ಮಂಗಳವಾರ, ಅಕ್ಟೋಬರ್ 22, 2019
23 °C
ಕನ್ನಡದಂತಹ ಪ್ರಾಂತೀಯ ಭಾಷೆಗಳು ನಾಡಿನ ಜನರ ಸಂಸ್ಕೃತಿಯ ಪ್ರತಿಬಿಂಬ ಎಂಬುದನ್ನು ಸರ್ಕಾರ ಮರೆಯಬಾರದು

ದೇಶದ ಅಸ್ಮಿತೆ, ಭಾಷೆ ಮತ್ತು ಏಕತೆ

Published:
Updated:
Prajavani

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಶನಿವಾರ (ಸೆ.14) ಈ ಮೂರು ಮಹತ್ವದ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ:

1. ಒಂದು ದೇಶಕ್ಕೆ ಒಂದು ಭಾಷೆ ಇರಬೇಕು. 2. ಈ ಭಾಷೆಯು ಆ ದೇಶದ ಅಸ್ಮಿತೆಯ ಸಂಕೇತವಾಗಿ ಇತರ ದೇಶಗಳು ಅದನ್ನು ಗುರುತಿಸಲು ಸಾಧ್ಯವಾಗಿಸುತ್ತದೆ. 3. ಭಾರತದಲ್ಲಿ ಅಂತಹ ಭಾಷೆ ಹಿಂದಿ. ಹಿಂದಿ ನಮ್ಮ ದೇಶದ ಏಕತೆಯನ್ನು ಕಾಪಾಡುತ್ತದೆ.

ಈ ಮೂರೂ ಅಂಶಗಳು ಚರ್ಚಾಸ್ಪದವಷ್ಟೇ ಅಲ್ಲದೆ ಅಪಾಯಕಾರಿ ಕೂಡ. ‘ಒಂದು ದೇಶ ಒಂದು ಭಾಷೆ’ ಎಂದು ಯಾವ ದೈವವಾಣಿ ಅಪ್ಪಣೆ ಕೊಟ್ಟಿದೆ? ಇದೊಂದು ಪರಿಕಲ್ಪನೆ ಅಷ್ಟೇ. 19ನೆಯ ಶತಮಾನದ ಎರಡನೆಯ ಭಾಗದಲ್ಲಿ ಯುರೋಪಿಯನ್ ರಾಷ್ಟ್ರ ಗಳಲ್ಲಿ ಮೂಡಿಬಂದ ಉಗ್ರ ರಾಷ್ಟ್ರೀಯತೆಯ ಒಂದು ಆಯಾಮ ಈ ‘ಒಂದು ದೇಶ ಒಂದು ಭಾಷೆ’ ಎಂಬ ಪರಿಕಲ್ಪನೆ. ಒಂದು ಕಾಲಘಟ್ಟದಲ್ಲಿ ಜನಪ್ರಿಯವಾದ ಪರಿಕಲ್ಪನೆಗಳು ಮತ್ತೊಂದು ಕಾಲಘಟ್ಟದಲ್ಲಿ ಅಪ್ರಸ್ತುತ ವಾಗುತ್ತವೆ.

ಒಂದು ದೇಶದ ಅಸ್ಮಿತೆಯು ಅದರ ಒಂದು ಭಾಷೆಯನ್ನು ಆಧರಿಸಿಲ್ಲ. ಅಸ್ಮಿತೆಯೆಂಬುದು ಆ ದೇಶವು ಒಟ್ಟಾರೆಯಾಗಿ ಒಪ್ಪಿಕೊಂಡಿರುವ ವೈಚಾರಿಕತೆ ಮತ್ತು ಆದರ್ಶಗಳು, ಆ ದೇಶದ ಎಲ್ಲಾ ಪ್ರಜೆಗಳ ಬದುಕಿನ ರೀತಿ-ನೀತಿ, ಜ್ಞಾನಕ್ಷೇತ್ರಗಳಲ್ಲಿ ಆ ದೇಶವು ಮಾಡಿರುವ ಸಾಧನೆ ಇತ್ಯಾದಿಗಳನ್ನು ಆಧರಿಸಿರುತ್ತದೆ. ಹಾಗೆಯೇ, ದೇಶದ ಅಥವಾ ವ್ಯಕ್ತಿಯ ‘ಅಸ್ಮಿತೆ’ ಎಂಬುದು ಒಂದು ಕಾಲ್ಪನಿಕ ರಚನೆ; ಅದೇನೂ ವೈಜ್ಞಾನಿಕ ಸತ್ಯವಲ್ಲ.

ಅತಿಮುಖ್ಯವಾದ ಅಂಶವೆಂದರೆ, ಒಂದು ದೇಶ ಒಂದು ಭಾಷೆ ಎಂಬ ನೀತಿ ದೇಶದ ಏಕತೆಯನ್ನು ಕಾಪಾಡುವುದಿಲ್ಲ; ಏಕತೆಯನ್ನು ಒಡೆಯುತ್ತದೆ. ಇತಿಹಾಸದ ಕೆಲವು ಪುಟಗಳನ್ನು ತಿರುವಿಹಾಕಿದರೂ ಈ ಅಂಶವು ಸ್ಪಷ್ಟವಾಗುತ್ತದೆ. ಕಳೆದ ಶತಮಾನದ ಎರಡು-ಮೂರನೆಯ ದಶಕಗಳಲ್ಲಿ ಅತ್ಯಂತ ಬಲಿಷ್ಠ ಹಾಗೂ ವಿಸ್ತಾರವಾಗಿದ್ದ ಸೋವಿಯತ್‌ ಒಕ್ಕೂಟ, ಅಂದಿನ ಪ್ರಭುಗಳು ರಷ್ಯನ್ ಭಾಷೆಯನ್ನು ರಾಷ್ಟ್ರದುದ್ದಕ್ಕೂ ಹೇರಿದುದರ ಪರಿಣಾಮವಾಗಿ ನಾಲ್ಕೈದು ದಶಕಗಳ ನಂತರ ಉಜ್ಬೇಕಿಸ್ತಾನ್, ಕಜಕಸ್ತಾನ್ ಇತ್ಯಾದಿಯಾಗಿ ಒಡೆಯಿತು. ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನವು ಪೂರ್ವ ಪಾಕಿಸ್ತಾನದಲ್ಲಿಯೂ ಉರ್ದುವನ್ನು ಹೇರಲು ಪ್ರಯತ್ನಿಸಿದಾಗ ಅದು ಬೇರೆಯಾಗಿ, ಬಾಂಗ್ಲಾದೇಶವಾಯಿತು.

ಈ ಅಂಶದ ಇನ್ನೊಂದು ಮುಖವೆಂದರೆ, ಕೆನಡಾದಲ್ಲಿ ಎರಡು ಅಧಿಕೃತ ಆಡಳಿತ ಭಾಷೆಗಳಿವೆ, ಸ್ವಿಟ್ಜರ್ಲೆಂಡಿನಲ್ಲಿ ಮೂರು ಅಧಿಕೃತ ಆಡಳಿತ ಭಾಷೆಗಳಿವೆ. ದೇಶವನ್ನು ಕಾಪಾಡುವುದು ಅಥವಾ ಒಡೆಯುವುದು ಆಯಾಯ ಕಾಲಘಟ್ಟಗಳ ಪ್ರಭುತ್ವಗಳ ಮುತ್ಸದ್ದಿತನ, ದೂರದೃಷ್ಟಿ.

ಭಾರತೀಯ ಸಂವಿಧಾನ ಎಲ್ಲಿಯೂ ‘ರಾಷ್ಟ್ರಭಾಷೆ’ (ನ್ಯಾಷನಲ್‌ ಲ್ಯಾಂಗ್ವೇಜ್‌) ಎಂಬ ಪದವನ್ನೇ ಉಪಯೋಗಿಸುವುದಿಲ್ಲ. 8ನೆಯ ಶೆಡ್ಯೂಲ್‍ನಲ್ಲಿ ಬರುವ 22 ಭಾಷೆಗಳನ್ನೂ (ಮೊದಲಿಗೆ 14) ‘ಅಧಿಕೃತ’ ಅಥವಾ ‘ಅಫಿಶಿಯಲ್’ ಭಾಷೆಗಳು ಎಂದು ಗುರುತಿಸುತ್ತದೆ. ‘ಅಧಿಕೃತ’ ಭಾಷೆ ಎಂದರೆ, ಆಡಳಿತಕ್ಕೆ ಉಪಯೋಗಿಸಬಹುದಾದ ಭಾಷೆ. ಇನ್ನೂ ಮುಂದುವರಿದು, ‘ಭಾರತ ಒಕ್ಕೂಟದಲ್ಲಿರುವ ರಾಜ್ಯಗಳಿಗೆ ಶಾಸನರಚನೆಯ ಮುಖಾಂತರ ಯಾವುದೇ ಭಾಷೆಯನ್ನು ತಮ್ಮ ಅಧಿಕೃತ ಭಾಷೆಯೆಂದು ಮಾನ್ಯ ಮಾಡಲು ಅಧಿಕಾರ ಹಾಗೂ ಸ್ವಾತಂತ್ರ್ಯವಿದೆ’ ಎಂದು ಹೇಳುತ್ತದೆ. ಆ ಕಾರಣಕ್ಕಾಗಿಯೇ, ಸಂವಿಧಾನವು ರಾಷ್ಟ್ರಗೀತೆ, ರಾಷ್ಟ್ರಧ್ವಜ, ರಾಷ್ಟ್ರಸಂಕೇತ, ರಾಷ್ಟ್ರ ಪ್ರಾಣಿ/ಪಕ್ಷಿ/ಹಣ್ಣು/ಹೂವು ಇತ್ಯಾದಿಗಳನ್ನು ಗುರುತಿಸಿದರೂ ‘ರಾಷ್ಟ್ರಭಾಷೆ’ ಎಂದು ಯಾವುದನ್ನೂ ಗುರುತಿಸುವುದಿಲ್ಲ. ಏಕೆಂದರೆ, ಸಂವಿಧಾನ ಕರ್ತೃಗಳಿಗೆ ವಿವಿಧ ಧರ್ಮಗಳ, ಸಂಸ್ಕೃತಿಗಳ, ಭಾಷೆಗಳ ಈ ದೇಶವನ್ನು ಕಟ್ಟುವ ಗುರಿ ಇತ್ತು– ಒಡೆಯುವುದಲ್ಲ.

**
‘ಒಂದು ಭಾಷೆ’ ಅಗತ್ಯವಿಲ್ಲ
ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ‘ಒಂದು ಭಾಷೆ’ಯ ಅಗತ್ಯ ಇಲ್ಲ. ವಿಶ್ವಸಂಸ್ಥೆಯಲ್ಲಿ ಪುಟ್ಟ ದೇಶಗಳ ಭಾಷೆಗಳ ಅನುವಾದಕ್ಕೂ ಸೌಲಭ್ಯ ಇದೆ. ಇನ್ನು ಗಾಂಧೀಜಿ ತಮ್ಮ ಆತ್ಮಕಥೆಯನ್ನು ಗುಜರಾತಿಯಲ್ಲಿ ಬರೆದಿದ್ದರು (ಆ ಭಾಷೆಯವರು ದೇಶದ ಜನಸಂಖ್ಯೆಯ ಶೇಕಡ 4ರಷ್ಟಿದ್ದರೂ). 2024ರ ಹೊತ್ತಿಗೆ ಪ್ರತಿ ಮನೆ, ವ್ಯಕ್ತಿಯನ್ನೂ ತಲುಪಲು ಇದೇನು ಬಿಜೆಪಿ ಸದಸ್ಯ ನೋಂದಣಿ ಅಭಿಯಾನವೇ?
-ಎಚ್.ಎಸ್.ಮಂಜುನಾಥ, ಗೌರಿಬಿದನೂರು

**
ಆಶಯ ಗಾಂಧೀಜಿಯದು
ಹಿಂದಿ ಭಾಷೆ ಕುರಿತು ರಾಜ್ಯದ ಕೆಲವರು ನೀಡುತ್ತಿರುವ ಹೇಳಿಕೆಗಳು ವಿರೋಧಾಭಾಸದಿಂದ ಕೂಡಿವೆ. ಅದರಲ್ಲಿ ಕರ್ನಾಟಕದ ಒಟ್ಟಾರೆ ಜನಮತ ಭಾವನೆ ಸಮ್ಮಿಳಿತವಾಗಿದೆ ಎಂದೆನಿಸುತ್ತಿಲ್ಲ! ಒಂದು ದೇಶ, ಒಂದು ಭಾಷೆ ಎಂಬ ವಿಚಾರವು ಗಾಂಧೀಜಿಯ ಆಶಯವಾಗಿತ್ತೇ ಹೊರತು ಈಗ ಅಮಿತ್ ಶಾ ಅವರು ಹುಟ್ಟುಹಾಕಿದ್ದಲ್ಲ. ಕನ್ನಡ ಭಾಷೆಯ ಉಳಿವು ಹಾಗೂ ಬೆಳವಣಿಗೆಗೆ ತೊಡಕಾಗದಂತೆ ಹಿಂದಿಯನ್ನು ಒಪ್ಪಿಕೊಂಡರೆ ಕನ್ನಡ ನಾಡಿನ ಗೌರವ ಇಮ್ಮಡಿ ಯಾಗುತ್ತದೆಯೇ ಹೊರತು ಕುಗ್ಗುವುದಿಲ್ಲ.
-ಆರ್‌.ವೆಂಕಟರಾಜು, ಬೆಂಗಳೂರು

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)