ಗುರುವಾರ , ಮೇ 26, 2022
28 °C
ಪಶ್ಚಿಮ ಘಟ್ಟಗಳ ನದಿಗಳ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ ಎಂಬುದು ತಪ್ಪು ಕಲ್ಪನೆ

ಸಂಗತ: ನದಿ ನೀರು ತಿರುವು: ದಿಕ್ಕು, ದೆಸೆ

ಡಾ. ಜಿ.ವಿ.ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಕಾಳಿ ನದಿ ನೀರನ್ನು ಪೂರ್ವಾಭಿಮುಖವಾಗಿ ತಿರುಗಿಸಿ ಮಲಪ್ರಭಾ ನದಿಗೆ ಹರಿಸಿ, ರಾಜ್ಯದ ಬಯಲುಸೀಮೆಯ ಐದಾರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯ ಪ್ರಸ್ತಾಪ ಕೇಳಿಬರುತ್ತಿದೆ. ರಾಜ್ಯದ ಸಮಗ್ರ ಕೃಷಿ ಉಳಿವಿಗೆ ನದಿಗಳ ಜೋಡಣೆಯೇ ಸರಳ ಪರಿಹಾರ ಎಂದು, ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಸಂಗಮೇಶ ಆರ್.‌ ನಿರಾಣಿ ವಿಚಾರ ಮಂಡಿಸಿದ್ದಾರೆ (ಸಂಗತ, ಫೆ. 3). ಈ ಕುರಿತು ದಾಂಡೇಲಿ-ಹಳಿಯಾಳ ಭಾಗದ ಕಾಳಿ ನದಿ ಜಲಾನಯನ ಪ್ರದೇಶದ ಫಲಾನುಭವಿಗಳು ಹಾಗೂ ಕೆಲವು ಸಂಘಗಳಿಂದ ವಿರೋಧ ವ್ಯಕ್ತವಾಗಿದೆ.

ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರದ ಬಗ್ಗೆ ಅರಿವಿಲ್ಲ ದವರು, ಇಲ್ಲಿನ ದಟ್ಟ ನಿತ್ಯಹರಿದ್ವರ್ಣ ಅರಣ್ಯದ ಬೆಳವಣಿಗೆಗಾಗಿಯೇ ಪ್ರಕೃತಿ ನೀಡಿದ ನೀರಿನಲ್ಲೂ ಪಾಲು ಕೇಳುವುದು ಕಳವಳಕಾರಿ ಸಂಗತಿ. ನದಿ ಜೋಡಣೆ ಯೋಜನೆಗಳು ದಟ್ಟಾರಣ್ಯ ಇಲ್ಲದೇ ಇರುವ ಸೂಕ್ತವಾದ ಪ್ರದೇಶಗಳಲ್ಲಿ ಅಷ್ಟೊಂದು ದುಷ್ಪರಿಣಾಮ ಬೀರದೇ ಇರಬಹುದು. ಆದರೆ ಪಶ್ಚಿಮ ಘಟ್ಟಗಳಂತಹ ಸೂಕ್ಷ್ಮಾತಿಸೂಕ್ಷ್ಮ ಪ್ರದೇಶಗಳಲ್ಲಿ ಭೂಸ್ವರೂಪ ಬದಲಾಯಿಸುವುದು, ಅರಣ್ಯ ನಾಶ, ನೈಸರ್ಗಿಕವಾಗಿ ಹರಿಯುವ ನದಿಗಳ ದಿಕ್ಕನ್ನೇ ಬದಲಾಯಿಸುವುದು, ಅಲ್ಲಿನ ವನ್ಯಜೀವಿಗಳು, ಜಲವಾಸಿಗಳು ಹಾಗೂ ಮನುಕುಲದ ಅವಶ್ಯಕತೆಗಳನ್ನೂ ಪರಿಗಣನೆಗೆ ತೆಗೆದುಕೊಳ್ಳದೆ ನಡೆಸುವ ಕ್ರಮಬದ್ಧವಲ್ಲದ ಚಟುವಟಿಕೆಗಳಿಂದ ತತ್‌ಕ್ಷಣದಲ್ಲಿ ಮತ್ತು ದೀರ್ಘ ಕಾಲದಲ್ಲಿ ಉಂಟಾಗಬಹುದಾದ ಗಂಭೀರ ಸ್ವರೂಪದ ಹಾನಿಗಳು ಅಪಾರ.

ಅರಬ್ಬಿ ಸಮುದ್ರ ಸೇರುವವರೆಗಿನ ಇಲ್ಲಿನ ನದಿಗಳ ಕೊಡುಗೆ ಅಪಾರ. ಇವುಗಳ ನೀರು ಮಳೆಯಾಧಾರಿತವಾಗಿದ್ದು, ಜೂನ್‌ನಿಂದ ಆಗಸ್ಟ್‌ವರೆಗೆ ಮಾತ್ರ ಕ್ರಿಯಾಶೀಲವಾಗಿ, ಸೆಪ್ಟೆಂಬರ್‌ನಲ್ಲಿ ಕ್ಷೀಣಿಸುತ್ತ ಮಳೆಗಾಲ ನಂತರದ ಅವಧಿಯಲ್ಲಿ ಅಂತರ್ಜಲ ಮೂಲಗಳಿಂದ ದೊರೆಯಬಹುದಾದ ತಳಮಟ್ಟದ ಹರಿವು ಮಾತ್ರ ಇರುವುದು ಸಾಮಾನ್ಯ. ಬೇಸಿಗೆಯ ದಿನಗಳಲ್ಲಿ ಕೆಲವೊಮ್ಮೆ ಈ ಹರಿವು ನಿಂತುಹೋಗಿ, ಈ ನದಿಗಳ ನೀರನ್ನು ಆಧರಿಸಿದ ಕುಡಿಯುವ ನೀರು ಸರಬರಾಜು ಯೋಜನೆಗಳಿಗೂ ಸಂಕಷ್ಟ ಎದುರಾದ ನಿದರ್ಶನಗಳಿವೆ.

ಇತ್ತೀಚಿನ ಅಧ್ಯಯನಗಳಿಂದ ತಿಳಿದುಬರುವ ಆಘಾತಕಾರಿ ಅಂಶವೆಂದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ 1973ರಲ್ಲಿ ಇದ್ದ ಶೇ 74ರಷ್ಟು ಅರಣ್ಯ ಪ್ರದೇಶ 2018ರ ವೇಳೆಗೆ ಶೇ 48ಕ್ಕೆ ಇಳಿಕೆಯಾಗಿರುವುದು ಮತ್ತು ನಿತ್ಯಹರಿದ್ವರ್ಣ ಕಾಡು ಪ್ರದೇಶ ಶೇ 56ರಷ್ಟು ಇದ್ದದ್ದು ಕೇವಲ ಶೇ 25ಕ್ಕೆ ಕುಸಿದಿರುವುದು.

ಪಶ್ಚಿಮ ಘಟ್ಟಗಳ ನದಿಗಳಲ್ಲಿನ ನೀರಿನ ಹರಿವಿನ ಪ್ರಮಾಣವನ್ನು ಕಡಿಮೆ ಮಾಡಿದಲ್ಲಿ, ಕರಾವಳಿ ಪ್ರದೇಶದಲ್ಲಿ ಸಿಹಿ ನೀರಿನ ಪ್ರದೇಶಕ್ಕೆ ಸಮುದ್ರದ ಉಪ್ಪು ನೀರು ನುಗ್ಗಿ, ಲಭ್ಯವಿರುವ ಅಲ್ಪಪ್ರಮಾಣದ ಸಿಹಿ ನೀರಿನ ಸಂಪನ್ಮೂಲಗಳು ಮಲಿನಗೊಂಡು, ಕುಡಿಯಲು ಹಾಗೂ ದಿನಬಳಕೆಗೂ ಲಭ್ಯವಾಗದಂತೆ ಆಗುತ್ತದೆ.

ಇಲ್ಲಿನ ನೈಸರ್ಗಿಕ ವ್ಯವಸ್ಥೆಯಲ್ಲಿ ಏನಾದರೂ ವ್ಯತ್ಯಾಸವಾದಲ್ಲಿ ಪ್ರಕೃತಿಯೇ ಇಂದೋ ನಾಳೆಯೋ ಮುನಿಸಿಕೊಂಡು ಯಾರ ಊಹೆಗೂ ನಿಲುಕದಂತಹ ವಿಕೋಪಗಳು ಸಂಭವಿಸಬಹುದು. ಪಶ್ಚಿಮ ಘಟ್ಟಗಳ ನದಿಗಳ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ ಎಂಬ ತಪ್ಪು ಕಲ್ಪನೆಯಿಂದ, ಇಲ್ಲಿನ ನದಿಗಳನ್ನು ತಿರು ಗಿಸುವ ಯೋಜನೆಗಳನ್ನು ಪ್ರಸ್ತಾಪ ಮಾಡುವುದು ಸಮಾಜ ಮತ್ತು ನಿಸರ್ಗದ ಸ್ವಾಸ್ಥ್ಯ ಹಾಳುಮಾಡುವ ಕಾರ್ಯ.

ಹಾಗಿದ್ದರೆ, ನದಿ ನೀರು ತಿರುವಿನಂತಹ ಪ್ರಸ್ತಾಪ ಗಳಿಗೆ ಪರ್ಯಾಯ ಪರಿಹಾರಗಳಿಲ್ಲವೇ? ನೀರಿನ ಸಮರ್ಥ ಸದ್ಬಳಕೆಯ ಉದಾಹರಣೆಯಾಗಿ ಪುಟ್ಟ ದೇಶ ಇಸ್ರೇಲ್‌ ಅನ್ನು ಗಮನಿಸಬಹುದು. ಅಲ್ಲಿನ ವಾರ್ಷಿಕ ಮಳೆಯ ಪ್ರಮಾಣ ಕೇವಲ 400- 500 ಮಿ.ಮೀ. ಆದರೂ ಅಲ್ಲಿ ಸಾಧಿಸಿರುವ ಜಲ ಸ್ವಾವಲಂಬನೆ ಬಗ್ಗೆ ಕೇಳುತ್ತಲೇ ಬಂದಿದ್ದೇವೆ. ಆದರೂ ಅದು ನಮಗಿನ್ನೂ ಮಾದರಿಯಾಗಿಲ್ಲ. ಉತ್ತರ ಕರ್ನಾಟಕದ ಬಯಲು ಸೀಮೆ ಜಿಲ್ಲೆಗಳಲ್ಲಿ ವಾರ್ಷಿಕ ವಾಡಿಕೆ ಮಳೆಯ ಪ್ರಮಾಣ 550- 850 ಮಿ.ಮೀ. ಇದೆ. ಇದನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸಿಕೊಳ್ಳಬಹುದಾದ ಸಾಧ್ಯತೆಗಳು ಹೇಗೆ?

ಮೇಲ್ಚಾವಣಿ ಹಾಗೂ ಜಮೀನಿನ ಮೇಲೆ ಬೀಳುವ ಮಳೆ ನೀರನ್ನು ಲಭ್ಯವಿರುವ ವೈಜ್ಞಾನಿಕ, ಸುಲಭ ತಾಂತ್ರಿಕತೆ ಮೂಲಕ ಸೂಕ್ತವಾಗಿ ಸಂಗ್ರಹಿಸಿ, ಸಂರಕ್ಷಿಸಿ, ಅವಶ್ಯಕತೆ ಬಂದಾಗ ನ್ಯಾಯೋಚಿತವಾಗಿ ಬಳಕೆ ಮಾಡಬೇಕು. ಹನಿ ನೀರೂ ದುರ್ಬಳಕೆಯಾಗದಂತೆ ಸುಧಾರಿತ ನೀರಾವರಿ ಪದ್ಧತಿ ಅಳವಡಿಸಿಕೊಂಡು ಜಲಸ್ವಾವಲಂಬಿಗಳಾಗುವ ದಿಸೆಯಲ್ಲಿ ಯಶಸ್ಸನ್ನು ಕಾಣಬಹುದು.

ಬಹುತೇಕ ಕೆರೆಗಳಲ್ಲಿ ಹೂಳು ತುಂಬಿದ್ದು, ಅವುಗಳ ಮೂಲ ಸಾಮರ್ಥ್ಯಕ್ಕನುಗುಣವಾಗಿ ಮಳೆ ನೀರು ಸಂಗ್ರಹವಾಗುವಂತೆ ಪುನಶ್ಚೇತನಗೊಳಿಸಬೇಕು. ಈಗಾಗಲೇ ನಿರ್ಮಾಣಗೊಂಡಿರುವ ನೀರಾವರಿ ಸೌಲಭ್ಯಗಳನ್ನು ಸಮರ್ಪಕವಾಗಿ ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ಲಭ್ಯವಿರುವ ಜಲಸಂಪನ್ಮೂಲಗಳು ಮಲಿನಗೊಳ್ಳದಂತೆ ಕಾಪಾಡಿಕೊಳ್ಳುವುದೂ ಅತ್ಯಗತ್ಯ.

ಇವೆಲ್ಲ ಅಸಾಧ್ಯದ ಕಾರ್ಯಗಳಲ್ಲ. ಇಚ್ಛಾಶಕ್ತಿ ಕೊರತೆಯಿಂದ ಹೊರಬಂದು ಸಾಧಿಸಬೇಕಾಗಿದ್ದನ್ನು ಸಾಧಿಸಬೇಕು. ಅಂದಾಗ ಕೋಟಿ-ಕೋಟಿ ಅನುದಾನದ, ಪರಿಸರ ನಾಶಕ್ಕೆ ಕಾರಣವಾಗುವ ನದಿ ನೀರು ತಿರುವಿನಂತಹ ಅವೈಜ್ಞಾನಿಕ ಬೃಹತ್‌ ಯೋಜನೆಗಳಿಗೆ ವಿದಾಯ ಹೇಳಬಹುದು. ನಾವು ನಿಸರ್ಗದ ವಿರುದ್ಧ ಪ್ರಯಾಣಿಸಲಾಗದು.

ಅಭಿವೃದ್ಧಿಯ ಹೆಸರಿನಲ್ಲಿ ನಿಸರ್ಗದ ಮೇಲೆ ದಾಳಿ ಮಾಡಿ ನೈಸರ್ಗಿಕ ವ್ಯವಸ್ಥೆಯನ್ನು ಬದಲಿಸಲು, ಹಾಳು ಮಾಡಲು ನಮಗೆಲ್ಲಿದೆ ಅಂತಹ ಆಯ್ಕೆಯ ಹಕ್ಕು?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು