ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಹೆದ್ದಾರಿಯ ಬಲಿ ದಾಹ ನಿಲ್ಲಲಿ

ಹುಬ್ಬಳ್ಳಿ-– ಧಾರವಾಡ ಬೈಪಾಸ್ ಹೆದ್ದಾರಿಗೆ ಕಾಯಕಲ್ಪ ಎಂದು?
ಅಕ್ಷರ ಗಾತ್ರ

ಹುಬ್ಬಳ್ಳಿ- ಧಾರವಾಡ ಬೈಪಾಸ್ ಹೆದ್ದಾರಿಯಲ್ಲಿ ಇತ್ತೀಚೆಗೆ 10ಕ್ಕೂ ಹೆಚ್ಚು ಮಂದಿಯ ದುರ್ಮರಣಕ್ಕೆ ಕಾರಣವಾದ ಭೀಕರ ಅಪಘಾತಕ್ಕೆ ಕಾರಣಗಳನ್ನು ಹುಡುಕುವ ಮೊದಲು, ಈ ದೇಶದ ಸುವರ್ಣ ಚತುಷ್ಪಥಗಳ ರೂವಾರಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ನಾವು ಸ್ಮರಿಸಿಕೊಳ್ಳಲೇಬೇಕು. ಕಾರಣವಿಷ್ಟೆ: ಸ್ವಾತಂತ್ರ್ಯೋತ್ತರದ 50 ವರ್ಷಗಳ ನಂತರವೂ ಭಾರತದಲ್ಲಿ ಚತುಷ್ಪಥ, ಷಟ್‌ಪಥ, ಅಷ್ಟಪಥ ಹೆದ್ದಾರಿಗಳ ಕನಿಷ್ಠ ಕಾಲ್ಪನಿಕ ಚಿತ್ರಣವೂ ನಮ್ಮ ಮುಂದಿರಲಿಲ್ಲ. 1999ಕ್ಕೂ ಮೊದಲು ದೇಶದಲ್ಲಿ ದ್ವಿಪಥ ಹೆದ್ದಾರಿಗಳೇ ಇದ್ದವು. ಅಷ್ಟೇ ಅಲ್ಲ, ಅವುಗಳಲ್ಲಿ ಹೆಚ್ಚಿನವು ಪ್ರಯಾಣಿಕರಿಗೆ ಅಪಾಯಕಾರಿಯಾಗಿಯೇ ಇದ್ದವು.

ಇಂಥ ಸಂದರ್ಭದಲ್ಲಿ ವಾಜಪೇಯಿ ನೇತೃತ್ವದ ಸರ್ಕಾರವು ದ್ವಿಪಥ ಹೆದ್ದಾರಿಗಳನ್ನು ಸುವರ್ಣ ಚತುಷ್ಪಥ ಹೆದ್ದಾರಿಗಳನ್ನಾಗಿ ಪರಿವರ್ತಿಸಿದ ನಂತರ ರಸ್ತೆ ಅಪಘಾತಗಳು ಗಣನೀಯ ಸಂಖ್ಯೆಯಲ್ಲಿ ಕಡಿಮೆಯಾದವು. ಕಾರಣವಿಷ್ಟೇ, ಚತುಷ್ಪಥ ರಸ್ತೆಗಳು ಏಕಪಥಗಳಾಗಿರುವುದರಿಂದ ವಾಹನಗಳು ಮುಖಾಮುಖಿಯಾಗಿ ಅಪಘಾತವಾಗುವ ಸಂದರ್ಭಗಳು ಇನ್ನಿಲ್ಲವಾದವು.

1980ರ ದಶಕದಲ್ಲಿ ನಾನು ಬಾಲಕನಾಗಿದ್ದಾಗ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ನಡೆಯುತ್ತಿದ್ದ ಅನೇಕ ಚಳವಳಿಗಳ ಸಚಿತ್ರ ವರದಿಗಳನ್ನು ಪತ್ರಿಕೆಯಲ್ಲಿ ಗಮನಿಸುತ್ತಿದ್ದೆ. ಇಂಥ ಚಳವಳಿಗೆ ಸೊಪ್ಪು ಹಾಕದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಈ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಆಸಕ್ತಿ ತೋರಲಿಲ್ಲ. ಹುಬ್ಬಳ್ಳಿಯವರೇ ಆದ ಎಸ್.ಆರ್. ಬೊಮ್ಮಾಯಿಯವರು 1988ರಲ್ಲಿ ಮುಖ್ಯಮಂತ್ರಿಯಾದಾಗಲೂ ಬೈಪಾಸ್ ರಸ್ತೆಗೆ ಚಾಲನೆ ಸಿಗಲಿಲ್ಲ. ಸುದೀರ್ಘ ಸಾರ್ವತ್ರಿಕ ಹೋರಾಟದ ಫಲವಾಗಿ 1998ರಲ್ಲಿ ಕರ್ನಾಟಕ ಸರ್ಕಾರವು ನಂದಿ ಹೈವೇ ಡೆವಲಪರ್ಸ್‌ ಲಿಮಿಟೆಡ್‌ನೊಂದಿಗೆ ನಿರ್ಮಾಣ- ನಿರ್ವಹಣೆ- ವರ್ಗಾವಣೆ ಒಪ್ಪಂದದ ಅನ್ವಯ ದ್ವಿಪಥದ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಹಸಿರು ನಿಶಾನೆ ತೋರಿತು. ಕೇಂದ್ರ ಸರ್ಕಾರವು ಭವಿಷ್ಯದ ಸಾರಿಗೆ ಒತ್ತಡವನ್ನು ಗಮನದಲ್ಲಿ ಇಟ್ಟುಕೊಂಡು 1999ರಲ್ಲಿ ಮದ್ರಾಸ್-ಬಾಂಬೆ (ಇಂದು ಚೆನ್ನೈ- ಮುಂಬೈ ಕೈಗಾರಿಕಾ ಕಾರಿಡಾರ್) ಕೈಗಾರಿಕಾ ಕಾರಿಡಾರ್‌ಗೆ ಪೂರಕವಾಗಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ (ಇಂದು ರಾಷ್ಟ್ರೀಯ ಹೆದ್ದಾರಿ 48) ಸುವರ್ಣ ಚತುಷ್ಪಥ ಹೆದ್ದಾರಿ ನಿರ್ಮಾಣ ಕೈಗೊಂಡಂತೆ, ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯನ್ನೂ ಚತುಷ್ಪಥ ರಸ್ತೆಯನ್ನಾಗಿ ನಿರ್ಮಿಸಿದ್ದರೆ, ಈಗ ನಡೆದಂಥ ಭೀಕರ ಅಪಘಾತ ಘಟಿಸುತ್ತಿರಲಿಲ್ಲ.

ಅಂದು ಅಪಘಾತವಾಗಿ, ಆ ತಾಯಂದಿರ ಶವಗಳನ್ನು ಕನಿಷ್ಠ ಒಂದು ಬಟ್ಟೆಯನ್ನೂ ಹೊದಿಸದೆ ಹೆದ್ದಾರಿಯ ಬದಿ ಮಲಗಿಸಿದ್ದ ಸುದ್ದಿ ಚಿತ್ರವು ನಮ್ಮ ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿತ್ತು. ಆ ದೃಶ್ಯವನ್ನು ನೆನಪಿಸಿಕೊಂಡಾಗಲೆಲ್ಲ ಡಿ.ವಿ.ಗುಂಡಪ್ಪನವರ ಮಂಕುತಿಮ್ಮನ ಕಗ್ಗದ ಒಂದು ಪದ್ಯ ನೆನಪಿಗೆ ಬರುತ್ತದೆ-

ನಿನ್ನ ಹೆಣವನು ನೀನೆ ಹೊತ್ತು ಸಾಗಿಸಬೇಕೊ|
ಅಣ್ಣ ಬಾ ತಮ್ಮ ಬಾ ಎಂದಳುವುದೇಕೋ?||
ನಿನ್ನೊಡಲೆ ಚಿತೆ, ಜಗದ ತಂಟೆಗಳೆ ಸವುದೆಯುರಿ|
ಮಣ್ಣೆ ತರ್ಪಣ ನಿನಗೆ- ಮಂಕುತಿಮ್ಮ||

ಆ ತಾಯಂದಿರನ್ನು ಕಳೆದುಕೊಂಡ ಕರುಳಕುಡಿಗಳ ರೋದನ, ಅನಾಥಪ್ರಜ್ಞೆಯನ್ನು ಒಂದು ಕ್ಷಣವಾದರೂ ನೆನಪಿಸಿಕೊಳ್ಳುವ ಸೌಜನ್ಯ ಆಡಳಿತಶಾಹಿಗೆ ಇದೆಯೇ?

ಈ ಭಾಗದ ಜಗದೀಶ ಶೆಟ್ಟರ್‌ ಮುಖ್ಯಮಂತ್ರಿ ಆಗಿದ್ದರು. ಕೇಂದ್ರ ಸಂಪುಟದಲ್ಲಿ ಸಚಿವರಾಗಲು ಪ್ರಲ್ಹಾದ ಜೋಶಿಯವರಿಗೆ ಅವಕಾಶ ನೀಡಿದ ಹೆಗ್ಗಳಿಕೆ ಈ ಅವಳಿ ನಗರದ್ದು. ಅಷ್ಟಾದರೂ ಈ ರಸ್ತೆಗೆ ಕಾಯಕಲ್ಪದ ಭಾಗ್ಯ ದೊರೆಯುತ್ತಿಲ್ಲ. 20 ವರ್ಷಗಳಿಂದಲೂ ಇಲ್ಲಿ ಭೀಕರ ಅಪಘಾತಗಳು ತಪ್ಪುತ್ತಿಲ್ಲ. ದಾಖಲೆಗಳ ಪ್ರಕಾರ, ವರ್ಷಕ್ಕೆ ಕನಿಷ್ಠ 20 ಜನ ಅಪಘಾತದಿಂದ ಮೃತರಾಗುತ್ತಿದ್ದರೆ, 50ರಿಂದ 60 ಜನ ತೀವ್ರವಾಗಿ ಗಾಯಗೊಳ್ಳುತ್ತಿದ್ದಾರೆ. ಇದು ಈ ರಸ್ತೆಯ ಒಡೆತನ ಹೊಂದಿದ ಸಂಸ್ಥೆಯ ಹೃದಯವನ್ನೂ ತಟ್ಟುತ್ತಿಲ್ಲ. ಈ ಸಂಸ್ಥೆಯ ಮುಂದೆ ಅಸಹಾಯಕವಾಗಿ ಮಂಡಿಯೂರಿ ಕುಳಿತಂತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ‘ಪ್ರಭು’ಗಳು ಈ ರಸ್ತೆಯನ್ನು ಚತುಷ್ಪಥ ಅಥವಾ ಅಷ್ಟಪಥಗೊಳಿಸುವ ಬಗ್ಗೆ ಫಲಪ್ರದವಲ್ಲದ ಸಭೆಗಳನ್ನು ನಡೆಸುತ್ತಲೇ ಬಂದಿದ್ದಾರೆ. ‘ದುಃಖತಪ್ತ ಕುಟುಂಬಗಳ ಜೊತೆ ನಾವಿದ್ದೇವೆ’ ಎಂದು ಸಂತಾಪ ಸೂಚಿಸುವ ತಮ್ಮ ನಡೆಯ ಬಗ್ಗೆ ಈ ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳಲಿ.

ಈಗಾಗಲೇ ಪುಣೆ-ಬೆಂಗಳೂರು ಮಧ್ಯೆ ಇರುವ ಚತುಷ್ಪಥ ಹೆದ್ದಾರಿಯನ್ನು ಅಷ್ಟಪಥ ಹೆದ್ದಾರಿಯನ್ನಾಗಿಸುವ (ತುಮಕೂರು-ಚಿತ್ರದುರ್ಗ ಪೂರ್ಣಗೊಂಡಿದೆ) ಕಾಮಗಾರಿ ಭರದಿಂದ ನಡೆಯುತ್ತಿದ್ದರೂ ಅವಳಿ ನಗರದ ಬೈಪಾಸ್ ರಸ್ತೆ ಅಭಿವೃದ್ಧಿಯಾಗುತ್ತಿಲ್ಲ. ಏಕೆಂದರೆ ನಂದಿ ಹೈವೇ ಡೆವಲಪರ್ಸ್‌ ಸಂಸ್ಥೆಯೊಂದಿಗಿನ ಗುತ್ತಿಗೆ ಒಪ್ಪಂದ ಮುಗಿಯುವುದೇ 2024ರ ವೇಳೆಗೆ. ಅಲ್ಲಿಯವರೆಗೆ ಕೆಲವು ಅಧಿಕಾರಸ್ಥರಿಗೆ ಬರಬಹುದಾದ ‘ಆದಾಯ’ವನ್ನು ಬೇಡವೆನ್ನಲು ಅವರೇನೂ ಮೂರ್ಖ ಶಿಖಾಮಣಿಗಳೇನಲ್ಲ. ಅಷ್ಟೇ ಅಲ್ಲ, ಸಮಸ್ಯೆಗಳು ಜೀವಂತವಾಗಿದ್ದಷ್ಟೂ ರಾಜಕಾರಣ ಜೀವಂತವಾಗಿರುತ್ತದೆ. ಸಮಸ್ಯೆಗಳೇ ಇಲ್ಲವೆಂದರೆ ಜನರ ದನಿ ಕ್ಷೀಣಿಸುತ್ತದೆ. ಜೊತೆಗೆ ‘ಆದಾಯ’ವೂ ಇಲ್ಲವಾಗುತ್ತದೆ.

ಜನಪ್ರತಿನಿಧಿಗಳು ಪ್ರಬಲ ಇಚ್ಛಾಶಕ್ತಿ ತೋರಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತಿದೆ ಈಗಿನ ಅಪಘಾತ- ಆಘಾತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT