ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಸಾಂಸ್ಕೃತಿಕ ನಂಟಿನ ರಾಜಕಾರಣ

ಇಂದಿನ ರಾಜಕಾರಣ, ಸಾಂಸ್ಕೃತಿಕ ಆಯಾಮವನ್ನು ಮರಳಿ ಪಡೆಯಬೇಕಾಗಿದೆ
Last Updated 10 ನವೆಂಬರ್ 2020, 20:30 IST
ಅಕ್ಷರ ಗಾತ್ರ

ಹಿಂದೆಲ್ಲಾ ಭಾರತದ ರಾಜಕಾರಣಿಗಳಲ್ಲಿ ಒಂದು ವಿಶೇಷ ಇರುತ್ತಿತ್ತು. ಅವರೆಲ್ಲ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತದ ಒಡನಾಟ ಉಳ್ಳವರಾಗಿದ್ದರು. ರಾಜ್ಯ-ರಾಷ್ಟ್ರದ ಚರಿತ್ರೆಯ ವಿವಿಧ ಮಗ್ಗುಲುಗಳನ್ನು ಅಧ್ಯಯನ ಮಾಡಿದ್ದರು. ಜಾಗತಿಕ ತಿಳಿವಳಿಕೆ, ವಿಶಾಲ ದೃಷ್ಟಿಕೋನ ಹೊಂದಿದ್ದರು. ಬ್ರಿಟಿಷ್ ವಸಾಹತುಶಾಹಿಯು ಭಾರತಕ್ಕೆ ನೀಡಿದ್ದ ಆಧುನಿಕ ಶಿಕ್ಷಣದ ಮೂಲಕ ಹೊಸ ಆಲೋಚನೆಗಳಿಗೆ ತಮ್ಮನ್ನು ತೆರೆದುಕೊಂಡವರಾಗಿದ್ದರು. ರಾಷ್ಟ್ರಾಭಿವೃದ್ಧಿ ಕುರಿತಾದ ಆಳವಾದ ಗ್ರಹಿಕೆ-ಮುನ್ನೋಟ ಹೊಂದಿದ್ದರು.

ಆಧುನಿಕ ಭಾರತದ ನಿರ್ಮಾತೃಗಳು ಎನ್ನಬಹು ದಾದ ಮೂರು ಮಾದರಿಗಳು ನಮ್ಮಲ್ಲಿವೆ. ಗಾಂಧಿ, ಅಂಬೇಡ್ಕರ್ ಹಾಗೂ ಲೋಹಿಯಾ ಅವರು ಸ್ವತಂತ್ರ ಭಾರತದ ಸಂದರ್ಭದಲ್ಲಿ ವ್ಯಕ್ತಿತ್ವವಾಗಿ, ಸಿದ್ಧಾಂತವಾಗಿ ಬೆಳೆದರು. ಇಂತಹವರ ಪ್ರಭೆಯಲ್ಲಿ ನೂರಾರು ವ್ಯಕ್ತಿತ್ವ
ಗಳು ರೂಪುಗೊಂಡವು. ಅನೇಕರು ಸಕ್ರಿಯ ರಾಜಕಾರಣದಲ್ಲಿ ಪಾಲ್ಗೊಂಡರು. ಹೀಗೆ ರೂಪುಗೊಂಡ ರಾಜಕಾರಣದ ಮನಸ್ಸುಗಳು ತಮ್ಮ ರಾಜಕೀಯ ಚಟುವಟಿಕೆಗಳ ವಿರಾಮಕಾಲದಲ್ಲಿ ಸಾಂಸ್ಕೃತಿಕ ವ್ಯಕ್ತಿಗಳೊಂದಿಗೆ ಒಡನಾಟ ಹೊಂದಿದ್ದವರಾಗಿದ್ದರು. ಸಾಹಿತ್ಯ, ಸಂಗೀತ ಗೋಷ್ಠಿಗಳಲ್ಲಿ ಆಸಕ್ತರಾಗಿದ್ದರು.

ಜವಾಹರಲಾಲ್‌ ನೆಹರೂ ಇತಿಹಾಸಕಾರರಾಗಿ, ರಾಜನೀತಿ ತಜ್ಞರಾಗಿ ಮಹತ್ವದ ಕೃತಿಗಳನ್ನು ರಚಿಸಿದರು. ಅಂಬೇಡ್ಕರ್- ಲೋಹಿಯಾರ ಅಸಾಧಾರಣ ಚಿಂತನೆಗಳು ಅವರ ಮಾತು, ಬರಹಗಳ ಮೂಲಕ ಸಾವಿರಾರು ಮನಸ್ಸುಗಳನ್ನು ಮುಟ್ಟಿದವು. ಈ ಬಗೆಯ ರಾಜಕಾರಣ-ಸಾಂಸ್ಕೃತಿಕ ವಲಯಗಳ ಸಂಬಂಧ ಆದಿಯಿಂದಲೂ ಬೆಳೆದುಬಂದಿದೆ. ಇದರ ಪರಿಣಾಮವಾಗಿ, ರಾಜಕೀಯ ಕ್ಷೇತ್ರ ಸುಸಂಸ್ಕೃತ ಮನಸ್ಸುಗಳ ಒಕ್ಕೂಟವೆಂಬಂತೆ ಪ್ರಜಾತಂತ್ರ ವ್ಯವಸ್ಥೆಯನ್ನು ಮುನ್ನಡೆಸಿದೆ. ಕರ್ನಾಟಕದ ಸಂದರ್ಭದಲ್ಲಿ ದೇವರಾಜ ಅರಸು, ಕಡಿದಾಳ್‍ ಮಂಜಪ್ಪ, ಶಾಂತವೇರಿ ಗೋಪಾಲಗೌಡ, ರಾಮಕೃಷ್ಣ ಹೆಗಡೆ... ಹೀಗೆ ಈ ಪರಂಪರೆ ಉಳಿದು ಬೆಳೆದುಬಂದಿದೆ.

ರಾಜಕಾರಣಕ್ಕೂ ಕಲೆ, ಸಾಹಿತ್ಯಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಏಳುವುದು ಸಹಜವೆ. ರಾಜಕಾರಣ ಎಂಬುದು ಸಮಾಜದೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಅನಿವಾರ್ಯ ಹಾಗೂ ಒಂದು ನಿರಂತರತೆಯ ತತ್ವ. ಪ್ರಗತಿ- ಅಭಿವೃದ್ಧಿಯ ಪ್ರಶ್ನೆ ಬಂದಾಗ ರಾಜಕಾರಣವು ಮೂಲಸೌಲಭ್ಯ ಪರಿಹಾರಗಳ ವಿತರಕ ಸಂಸ್ಥೆಯಾಗಿ ಮಾತ್ರ ನಿಲ್ಲಬಾರದು. ಅದರಾಚೆಗೂ ಅಭಿವೃದ್ಧಿಯ ಕವಲುಗಳು ವಿಸ್ತರಿಸಬೇಕು.

ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ ಅವರ ಪ್ರಕಾರ, ನಮ್ಮ ಈಗಿನ ಅಭಿವೃದ್ಧಿಯ ಕಲ್ಪನೆ ಅಪೂರ್ಣವಾದದ್ದು, ಭೌತಿಕ ಸ್ವರೂಪದ್ದು. ಅದು ಸಮಾಜದ ಜೀವಸೆಲೆಯಾದ ಸಾಂಸ್ಕೃತಿಕ ಅನನ್ಯತೆಯನ್ನು ಒಳಗೊಳ್ಳುವಂತಾಗಬೇಕು. ಸೇನ್ ಈ ಒಳನೋಟವನ್ನು ಇಂದು ಬಿಡಿಸಿ ಹೇಳಿರಬಹುದು. ಆದರೆ ಅದು ನಮ್ಮ ಭಾರತೀಯ ಪರಂಪರೆಗೆ ಹೊಸತಲ್ಲ. ನಮ್ಮ ರಾಜಕಾರಣದ ಪರಂಪರೆ ಯಾವತ್ತೂ ಸಂಸ್ಕೃತಿಯೊಂದಿಗಿನ ತನ್ನ ಒಡನಾಟವನ್ನು ಗಾಢವಾಗಿಯೇ ಕಟ್ಟಿಕೊಂಡು ಬಂದಿದೆ. ಇದಕ್ಕೆ ನೂರಾರು ನಿದರ್ಶನಗಳಿವೆ. ರಾಮಾಯಣದ ವಾಲ್ಮೀಕಿಯಾಗಲೀ ಮಹಾಭಾರತದ ವ್ಯಾಸರಾಗಲೀ ಒಂದೆಡೆ ಕವಿಗಳಾಗಿಯೂ ಮತ್ತೊಂದೆಡೆ ಕತೆಯೊಳಗಿನ ಪಾತ್ರವಾಗಿಯೂ ಸಂಬಂಧವುಳ್ಳವರು. ಇದನ್ನು ಪ್ರಭುತ್ವ ಹಾಗೂ ಸಂಸ್ಕೃತಿಯ ನಡುವಿನ ಸಂಬಂಧದ ಕುರಿತಾದ ರೂಪಕವಾಗಿ ನೋಡಲು ಸಾಧ್ಯವಿದೆ. ಮಹಾಕವಿ ಕಾಳಿದಾಸ ಹಾಗೂ ಆತನ ಆಶ್ರಯದಾತ ಪ್ರಾಣಮಿತ್ರ ಭೋಜರಾಜನ ನಡುವಿನ ಸಂಬಂಧ ಇದಕ್ಕೆ ಇನ್ನೊಂದು ಉದಾಹರಣೆ.

ಕನ್ನಡದ ಸಂದರ್ಭವನ್ನೇ ನೋಡಿ. ಕವಿಚರಿತೆಯ ಉದ್ದಕ್ಕೂ ಈ ಸಂಬಂಧವು ಅನೂಚಾನವಾಗಿ ಬೆಳೆದುಬಂದಿದೆ. ಕಲೆ-ಕಲಾವಿದರಿಗೆ ಹಿಂದಿನಿಂದಲೂ ರಾಜಾಶ್ರಯವೂ ದೊರೆತಿದೆ. ರಾಜಾಶ್ರಯವನ್ನು ಧಿಕ್ಕರಿಸಿದ ಹರಿಹರ, ಕುಮಾರವ್ಯಾಸರ ಉದಾಹರಣೆ ಗಳೂ ಇವೆ. ಪ್ರಭುತ್ವದ ಹಂಗನ್ನು ತೊರೆದರೂ ಪ್ರಭುತ್ವ ಇವರ ಕಾವ್ಯವನ್ನು ದೂರಕ್ಕೆ ದೂಡಲಿಲ್ಲ. ಅತ್ಯಂತ ಕಕ್ಕುಲತೆಯಿಂದ ಇವರ ಕೃತಿಗಳನ್ನು ಗಮಕವಾಚನದ ಮೂಲಕ ಪ್ರಚುರಪಡಿಸಿತು.

ಸಾಂಸ್ಕೃತಿಕ ಸಂಪತ್ತು ಕೂಡ ಅಭಿವೃದ್ಧಿಯ ಭಾಗ ಎಂಬುದನ್ನು ವರ್ತಮಾನದ ರಾಜಕಾರಣ ಮರೆತಿರುವಂತಿದೆ. ಶ್ರೀಕೃಷ್ಣದೇವರಾಯನ ಆಸ್ಥಾನದಲ್ಲಿ ವಿವಿಧ ಕ್ಷೇತ್ರಗಳ ಅದ್ವಿತೀಯ ಕವಿ-ಕಲಾವಿದರಿದ್ದರು. ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ‘ಸಾಂಸ್ಕೃತಿಕ ನಾಯಕ’ ಎಂದೇ ಗುರುತಿಸಲಾಗಿದೆ. ವಾಜಪೇಯಿ ತಮ್ಮೊಳಗಿನ ಕವಿ ಮನಸ್ಸಿನಿಂದಾಗಿ ಹೆಚ್ಚು ಜನಪರವಾಗಲು ಸಾಧ್ಯವಾಯಿತು. ನಮ್ಮನ್ನು ಜಾತ್ಯತೀತ-ಮತಾತೀತರನ್ನಾಗಿ ವಿಶ್ವಮುಖಿ ಆಲೋಚನೆಗೆ ಪ್ರೇರೇಪಿಸುವುದು ಕಲೆಗಿರುವ ತಾಕತ್ತು. ಪ್ರಜಾಪ್ರಭುತ್ವದ ಯಶಸ್ಸಿಗೆ ಬೇಕಾದ ಧಾತು ಇದು.

ಕಲಾವಿದರು, ಬರಹಗಾರರು, ಚಿಂತಕರಿಂದ ಈ ದೇಶಕ್ಕೇನು ಲಾಭ ಎಂದು ಕೇಳುವ ಇತ್ತೀಚಿನ ರಾಜಕಾರಣದ ಮನಸ್ಸುಗಳಿಗೆ ಇದನ್ನೆಲ್ಲ ತಿಳಿಹೇಳಬೇಕಾಗಿದೆ. ಇತಿಹಾಸದಲ್ಲಿ ದಾಖಲಾಗಿರುವ ಎಷ್ಟೋ ರಸ್ತೆ, ಕಟ್ಟಡಗಳ ಕುರುಹುಗಳು ಕಾಲಪ್ರವಾಹದಲ್ಲಿ ಕೊಚ್ಚಿಹೋಗಿವೆ. ಇಂದು ರಾಮಾಯಣ, ಮಹಾಭಾರತ ಕಾಲದ ಯಾವ ಗುರುತುಗಳೂ ಇಲ್ಲ. ಆದರೆ ರಾಮಾಯಣ, ಮಹಾಭಾರತ ಕಾವ್ಯಗಳಿವೆ. ವಾಲ್ಮೀಕಿ, ವ್ಯಾಸರಿದ್ದಾರೆ. ನಮ್ಮನ್ನು ಆಳಿದ ಎಷ್ಟೋ ದೊರೆಗಳು ಉಳಿದಿಲ್ಲ. ಪಂಪ, ಪೊನ್ನ, ರನ್ನ, ಹರಿಹರ, ಕುಮಾರವ್ಯಾಸರು ನಮ್ಮ ಸಂಸ್ಕೃತಿ, ರಂಗಭೂಮಿಯಲ್ಲಿ ಗಟ್ಟಿಯಾಗಿ ಉಳಿದಿದ್ದಾರೆ. ಇಂದಿನ ರಾಜಕಾರಣ ಕಳೆದುಕೊಂಡಿರುವ ಸಾಂಸ್ಕೃತಿಕ ಆಯಾಮವನ್ನು ಮರಳಿ ಪಡೆದುಕೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT