ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ಪರಿಸ್ಥಿತಿಗೆ ಸ್ಪಂದಿಸುವ ಧರ್ಮ ಬೇಕು

ಇಸ್ಲಾಂ ಧರ್ಮದಲ್ಲಿನ ಸಲಹೆಗಳು, ಕೊರೊನಾದಂಥ ಬಿಕ್ಕಟ್ಟಿನಲ್ಲಿ ಹೇಗೆ ಸ್ಪಂದಿಸಬೇಕೆಂಬ ಮಾರ್ಗದರ್ಶನವನ್ನು ಸಮುದಾಯಕ್ಕೆ ನೀಡುತ್ತವೆ
ಅಕ್ಷರ ಗಾತ್ರ

‘ನಮಾಜಿಗೆ ಮುನ್ನ ಆಜಾನ್ ಕೂಗುವುದು ಇಸ್ಲಾಮಿನ ಅವಿಭಾಜ್ಯ ಅಂಗವಾಗಿರಬಹುದಾದರೂ ಅದನ್ನು ಧ್ವನಿವರ್ಧಕದ ಮೂಲಕ ಕೂಗುವುದು ಧರ್ಮದ ಅವಿಭಾಜ್ಯ ಅಂಗವೆಂಬಂತೆ ಪರಿಗಣಿಸಲಾಗುವುದಿಲ್ಲ’ ಎಂದು ಅಲಹಾಬಾದ್ ಹೈಕೋರ್ಟ್‌ ಈಚೆಗೆ ಪ್ರಕರಣವೊಂದರಲ್ಲಿ ಹೇಳಿದೆ. ಈ ಹಿನ್ನೆಲೆಯಲ್ಲಿ, ಇಸ್ಲಾಮಿನಲ್ಲಿ ಆಜಾನ್ ನೀಡುವ ಪದ್ಧತಿ ಹೇಗೆ ಆರಂಭವಾಯಿತು ಎಂಬುದನ್ನು ಅರ್ಥ ಮಾಡಿಕೊಳ್ಳೋಣ.

ಇಸ್ಲಾಮಿನಲ್ಲಿ ಮೊತ್ತಮೊದಲ ಸಲ ಆಜಾನ್ ನೀಡಿದ್ದು ಮಕ್ಕಾದಲ್ಲಿ, ಕ್ರಿ.ಶ. 630ರ ಜನವರಿಯಲ್ಲಿ. ಗಡಿಯಾರಗಳಿಲ್ಲದ 7ನೇ ಶತಮಾನದಲ್ಲಿ. ದಿನಕ್ಕೆ ಐದು ಹೊತ್ತು ನಿಗದಿತ ಸಮಯಕ್ಕೆ ಜನರನ್ನು ಪ್ರಾರ್ಥನೆಗಾಗಿ ಸೇರಿಸಲು, ‘ಪ್ರಾರ್ಥನೆಗೆ ಬನ್ನಿ, ಸತ್ಕಾರ್ಯಕ್ಕೆ ಬನ್ನಿ’ ಎಂದು ಕರೆಯುವ ಆಜಾನ್ ಪದ್ಧತಿ ಆರಂಭವಾಯಿತು. ಮಕ್ಕಾದಲ್ಲಿರುವ ಪವಿತ್ರ ‘ಕಾಬಾ’ ಕಟ್ಟಡದ ಮೇಲೆ ಹತ್ತಿ ನಿಂತು, ಎತ್ತರದ ಧ್ವನಿಯಲ್ಲಿ ಮೊದಲ ಸಲ ಇಡೀ ನೆರೆಹೊರೆಗೆ ಕೇಳಿಸುವ ಹಾಗೆ ಕರೆ ಕೊಟ್ಟವರು ಇಥಿಯೋಪಿಯಾದ ವಿಮೋಚಿತ ಗುಲಾಮ, ಬಿಲಾಲ್ ಇಬ್ನ್ ರಬಾಹ್. ಇದು, ಮುಂದೆ ಇಡೀ ಇಸ್ಲಾಂ ಜಗತ್ತಿನಲ್ಲಿ ಪ್ರತಿಯೊಂದು ಚಿಕ್ಕ-ದೊಡ್ಡ ಮಸೀದಿಯಲ್ಲಿಯೂ ಐದು ಹೊತ್ತಿನ ನಮಾಜಿಗಾಗಿ ಕರೆಯುವ ಕ್ರಮವಾಗಿ ಬೇರೂರಿದೆ. ಧ್ವನಿವರ್ಧಕದಲ್ಲಿ ಆಜಾನ್ ಹೇಳುವ ಪದ್ಧತಿ ಜಾರಿಗೆ ಬಂದಿದ್ದು ಇತ್ತೀಚೆಗೆ. ಈ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟ್‌ ತೀರ್ಪು ಸಮಂಜಸವಾಗಿದೆ.

ಈಗ ಚಿಕ್ಕ ಹಳ್ಳಿಯಲ್ಲಿಯೂ ಬರೀ ಮುಸಲ್ಮಾನ
ರಷ್ಟೇ ಇರುವ ಸನ್ನಿವೇಶವಿಲ್ಲದಾಗ, ದೊಡ್ಡ ಧ್ವನಿಯಲ್ಲಿ ಆಜಾನ್ ಕೂಗುವುದು ಕೊನೆಯಪಕ್ಷ ಅನ್ಯಮತದ
ವರಿಗೆ ಕಿರಿಕಿರಿ ಉಂಟುಮಾಡುವ ಸಂಭವ ಇರುತ್ತದೆ. ಅದರಲ್ಲೂ ಮುಖ್ಯವಾಗಿ, ಸೂರ್ಯೋದಯಕ್ಕೆ ಮುಂಚೆ, ಮೊದಲ ‘ಫಜರ್’ ನಮಾಜಿನ ಆಜಾನ್ ಕೂಗಲಾಗುತ್ತದೆ. ಆಗ ಶ್ರದ್ಧಾವಂತ ಮುಸಲ್ಮಾನ ಪುರುಷರು ಮಸೀದಿಗೆ ಹೋಗುತ್ತಾರೆ, ಮಸೀದಿಗೆ ಹೋಗದ ಸ್ತ್ರೀಯರು ಮನೆಯಲ್ಲಿ ನಮಾಜನ್ನು ಮುಗಿಸುತ್ತಾರೆ. ಉಳಿದವರಿಗೆ ಅದೇ ಸಿಹಿಯಾದ ನಿದ್ದೆಯ ಸಮಯ. ಅವರಿಗೆ ಎಚ್ಚರವಾಗಿ ಕಿರಿಕಿರಿ ಆಗುವ ಸಂಭವ ಇದೆ.

ಹಾಗೆ ನೋಡಿದರೆ, ಶಬ್ದಮಾಲಿನ್ಯ ನಿಯಂತ್ರಣ ನಿಯಮದ ಅಡಿ, ರಾತ್ರಿ 10ರಿಂದ ಬೆಳಗಿನ 6ರವರೆಗೆ ಧ್ವನಿವರ್ಧಕವನ್ನು ಬಳಸುವಂತಿಲ್ಲ ಎಂಬ ನಿಯಮ ಈಗಾಗಲೇ ಜಾರಿಯಲ್ಲಿದೆ. ಇದು ಮಸೀದಿಗಷ್ಟೇ ಅಲ್ಲ, ಧಾರ್ಮಿಕ, ಖಾಸಗಿ ಮತ್ತು ಸಾರ್ವಜನಿಕವಾದ ಎಲ್ಲಾ ಬಗೆಯ ಬಳಕೆಗೂ ಅನ್ವಯಿಸುತ್ತದೆ. ಆದರೆ, ಬೆಳಗಿನ ಸಿಹಿ ನಿದ್ದೆಯಿಂದ ಜನರನ್ನು ಎಚ್ಚರಿಸಿ ಕಿರಿಕಿರಿ ಉಂಟುಮಾಡುವುದು ಆಜಾನ್ ಅಷ್ಟೇ ಅಲ್ಲ. ಹಲವು ದೇವಾಲಯ, ಗುರುದ್ವಾರ, ಸಾರ್ವತ್ರಿಕ ಹಬ್ಬಗಳು, ಸಮಾರಂಭಗಳಲ್ಲಿ ಎಲ್ಲರೂ ಆದಷ್ಟು ಬೇಗ ಎದ್ದು, ದೊಡ್ಡ ಧ್ವನಿಯಲ್ಲಿ ಸಂಗೀತವನ್ನೋ, ಭಜನೆಯನ್ನೋ, ಸಿನಿಮಾ ಹಾಡುಗಳನ್ನೋ ಹಾಕಿಬಿಡುತ್ತಾರೆ. ಇಡೀ ಪರಿಸರವು ಶಬ್ದಮಾಲಿನ್ಯಕ್ಕೆ ಬಲಿಯಾಗುತ್ತದೆ.

ಆಜಾನ್ ಕೂಗುವಾಗ, ‘ಹಯ್ಯಾ ಅಸ್ಸಲಾತ್’ (ಪ್ರಾರ್ಥನೆಗೆ ಬನ್ನಿ) ಎನ್ನುತ್ತಾರೆ. ಆದರೆ ದುಬೈನಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಅದರ ಬದಲಿಗೆ ಈಗ ‘ಅಲ್ ಸಲಾತ್ ಫಿ ಬುಯೂತಿಕುಮ್’ (ಇದ್ದಲ್ಲಿಯೇ– ಮನೆಯಲ್ಲಿಯೇ– ಪ್ರಾರ್ಥಿಸಿ) ಎಂಬ ಸಾಲನ್ನು ಸೇರಿಸಿ
ಕೊಂಡಿದ್ದಾರೆ. ರಾಜ್ಯದ ಕರಾವಳಿಯಲ್ಲಿ ಕೆಲವೆಡೆ ಈ ಬದಲಾವಣೆ ಮಾಡಿಕೊಳ್ಳಲಾಗಿದೆ. ಯಾವುದೂ ನಿರಪೇಕ್ಷವಾದುದಲ್ಲ, ಪರಿಸ್ಥಿತಿಗೆ ಸ್ಪಂದಿಸಿ ಬದಲಾಗುತ್ತದೆ ಎನ್ನುವುದಕ್ಕೆ ಇದೊಂದು ಸಾಕ್ಷಿ. ಹಾಗೆಯೇ ಹದೀಸಿನಲ್ಲಿ, ‘ಯುದ್ಧ, ನೈಸರ್ಗಿಕ ಪ್ರಕೋಪ ಅಥವಾ ಸಾಂಕ್ರಾಮಿಕ ಕಾಲದಲ್ಲಿ, ಪ್ರಾಣಕ್ಕೆ ಭಯವಿದೆ ಎಂಬ ಶಂಕೆ ಇರುವ ಹೊತ್ತಿನಲ್ಲಿ ನಮಾಜಿಗಾಗಿ ಮಸೀದಿಗೆ ಬರಬೇಕಾಗಿಲ್ಲ’ ಎಂಬ ಆದೇಶವಿದೆ. ಇನ್ನೊಂದು ಹದೀಸ್ ಪ್ರಕಾರ, ಪ್ರವಾದಿ ಮುಹಮ್ಮದರು, ‘ಯಾರು ಇತರರಿಗೆ ಹಾನಿ ಮಾಡುತ್ತಾರೋ ಅವರಿಗೆ ಅಲ್ಲಾಹು ಹಾನಿ ಉಂಟುಮಾಡುತ್ತಾನೆ’ ಎಂದಿದ್ದಾರೆ. ಇವೆಲ್ಲದರಿಂದ ಮುಸಲ್ಮಾನ ಬಾಂಧವರಿಗೆ, ಕೊರೊನಾದಂಥ ಈಗಿನ ಬಹುದೊಡ್ಡ ಮಾನವ
ಬಿಕ್ಕಟ್ಟಿನಲ್ಲಿ ಹೇಗೆ ಸ್ಪಂದಿಸಬೇಕು ಎಂಬ ಮಾರ್ಗದರ್ಶನ ಸಿಗುತ್ತದೆ. ಈ ಹಿನ್ನೆಲೆಯಲ್ಲಿ, ಇತರರಿಗೆ ತೊಂದರೆ ಎನ್ನಿಸುವುದಾದರೆ ಧ್ವನಿವರ್ಧಕದಲ್ಲಿ ಆಜಾನ್ ಕೊಡುವುದನ್ನು ಕೈಬಿಡುವ ವಿವೇಚನೆಯನ್ನು ಅವರು ತೋರಿಯಾರು. ‌

ಇದೇ 24 ಮತ್ತು 25ರಂದು ರಂಜಾನ್ ಹಬ್ಬವನ್ನು ಎಂದಿನಂತೆ ಅದ್ಧೂರಿಯಾಗಲ್ಲದೆ ನಿರಾಡಂಬರವಾಗಿ ಆಚರಿಸಲು ಸಮುದಾಯದವರು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲ, ಈ ಆಚರಣೆಯ ಭಾಗವಾಗಿ ಕೊಡುತ್ತಿದ್ದ ‘ಜಕಾತ್’ (ಕಡ್ಡಾಯ ಧಾರ್ಮಿಕ ದಾನ) ಹೊರತಾಗಿಯೂ ಹಬ್ಬಕ್ಕಾಗಿ ಬಟ್ಟೆಬರೆ ಇತ್ಯಾದಿ ಸಂಭ್ರಮದ ವಸ್ತುಗಳನ್ನು ಕೊಳ್ಳಲು ಬಳಸುತ್ತಿದ್ದ ಹಣವನ್ನೂ ದಾನ ಮಾಡಿಬಿಡುವಂತೆ ಪರಸ್ಪರ ಪ್ರೇರೇಪಿಸುತ್ತಿದ್ದಾರೆ. ಈದ್ಗಾ ಮೈದಾನಕ್ಕೆ ಹೋಗಿ ಸಾಮೂಹಿಕ ಪ್ರಾರ್ಥನೆ ಮಾಡುವುದನ್ನು ಕೈಬಿಟ್ಟಿದ್ದಾರೆ. ಒಂದು ಬಹುದೊಡ್ಡ ಧರ್ಮದ ಅನುಯಾಯಿಗಳು ಸದ್ಯದ ಪರಿಸ್ಥಿತಿಗೆ ಈ ರೀತಿ ಅನುಕರಣೀಯ ರೀತಿಯಲ್ಲಿ ಸ್ಪಂದಿಸುತ್ತಿರುವ ಹೊತ್ತಿನಲ್ಲಿ, ಪ್ರಶಂಸಿಸಿ ಅವರ ವಿಶ್ವಾಸವನ್ನು ಬಲಪಡಿಸುವ ಬದಲು, ಕೆಲವು ಮಾಧ್ಯಮಗಳು ಅವರನ್ನು ಕೊರೊನಾ ಹರಡುವುದಕ್ಕೆ ಏಕೈಕ ಕಾರಣವೆಂಬಂತೆ ಬಿಂಬಿಸುತ್ತಿರುವುದು ದುರದೃಷ್ಟಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT