ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ವಲಸೆ ಕಾರ್ಮಿಕರ ಕೂಗಿನ ಹಿಂದೆ...

ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಉತ್ತರಪ್ರದೇಶದ ಕಾರ್ಮಿಕರು ದೇಶದ ಯಾವುದೋ ರಾಜ್ಯದ ಮೂಲೆಯಲ್ಲಿ ವರ್ಷವಿಡೀ ದುಡಿಯುತ್ತಲೇ ಇರುತ್ತಾರೆ. ಯಾಕೆ ಹೀಗೆ?
Last Updated 22 ಏಪ್ರಿಲ್ 2020, 20:15 IST
ಅಕ್ಷರ ಗಾತ್ರ

ಲಾಕ್‌ಡೌನ್ ತರುವಾಯ, ವಲಸೆ ಕಾರ್ಮಿಕರ ಸಮಸ್ಯೆಯ ಹಲವು ಮುಖಗಳು ಅನಾವರಣಗೊಳ್ಳುತ್ತಿವೆ. ದೆಹಲಿ ಸುತ್ತಮುತ್ತಲಿನ ವಲಸೆ ಕಾರ್ಮಿಕರು ತಮ್ಮ ಊರುಗಳತ್ತ ನಡೆದು ಹೊರಟಿದ್ದು ದೊಡ್ಡ ಸುದ್ದಿಯಾಗಿತ್ತು. ಇದೀಗ ಮುಂಬೈ, ಸೂರತ್ ಸೇರಿದಂತೆ ಹಲವೆಡೆ ವಲಸೆ ಕಾರ್ಮಿಕರ ಕೂಗು ಮತ್ತೆ ಕೇಳಲಾರಂಭಿಸಿದೆ.

ಆನೇಕಲ್ ತಾಲ್ಲೂಕಿನ ಇಂಡ್ಲಬೆಲೆ ಗ್ರಾಮದ ಸುತ್ತಮುತ್ತ ನೆಲೆಸಿರುವ ಬಿಹಾರ, ಪಶ್ಚಿಮ ಬಂಗಾಳ ಮೂಲದ ಕಟ್ಟಡ ಕಾರ್ಮಿಕರಿಗೆ ಇತ್ತೀಚೆಗೆ ದಿನಸಿ ವಿತರಿಸಿದ ಚಿತ್ರಗಳನ್ನು ಗೆಳೆಯರೊಬ್ಬರು ಹಂಚಿಕೊಂಡಿದ್ದರು. ಸಹಜವಾಗಿ ಮನಸ್ಸಿಗೆ ಬರುವ ಪ್ರಶ್ನೆ- ಎಲ್ಲಿಯ ಇಂಡ್ಲಬೆಲೆ? ಎಲ್ಲಿಯ ಪಶ್ಚಿಮ ಬಂಗಾಳ? ಇವರೆಲ್ಲ ಸ್ವಂತ ಊರು, ಬಂಧು ಬಳಗ ಬಿಟ್ಟು, ಎರಡು ಸಾವಿರ ಕಿಲೊಮೀಟರ್ ದೂರ ಬರುವುದೆಂದರೆ? ಇದು ಇಂಡ್ಲಬೆಲೆಯಲ್ಲಿ ಸಿಲುಕಿರುವ ಶ್ರಮಜೀವಿಗಳದ್ದಷ್ಟೇ ಕಥೆಯಲ್ಲ.

ಬೆಂಗಳೂರಿನ ಪೆಟ್ರೋಲ್ ಬಂಕುಗಳಲ್ಲಿ, ಮಾಲು, ಸೂಪರ್ ಮಾರ್ಕೆಟ್‌ಗಳಲ್ಲಿ, ಸೆಕ್ಯುರಿಟಿ ಏಜೆನ್ಸಿಗಳಲ್ಲಿ, ಮೆಟ್ರೊ, ವಿಮಾನ ನಿಲ್ದಾಣ, ಮೇಲುಸೇತುವೆಗಳು, ದೊಡ್ಡ ವಸತಿ ಸಮುಚ್ಚಯಗಳ ಕಾಮಗಾರಿಗಳು... ಹೀಗೆ ಎಲ್ಲೆಲ್ಲೂ ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಉತ್ತರಪ್ರದೇಶ ಮೂಲದ ವಲಸೆ ಕಾರ್ಮಿಕರನ್ನು ಕಾಣಬಹುದು. ಇವರ ನಡುವೆ ಕನ್ನಡಿಗರೂ ಇದ್ದಾರೆ. ಪಕ್ಕದ ಆಂಧ್ರಪ್ರದೇಶ, ತಮಿಳುನಾಡಿನಿಂದ ಬಂದ ವಲಸಿಗರೂ ಇದ್ದಾರೆ. ಚೆನ್ನೈ, ಹೈದರಾಬಾದಿನಲ್ಲೂ ಇವೇ ನಾಲ್ಕು ರಾಜ್ಯಗಳ ಜನ- ಇದೇ ಪರಿಸ್ಥಿತಿ.

ಕರ್ನಾಟಕದ ವಲಸೆ ಕಾರ್ಮಿಕರು ಬೆಂಗಳೂರು ಅಲ್ಲದೆ ಕರಾವಳಿ, ಮಲೆನಾಡಿನ ತೋಟದ ಕೆಲಸಗಳಿಗೆ ಹೋಗುವುದಿದೆ. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಿಗೆ ಬೆಂಗಳೂರಿಗಿಂತ ಗೋವಾ, ಮುಂಬೈ, ಹೈದರಾಬಾದ್ ಹತ್ತಿರವೆನಿಸುವುದರಿಂದ ಅತ್ತ ವಲಸೆ ಹೋಗುವುದಿದೆ. ಎಲ್ಲ ರಾಜ್ಯಗಳಲ್ಲೂ ಈ ಸಮಸ್ಯೆ ಇದೆ. ಒಂದು ರಾತ್ರಿಯ ಬಸ್ಸಿಗೆ, ರೈಲಿನ ಪ್ರಯಾಣದ ದೂರಕ್ಕೆ ಕೆಲಸ ಅರಸಿ ಹೋಗುವುದು ಸಾಮಾನ್ಯ. ಆದರೆ ಈ ನಾಲ್ಕು ರಾಜ್ಯಗಳ ವಲಸಿಗರ ಕಥೆ ಹಾಗಿಲ್ಲ.

ಈ ರಾಜ್ಯಗಳ ಶ್ರಮಿಕರು ಕೆಲಸ ಅರಸಿ ಎಷ್ಟು ದೂರ ಬೇಕಾದರೂ ಹೋಗುತ್ತಾರೆ. ವರ್ಷವಿಡೀ ಯಾವುದೋ ರಾಜ್ಯದ ಮೂಲೆಯಲ್ಲಿ ದುಡಿಯುತ್ತಲೇ ಇರುತ್ತಾರೆ. ಯಾಕೆ ಹೀಗೆ? ಅಲ್ಲಿನ ಸರ್ಕಾರಗಳು ಎಂಟು- ಹತ್ತು ಸಾವಿರ ರೂಪಾಯಿ ಸಂಬಳದ ಉದ್ಯೋಗವನ್ನೂ ತಮ್ಮವರಿಗೆ ಕೊಡಲಾರದ ಸ್ಥಿತಿಯಲ್ಲಿ ಏಕಿವೆ? ಗಂಗೆ, ಯಮುನೆ ಸೇರಿದಂತೆ ಹತ್ತಾರು ದೊಡ್ಡ ನದಿಗಳು ಈ ರಾಜ್ಯಗಳಲ್ಲಿ ಹರಿಯುತ್ತವೆ. ಅರಣ್ಯ, ಖನಿಜ ಸಂಪತ್ತು, ಒಳ್ಳೆಯ ಕೃಷಿ ಭೂಮಿಯೂ ಇದೆ. ಆದರೂ ಏಕೆ ಈ ದುರವಸ್ಥೆ? ಇಂದು ಈ ರಾಜ್ಯಗಳ ಲಕ್ಷಾಂತರ ಜನ ದೂರದ ರಾಜ್ಯಗಳಲ್ಲೆಲ್ಲೋ ರಸ್ತೆಯಲ್ಲಿ ನಿಂತಿದ್ದಾರೆಂದರೆ ಇದಕ್ಕೆ ಹೊಣೆ, ಈ ರಾಜ್ಯಗಳನ್ನು ಕಳೆದ ಐವತ್ತು ವರ್ಷ ಆಳಿದವರೇ ಆಗುತ್ತಾರೆ. 1970ರಿಂದ 2020ರವರೆಗೆ ಯಾವ ಯಾವ ವಿಚಾರಧಾರೆಯವರು ಈ ರಾಜ್ಯಗಳ ಆಡಳಿತದ ಚುಕ್ಕಾಣಿ ಹಿಡಿದಿದ್ದರು ಎಂಬುದನ್ನು ನೋಡಿದರೆ ಸಮಸ್ಯೆಯ ಮೂಲ ಸ್ಪಷ್ಟವಾಗುತ್ತದೆ.

ಕಳೆದ 50 ವರ್ಷಗಳಲ್ಲಿ ಈ ರಾಜ್ಯಗಳು ಕಂಡ ಪ್ರಮುಖ ಮುಖ್ಯಮಂತ್ರಿಗಳು ಯಾರ‍್ಯಾರು?

ಉತ್ತರಪ್ರದೇಶ: ಚರಣ ಸಿಂಗ್, ವಿ.ಪಿ.ಸಿಂಗ್, ಎಚ್.ಎನ್.ಬಹುಗುಣ, ಎನ್.ಡಿ.ತಿವಾರಿ, ಕಲ್ಯಾಣ ಸಿಂಗ್, ಮುಲಾಯಂ ಸಿಂಗ್ ಯಾದವ್, ರಾಜನಾಥ್ ಸಿಂಗ್, ಮಾಯಾವತಿ, ಅಖಿಲೇಶ್ ಯಾದವ್, ಯೋಗಿ ಆದಿತ್ಯನಾಥ್.

ಬಿಹಾರ: ಕರ್ಪೂರಿ ಠಾಕೂರ್, ಲಾಲೂ ಪ್ರಸಾದ್, ರಾಬ್ಡಿದೇವಿ, ಜಿತಿನ್ ರಾಮ್ ಮಾಂಜಿ, ನಿತೀಶ್ ಕುಮಾರ್.

ಪಶ್ಚಿಮ ಬಂಗಾಳ: ಸಿದ್ಧಾರ್ಥ ಶಂಕರ್ ರೇ, ಜ್ಯೋತಿ ಬಸು, ಬುದ್ಧದೇವ್ ಭಟ್ಟಾಚಾರ್ಯ, ಮಮತಾ ಬ್ಯಾನರ್ಜಿ.

ಒಡಿಶಾ: ನಂದಿನಿ ಸತ್ಪತಿ, ನೀಲಮಣಿ ರೌತ್ ರಾಯ್, ಜೆ.ಬಿ.ಪಟ್ನಾಯಕ್, ಗಿರಿಧರ್ ಗೊಮಾಂಗೊ, ಬಿಜು ಪಟ್ನಾಯಕ್, ನವೀನ್ ಪಟ್ನಾಯಕ್.

ಇವರಲ್ಲಿ ಅನೇಕರು ಸಮಾಜವಾದಿ ಸಿದ್ಧಾಂತದಿಂದ, ಕಮ್ಯುನಿಸ್ಟ್ ವಿಚಾರದಿಂದ ಬಂದವರು. ದುಡಿಯುವ ವರ್ಗದ ಬಗ್ಗೆ ಇನ್ನಿಲ್ಲದ ಕಾಳಜಿ ತೋರಿದವರು. ಅಪವಾದಕ್ಕೆ ಕೆಲವರನ್ನು ಬಿಟ್ಟರೆ ಹೆಚ್ಚಿನವರು ಒಳ್ಳೆಯ ಆಡಳಿತ ನೀಡಿದರು ಎಂಬ ಪ್ರತೀತಿಯೂ ಇದೆ. ಆದರೂ ಈ ಮುಖ್ಯಮಂತ್ರಿಗಳು ಇಂದು ತಮ್ಮ ಸಿದ್ಧಾಂತಗಳ ಸಮೇತ ಕಟಕಟೆಯಲ್ಲಿ ನಿಲ್ಲಬೇಕಾಗಿದೆ.

ಪಶ್ಚಿಮ ಬಂಗಾಳ ಬಿಟ್ಟರೆ ಉಳಿದೆಡೆ ಭೂ ಸುಧಾರಣಾ ಕಾಯ್ದೆಯ ಜಾರಿಯಲ್ಲಿ ನ್ಯೂನತೆಗಳು ಹಾಗೇ ಉಳಿದವು, ಶಿಕ್ಷಣದಲ್ಲಿ ಉದ್ಯೋಗಕ್ಕೆ ಬೇಕಾದ ಕೌಶಲಗಳನ್ನು ಕಲಿಸಲಿಲ್ಲ, ಎರಡನೇ ಹಂತದ ನಗರಗಳು ರೂಪುಗೊಳ್ಳಲಿಲ್ಲ, ಜಾಗತೀಕರಣದ ಮೂಲಕ ವಿಜ್ಞಾನ- ತಂತ್ರಜ್ಞಾನಕ್ಕೆ ತೆರೆದುಕೊಳ್ಳಲಿಲ್ಲ, ಗ್ರಾಮೀಣ ಕಾಯಕಗಳು ನಶಿಸಿದವು... ಹೀಗೆ ದುಡಿಯುವ ಜನರ ವಲಸೆಗೆ ಕಾರಣಗಳನ್ನು ಪಟ್ಟಿ ಮಾಡಬಹುದು.

ಬಿಹಾರದ ದಲಿತ ಚಿಂತಕ ಡಾ. ಸಂಜಯ್ ಪಾಸ್ವಾನ್- ಈ ವಿಷಯದ ಕುರಿತು ಚರ್ಚಿಸುವಾಗ- ಒಂದು ಮಾತು ಹೇಳಿದರು ‘ನಮ್ಮಲ್ಲಿ ಧಾರ್ಮಿಕ ಅಥವಾ ಸಾಮಾಜಿಕ ಚಳವಳಿ ನಡೆಯಲಿಲ್ಲ, ಬರೀ ರಾಜಕೀಯ ಚಳವಳಿ ನಡೆಯಿತು. ಹೀಗಾಗಿ ಒಳ್ಳೆಯ ಯೋಜನೆಗಳೂ ಕೆಳಗೆ ಇಳಿಯಲಿಲ್ಲ, ಯೋಜನೆ ಮಾಡಿದವರು ದೊಡ್ಡವರಾದರು. ಜನ ಮತ್ತೂ ನಿರ್ಗತಿಕರಾದರು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT