ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮಾನವೀಯತೆಯ ಅಮೃತ ಸಿಂಚನ

ಪ್ರತಿಷ್ಠೆಗಾಗಿ ಕೆಲವರು ಮಾಡುವ ವೆಚ್ಚದಲ್ಲಿ ಒಂದಿಷ್ಟು ಉಳಿತಾಯ ಮಾಡಿದರೂ ಶೂನ್ಯದತ್ತ ದೃಷ್ಟಿ ನೆಟ್ಟಿರುವ ನೊಂದ ಜೀವಗಳಿಗೆ ಸಾಂತ್ವನ ನೀಡಲು ಸಾಧ್ಯವಿದೆ
Last Updated 22 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ಪುತ್ತೂರಿನ ಖಾಸಗಿ ಚಿಕಿತ್ಸಾಲಯವೊಂದಕ್ಕೆ ದಾಖಲಾಗಿದ್ದ ಒಬ್ಬ ಬಡ ಮಹಿಳೆಗೆ ಅಲ್ಲಿಂದ ಬಿಡುಗಡೆಯಾಗಬೇಕಿದ್ದರೆ ಐದು ಲಕ್ಷ ರೂಪಾಯಿ ಪಾವತಿ ಮಾಡಬೇಕಿತ್ತು. ಕಿತ್ತು ತಿನ್ನುವ ಬಡತನದ ಬದುಕು. ಅಷ್ಟೊಂದು ಹಣ ಹೊಂದಿಸಲು ಸಾಧ್ಯವೇ ಇರಲಿಲ್ಲ. ಆಗ ಸಾಮಾಜಿಕ ಜಾಲತಾಣದಲ್ಲಿ ಆ ಮಹಿಳೆಯ ದುಃಸ್ಥಿತಿಯನ್ನು ವಿವರಿಸಿ, ಸಹೃದಯರಿಂದ ಧನಸಹಾಯ ಅಪೇಕ್ಷಿಸುವ ಮನವಿಯನ್ನು ಯಾರೋ ಹರಿಯಬಿಟ್ಟರು. ಒಂದೆರಡು ದಿನದ ಬಳಿಕ ಅದೇ ಜಾಗದಲ್ಲಿ ಆ ಮಹಿಳೆಯ ಇನ್ನೊಂದು ಮನವಿಯೂ ಎಲ್ಲೆಡೆ ಸಂಚರಿಸಿತು. ‘ದಯವಿಟ್ಟು ಯಾರೂ ಇನ್ನು ನನ್ನ ಖಾತೆಗೆ ಹಣ ಕಳುಹಿಸಬೇಡಿ. ಖಾತೆಯನ್ನು ಸ್ಥಗಿತಗೊಳಿಸಿದ್ದೇನೆ. ನನಗೆ ಬೇಕಾಗಿದ್ದುದು ಐದು ಲಕ್ಷ ರೂಪಾಯಿ. ಆದರೆ ಈಗಾಗಲೇ ಹದಿನೈದು ಲಕ್ಷ ಬಂದು ಸೇರಿದೆ. ನಮಗಿನ್ನು ಹಣ ಬೇಕಾಗಿಲ್ಲ’ ಎಂದು ಆಕೆ ಕೋರಿಕೊಂಡಿದ್ದಳು.

ಉಡುಪಿ ಜಿಲ್ಲೆಯಲ್ಲಿ ಮಗುವೊಂದಕ್ಕೆ ವಿಶೇಷ ಕಾಯಿಲೆ. ಅದಕ್ಕೆ ವಿಶಿಷ್ಟ ಚುಚ್ಚುಮದ್ದು ವಿದೇಶದಿಂದ ತರಿಸಿಕೊಟ್ಟರೆ ಮಾತ್ರ ಮಗು ಬದುಕುವ ಸಾಧ್ಯತೆ ಇತ್ತು. ಚುಚ್ಚುಮದ್ದಿನ ಬೆಲೆ ಹದಿನಾರು ಕೋಟಿ ರೂಪಾಯಿ! ಕೇಂದ್ರ ಸರ್ಕಾರವು ಕಸ್ಟಮ್ಸ್ ಸುಂಕ ರಿಯಾಯಿತಿಗೆ ಮಾತ್ರ ಒಪ್ಪಿತು. ಆಗಲೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಮನವಿಗೆ ಸ್ಪಂದಿಸಿ ಸಾಕಷ್ಟು ಹಣ ಬಂದರೂ ಚಿಕಿತ್ಸೆಗೆ ಮೊದಲು ಮಗು ಇಹಲೋಕ ತ್ಯಜಿಸಿತು. ಸಂಗ್ರಹಿಸಿದ ಹಣವನ್ನುಮಗುವಿನ ಪೋಷಕರು ಸ್ವಂತಕ್ಕೆ ಬಳಸಿಕೊಳ್ಳಲಿಲ್ಲ. ಅದನ್ನು ಸಮಾಜದ ಇನ್ನಷ್ಟು ಕಷ್ಟಪೀಡಿತರಿಗೆ ಹಂಚಿಬಿಟ್ಟರು.

ಮಾನವೀಯತೆ ಇನ್ನೂ ಅಮೃತೋಪಮವಾಗಿ ಬದುಕಿದೆ ಎನ್ನುವುದಕ್ಕೆ ಇಂತಹ ಉದಾಹರಣೆಗಳು ಅನೇಕ. ಚಿತ್ರವಿಚಿತ್ರ ಬಗೆಯ ವೇಷಗಳನ್ನು ಧರಿಸಿ ಕಲಾವಿದರೊಬ್ಬರು ಹಣ ಸಂಗ್ರಹಿಸಿ ಬಡ ಮಕ್ಕಳ ಚಿಕಿತ್ಸೆಗೆ ನೀಡಿದ ಸಹಾಯಧನ ₹ 80 ಲಕ್ಷ ದಾಟಿದೆ ಎಂಬ ಸುದ್ದಿಯೂ ನಮ್ಮ ಮುಂದಿದೆ. ಬೇರೆಯವರ ಕಷ್ಟದಲ್ಲಿ ಕರಗಿ ಅವರ ಮೈಗೆ ಸುಖದ ಸಿಂಚನ ಹನಿಸಬಲ್ಲ ಹೃದಯಗಳು ಬತ್ತಿಲ್ಲ, ಬರಡಾಗಿಲ್ಲ. ಯಾರದೋ ಕಷ್ಟದ ಸಂದೇಶವನ್ನು ಓದಿದ ತಕ್ಷಣ ಸ್ಪಂದಿಸಿ ತಮ್ಮ ಕೊಡುಗೆಯನ್ನು ಕಳುಹಿಸಿಕೊಡುವವರು ತಮ್ಮ ಹಣ ಸದ್ವಿನಿಯೋಗವಾಗಿದೆಯೇ, ತಮ್ಮ ಹೆಸರು ದಾಖಲಾಗಿದೆಯೇ ಎಂದೂ ನೋಡುವುದಿಲ್ಲ. ಅವರು ಅಜ್ಞಾತರಾಗಿಯೇ ಉಳಿಯುತ್ತಾರೆ.

ತಮಗಾಗಿಯೇ ಬದುಕದೆ ಇನ್ನೊಬ್ಬರ ಹಿತಕ್ಕಾಗಿ ಬದುಕಿದ ಅದೆಷ್ಟೋ ಮಂದಿ ನಮ್ಮ ಕಣ್ಣ ಮುಂದಿದ್ದಾರೆ. ತ.ಸು. ಶಾಮರಾಯರು, ವೆಂಕಣ್ಣಯ್ಯನವರು ಬಹಳಷ್ಟುಮಂದಿ ವಿದ್ಯಾರ್ಥಿಗಳಿಗೆ ವಾರಾನ್ನ ನೀಡಿ ಓದಲು ನೆರವಾದರು. ‘ಇಲ್ಲಿರುವುದಾವುದೂ ನಿನ್ನದೆನಬೇಡ, ನೀನಿಲ್ಲಿ ಮಾಡಿರುವ ಸತ್ಕಾರ್ಯ ಉಳಿಯುವುದು, ಹುಟ್ಟು– ಸಾವಿನ ನಡುವೆ ನಿನ್ನದೆನುತ್ತಿದ್ದ ದೇಹವೂನಿನ್ನದಾಗದೆ ಕಡೆಗೆ ಅಳಿಯುವುದು’ ಎಂಬ ಅನುಭಾವಿಗಳ ಮಾತು ನೆನಪಾಗುತ್ತದೆ. ಕಷ್ಟದಲ್ಲಿ ಬಸವಳಿದವರ ಬಗೆಗೆ ಅಯ್ಯೋ ಎನ್ನದ ನಾಲಿಗೆಯುಂಟೆ? ಅಯ್ಯೋ ಎಂದು ಮರುಗಿದರೆ ಫಲವಿಲ್ಲ ಕಷ್ಟಕ್ಕೆ ಹೆಗಲನಿತ್ತರೆ ಜನ್ಮ ಸಾರ್ಥಕವಯ್ಯ ಎಂದು ಶರಣರು ಹೇಳಿದರು.

ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ನೂರಾರು ಮಂದಿ ಬಂದು ಒಳರೋಗಿಗಳಾಗಿ ದಾಖಲಾಗುತ್ತಾರೆ. ರೋಗಿಗಳ ನೆರವಿಗಾಗಿಯೂ ಕೆಲವು ಜನರು ಬಂದಿರುತ್ತಾರೆ. ಅವರಿಗೆ ಆಸ್ಪತ್ರೆಯಿಂದ ಅನ್ನಾಹಾರ ಸಿಗುವುದಿಲ್ಲ. ಕೆಲವರು ಹೋಟೆಲ್‌ನಲ್ಲಿ ಊಟ ಮಾಡುವಷ್ಟು ಸಂಪನ್ನರಾಗಿರುವುದಿಲ್ಲ. ರೋಗಿಗಳ ಜೊತೆ ಬಂದವರಿಗಾಗಿ ಊಟವನ್ನು ಬುತ್ತಿ ಕಟ್ಟಿ ತಂದುಕೊಡುವ ಅದೆಷ್ಟೋ ಕುಟುಂಬಗಳು ಸಮೀಪದಲ್ಲೇ ಇವೆ. ತಮ್ಮ ದುಡಿಮೆಯ ಒಂದು ಪಾಲನ್ನು ಇಂಥವರ ಉದರ ಪೋಷಣೆಗೆ ಬಳಸುವ ಈ ವ್ಯಕ್ತಿಗಳು ಎಂದಿಗೂ ಸುದ್ದಿಯಾಗುವುದಿಲ್ಲ, ರಾಜ್ಯೋತ್ಸವ ಪ್ರಶಸ್ತಿಗೆ ಅವರೆಂದಿಗೂ ಅರ್ಜಿ ಹಾಕುವುದಿಲ್ಲ. ತಮ್ಮ ಆತ್ಮತೃಪ್ತಿಗಾಗಿ ನಿತ್ಯ ನಿರಂತರ ಇಂತಹ ಕೆಲಸಗಳನ್ನು ಸದ್ದುಗದ್ದಲವಿಲ್ಲದೆ ಮಾಡಿಕೊಂಡು ಬರುತ್ತಿದ್ದಾರೆ.

ಅದೆಷ್ಟೋ ಮಂದಿ ತಮ್ಮ ಹುಟ್ಟುಹಬ್ಬದಲ್ಲಿ ಮಾಡುತ್ತಿದ್ದ ಖರ್ಚಿನ ಮೊತ್ತವನ್ನು ಅನಾಥಾಶ್ರಮಗಳಿಗೆ ಕೊಡುತ್ತಾರೆ. ಮಕ್ಕಳಿಂದ ಪರಿತ್ಯಕ್ತರಾದ ವೃದ್ಧರಿಗೆ ಸಾಂತ್ವನ ನೀಡಲು ಬಳಸುತ್ತಿದ್ದಾರೆ. ಹಣವಂತರು ಪ್ರತಿಷ್ಠೆಗಾಗಿ ಮಾಡುವ ವೆಚ್ಚದಲ್ಲಿ ಒಂದಿಷ್ಟು ಉಳಿತಾಯ ಮಾಡಿದರೂ ಶೂನ್ಯದತ್ತ ದೃಷ್ಟಿ ನೆಟ್ಟಿರುವ ನೊಂದ ಜೀವಗಳಿಗೆ ಸಾಂತ್ವನ ನೀಡಲು ಸಾಧ್ಯವಿದೆ. ಇತ್ತೀಚೆಗೆ ಮಹಿಳೆಯೊಬ್ಬಳು 800 ಬೀದಿನಾಯಿಗಳಿಗೆ ದಿನವೂ ಊಟ ಹಾಕಲು ತನ್ನ ದುಡಿಮೆಯನ್ನು ವಿನಿಯೋಗಿಸುತ್ತಿರುವ ಸುದ್ದಿ ಮಂಗಳೂರಿನಲ್ಲಿ ಗಮನ ಸೆಳೆದಿತ್ತು. ನಾನಾ ಬಗೆಯ ಭಕ್ಷ್ಯಭೋಜ್ಯಗಳನ್ನು ಮಾಡಿಸಿ ಅದ್ಧೂರಿಯ ಸಮಾರಂಭ ಮಾಡಿದ ಸ್ಥಳಗಳಲ್ಲಿ ಉಂಡು ತೇಗಿದವರು ಅಲ್ಲಿ ಕೊರತೆ ಹುಡುಕಬಹುದು. ಆದರೆ ಹೊತ್ತಿನ ತುತ್ತಿಗೂ ಪರದಾಡುತ್ತಿರುವವರಿಗೆ ತಿಳಿಗಂಜಿ ನೀಡಿದರೂ ಅದು ಮೃಷ್ಟಾನ್ನವಾಗುತ್ತದೆ.

ಹೀಗಾಗಿ ಕಷ್ಟ ಬಂದಿತೆಂದು ದಾರಿಗಾಣದೆ ಯಾರೂ ಅಳಬೇಕಾದ ಪ್ರಮೇಯವಿಲ್ಲ ಎನಿಸುತ್ತದೆ. ಮಾನವೀಯ ಪ್ರಜ್ಞೆಯ ಹೃದಯಗಳ ಒಳಗೆ ಅಮೃತಸದೃಶವಾದ ಭಾವ ಜೀವಂತವಾಗಿರುವಷ್ಟು ಕಾಲವೂ ಚಿಂತೆ ಮಾಡುವ ಅಗತ್ಯವಾದರೂ ಏನಿದೆ? ಇಂದಿನ ಸಾಮಾಜಿಕ ಜಾಲತಾಣಗಳು ಈ ದಿಸೆಯಲ್ಲಿ ಯಾರದೋ ಸಂಕಷ್ಟದ ಸುದ್ದಿಯನ್ನು ಮಿಡಿಯುವ ಹೃದಯಗಳ ಬಳಿಗೆ ತಲುಪಿಸಿ ಅಂತಃಕರಣವನ್ನು ಮೀಟುತ್ತಿವೆ. ನನಗೆ ಯಾರೂ ಇಲ್ಲ ಎಂಬ ನಿರಾಶೆಯ ಭಾವ ತಳೆದವರಿಗೆ ಬೆಳಕಿನ ಬಾಗಿಲು ತೆರೆಯುತ್ತವೆ. ನಿರ್ಜೀವ ಶಿಲೆಯೊಂದರ ಆಗರಕ್ಕೆ ಹಣ ಸುರಿದು ಮಹಾದಾನಿಗಳಾಗುವ ಬದಲು ಬದುಕಿದ್ದವರ ಹಿತಕ್ಕೆ ನೀಡುವ ಸಾಂತ್ವನ ಮಹತ್ವಪೂರ್ಣವಾಗುತ್ತದೆ ಎಂಬುದನ್ನು ಯಾರೂ ಬೋಧಿಸದೆ ಕಲಿತುಕೊಂಡವರು ನಮ್ಮಲ್ಲಿ ಇನ್ನೂ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT