ಮಂಗಳವಾರ, ಅಕ್ಟೋಬರ್ 22, 2019
23 °C
ಒಡಕಿಗೆ ದಾರಿ ಮಾಡುವ ಸಂಗತಿಗಳನ್ನು ಪ್ರಮುಖವೆಂಬಂತೆ ಬಿಂಬಿಸುವ ಮೊದಲು, ಏಕತೆಯೇ ಭಾರತದ ಶಕ್ತಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು

ವೈವಿಧ್ಯವೆಂಬ ಏಕತೆಯ ಮೂಲ

Published:
Updated:
Prajavani

ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಯುವ ಮುಖಂಡ ಕನ್ಹಯ್ಯ ಕುಮಾರ್ ಅವರಿಗೆ ಯುವತಿಯೊಬ್ಬರು ಕೇಳಿದ ಪ್ರಶ್ನೆ ಮತ್ತು ಅದಕ್ಕೆ ಅವರು ನೀಡಿದ ಉತ್ತರ, ದೇಶದಾದ್ಯಂತ ವೈರಲ್ ಆಗಿದೆ. ‘ಕನ್ಹಯ್ಯ ಕುಮಾರ್ ಅವರೇ ಜೈ ಶ್ರೀರಾಮ್’ ಎಂದು ಆಕೆ ಮಾತು ಪ್ರಾರಂಭಿಸಿದ್ದು ನೋಡಿ ನನಗೆ ಬಹಳ ಆಶ್ಚರ್ಯವಾಯಿತು ಮತ್ತು ವಿಷಾದವೂ ಆಯಿತು. ಆಶ್ಚರ್ಯ ಏಕೆಂದರೆ, ದಕ್ಷಿಣದಲ್ಲಿ ಪರಸ್ಪರ ರನ್ನು ಎದುರುಗೊಳ್ಳುವಾಗ ಹೇಳುವ ರೂಢಿಯೇ ಇಲ್ಲದ ‘ಜೈ ಶ್ರೀರಾಮ್’ ಎಂಬುದನ್ನು ಆ ಯುವತಿ ಹೇಳಿದ್ದು. ವಿಷಾದ ಏಕೆಂದರೆ, ತನಗೇ ಸ್ಪಷ್ಟವಿಲ್ಲದ ಪೊಳ್ಳು ವಾದದ ಮೂಲಕ ಆಕೆ, ಹಾಗೆ ಹೇಳುವಂತೆ ಮತ್ತೊಬ್ಬರನ್ನು ಒತ್ತಾಯಿಸಿದ್ದು.

ಭಾರತ ಒಂದು ವಿಶಿಷ್ಟವಾದ ದೇಶ. ದೇಶದ ಉತ್ತರ ತುದಿಯಿಂದ ದಕ್ಷಿಣ ತುದಿಗೆ ಬರಲು ತಗಲುವ ದೂರದಲ್ಲಿ ಯುರೋಪಿನಿಂದ ಆಫ್ರಿಕಾದ ಮಧ್ಯಭಾಗಕ್ಕೆ ಬಂದುಬಿಡಬಹುದು! ಭೌಗೋಳಿಕವಾಗಿಯೇ ಇಷ್ಟು ಅಂತರವಿರುವ ನಮ್ಮ ದೇಶದಲ್ಲಿ ಸಾಂಸ್ಕೃತಿಕ, ಸಾಮಾಜಿಕ ವ್ಯತ್ಯಾಸಗಳು ಇರುವುದು ಸಹಜ. ಈ ಎಲ್ಲ ವೈಶಿಷ್ಟ್ಯಗಳೇ ಒಟ್ಟಾಗಿ ಭಾರತವನ್ನು ಅಪರೂಪದ ದೇಶವನ್ನಾಗಿಸಿವೆ.

ಭಾರತದ ಇತಿಹಾಸವನ್ನು ಗಮನಿಸಿದರೆ, ಉತ್ತರ ಭಾರತವು ಸತತವಾಗಿ ವಿದೇಶಿ ಆಕ್ರಮಣಕ್ಕೆ ಒಳಗಾಗು ತ್ತಿತ್ತು. ಅದಕ್ಕೆ ಹೋಲಿಸಿದರೆ ದಕ್ಷಿಣ ಭಾರತವು ಸುಭದ್ರ ಆಡಳಿತ ಹೊಂದಿತ್ತೆಂದೇ ಹೇಳಬಹುದು. ಹಾಗಾಗಿಯೇ ಸಾಂಸ್ಕೃತಿಕ ಭಾರತದ ಬೇರುಗಳು ಹೆಚ್ಚಾಗಿ ಇರುವುದು ದಕ್ಷಿಣದಲ್ಲೇ. ಸಂಗೀತ, ಸಾಹಿತ್ಯ, ವಾಸ್ತುಶಿಲ್ಪ, ನೃತ್ಯ ಇವು ಮೊದಲು ಹೆಚ್ಚಾಗಿ ಬೆಳವಣಿಗೆ ಹೊಂದಿದ್ದು ಸಹ ದಕ್ಷಿಣ ಭಾರತದಲ್ಲೇ. ಗಂಗಾ ನದೀ ಮುಖಜ ಭೂಮಿಯ ಫಲವತ್ತತೆಯು ವಿದೇಶಿ ಆಕ್ರಮಣಕಾರರನ್ನು ಖೈಬರ್ ಕಣಿವೆಯ ಮೂಲಕ ಕರೆತಂದರೆ, ಅಷ್ಟೇ ಫಲವತ್ತಾದ ದಕ್ಷಿಣ ಭಾರತಕ್ಕೆ ಬರಲು ಸಮುದ್ರಮಾರ್ಗವನ್ನೇ ಅವಲಂಬಿಸಬೇಕಿತ್ತು! ಹಾಗಾಗಿ ದಕ್ಷಿಣ ಭಾರತಕ್ಕೆ ಆಕ್ರಮಣಕಾರರು ಜಾಸ್ತಿ ಬರಲಿಲ್ಲ, ವ್ಯಾಪಾರಿಗಳು ಬಂದರು.

ಉತ್ತರ ಭಾರತದ ಜನರು ಸದಾ ಆಕ್ರಮಣದ ಭೀತಿಯಲ್ಲಿ ನೆಲೆಗಾಗಿ ಅಲೆದಾಟ ನಡೆಸಿದ್ದರೆ, ದಕ್ಷಿಣ ಭಾರತೀಯರು ತಲೆತಲಾಂತರಗಳಿಂದ ಒಂದೆಡೆ ನೆಲೆಸಿದ್ದರು. ಇದರಿಂದ ಎಲ್ಲ ಕ್ಷೇತ್ರಗಳಲ್ಲೂ ಹೆಚ್ಚಿನ ಸಾಧನೆ ಸಾಧ್ಯವಾಯಿತು. ಇಂದಿಗೂ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ರಾಜ್ಯಗಳನ್ನು ಗಮನಿಸಿದರೆ ಇದು ಅರಿವಿಗೆ ಬರುತ್ತದೆ. ಸಾಕ್ಷರತೆಯಿಂದ ಹಿಡಿದು ಸ್ವಚ್ಛತೆಯವರೆಗೆ ಎಲ್ಲದರಲ್ಲೂ ದಕ್ಷಿಣದ ರಾಜ್ಯಗಳೇ ಮುಂದಿವೆ. ಜಗತ್ತಿನಲ್ಲಿ ಬಳಸಲ್ಪಡುವ ಅತೀಪ್ರಾಚೀನ ಭಾಷೆಗಳಲ್ಲಿ ದಕ್ಷಿಣ ಭಾರತದ ಭಾಷೆಗಳೇ ಇಂದಿಗೂ ಮುಂಚೂಣಿಯಲ್ಲಿ ಇರುವುದೂ ಇದಕ್ಕೆ ಸಾಕ್ಷಿ.

ಕೆಲಕಾಲದ ಹಿಂದೆ ಕೆಲವು ರಾಜಕೀಯ ನಾಯಕರು ಉತ್ತರ ಭಾರತದ ಕೆಲ ರಾಜ್ಯಗಳಂತೆ ಕರ್ನಾಟಕವನ್ನು ಮಾಡುತ್ತೇವೆ ಎಂದೆಲ್ಲಾ ಪ್ರಚಾರ ಮಾಡುತ್ತಿದ್ದಾಗ ದಿಗಿಲಾಗಿತ್ತು. ಸಾಕ್ಷರತೆ, ಲಿಂಗಾನುಪಾತ, ಉದ್ಯೋಗಾವಕಾಶ ಎಲ್ಲವೂ ಉತ್ತಮವಾಗಿರುವ ಕರ್ನಾಟಕವನ್ನು ಉತ್ತರ ಭಾರತದಂತೆ ಮಾಡುವುದೆಂದರೆ ಶತಮಾನ ಹಿಂದೆ ಹೋದಂತೆಯೇ! ಜನರು ಲಕ್ಷ ಲಕ್ಷ ಸಂಖ್ಯೆಯಲ್ಲಿ ಉದ್ಯೋಗ ಅರಸಿಕೊಂಡು ಬರುತ್ತಿರುವುದು ಉತ್ತರ ದಿಂದ ದಕ್ಷಿಣಕ್ಕೇ ಹೊರತು ಇಲ್ಲಿಂದ ಅಲ್ಲಿಗಲ್ಲ! ಆದರೆ ಏಕೋ ಗೊತ್ತಿಲ್ಲ, ಉತ್ತರದವರು ನಮ್ಮನ್ನು ಅನುಕರಿಸು ವುದಕ್ಕಿಂತ ನಾವು ಅವರನ್ನು ಅನುಕರಿಸುತ್ತಿದ್ದೇವೆ. ಮೊದಲು ಹಿಂದಿ ಸಿನಿಮಾಗಳ ಪ್ರಭಾವದಿಂದ ನಮ್ಮ ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ನಡೆಯುತ್ತಿದ್ದ ಸಂಪ್ರದಾಯಗಳ ಅನುಕರಣೆಯನ್ನು ಈಗ ನಿತ್ಯಜೀವನದಲ್ಲೂ ನೋಡಬಹುದು. ನಮ್ಮ ಸಂಪ್ರದಾಯಕ್ಕೆ ಒಗ್ಗದ ಉತ್ತರ ಭಾರತದ ಹಲವಾರು ರಿವಾಜುಗಳನ್ನು ತುರುಕಿ ನಗೆಪಾಟಲಾಗುವ ಧಾರಾವಾಹಿಗಳು, ಸಿನಿಮಾಗಳಂತೆ ನಮ್ಮ ಕಾರ್ಯಕ್ರಮಗಳೂ ಹಾಸ್ಯಾಸ್ಪದವಾಗುತ್ತಿವೆ. ಬಹುಶಃ ಬಣ್ಣ ಬೆಳ್ಳಗಿದ್ದರೆ ಎಲ್ಲವೂ ಶ್ರೇಷ್ಠ ಎಂಬ ಮನಃಸ್ಥಿತಿ ನಮಗಿರುವುದರಿಂದಲೇ ಅವರನ್ನು ನಾವು ಅನುಕರಣೀಯ ಎಂದುಕೊಳ್ಳುತ್ತಿರಬಹುದು!

ಒಳ್ಳೆಯದನ್ನು ಸ್ವೀಕರಿಸೋಣ. ಜತೆಗೇ ನಮ್ಮತನವನ್ನು ಕಾದುಕೊಳ್ಳೋಣ. ದಕ್ಷಿಣವೆಂದರೆ ಚೆನ್ನೈ, ಲುಂಗಿ, ಇಡ್ಲಿ ಮತ್ತು ರಜನೀಕಾಂತ್ ಮಾತ್ರವಲ್ಲ ಎಂದು ಉತ್ತರದವರಿಗೆ ನಾವು ಹೇಗೆ ಹೇಳು ತ್ತೇವೆಯೋ ಹಾಗೆಯೇ ಉತ್ತರ ಭಾರತವೆಂದರೆ ಈಶಾನ್ಯ ರಾಜ್ಯಗಳೂ ಹೌದು ಎಂಬುದು ನಮಗೂ ಗೊತ್ತಿರಬೇಕು. ಮೇಲ್ನೋಟಕ್ಕೆ ಫ್ಯಾನ್ಸಿ ಆಗಿ ತೋರುವ, ಒಡಕಿಗೆ ದಾರಿ ಮಾಡುವ ಸಂಗತಿಗಳನ್ನು ಪ್ರಮುಖವೆಂಬಂತೆ ಬಿಂಬಿಸುವ ಮೊದಲು, ಏಕತೆಯೇ ಭಾರತದ ಶಕ್ತಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಆ ಏಕತೆಯ ಮೂಲ ಇರುವುದು ನಮ್ಮ ವೈವಿಧ್ಯ ದಲ್ಲಿ ಎಂಬುದನ್ನು ಮರೆತರೆ ಅದು ಅವನತಿಗೆ ಮೂಲ.

ಇನ್ನು ಉತ್ತರದ ಸಂಸ್ಕೃತಿ ಬಹಳ ಇಷ್ಟವೇ? ಮುಂದುವರಿಸಿ. ಯಾವ ಸಂಸ್ಕೃತಿಯನ್ನಾದರೂ ಅನು ಸರಿಸುವ ಸ್ವಾತಂತ್ರ್ಯ ನಮ್ಮೆಲ್ಲರಿಗೂ ಇದೆ. ಆ ಹಕ್ಕನ್ನು ಸಂವಿಧಾನ ನೀಡಿದೆ. ಆದರೆ ‘ನೀನು ಇಂಥದ್ದೇ ಸಂಸ್ಕೃತಿಯನ್ನು ಅನುಕರಿಸು’ ಎಂದು ಯಾರು ಯಾರನ್ನೂ ಒತ್ತಾಯಿಸುವಂತಿಲ್ಲ. ನೀವು ಜೈ ಶ್ರೀರಾಮ್ ಎಂದಾದರೂ ಹೇಳಿ, ಹನುಮಾನ್ ಎಂದಾದರೂ ಹೇಳಿ, ಗುಡ್ ಮಾರ್ನಿಂಗ್ ಎಂದಾದರೂ ಹೇಳಿ, ಅಸ್ಸಲಾಮ್ ಅಲೈಕುಂ ಎಂದು ಬೇಕಾದರೂ ಹೇಳಿ. ಆದರೆ ನಾನು ನಮಸ್ಕಾರ ಎಂದರೆ ‘ಹಾಗೆ ಹೇಳಬೇಡ, ಹೀಗೆಯೇ ಹೇಳು’ ಎನ್ನಬೇಡಿ. ಹಾಗೆ ಹೇಳಲು ಯಾರಿಗೂ ಅಧಿಕಾರ ಇಲ್ಲ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)