ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ‘ದೇವನೂರರಿಗೊಂದು ದಾಳಿಂಬೆ ಕೊಡಿ’ (ಅ. 11) ಬರಹಕ್ಕೆ ನಾನು ಪ್ರತಿಕ್ರಿಯಿಸುತ್ತ (ಅ. 18), 1939ರಲ್ಲಿ ಅಂಬೇಡ್ಕರ್ ಆರ್ಎಸ್ಎಸ್ ಶಾಖೆಗೆ ಭೇಟಿ ನೀಡಿದ್ದರು ಎಂಬ ಪೂಜಾರಿಯವರ ಮಾತಿಗೆ ಪುರಾವೆಗಳಿಲ್ಲ ಎಂದು ಆಕ್ಷೇಪಿಸಿದ್ದಕ್ಕೆ ಅವರು, ‘ಕಡುಬಿನ ರುಚಿಗೆ ತಿಂದದ್ದೇ ಆಧಾರ ಎನ್ನಬೇಕಲ್ಲವೆ?’ (ಅ. 28) ಎಂದು ಪ್ರಶ್ನಿಸಿದ್ದಾರೆ. 1939ರ ವೇಳೆಗಾಗಲೇ ಅಂಬೇಡ್ಕರ್ ಎತ್ತರದ ನಾಯಕರಾಗಿದ್ದರು. ಹಾಗಾಗಿ, ಆರ್ಎಸ್ಎಸ್ ಶಾಖೆಯ ಭೇಟಿಯ ಬಗ್ಗೆ ಮರಾಠಿ ಪತ್ರಿಕೆಯಲ್ಲಾದರೂ ಸಣ್ಣ ಸುದ್ದಿಯಾದರೂ ಪ್ರಕಟವಾಗಿರಬೇಕಿತ್ತಲ್ಲವೆ? ಅಂಬೇಡ್ಕರ್ ಬರಹಗಳಲ್ಲಿ ಹುಡುಕಿದರೂ ಈ ಬಗ್ಗೆ ಸುಳಿವಿಲ್ಲ. ಯಾವ ಆಧಾರವೂ ಇಲ್ಲದೆ ರಾಹುಲ್ ಶಾಸ್ತ್ರಿಯವರ ಪುಸ್ತಕದಲ್ಲಿ ಹೇಳಿದ್ದನ್ನು ಸೇವಿಸಿಕೊಂಡು ‘ಕಡುಬಿನ ರುಚಿಗೆ ತಿಂದದ್ದೇ ಆಧಾರವಲ್ಲವೆ?’ ಎಂದು ಪೂಜಾರಿಯವರು ಹೇಳಿದರೆ ನಾನೇನು ಹೇಳಲಿ? ಇದಕ್ಕೆ ಮದ್ದಿಲ್ಲ.

ಥಳುಕಿನ ಭಾಷೆಯ ವಾಗ್ಝರಿಯಲ್ಲಿ ಪೂಜಾರಿಯವರು ‘ದಾಳಿಂಬೆ’ ಬರಹದಲ್ಲಿ ಹೇಳಿದ್ದನ್ನೆ ಮುಂದುವರಿಸಿದ್ದಾರೆ: ‘1963ನೇ ಇಸವಿಯಲ್ಲಿ ನೆಹರೂರವರು ಗಣರಾಜ್ಯೋತ್ಸವ ಪರೇಡ್ನಲ್ಲಿ ಆರ್ಎಸ್ಎಸ್ಗೆ ಅವಕಾಶ ನೀಡಿದ್ದು ಸುಳ್ಳೆ? ಅದು ಸತ್ಯ ಎಂದು ದೇವನೂರರು ಒಪ್ಪುತ್ತಾರಾದರೆ, ಅದೇ ನೆಹರೂ, ದುಂಡುಮೇಜಿನ ಚರ್ಚೆಯಲ್ಲಿ ಸಂಘದ ಗೋಲ್ವಲ್ಕರ್ ಸಲಹೆ ಕೇಳಿದ್ದನ್ನು ಫೋಟೊಗಳಿಲ್ಲ ಎಂಬ ಕಾರಣಕ್ಕೆ ಘಟನೆಯೇ ಸುಳ್ಳು ಎಂದು ಹೇಗೆ ಹೇಳಬಲ್ಲರು?’ ಎಂದು ಪ್ರಶ್ನಿಸುತ್ತಾರೆ. ಈ ತೇಲಾಡುವ ಭಾಷಾಶೈಲಿ ಮೋಡಿಗೆ ನಾವು ತೇಲಿಹೋಗದೆ ಎರಡನ್ನೂ ಪರಿಶೀಲಿಸುವ.

1963, ಭಾರತ ಮತ್ತು ಚೀನಾ ಯುದ್ಧದ ಸಮಯ. ಭಾರತದ ಸೈನಿಕರು ಗಡಿಯಲ್ಲಿ ಹೋರಾಡುತ್ತಿದ್ದರು. ಗಣರಾಜ್ಯೋತ್ಸವ ಪರೇಡ್ ನಡೆಸುವುದಕ್ಕೂ ಮುಗ್ಗಟ್ಟಿತ್ತು. ಆಗ ನೆಹರೂ ನಾಗರಿಕರ ಮೆರವಣಿಗೆ ಮಾಡಲು ನಿರ್ಧರಿಸಿದ್ದರಿಂದ ಲಕ್ಷದಷ್ಟು ಜನರ ಮೆರವಣಿಗೆ ನಡೆಯುತ್ತದೆ. ಎನ್ಸಿಸಿ, ಹೋಂಗಾರ್ಡ್, ವಿದ್ಯಾರ್ಥಿಗಳು, ಟ್ರೇಡ್ ಯೂನಿಯನ್ಗಳು, ಸಂಘ–ಸಂಸ್ಥೆಗಳು ಭಾಗವಹಿಸಿದ್ದ ಮೆರವಣಿಗೆಯಲ್ಲಿ ಆರ್ಎಸ್ಎಸ್ ಕೂಡ ಬ್ಯಾಂಡ್ ಇಲ್ಲದೆ, ಕೇಸರಿ ಧ್ವಜವಿಲ್ಲದೆ, ದೊಣ್ಣೆರಹಿತವಾಗಿ ಭಾಗವಹಿಸಿತ್ತು. ಆರ್ಎಸ್ಎಸ್ ಮುಖವಾಣಿ ‘ಆರ್ಗನೈಜರ್’ ಪತ್ರಿಕೆಯು, 1963ರ ಫೆಬ್ರುವರಿ 4ರ ಸಂಚಿಕೆಯಲ್ಲಿ ‘ಆರ್ಎಸ್ಎಸ್ನ 2 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು ಬಿಳಿಷರ್ಟ್, ಖಾಕಿ ನಿಕ್ಕರ್, ಬೆಲ್ಟ್, ಕರಿಟೋಪಿ ಮತ್ತು ಬೂಟ್ಸ್ ಧರಿಸಿ ಭಾಗವಹಿಸಿದ್ದರು’ ಎಂದು ವರದಿ ಮಾಡಿದೆ (ಲಿಂಕ್: caravanmagazine.in/history/myth-that-nehru-invited-rss-1963-republic-day-parade). ಹೀಗೆಯೇ, 1963ರ ಆಸುಪಾಸಿನಲ್ಲೆ ನಡೆದಿದೆ ಎನ್ನಲಾದ ದುಂಡುಮೇಜಿನ ಸಭೆಗೆ ನೆಹರೂ ಆಹ್ವಾನಿಸಿ ಗೋಲ್ವಲ್ಕರ್ ಭಾಗವಹಿಸಿದ್ದರು ಎಂಬುದೂ ನಿಜವೇ ಆಗಿದ್ದರೆ, ಯಾವ ಆರ್ಕೈವ್ಸ್ನಲ್ಲಿ ಇಲ್ಲದಿದ್ದರೂ ಪರವಾಗಿಲ್ಲ, ‘ಆರ್ಗನೈಜರ್’ನಲ್ಲಾದರೂ ಪ್ರಕಟವಾಗಿರಬೇಕಿತ್ತಲ್ಲವೆ?

ಮನಸ್ಸಿನಲ್ಲೆ ಮಂಡಿಗೆ ತಿನ್ನುವ ‘ಕಡುಬಿನ ರುಚಿಗೆ ತಿಂದದ್ದೇ ಆಧಾರವಲ್ಲವೆ?’ ಸಿದ್ಧಾಂತವು ಭ್ರಮೆ ಆಗಿಬಿಡಬಹುದು. ಉದಾಹರಣೆಗೆ, ಒಬ್ಬ ವ್ಯಕ್ತಿಯು– ‘ಒಂದು ಚರಂಡಿ ನಾಲೆ, ದುರ್ಗಂಧ ಬೀರುತ್ತಿತ್ತು. ಅದರಲ್ಲಿ ಗ್ಯಾಸ್ ಬರ್ತಿತ್ತಲ್ಲ, ಅಲ್ಲಿಗೆ ಪೈಪ್ಲೈನ್ ಮುಖಾಂತರ ಸ್ಟೌಗೆ ಸಂಪರ್ಕ ಮಾಡಿದ ಚಹಾವಾಲ, ಆ ಗ್ಯಾಸಲ್ಲಿ ಚಹಾ ಮಾಡುತ್ತಿದ್ದ’ ಎಂದು ಅನುಭವಿಸುತ್ತ ಹೇಳಿದರೆ ಹಾಗೂ ಭಾರತವು ಪಾಕಿಸ್ತಾನದ ಬಾಲಾಕೋಟ್ ಮೇಲೆ ದಾಳಿ ಮಾಡುವ ಸಂದರ್ಭದಲ್ಲಿ ಅದೇ ವ್ಯಕ್ತಿಯು– ‘ನಾನು ಸೈನ್ಯದ ಮುಖ್ಯಸ್ಥರಿಗೆ ಹೇಳಿದೆ, ಮೋಡವಿದೆ, ಮಳೆ ಇದೆ, ಇದರಿಂದ ಒಂದು ಲಾಭ ಇದೆ, (ಪಾಕಿಸ್ತಾನದ) ರಾಡರ್ನಿಂದ ಬಚಾವಾಗಬಹುದು, ದಾಳಿ ಮಾಡಿ ಎಂದೆ’ ಅಂತ ಹೇಳಿದರೆ, ಆ ವ್ಯಕ್ತಿಯ ‘ದೇಹ ಬೆಳೆದಿದೆ, ಬುದ್ಧಿ ಎಳಸು’ ಎಂದುಕೊಂಡು ನಗುತ್ತಲೊ ಅಥವಾ ವ್ಯಥೆಪಟ್ಟುಕೊಂಡೊ ಮುಂದೆ ಸಾಗಬಹುದು.

ಆದರೆ, ಆ ಮಾತುಗಳು ನಮ್ಮ ಪ್ರಧಾನಿ ನರೇಂದ್ರ ಮೋದಿಯವರದು! ದೇಶದ ಚುಕ್ಕಾಣಿ ಹಿಡಿದ ವ್ಯಕ್ತಿ ಹೀಗೆ ಮಾತಾಡಿದರೆ ಪ್ರಜೆಗಳ ಗತಿ ಅಧೋಗತಿ. ಯಾಕೆಂದರೆ, ಅಂಥವರಿಗೆ ವಾಸ್ತವ ಕಣ್ಣಿಗೆ ಕಾಣಿಸುವುದಿಲ್ಲ.
.ಆಳ–ಅಗಲ | ಆರ್ಎಸ್ಎಸ್ಗೆ ನೂರು ವರ್ಷಗಳಂತೆ! ಹೌದಾ?.
ನಿರುದ್ಯೋಗ ಪ್ರಮಾಣವು, 2018ರ ಸರ್ಕಾರದ ರಾಷ್ಟ್ರೀಯ ಅಂಕಿಅಂಶ ಆಯೋಗದ ಸಮೀಕ್ಷೆ ಪ್ರಕಾರ ಶೇ 6.2ಕ್ಕೆ ಏರಿಕೆಯಾಗಿದೆ, ಇದು ಕಳೆದ 40 ವರ್ಷಗಳಲ್ಲೆ ಅತ್ಯಧಿಕ. ನಮ್ಮ ಪ್ರಧಾನಿ ವಾಸ್ತವಕ್ಕೆ ಮುಖಾಮುಖಿಯಾಗದೆ ಸಮೀಕ್ಷೆಯನ್ನೆ ನಿಲ್ಲಿಸಿಬಿಟ್ಟರು. ಬದಲಿಗೆ, ನಿರುದ್ಯೋಗಿಗಳು ರೀಲ್ಸ್ ಮಾಡುವುದನ್ನೂ, ಪಕೋಡ ಮಾರುವುದನ್ನೂ ಉದ್ಯೋಗದ ಲೆಕ್ಕಕ್ಕೆ ಸೇರಿಸಿ ನಿರುದ್ಯೋಗ ಕಮ್ಮಿಯಾಗಿದೆ ಎಂದು ಸಂಭ್ರಮಿಸುತ್ತಿದ್ದಾರೆ. ಭಾರತವು ಹಸಿವಿನ ಸೂಚ್ಯಂಕದಲ್ಲಿ ಜಾಗತಿಕವಾಗಿ 121 ದೇಶಗಳ ಪೈಕಿ 108ನೇ ಸ್ಥಾನದಲ್ಲಿದ್ದರೂ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾಗಿಂತ ಕೆಳಗಿದ್ದರೂ ದೇಶದ ಪ್ರಧಾನಿಗೆ ಕಣ್ಣುಗಾಣುವುದಿಲ್ಲ. ಅವರು ಶತಕೋಟಿ ಬಂಡವಾಳಿಗರ ಊಟ ಪಾಠ ಆಟ ನೋಡಿಕೊಂಡು ಆನಂದದಲ್ಲಿದ್ದಾರೆ. ಇಂಥ ಭ್ರಮೆಯ ಅವಾಂತರ ಒಂದೆರಡಲ್ಲ, ನೂರಾರು.

ಪೂಜಾರಿಯವರು ಉಲ್ಲೇಖಿಸುವ ‘ಜಾತಿಯ ಹೆಸರಲ್ಲಿ ಹಿಂದೂಧರ್ಮ ಒಡೆಯದಂತೆ ಜಾಗೃತಿವಹಿಸೋಣ’ ಎಂದು ಗೋಲ್ವಲ್ಕರ್ ಹೇಳಿದ್ದರು ಎಂಬುದನ್ನಾಗಲಿ, ಬಾಳಾ ಸಾಹೇಬ್ ದೇವರಸ್ ‘ಜಗತ್ತಿನಲ್ಲಿ ಮನುಷ್ಯ ಮನುಷ್ಯನನ್ನು ಮುಟ್ಟಲಾಗದ ಅಸ್ಪೃಶ್ಯತೆ ತಪ್ಪಲ್ಲವಾದರೆ ಪ್ರಪಂಚದ ಯಾವ ಅಪರಾಧವೂ ತಪ್ಪಲ್ಲ’– ಇಂಥವುಗಳನ್ನು ಗೌರವಿಸುತ್ತೇನೆ, ಸೇವಿಸುತ್ತೇನೆ. ಆದರೆ, ಗೋಲ್ವಲ್ಕರ್ರ ‘ಚಾತುವರ್ಣ ಸಮಾಜವೇ ದೇವರ ಸಾಕ್ಷಾತ್ಕಾರ’ ಹಾಗೂ ಸಾವರ್ಕರ್ರ ‘ಮನುಸ್ಮೃತಿಯೇ ಹಿಂದೂ ಕಾಯ್ದೆ’ ಹೇಳಿಕೆಗಳನ್ನು ನಾನು ಪ್ರಶ್ನಿಸಿದ್ದಕ್ಕೆ, ಅದರೊಳಗೇನೊ ಮರ್ಮವಿದೆ ಎಂದು ಪೂಜಾರಿಯವರು ಶಂಕಿಸುತ್ತಾರೆ. ‘ಯಾರೇನೇ ಹೇಳಿದರೂ ಸಂಘದ ಜಾತಿ ಒಂದೇ– ಹಿಂದೂ, ಹಿಂದೂ, ಹಿಂದೂ’ ಎಂದು ಘೋಷಣೆ ಕೂಗುತ್ತಾರೆ. ಇಲ್ಲಿ ಅವರ ಭಾಷೆ ಹರಳೆಣ್ಣೆ ಹಚ್ಚಿಕೊಂಡು ಅಖಾಡಕ್ಕಿಳಿದಂತಿದೆ. ಇದು ಸಲ್ಲ. ಪೂಜಾರಿಯವರೇ, ನಾವೆಲ್ಲರೂ ನಮ್ಮ ಆರೋಗ್ಯಕ್ಕಾಗಿ ನಮ್ಮ ಸೈದ್ಧಾಂತಿಕ ಪಿತೃಗಳ ಒಳಿತನ್ನು ಸೇವಿಸಿ, ಕೆಡಕುಗಳನ್ನು ವಿಸರ್ಜಿಸಬೇಕೆಂಬುದು ನನ್ನ ವಿನಂತಿ, ಅಷ್ಟೆ.

(ಈ ಬರಹದೊಂದಿಗೆ ‘ಆರ್ಎಸ್ಎಸ್ಗೆ ನೂರು ವರ್ಷಗಳಂತೆ! ಹೌದಾ?’ ಬರಹಕ್ಕೆ ಸಂಬಂಧಿಸಿದ ಚರ್ಚೆ ಕೊನೆಗೊಂಡಿದೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.