ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಜನಸಂಖ್ಯಾ ಅಧ್ಯಯನ: ಸಂದೇಶ ಹತ್ತಾರು

ಜನಸಂಖ್ಯೆ ಏರಿಳಿತದಲ್ಲಿನ ಕುತೂಹಲಕರ ಅಂಶಗಳನ್ನು ಅಧ್ಯಯನ ವರದಿ ಗುರುತಿಸಿದೆ
Last Updated 12 ಆಗಸ್ಟ್ 2020, 19:31 IST
ಅಕ್ಷರ ಗಾತ್ರ

‘ಲ್ಯಾನ್ಸೆಟ್’ ವೈದ್ಯಕೀಯ ನಿಯತಕಾಲಿಕವು ವಿಶ್ವದ ಜನಸಂಖ್ಯೆ ಕುರಿತಾಗಿ ಇತ್ತೀಚೆಗೆ ನಡೆಸಿದ ವಿಶ್ಲೇಷಣಾ ಅಧ್ಯಯನದ ಪ್ರಕಾರ, ಭಾರತದ ಜನಸಂಖ್ಯೆ ಪ್ರಸ್ತುತ 138 ಕೋಟಿಯಿಂದ, 2100ರ ವೇಳೆಗೆ 109 ಕೋಟಿಗೆ ಇಳಿಯುವ ಸಾಧ್ಯತೆಯಿದೆ. ಅಂತೆಯೇ, ಪ್ರಸಕ್ತ ಬೆಳವಣಿಗೆಯ ವೇಗವನ್ನು ಆಧಾರವಾಗಿ ಇಟ್ಟುಕೊಂಡರೆ, 2048ರ ವೇಳೆಗೆ ಭಾರತದ ಜನಸಂಖ್ಯೆ ಗರಿಷ್ಠ 161 ಕೋಟಿ ತಲುಪಿ, ಆನಂತರದಲ್ಲಿ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ.

ಬಿಲ್ ಗೇಟ್ಸ್ ಫೌಂಡೇಷನ್ ಧನಸಹಾಯದಿಂದ ವಿಜ್ಞಾನಿಗಳು ನಡೆಸಿದ ಈ ಅಧ್ಯಯನವು 2017ರಿಂದ 2100ರವರೆಗಿನ ಅವಧಿಯನ್ನು ಪರಿಗಣಿಸಿದ್ದು, ಒಟ್ಟು 195 ದೇಶಗಳ ಜನನ-ಮರಣದ ಶೇಕಡಾವಾರು ಪ್ರಮಾಣ, ಸಂತಾನೋತ್ಪತ್ತಿ ಪ್ರಮಾಣ, ಜನರ ವಲಸೆ ಇತ್ಯಾದಿ ಅಂಶಗಳನ್ನು ಆಧರಿಸಿ ವರದಿಯನ್ನು ಸಿದ್ಧಪಡಿಸಿದೆ.

ವಿಶೇಷವಾಗಿ, ಈ ಅಧ್ಯಯನವು ನಿರೀಕ್ಷಿತ ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬೆಳಕು ಚೆಲ್ಲುವ ಸಕಾರಾತ್ಮಕ ಅಂಶಗಳೆಂದರೆ, ಹೆಚ್ಚುತ್ತಿರುವ ಸ್ತ್ರೀ ಸಾಕ್ಷರತೆ ಪ್ರಮಾಣ, ಗರ್ಭ ನಿರೋಧಕಗಳ ಬಗೆಗೆ ಹೆಚ್ಚಿರುವಅರಿವು ಮತ್ತು ಅಧಿಕ ಸಂಖ್ಯೆಯಲ್ಲಿ ಉದ್ಯೋಗಸ್ಥರಾಗುತ್ತಿರುವ ಮಹಿಳೆಯರು. ಈ ಎಲ್ಲ ಬೆಳವಣಿಗೆಗಳಿಂದ ಜನಸಂಖ್ಯಾ ಪ್ರಮಾಣದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಈ ಸಮೀಕ್ಷೆಯು ಇನ್ನೂ ಕೆಲವು ಆಶ್ಚರ್ಯಕರ ಸಂಗತಿಗಳನ್ನು ಪ್ರಕಟಿಸಿದೆ. ಅದೇನೆಂದರೆ, 2100ರ ವೇಳೆಗೆ ಭಾರತ 109 ಕೋಟಿ ಜನಸಂಖ್ಯೆಯೊಂದಿಗೆ ವಿಶ್ವ ಜನಸಂಖ್ಯಾ ಶ್ರೇಣಿಯಲ್ಲಿ ಮೊದಲನೇ ಸ್ಥಾನದಲ್ಲಿ ಇರಲಿದೆ. ಚೀನಾ 73 ಕೋಟಿ ಜನಸಂಖ್ಯೆಯೊಂದಿಗೆ ಪ್ರಸಕ್ತ ಮೊದಲ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಇಳಿಯಲಿದೆ. ಇನ್ನು ನಮ್ಮ ಊಹೆಯನ್ನು ಮೀರಿ, 79 ಕೋಟಿ ಜನಸಂಖ್ಯೆಯೊಂದಿಗೆ ನೈಜೀರಿಯಾ ಎರಡನೇ ಸ್ಥಾನಕ್ಕೇರಲಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಅಧ್ಯಯನದ ಪ್ರಕಾರ, ಒಟ್ಟು 183 ದೇಶಗಳಲ್ಲಿ ಜನಸಂಖ್ಯೆ ಇಳಿಮುಖವಾಗಲಿದೆ. ಮಾತ್ರವಲ್ಲ, ಸರಿಸುಮಾರು 23 ದೇಶಗಳ ಜನಸಂಖ್ಯೆಯು ವರ್ತಮಾನದ ಸಂಖ್ಯಾ ಬಲಕ್ಕಿಂತ ಅರ್ಧದಷ್ಟು ಕಡಿಮೆಯಾಗಲಿದೆ. ಈ ಪಲ್ಲಟಕ್ಕೆ ಮುಖ್ಯ ಕಾರಣ, ವರ್ಷಗಳಿಂದ ಪ್ರಪಂಚದ ಜನಸಂಖ್ಯೆ ಸ್ಫೋಟಕ್ಕೆ ವಿಶೇಷ ಕೊಡುಗೆ ನೀಡುತ್ತಾ ಬಂದಿರುವ ಆಫ್ರಿಕಾ ಮತ್ತು ಏಷ್ಯಾ ಖಂಡಗಳಲ್ಲಿ ಜನಸಂಖ್ಯೆ ನಿಯಂತ್ರಣವಾಗಲಿರುವುದು. ಈ ವರದಿಯಲ್ಲಿ ವಿಶೇಷವಾಗಿ ಗಮನಿಸಲೇಬೇಕಾದ ಅಂಶವೆಂದರೆ, ಮುಂದಿನ ವರ್ಷಗಳಲ್ಲಿ ದುಡಿಯುವ ಜನಸಂಖ್ಯೆ ಕಡಿಮೆಯಾಗಲಿದೆ ಎನ್ನುವುದು.

ಪ್ರಸಕ್ತ ಭಾರತವನ್ನು ಯುವಜನರ ನಾಡೆಂದು ಗುರುತಿಸುತ್ತೇವೆ. ಆದರೆ ಈ ಸಮೀಕ್ಷೆ ಹೇಳುವಂತೆ, ವಿಶ್ವದ ಹೆಚ್ಚಿನ ದೇಶಗಳಲ್ಲಿ ಆಗಬಹುದಾದ ವಿದ್ಯಮಾನದಂತೆ ಭಾರತ ಕೂಡ ನಿವೃತ್ತಿ ಹೊಂದಿದವರ ಮತ್ತು ಉದ್ಯೋಗಹೀನರ ನಾಡಾಗಿ ಪರಿವರ್ತನೆಯಾಗಲಿದೆ. ಸಾಮಾನ್ಯ ತಿಳಿವಳಿಕೆಯಂತೆ, ಯಾವಾಗ ಸಮಾಜದಲ್ಲಿ ಕೆಲಸ ಮಾಡುವವರ ಸಂಖ್ಯೆ ಕಡಿಮೆಯಾಗಲಿದೆಯೋ ಸ್ವಾಭಾವಿಕವಾಗಿ ಸಮಾಜದ ಅಭಿವೃದ್ಧಿ ಕಳೆಗುಂದುತ್ತದೆ. ಈ ಅಧ್ಯಯನ ವರದಿ ಮಾಡಿದಂತೆ, ಪ್ರತೀ ಉದ್ಯೋಗಿಯು ಕನಿಷ್ಠಪಕ್ಷ ಉದ್ಯೋಗ ಇಲ್ಲದ ಅಥವಾ ನಿವೃತ್ತಿ ಹೊಂದಿದ ಇನ್ನೊಬ್ಬ ವ್ಯಕ್ತಿಯನ್ನು ಆರ್ಥಿಕವಾಗಿ ಬೆಂಬಲಿಸಬೇಕಾಗುತ್ತದೆ. ಇದರ ಪರಿಣಾಮವಾಗಿ, ಆರ್ಥಿಕ ಅಭದ್ರತೆ ಹೊಂದಿದ ಜನಸಮೂಹವನ್ನು ಪೋಷಿಸುವ ಸಲುವಾಗಿ, ದುಡಿಯುವ ವರ್ಗದ ಮೇಲೆ ಅನಿವಾರ್ಯವಾಗಿ ಆದಾಯ ತೆರಿಗೆ ಹೆಚ್ಚಳವಾಗಲಿದೆ.

ಒಟ್ಟಾರೆ, ಈ ಸಮೀಕ್ಷೆಯು ನಮಗೆ ಕೊಡುವ ಸಂದೇಶಗಳು ಹಲವಾರು. ಮೊದಲನೆಯದಾಗಿ, ಭಾರತವು ಜನಸಂಖ್ಯೆ ಏರಿಕೆಯ ಗರಿಷ್ಠ ಮಟ್ಟವನ್ನು ಆದಷ್ಟು ಬೇಗ ದಾಟಬೇಕಿದೆ. ಈ ವರದಿಯಲ್ಲಿ ಸೂಚಿಸಿದಂತೆ, ಪ್ರತೀ ದೇಶವು ಒಂದು ನಿಗದಿತ ವರ್ಷದಲ್ಲಿ ಜನಸಂಖ್ಯೆ ಬೆಳವಣಿಗೆಯ ಗರಿಷ್ಠ ಮಟ್ಟವನ್ನು ತಲುಪಿ, ಆಮೇಲೆ ನಿಧಾನವಾಗಿ ನಿಯಂತ್ರಣದತ್ತ ಜಾರುತ್ತದೆ. ಇದರ ಪ್ರಕಾರ, ಚೀನಾ 2024ರಲ್ಲಿ ಗರಿಷ್ಠ ಅಂಕವನ್ನು ತಲುಪಿದರೆ, ಭಾರತ 2048ರಲ್ಲಿ ಆ ಮೈಲಿಗಲ್ಲನ್ನು ಮುಟ್ಟಲಿದೆ. ಆರ್ಥಿಕ ವಿಶ್ಲೇಷಕರ ಪ್ರಕಾರ, ಈ ಗಡಿಯನ್ನು ಆದಷ್ಟು ಬೇಗ ಕ್ರಮಿಸುವುದು ಶ್ರೇಯಸ್ಸು. ಹಾಗಾದಲ್ಲಿ, ಜನಸಂಖ್ಯೆಯನ್ನು ಆಧರಿಸಿ ಸಮರ್ಪಕ ಸುಧಾರಣಾ ಕ್ರಮ ಕೈಗೊಳ್ಳಲು ಸಾಕಷ್ಟು ಸಮಯಾವಕಾಶ ದೊರೆತು, ದೇಶ ಅಭಿವೃದ್ಧಿ ಪಥದತ್ತ ಚಲಿಸಲು ಸಹಾಯಕವಾಗುತ್ತದೆ.

ಇನ್ನು ಎರಡನೆಯದಾಗಿ, ಸಮಗ್ರ ಮಹಿಳಾ ಸಬಲೀಕರಣವು ಜನಸಂಖ್ಯೆ ನಿಯಂತ್ರಣಕ್ಕೆ ಬಹಳ ಮುಖ್ಯ ಪೂರಕ ಅಂಶವೆಂದು ಈ ಸಮೀಕ್ಷೆ ಪುನಃ ಎಚ್ಚರಿಸುತ್ತಿದೆ. ಅವಳ ದೈಹಿಕ ಮತ್ತು ಮಾನಸಿಕ ಸ್ವಅರಿವು, ಜಾಗೃತಿ ಹಾಗೂ ಆರೋಗ್ಯಕ್ಕೆ ಹೆಚ್ಚು ಒತ್ತು ಕೊಟ್ಟಲ್ಲಿ, ದೇಶದ ಸರ್ವಾಂಗೀಣ ಪ್ರಗತಿಗೆ ಸಹಾಯಕ. ವಿಶೇಷವಾಗಿ, ಮಕ್ಕಳಿಗೆ ಜನ್ಮ ನೀಡುವ ನಿರ್ಧಾರವು ಮಹಿಳಾ ಕೇಂದ್ರಿತವಾದಲ್ಲಿ ಜನಸಂಖ್ಯೆ ನಿಯಂತ್ರಣ ಸುಲಭ.

ಕೊನೆಯದಾಗಿ, ಸರ್ಕಾರಗಳು ಸಾರ್ವಜನಿಕ ಆರೋಗ್ಯ ರಕ್ಷಣೆಯತ್ತ ಇನ್ನೂ ಹೆಚ್ಚಿನ ಗಮನಹರಿಸಬೇಕಿದೆ. ಪ್ರಸ್ತುತ ಕೊರೊನಾ ವೈರಾಣು ನಮ್ಮ ಆರೋಗ್ಯ ವ್ಯವಸ್ಥೆಯ ಲೋಪದೋಷಗಳನ್ನು ಸಂಪೂರ್ಣವಾಗಿ ಬಯಲಿಗೆಳೆದಿದೆ. ಇನ್ನೂ ಗಮನಾರ್ಹವಾಗಿ, ರಾಷ್ಟ್ರೀಯ ಆದಾಯ ಹೆಚ್ಚಳ ಮಾಡುವ ವಿವಿಧ ಮೂಲಗಳನ್ನು ಆರ್ಥಿಕ ಇಲಾಖೆ ಹುಡುಕಬೇಕಿದೆ. ಯಾಕೆಂದರೆ, ಈ ಸಮೀಕ್ಷೆ ಹೇಳುವಂತೆ, ಮುಂಬರುವ ವರ್ಷಗಳಲ್ಲಿ ದುಡಿಯುವ ಕೈಗಳು ಕಡಿಮೆಯಾದರೆ ನಿರುದ್ಯೋಗಿಗಳನ್ನು ಆರ್ಥಿಕವಾಗಿ ಬೆಂಬಲಿಸಲು ಸರ್ಕಾರಗಳು ಮತ್ತು ದೇಶದ ಆರ್ಥಿಕ ವ್ಯವಸ್ಥೆ ಹೆಚ್ಚು ಸಕ್ರಿಯವಾಗಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT