ಭಾನುವಾರ, ಜುಲೈ 3, 2022
28 °C
‘ಕೂಡಿಬಾಳುವ ಸಾಮುದಾಯಿಕ ವಿವೇಕ’ವನ್ನು ಜಾಗೃತಗೊಳಿಸಿದ ಬೆಳವಣಿಗೆಗಳು

ಸಂಗತ| ‘ಅಪ್ಪು’ ಎಂಬ ರಾಜಕೀಯ ವಿದ್ಯಮಾನ

ಡಾ. ಕಿರಣ್ ಎಂ. ಗಾಜನೂರು Updated:

ಅಕ್ಷರ ಗಾತ್ರ : | |

Prajavani

‘ನಿಜ ಹೇಳಬೇಕು ಅಂದರೆ ಅಪ್ಪು, ಡಾ. ರಾಜ್‌ಕುಮಾರ್ ಅವರ ಮನೆಯಲ್ಲಿ ಬೆಳೆಯಲಿಲ್ಲ, ಬದಲಾಗಿ ಆತ ಕನ್ನಡದ ಬೆಳ್ಳಿತೆರೆಯ ಮೇಲೆ ಬೆಳೆದು ದೊಡ್ಡವನಾದ ಹುಡುಗ. ಆತನ ಬಾಲ್ಯ, ಯೌವನ, ಯಶಸ್ಸು ಎಲ್ಲದರೊಂದಿಗೂ ಕನ್ನಡದ ಜನಸಮುದಾಯಕ್ಕೆ ಬಿಡಿಸಲಾರದ ಬಾಂಧವ್ಯ ಏರ್ಪಟ್ಟಿದೆ. ಆ ಕಾರಣಕ್ಕೆ ಇಂದು ಕನ್ನಡನಾಡು ತಮ್ಮ ಮನೆಯ ಮಗನನ್ನೇ ಕಳೆದುಕೊಂಡಂತೆ ವ್ಯಥೆಪಡುತ್ತಿದೆ’ ಎಂಬ ಅರ್ಥದ ವಿವರಣೆಯನ್ನು ಪುನೀತ್ ರಾಜ್‌ಕುಮಾರ್‌ ನಿಧನರಾದ ದಿನ ಅಂತರರಾಷ್ಟ್ರೀಯ ಸುದ್ದಿವಾಹಿನಿ ಬಿಬಿಸಿಗೆ ಸಿನಿಮಾ ವಿಮರ್ಶಕಿ ಅಶಾಂಟಿ ಓಂಕಾರ್ ನೀಡಿದ್ದರು.

ಅಪ್ಪು ನಮ್ಮ ನಡುವೆ ಇಲ್ಲವಾಗಿ ಸರಿಸುಮಾರು ಐದು ತಿಂಗಳು ಕಳೆದರೂ ಕನ್ನಡದ ಜನಸಮುದಾಯ ಮಾತ್ರ ಅವರನ್ನು ನೆನೆಯುತ್ತಲೇ ಇದೆ. ‘ಯಾವ ಧರ್ಮ ಗಳ ಕಟ್ಟುಪಾಡುಗಳೂ ಇಲ್ಲದ ಒಂದೇ ಒಂದು ಹಬ್ಬ ಯಾವುದಾದರೂ ಇದ್ದರೆ ಅದು ಅಪ್ಪು ಹುಟ್ಟುಹಬ್ಬ’ ಎಂಬ ಅರ್ಥದ ಸಂದೇಶಗಳು ಸಾಮಾಜಿಕ ಜಾಲತಾಣ ದಲ್ಲಿ ಹರಿದಾಡಿವೆ. ನಾಡಿನ ಸಾವಿರಾರು ಹಳ್ಳಿ ಮತ್ತು ನಗರಗಳ ರಸ್ತೆಗಳು, ವೃತ್ತಗಳು ಅಪ್ಪು ಹೆಸರು ಹೊತ್ತುಕೊಂಡು ನಿಂತಿವೆ. ಹಂಪಿ ಕನ್ನಡ ವಿಶ್ವವಿದ್ಯಾ ಲಯದ ಪ್ರಾಧ್ಯಾಪಕ ಪ್ರೊ. ಎ.ಎಸ್.ಪ್ರಭಾಕರ್, ‘ಮುಗ್ಧ ನಗುವೊಂದರ ಕಣ್ಮರೆ’ ಎಂಬ ಪುಸ್ತಕವೊಂದನ್ನು ಹೊರತಂದಿದ್ದಾರೆ. ಅಪ್ಪುವಿನ ಸಮಾಧಿಯು ಅಭಿ ಮಾನಿಗಳ ಪಾಲಿಗೆ ಪವಿತ್ರ ಕ್ಷೇತ್ರವಾಗಿ ಮಾರ್ಪಟ್ಟಿದೆ.

ಅಪ್ಪು ಎಂಬ ವ್ಯಕ್ತಿತ್ವವೊಂದರ ಹಠಾತ್ ಕಣ್ಮರೆ ಯನ್ನು ಕೇಂದ್ರವಾಗಿ ಇಟ್ಟುಕೊಂಡು ನಡೆಯುತ್ತಿರುವ ಈ ಎಲ್ಲಾ ಮಾದರಿಯ ಅಭಿವ್ಯಕ್ತಿಗಳು ‘ನಮ್ಮ ಸಮಾಜವು ಜಾತಿ, ಧರ್ಮಗಳಲ್ಲಿ ಒಡೆದುಹೋಗಿದೆ. ಸಾಮುದಾಯಿಕ ಬದುಕು ಇಲ್ಲವಾಗಿದೆ. ಜನ ಮತ್ತೊ ಬ್ಬರ ನೋವಿಗೆ ಮಿಡಿಯದಷ್ಟು ಸ್ವಾರ್ಥಿಗಳಾಗಿ
ದ್ದಾರೆ. ಮಾರುಕಟ್ಟೆ ಆರ್ಥಿಕತೆ ಸೃಷ್ಟಿಸಿರುವ ಮನೋವೈಕಲ್ಯಕ್ಕೆ ಒಳಗಾಗಿ ಮನುಷ್ಯರು ಕೇವಲ ಗ್ರಾಹಕರಾಗಿ ಬದಲಾಗಿದ್ದಾರೆ’ ಎಂಬಂತಹ, ಆಧುನಿಕತೆ ಸೃಜಿಸಿರುವ ಎಲ್ಲಾ ಕ್ಲೀಷೆಗಳನ್ನು ಒಡೆದುಹಾಕಿವೆ.

ಬಹಳ ಮುಖ್ಯವಾಗಿ, ಆಧುನಿಕ ಸಂವಹನ ಮಾಧ್ಯಮಗಳನ್ನು ಬಳಸಿಕೊಳ್ಳುವ ಮೂಲಕ ಜನಸಮುದಾಯಗಳನ್ನು ನಿಯಂತ್ರಿಸಬಹುದು, ಆಳಲು ಬೇಕಾದ ಒಪ್ಪಿಗೆಯನ್ನು ಉತ್ಪಾದಿಸಿಕೊಳ್ಳ
ಬಹುದು ಎಂಬ ಸಂಕುಚಿತ ತಿಳಿವಳಿಕೆಯನ್ನು ಅಪ್ಪು ವಿದ್ಯಮಾನ ಸುಳ್ಳಾಗಿಸಿದೆ. ಜನಸಮುದಾಯಗಳು ತಮ್ಮ ಬದುಕಿಗೆ ಹತ್ತಿರವಾದ, ಪೂರಕವಾದ ಸಾಂಸ್ಕೃತಿಕ ನಿರೂಪಣೆಯನ್ನು ಕ್ಷಣಮಾತ್ರದಲ್ಲಿ ಚಳವಳಿಯಂತೆ ಸೃಷ್ಟಿಸಿಕೊಳ್ಳಬಲ್ಲವು. ಆ ಪ್ರಕ್ರಿಯೆಗೆ ಜಾತಿ, ಧರ್ಮ, ಲಿಂಗಗಳ ಹಂಗಿಲ್ಲ ಎಂಬ ಅರಿವನ್ನು ‘ಅಪ್ಪು ಚಳವಳಿ’ ತೋರಿಸಿಕೊಟ್ಟಿದೆ.

ನಿಜವಾದ ಅರ್ಥದಲ್ಲಿ ರಾಜಕೀಯ ಎಂದರೆ ‘ವೈವಿಧ್ಯದಿಂದ ಕೂಡಿದ ಜನಸಮುದಾಯಗಳು ಪರಸ್ಪರ ಕೂಡಿ ಬಾಳಲು ಬೇಕಾದ ವಿವೇಕವೊಂದನ್ನು ಕಟ್ಟಿಕೊಳ್ಳುವ ಬಗೆ’ ಎಂಬ ಅರ್ಥವನ್ನು ಹೊಂದಿದೆ. ಹಾಗಾಗಿಯೇ ಪ್ರಮುಖ ರಾಜಕೀಯ ಚಿಂತಕಿ ಹನ್ನಾ ಅರೆಂಟ್, ‘ರಾಜಕೀಯ ಎಂಬುದು ಸಮುದಾಯಗಳು ಗಟ್ಟಿಗೊಳ್ಳುವ ಪ್ರಕ್ರಿಯೆ. ಇದನ್ನು ನಾವು ಪ್ರೇಮ ಮತ್ತು ಪರಸ್ಪರ ಒಪ್ಪಿಗೆಯಿಂದ ಕಟ್ಟಿಕೊಳ್ಳಬಹುದೇ ವಿನಾ ದ್ವೇಷ ಮತ್ತು ಹಿಂಸೆಯ ಸಹಾಯದಿಂದ ಅಲ್ಲ. ನಾವು ಯಾವಾಗ ರಾಜಕೀಯ ಎಂಬ ಪರಿಭಾಷೆಯನ್ನು ಬಳಸುತ್ತೇವೆಯೋ ಆಗ ನಾವು ನಮ್ಮ ವೈಯಕ್ತಿಕ ಬದುಕಿನ ಕುರಿತು ಮಾತನಾಡುತ್ತಿರುವುದಿಲ್ಲ. ಬದ ಲಾಗಿ, ಉತ್ತಮ ಸಾಮುದಾಯಿಕ ಬದುಕಿನ ಕುರಿತು ಚರ್ಚಿಸುತ್ತಿರುತ್ತೇವೆ’ ಎಂಬ ವಿಶ್ಲೇಷಣೆಯನ್ನು ಮುಂದಿ ಟ್ಟಿದ್ದಾರೆ.

ಈ ಅರ್ಥದಲ್ಲಿ ರಾಜಕೀಯ ಎಂಬುದು ‘ಒಳ್ಳೆಯ ಸಾಮುದಾಯಿಕ ಜೀವನವನ್ನು ನೆಲೆಗೊಳಿಸುವ ಪ್ರಕ್ರಿಯೆ’. ಆದರೆ ವರ್ತಮಾನದಲ್ಲಿನ ಅಧಿಕಾರ ರಾಜ ಕೀಯವು ಸಮುದಾಯ ವಿಘಟನೆಯ ಭಾಷೆಯನ್ನು ಬಳಸುತ್ತಿದೆ. ಜನರಲ್ಲಿ ಪರಸ್ಪರ ಅಪನಂಬಿಕೆಯನ್ನು ಸೃಜಿಸುವ ಮೂಲಕ ಅವರ ಬದುಕಿಗೆ ಸಂಬಂಧಿಸಿದ ಮೂಲಭೂತ ಪ್ರಶ್ನೆಗಳಿಂದ ಅವರನ್ನು ವಿಮುಖರನ್ನಾಗಿಸುತ್ತಿದೆ. ಇದನ್ನು ನಾವು ರಾಜಕೀಯ ಎಂದು ಕರೆಯಲು ಸಾಧ್ಯವಿಲ್ಲ. ಈ ಮಾದರಿಯ ಸಂಕುಚಿತ ಬೆಳವಣಿಗೆಗಳು ನಡೆಯುತ್ತಿರುವ ಕಾಲದಲ್ಲಿಯೇ ಅಪ್ಪು ಎಂಬ ರಾಜಕೀಯ ವಿದ್ಯಮಾನ ಘಟಿಸಿದೆ.

ಜನಸಮುದಾಯಗಳ ಒಳಗೆ ಇರುವ ಈ ‘ಕೂಡಿ ಬಾಳುವ ಸಾಮುದಾಯಿಕ ವಿವೇಕ’ವನ್ನು ಅಪ್ಪು ನಿರ್ಗಮನ ಜಾಗೃತಗೊಳಿಸಿದೆ. ಆ ಮೂಲಕ ಮನುಷ್ಯನ ಕುರಿತು ಆಧುನಿಕತೆ ಸೃಜಿಸಿದ್ದ ಸಂಕುಚಿತ ಕ್ಲೀಷೆಗಳನ್ನು ಒಡೆದುಹಾಕಿದೆ. ಮನುಷ್ಯ ಮೂಲತಃ ಸಾಮಾಜಿಕ ಜೀವಿ ಆಗಿರುವುದು ಎಷ್ಟು ಸತ್ಯವೋ ಹಾಗೇ ಆತ ರಾಜಕೀಯ ಜೀವಿ ಆಗಿರುವುದೂ ಅಷ್ಟೇ ಸತ್ಯ. ‘ರಾಜಕೀಯ’ ಎಂಬ ವಿದ್ಯಮಾನ ವ್ಯಕ್ತಿಯ ಹುಟ್ಟಿನಿಂದ ಸಾಯುವವರೆಗೆ ಆತನ ಬದುಕಿನ ಎಲ್ಲಾ ಅಂಶಗಳನ್ನು ಪ್ರಭಾವಿಸುವ ಸಂಗತಿಯಾಗಿದೆ. ಆದರೆ ಅಪ್ಪು ಎಂಬ ರಾಜಕೀಯ ವಿದ್ಯಮಾನವು ಅಪ್ಪುವಿನ ನಿರ್ಗಮನದ ನಂತರವೂ ನಮ್ಮ ನಾಡಿನ ಜನಸಮುದಾಯಗಳು ಹೊಂದಿರುವ ವೈವಿಧ್ಯಮಯ ವಿವೇಕಕ್ಕೆ ಸಾಕ್ಷಿಯಾಗಿದೆ.

ಅಪ್ಪುವಿನ ನಿರ್ಗಮನದ ನಂತರ ಅವರ ಪತ್ನಿ ಅಶ್ವಿನಿ ಅವರು ಸಾರ್ವಜನಿಕವಾಗಿ ನಡೆದುಕೊಳ್ಳುತ್ತಿರುವ ರೀತಿ, ಬದುಕಿನಲ್ಲಿ ಘಟಿಸುವ ದುರಂತವೊಂದನ್ನು ಒಬ್ಬ ಸಬಲ ಹೆಣ್ಣಾಗಿ ಹೇಗೆ ಪ್ರೌಢಿಮೆಯಿಂದ ಎದುರು ಗೊಳ್ಳಬೇಕು, ನಿಭಾಯಿಸಬೇಕು ಎಂಬ ‘ಸಹಜ ಹೆಣ್ತನ’ದ ಶಕ್ತಿಯನ್ನು ನಮ್ಮೆದುರು ಅನಾವರಣಗೊಳಿಸಿದೆ. ಅಪ್ಪು ನಿರ್ಗಮನಕ್ಕೆ ಹೊಂದಿಕೊಂಡು ಘಟಿಸುತ್ತಿರುವ ಈ ಎಲ್ಲಾ ಸಂಗತಿಗಳು ನಮ್ಮದೇ ವರ್ತಮಾನವನ್ನು ಗ್ರಹಿಸಲು ಬೇಕಾದ ಹೊಸ ‘ರಾಜಕೀಯ ವಿದ್ಯಮಾನ’ವಾಗಿ ಕಾಣುತ್ತಿದೆ.

ಲೇಖಕ: ಸಹಾಯಕ ಪ್ರಾಧ್ಯಾಪಕ, ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ, ಕಲಬುರಗಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು