ ಮನೋಭಾವ ಬಲವಾಗುತ್ತಿದೆ. 

ರಾಜಕಾರಣವು ಭಾಷೆ ದುರ್ಬಳಕೆಯ ವಿಷಯದಲ್ಲಿ ಸುತ್ತಲಿನ ಪರಿಸರವನ್ನೂ ಪ್ರಭಾವಿಸುತ್ತಿದೆ. ವಿಶ್ವವಿದ್ಯಾಲಯಗಳ ಸೆನೆಟ್, ಸಿಂಡಿಕೇಟ್‌ನಂತಹ ಅಕಡೆಮಿಕ್‌ ವಲಯಗಳಿಗೂ ಅದು ವ್ಯಾಪಿಸಿದೆ. ಸಾಹಿತ್ಯ ಪರಿಷತ್ತಿ ನಂತಹ ಪ್ರಾತಿನಿಧಿಕ ಸಂಸ್ಥೆಯ ಚುನಾವಣೆಗೂ ರಾಜಕಾರಣದ ಕಳೆ ಆವರಿಸಿದೆ. ಲೇಖಕರು, ಕಲಾವಿದರು, ಸಾಹಿತಿಗಳು ಸಹ ರಾಜಕಾರಣಿಗಳಂತೆ ಅನ್ಯರ ಅಪಮಾನ, ತೇಜೋವಧೆಗೆ ಕಾರಣವಾಗುವ ಸನ್ನಿವೇಶಗಳು ಮೇಲಿಂದ ಮೇಲೆ ಘಟಿಸುತ್ತಿವೆ. ಇವರು ರಾಜಕಾರಣದ ಭಾಷೆಯನ್ನೇ ಬಳಸುತ್ತ ಭಾಷೆಯನ್ನು ಕ್ರೂರ ಬೈಗುಳವನ್ನಾಗಿಸುತ್ತಿರುವುದು ಭಾಷೆಯೊಂದರ ಬಹುದೊಡ್ಡ ದುರಂತವಾಗಿದೆ.

ಉತ್ತರರಾಮ ಚರಿತದಲ್ಲಿ ಭವಭೂತಿ ‘ಮಾತು’ ಕುರಿತು ಹೇಳಿದ್ದು ಹೀಗಿದೆ- ‘ನಿತ್ಯದ ಬಳಕೆಯ ಸಜ್ಜನರ ನುಡಿಗಳಲ್ಲಿ ಅರ್ಥವನ್ನು ಅನುಸರಿಸಿ ಪದಗಳು ಹೊರಬರುತ್ತವೆ. ಆದರೆ ಹಿರಿಯರಾದ ಮಹಾಮಹಿಮರ ಮಾತುಗಳಲ್ಲಿ ಮಾತನ್ನೇ ಅರ್ಥವು ಹಿಂಬಾಲಿಸುತ್ತದೆ’. ಬಸವಣ್ಣನವರು ‘ನುಡಿದರೆ ಮುತ್ತಿನ ಹಾರದಂತಿರಬೇಕು, ಮಾಣಿಕ್ಯದ ದೀಪ್ತಿಯಂತಿ ರಬೇಕು’ ಎಂದು ಮಾತನ್ನು ಮುತ್ತು ಮತ್ತು ಮಾಣಿಕ್ಯಕ್ಕೆ ಹೋಲಿಸಿದ್ದಾರೆ. ಅನುಭಾವಿಗಳು ಹೇಳಿದಂತೆ ಮಾತಿಗೆ ಅಥವಾ ಭಾಷೆಗೆ ಒಂದು ಘನತೆ ತಂದುಕೊಡುವ ಬದಲು ರಾಜಕಾರಣಿಗಳು ಭಾಷೆಯ ಘನತೆಯನ್ನೇ ಹಾಳುಗೆಡವುತ್ತಿದ್ದಾರೆ.

ರಾಜಕಾರಣಿಗಳು ಭಾಷೆಯನ್ನು ಮಾತಿನಲ್ಲಿ ಮಾತ್ರ ಅಲ್ಲದೆ ಬರವಣಿಗೆಯಲ್ಲೂ ದುರ್ಬಳಕೆ ಮಾಡುತ್ತಿದ್ದಾರೆ. ರಾಜಕೀಯ ಬದುಕಿನ ಸಂಧ್ಯಾಕಾಲದಲ್ಲಿ ಆತ್ಮಚರಿತ್ರೆಯ ಬರವಣಿಗೆಗೆ ಕೈಹಾಕುವ ರಾಜಕಾರಣಿಗಳ ಸಂಖ್ಯೆ ಬಹಳಷ್ಟಿದೆ. ಪುಸ್ತಕಗಳ ಓದಿನಿಂದ ದೂರವೇ ಇರುವವರು ಅದುಹೇಗೆ ಭಾಷೆಯನ್ನು ಬರವಣಿಗೆಗೆ ಒಗ್ಗಿಸಿಕೊಳ್ಳುವರು ಎನ್ನುವ ಪ್ರಶ್ನೆ ಎದುರಾಗುತ್ತದೆ. ಇಂಥ ಕೆಲಸಕ್ಕೆಂದೇ ಬಾಡಿಗೆ ಬರಹಗಾರರು ಅಧಿಕ ಸಂಖ್ಯೆಯಲ್ಲಿರುವಾಗ ರಾಜಕಾರಣಿಗಳಿಗೆ ಬರವಣಿಗೆಯ ಕೆಲಸ ಸಲೀಸಾಗುತ್ತಿದೆ. ರಾಜಕಾರಣಿಯೊಬ್ಬರ ಆತ್ಮಕಥೆ ಪ್ರಕಟವಾದರೆ ವಿರೋಧಿಗಳ ತೇಜೋವಧೆಗೆ ವೇದಿಕೆ ನಿರ್ಮಾಣ ಆದಂತೆ. ಹಿಂದೆಲ್ಲ ರಾಜಕೀಯ ನಾಯಕರ ಆತ್ಮಚರಿತ್ರೆ ಯಲ್ಲಿ ಒಂದು ಕಾಲದ ಸಾಮಾಜಿಕ ಬದುಕು, ಸ್ವಾತಂತ್ರ್ಯ ಹೋರಾಟ, ಭಾಷಾ ಚಳವಳಿಗಳು ಅನಾವರಣಗೊಳ್ಳುತ್ತಿದ್ದವು. ಆತ್ಮಚರಿತ್ರೆ ಎನ್ನುವುದು ನಾಡಿನ ಮತ್ತು ಭಾಷೆಯ ಚರಿತ್ರೆಯಾಗಿರುತ್ತಿತ್ತು. ಇಂದು ವೈಯಕ್ತಿಕ ಹಿತಾಸಕ್ತಿ ಮುನ್ನೆಲೆಗೆ ಬಂದು ನಾಡಿನ ಹಿರಿಮೆ ಹಿನ್ನೆಲೆಗೆ ಸರಿದಿರುತ್ತದೆ.

ಭಾಷೆಯನ್ನು ದ್ವೇಷದ ಮಾಧ್ಯಮವಾಗಿ ಪರಿವರ್ತಿಸಿ ರುವ ರಾಜಕಾರಣಿಗಳಿಗೆ ಸಾಹಿತ್ಯದ ಸಾಂಗತ್ಯ ಪ್ರಾಪ್ತ ಆಗಬೇಕಿದೆ. ಸಾಹಿತ್ಯದ ಓದಿನ ಮೂಲಕವೇ ನಮ್ಮ ರಾಜಕೀಯ ನಾಯಕರು ಪ್ರೀತಿ ಮತ್ತು ಅಂತಃಕರಣ ತುಂಬಿರುವ ಭಾಷೆಯನ್ನು ಕಲಿಯಬೇಕಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ಕವಿ ಜೋಸೆಫ್ ಬ್ರಾಡ್‍ಸ್ಕಿ, ಸಾಹಿತ್ಯದಲ್ಲಿ ಭಾಷೆ ಬಳಕೆಯಾಗುವುದಿಲ್ಲ, ಸೃಷ್ಟಿಆಗುತ್ತದೆ ಎಂದಿದ್ದಾರೆ. ಭಾಷೆಯನ್ನು ಸದಾಕಾಲ ಆರೋಪ, ಪ್ರತ್ಯಾರೋಪಕ್ಕಾಗಿ ಬಳಸುತ್ತಿರುವ ರಾಜಕಾರಣಿಗಳಿಗೆ ಸಾಹಿತ್ಯದಲ್ಲಿ ಸೃಷ್ಟಿಯಾಗುವ ಭಾಷೆಯ ಪರಿಚಯವಾಗಬೇಕು. ‘ಜೀವನಕ್ಕೆ ಧನ್ಯತೆಯನ್ನು ತಂದು ಕೊಡಬಹುದಾದಂಥ ಮೌಲ್ಯಗಳನ್ನೇ ಕಳೆದುಕೊಂಡು ಅಮಾನವೀಯವಾಗುತ್ತ ನಡೆದ ನಮ್ಮ ಜಗತ್ತಿನಲ್ಲಿ ಹಣಕ್ಕಾಗಿ ಅಧಿಕಾರವನ್ನು, ಅಧಿಕಾರಕ್ಕಾಗಿ ಹಣವನ್ನು ಹೀಗೆ ಒಂದು ಇನ್ನೊಂದನ್ನು ಬೆನ್ನಟ್ಟುವಂಥ ಆತ್ಮಹೀನವೂ ಅರ್ಥಶೂನ್ಯವೂ ಆದ ಕ್ರಿಯೆಯಲ್ಲಿ ತೊಡಗಿಕೊಂಡಿರುವ ನಮ್ಮನ್ನು ಆಗೀಗಲಾದರೂ ಮನುಷ್ಯರನ್ನಾಗಿ ಚೇತರಿಸುವ ಬಲ ಬಹುಶಃ ನಮ್ಮ ಸಾಹಿತ್ಯ ಮತ್ತು ಕಲೆಗಳಿಗಷ್ಟೇ ಇದೆಯೇನೋ’ ಎಂದಿರುವ ಯಶವಂತ ಚಿತ್ತಾಲರ ಮಾತು ಇಂದಿನ ರಾಜಕಾರಣಕ್ಕೆ ಹೆಚ್ಚು ಅನ್ವಯಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT