ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮಕ್ಕಳ ಮಾತೇ ಮರೆಯಾಯಿತೇಕೆ?

ತಮ್ಮ ಭೀತಿ, ಗೊಂದಲ, ಸಂಕಟಗಳನ್ನು ಯಾರಲ್ಲೂ ಹಂಚಿಕೊಳ್ಳಲಾಗದೆ ದುಗುಡಕ್ಕೆ ಒಳಗಾದ ಎಳೆಯರ ಸಂಖ್ಯೆ ತುಂಬಾ ದೊಡ್ಡದಿದೆ
Last Updated 4 ಮಾರ್ಚ್ 2022, 22:45 IST
ಅಕ್ಷರ ಗಾತ್ರ

‘ಸರ್, ಮಕ್ಳು ಯಾಕೋ ಬಾಯೇ ಬಿಡ್ತಿಲ್ಲ. ಹೆದ್ರಿಕೆಗೋ, ಪಾಠ ಅರ್ಥ ಆಗ್ದೆ ಹಾಗೆ ಮಾಡ್ತಾವೋ ಒಂದೂ ಗೊತ್ತಾಗಲ್ಲ. ಪ್ರಿಪರೇಟರಿ ಎಕ್ಸಾಂನಲ್ಲೂ ಮಾರ್ಕ್ಸ್‌ ತುಂಬಾ ಕಮ್ಮಿ ಬಂದಿದೆ. ಹಿಂದಿನ ಯಾವ ಬ್ಯಾಚೂ ಹೀಗಿರಲಿಲ್ಲ. ಕೊರೊನಾ ಬಂದ್ಮೇಲೆ ಈ ತರ. ಏನು ಕೇಳಿದ್ರೂ ಉತ್ರ ಕೊಡಲ್ಲ. ಹೀಗಾದ್ರೆ ಒಳ್ಳೆ ರಿಸಲ್ಟ್ ಕೊಡೋದು ಹೇಗೆ? ನಮ್ಗಂತೂ ತಲೆ ಕೆಟ್ಟೋಗಿದೆ. ಅವ್ರಿಗೆ ವಿಶ್ವಾಸ ತುಂಬಿ ಮಾತಾಡೋ ರೀತಿ ಮಾಡ್ಬಹುದಾ ಸರ್?’ ಸರ್ಕಾರಿ ಪ್ರೌಢಶಾಲೆಯೊಂದರ ಮುಖ್ಯ ಶಿಕ್ಷಕಿ ತಮ್ಮ ಅಳಲು ತೋಡಿಕೊಂಡರು.

ನಾನು ಸಂಸ್ಥೆಯೊಂದರಲ್ಲಿ ವ್ಯಕ್ತಿತ್ವ ವಿಕಸನ ತರಬೇತುದಾರನೂ ಆಗಿರುವುದರಿಂದ ಇಂಥ ಸಮಸ್ಯೆಗಳ ಬಗ್ಗೆ ಪರಿಚಿತ ಶಿಕ್ಷಕರು ಸಲಹೆ, ಮಾರ್ಗದರ್ಶನ ಬಯಸುತ್ತಾರೆ. ಹಾಗಂತ ಇದು ಒಂದು ಶಾಲೆಯ ಕಥೆಯಲ್ಲ. ಈ ಕೊರೊನೋತ್ತರ ಕಾಲಘಟ್ಟದಲ್ಲಿ ಎಲ್ಲೆಡೆಯೂ ಹೆಚ್ಚು ಕಮ್ಮಿ ಇಂಥದ್ದೇ ದೂರು!

ಹೌದು, ಶಿಕ್ಷಕರ ಈ ಆಕ್ಷೇಪ ಮಕ್ಕಳನ್ನು ಮಾತನಾಡಿಸುವಾಗ ಸತ್ಯವೆನಿಸುತ್ತದೆ. ಪ್ರಶ್ನೆ ಎಷ್ಟೇ ಸರಳವಾಗಿದ್ದರೂ ಉತ್ತರಿಸಲು ಹಿಂದೆ ಮುಂದೆ ನೋಡುವುದು, ಪಟ್ಟುಬಿಡದೆ ಮತ್ತೆ ಮತ್ತೆ ಕೇಳಿದರೆ ಸಣ್ಣ ದನಿಯಲ್ಲಿ ಏನೋ ಗುನುಗುನಿಸಿ ಪುನಃ ಮೌನಕ್ಕೆ ಜಾರುವುದು, ನೇರ ದೃಷ್ಟಿಯನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುವುದು, ಕಂಗಳಲ್ಲಿ ಎದ್ದು ಕಾಣಿಸುವ ಭಯ, ಆತಂಕ, ಕಾಣಿಸದ ಉತ್ಸಾಹ ಎಳೆಯರ ಮನಃಸ್ಥಿತಿ ಪೂರ್ಣವಾಗಿ ಕದಡಿಹೋಗಿರುವ ಸಂಗತಿಯನ್ನು ಸಾರಿ ಹೇಳುತ್ತವೆ. ಇಂತಹ ಮಕ್ಕಳಿಗೆ ಹೆದರಿಸಿಯೋ ಒತ್ತಡ ಹಾಕಿಯೋ ಮಾತನಾಡಿಸುವುದು ಖಂಡಿತಾ ಪ್ರಯೋಜನಕ್ಕೆ ಬಾರದು.

ಪಠ್ಯಕ್ಕೆ ಸಂಬಂಧಿಸಿಲ್ಲದ ಸರಳ ಚಟುವಟಿಕೆಗಳು, ಕಥೆಗಳ ಮೂಲಕ ಮೆಲ್ಲನೆ ಅವರ ಅಂತರಂಗ ಪ್ರವೇಶಿಸಲು ಸಾಧ್ಯವಾದಾಗ ಮಾತ್ರ ಮುಂದಿನ ಕಾರ್ಯ ಸುಗಮ. ಒಮ್ಮೆ ಮನಗೆದ್ದರೆ ಸಾಕು ಮಕ್ಕಳು ತಾವಾಗಿಯೇ ತೆರೆದುಕೊಳ್ಳುತ್ತಾರೆ. ನಂಬಿಕೆ, ವಿಶ್ವಾಸ ವೃದ್ಧಿಸುತ್ತಿದ್ದಂತೆಯೇ ತಮ್ಮ ಅನುಮಾನಗಳನ್ನು ಕೇಳಲು ಆರಂಭಿಸುತ್ತಾರೆ. ಮನಸ್ಸು ಇಷ್ಟು ಹದಗೊಂಡಿತೆಂದರೆ ಮುಖ್ಯ ವಿಷಯವನ್ನು ಮನದಟ್ಟು ಮಾಡಿಸುವುದು ಸುಲಭ.

ಒಂದೂವರೆ ವರ್ಷದಷ್ಟು ದೀರ್ಘಾವಧಿ ಭೌತಿಕ ತರಗತಿಗಳಿಲ್ಲದೆ ಕಳೆದಿದೆ. ಸ್ನೇಹಿತರು, ಸಹಪಾಠಿಗಳು, ಬಾಂಧವರೊಂದಿಗೆ ಮುಕ್ತವಾಗಿ ಬೆರೆಯಲು ಅವಕಾಶವಾಗದೆ ಚಿಪ್ಪೊಳಗೆ ಅದುಮಿಟ್ಟ ಪರಿಸ್ಥಿತಿ. ಆನ್‍ಲೈನ್ ಕ್ಲಾಸುಗಳ ಕಾರಣ ಮೊಬೈಲೊಂದೇ ಬೆಂಬಿಡದ ಸಂಗಾತಿ. ನೇರಾನೇರ ಸಂಪರ್ಕವಿಲ್ಲದ ನೀರಸ ತರಗತಿಗಳಲ್ಲಿ ಮೂಡದ ಆಸಕ್ತಿ. ವಯೋಸಹಜ ಒಡನಾಟಗಳಿಗೆ ಕತ್ತರಿ ಬಿದ್ದ ಕಾರಣ ಮಕ್ಕಳ ಮನಸ್ಸು ವಿಚಲಿತ, ಗೊಂದಲಗಳ ಗೂಡು. ಕಲಿಕೆಯಲ್ಲಿ ತೊಡಗಿಸಿಕೊಳ್ಳಲಾಗದೆ ಏರಿದ ಆತಂಕ.

ಮೊದಲೇ ಹದಿಹರೆಯದ ಮಕ್ಕಳು ಪೋಷಕರೊಂದಿಗೆ ಸಂವಹಿಸುವುದು ತುಂಬಾ ಕಡಿಮೆ. ತಮ್ಮ ಭೀತಿ, ಗೊಂದಲ, ಸಂಕಟಗಳನ್ನು ಯಾರಲ್ಲೂ ಹಂಚಿಕೊಳ್ಳಲಾಗದೆ ಖಿನ್ನತೆಗೆ ಜಾರಿದ ಎಳೆಯರ ಸಂಖ್ಯೆ ತುಂಬಾ ದೊಡ್ಡದಿದೆ. ಮತ್ತೊಂದಷ್ಟು ಮಕ್ಕಳು ಮೊಬೈಲ್ ಗೇಮಿಂಗ್, ಜಾಲತಾಣಗಳ ಆಕರ್ಷಣೆಗೆ ಸಿಲುಕಿ ಅದರಲ್ಲೇ ಮುಳುಗಿ ತಮ್ಮ ಆತಂಕಕ್ಕೆ ಹೊರಹರಿವು ಕಂಡುಕೊಂಡಿದ್ದಾರೆ.

ಗ್ಯಾಜೆಟ್‍ಗಳ ವ್ಯಸನಕ್ಕೆ ಸಿಲುಕಿದ ಮಕ್ಕಳು ಕೊರೊನಾ ಪೂರ್ವದಲ್ಲೇ ಒಂಟಿಯಾಗಿದ್ದರು. ಆನ್‍ಲೈನ್ ತರಗತಿ, ಹೋಂವರ್ಕ್, ಟೆಸ್ಟ್ ಅಂತೆಲ್ಲಾ ಅನಿವಾರ್ಯವಾಗಿ ಮೊಬೈಲ್, ಕಂಪ್ಯೂಟರ್‌ಗಳಿಗೆ ಅಂಟಿಕೊಂಡ ಮೇಲಂತೂ ಅಕ್ಷರಶಃ ದ್ವೀಪಗಳಂತಾಗಿದ್ದಾರೆ! ಕ್ಲಾಸ್‍ಗಳು ಅರ್ಥವಾಗದ ಆತಂಕ, ಕಾಯಿಲೆಯ ಭಯ, ಪೋಷಕರ ಒತ್ತಡ, ವಿದ್ಯಾಭ್ಯಾಸದ ಅನಿಶ್ಚಿತತೆ, ಹತ್ತಿರದವರನ್ನು ಕಳೆದುಕೊಂಡ ದುಃಖ, ನಕಾರಾತ್ಮಕ ಅಂಶಗಳನ್ನು ವೈಭವೀಕರಿಸಿ ಭೀತಿಯ ದೊಡ್ಡ ಅಲೆ ಹುಟ್ಟುಹಾಕಿದ ಕೆಲವು ಮಾಧ್ಯಮಗಳು, ತಪ್ಪಿದ ಸಹಪಾಠಿಗಳು, ಸ್ನೇಹಿತರ ಸಾಂಗತ್ಯ, ಖುಷಿ, ಆತಂಕಗಳನ್ನು ಜೊತೆಗಾರರೊಂದಿಗೆ ಹಂಚಿಕೊಂಡು ಹಗುರವಾಗಲು ಇಲ್ಲದ ಅವಕಾಶ, ಸಾಮಾಜಿಕವಾಗಿ ತೆರೆದುಕೊಳ್ಳಲು ದೊಡ್ಡ ವೇದಿಕೆಯಾಗಿದ್ದ ಭೌತಿಕ ತರಗತಿಗಳ ನಿಲುಗಡೆ, ಆಟೋಟಗಳಲ್ಲಿ ಪಾಲ್ಗೊಂಡು ತಮ್ಮ ಒತ್ತಡಗಳನ್ನು ಹೊರಹರಿಸಲು ಇಲ್ಲದ ಅವಕಾಶ... ಇವೇ ಮುಂತಾದ ಕಾರಣಗಳು ನಮ್ಮ ಮಕ್ಕಳಿಂದ ಮಾತನ್ನು ಕಸಿದು ಮೊಬೈಲಿಗೆ ಆತುಕೊಳ್ಳುವಂತೆ ಮಾಡಿದ್ದು.

ಕೆಲವು ಮಕ್ಕಳು ಡಿಜಿಟಲ್ ಚಾಟ್‍ಗಳಲ್ಲಿ ತುಂಬಾ ಚುರುಕಿದ್ದರೂ ಪರಸ್ಪರ ಎದುರುಬದುರಾದಾಗ ಮಾತನಾಡಲು ತಡಕಾಡುವುದು ಕಾಣಿಸುತ್ತಿದೆ. ಸಂಭಾಷಿಸುವಾಗ ಇರಬೇಕಾದ ನಯ, ವಿನಯ, ಗುರುಹಿರಿಯರಿಗೆ ಗೌರವಪೂರ್ವಕ ಸಂಬೋಧನೆ, ಮುಗುಳ್ನಗೆ, ದೃಷ್ಟಿ ಸಂಪರ್ಕದಂತಹ ಆಂಗಿಕ ಭಾಷೆಯೂ ಮರೆಯಾಗಿದೆ ಎಂಬ ಆತಂಕ ಈಗ ಸಾರ್ವತ್ರಿಕ.

ಕಳೆದುಹೋದ ಕಲಿಕಾಕ್ಷಾಮದ ಆ ಅಮೂಲ್ಯ ಸಮಯ ಮರಳಿ ಬಾರದಿದ್ದರೂ ಮಕ್ಕಳನ್ನು ತಿದ್ದಿ ಅವರು ಪುನಃ ಚಟಪಟ ಮಾತನಾಡುವಂತೆ, ಭಾವನೆಗಳನ್ನು ಹಂಚಿಕೊಳ್ಳುವಂತೆ, ಸಮಾಜಮುಖಿಯಾಗಿ ತೆರೆದುಕೊಳ್ಳುವಂತೆ ಮಾಡುವುದು ಖಂಡಿತಾ ಸಾಧ್ಯ. ಇದಕ್ಕೆ ಬೇಕಿರುವುದು ಅವರ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳುವ ಮನಃಸ್ಥಿತಿ ಜೊತೆಗೆ ಷರತ್ತುರಹಿತ ಪ್ರೀತಿಯಷ್ಟೆ. ಗದರದೆ, ದಂಡಿಸದೆ, ಅವಮಾನಿಸದೆ, ಹೀಯಾಳಿಸದೆ ವಾತ್ಸಲ್ಯದಿಂದ ತುಂಬುವ ಸಕಾರಾತ್ಮಕ ಭಾವನೆಯು ಪವಾಡಸದೃಶ ಫಲಿತಾಂಶ ನೀಡಬಲ್ಲದು. ಹೌದು, ಇಂತಹದ್ದೊಂದು ಸಕಾರಾತ್ಮಕ ಬದಲಾವಣೆಗೆ ಸಮಯದ ಹೂಡಿಕೆಯ ಜೊತೆಗೆ ನಿರಂತರ ಪ್ರಯತ್ನದ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT