ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಿಗಾಗಿ ಹಬ್ಬ– ಚಳವಳಿ?

ಸಂವಿಧಾನ ನಿರೂಪಿಸುವ ರಾಷ್ಟ್ರ ಕಲ್ಪನೆಯಲ್ಲೇ ರಾಜ್ಯಗಳ ಅಧಿಕಾರ ವ್ಯಾಪ್ತಿ ಸೀಮಿತವಾಗಿದ್ದು ಅದನ್ನು ಇನ್ನಷ್ಟು ಸೀಮಿತಗೊಳಿಸುವ ಪ್ರಯತ್ನಗಳು ನಡೆದಿವೆ
Last Updated 31 ಡಿಸೆಂಬರ್ 2018, 9:45 IST
ಅಕ್ಷರ ಗಾತ್ರ

ಬೆಂಗಳೂರಿನ ಬಂಧು ಮಿತ್ರರಿಗೆ ಕನ್ನಡದಲ್ಲಿ ವಿಳಾಸ ಬರೆದ ಪತ್ರಗಳಲ್ಲಿ ಕೆಲವು ವಾರಗಟ್ಟಲೆಯಾದರೂ ಸಂಬಂಧಪಟ್ಟವರಿಗೆ ತಲುಪುತ್ತಿಲ್ಲ. ಇನ್ನು ಕೆಲವಂತೂ ತಲುಪುತ್ತಲೇ ಇಲ್ಲ. ಈ ಬಗ್ಗೆ ಇಲಾಖೆಗೆ ದೂರು ಸಲ್ಲಿಸಿದರೆ ತಕ್ಷಣ ಬರುವ ಉತ್ತರವೆಂದರೆ, ‘ನಿಮ್ಮ ದೂರನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ’– ಅಲ್ಲಿಗೆ ಮುಗಿಯಿತು ವ್ಯವಹಾರ.

ದೂರುಗಳು ಮತ್ತು ಇಂತಹ ಉತ್ತರಗಳಿಂದ ಪ್ರಯೋಜನವಿಲ್ಲವೆಂದು ಒಳಹೊಕ್ಕು ಇಲಾಖೆಯಲ್ಲಿ ವಿಚಾರಿಸಿದಾಗ ಗೊತ್ತಾದ ಸಂಗತಿ ಎಂದರೆ, ಬೆಂಗಳೂರಿನ (ಮತ್ತು ಇತರೆ ಜಿಲ್ಲಾ ಕೇಂದ್ರಗಳ) ಅಂಚೆ ವಿಂಗಡಣಾ ಕಚೇರಿಗಳಲ್ಲಿ ಈಗ ಕನ್ನಡೇತರರ ನೇಮಕಾತಿ ಆಗುತ್ತಿದ್ದು, ಅವರಾರಿಗೂ ಕನ್ನಡ ಓದಲು ಬರದೇ ಇರುವುದರಿಂದ ಕನ್ನಡದಲ್ಲಿ ವಿಳಾಸ ಬರೆದ ಪತ್ರಗಳು ವಿಲೇವಾರಿಯಾಗದೆ ಉಳಿಯುತ್ತಿವೆ. ಯಾರಾದರೂ ಕರ್ತವ್ಯಪ್ರಜ್ಞೆ ಇರುವ ಮೇಲಧಿಕಾರಿಯು ಅವುಗಳ ವಿಲೇವಾರಿಯ ಕಡೆ ಗಮನ ಹರಿಸುವವರೆಗೆ ಅವು ಅಲ್ಲೇ ಉಳಿಯುತ್ತವೆ! ಇದು ಕರ್ನಾಟಕದಲ್ಲಿ ಕನ್ನಡದಲ್ಲಿ ವ್ಯವಹರಿಸ ಬಯಸುವವರಿಗೆ ಒದಗಿರುವ ದುರ್ಗತಿ!

ಹಾಸನದಂತಹ ಗ್ರಾಮಾಂತರ ರೈಲ್ವೆ ನಿಲ್ದಾಣದಲ್ಲೂ ‘ಟಿಕೆಟ್ ದಿಖಾವೋ’ ಎಂದು ಕೇಳುವ ತಪಾಸಣಾಕಾರರಿದ್ದಾರೆ. ಶಿವಮೊಗ್ಗ- ಬೆಂಗಳೂರು ರೈಲಿನಲ್ಲಿ ಟಿಕೆಟ್ ತಪಾಸಣಾಕಾರನಿಂದ ಹೆಚ್ಚಿನ ಮಾಹಿತಿ ಬಯಸಿದರೆ ಆತನಿಂದ ‘ಹಿಂದಿ ಮೆ ಬೋಲೋ’ ಎಂಬ ಉತ್ತರ ಬರುತ್ತದೆ! ಇನ್ನು ರಾಜ್ಯದ ಬ್ಯಾಂಕುಗಳಲ್ಲಿ ಆಡಳಿತ ಕ್ರಮೇಣ ಕನ್ನಡೇತರರ ಕೈ ವಶವಾಗುತ್ತಾ ಇಲ್ಲಿ ಕನ್ನಡದಲ್ಲಿ ವ್ಯವಹರಿಸುವುದು ದುಸ್ಸಾಧ್ಯವಾಗತೊಡಗಿದೆ.

ಹಾಗಾದರೆ ನಾವು ಯಾವ, ಎಂಥ ದೇಶದಲ್ಲಿ ಬದುಕುತ್ತಿದ್ದೇವೆ? ನಮ್ಮ ಸಾರ್ವಜನಿಕ ಜೀವನದ ಸಣ್ಣಪುಟ್ಟ ವ್ಯವಹಾರಗಳನ್ನೂ ನಮ್ಮ ಭಾಷೆಯಲ್ಲಿ ಮಾಡಿಕೊಳ್ಳಲು ಅಡಚಣೆಗಳನ್ನು ಒಡ್ಡುತ್ತಿರುವ ದೇಶವನ್ನು ನಮ್ಮ ದೇಶಎಂದು ಕರೆಯಲು ಯಾರಿಗಾದರೂ ಮನಸ್ಸಾಗು
ವುದೇ? ಭಾಷಾವಾರು ಪ್ರಾಂತ್ಯಗಳ ರಚನೆಯಾದದ್ದಾದರೂ ಯಾಕೆ? ಹೀಗೆ ಯೋಚಿಸಿದಾಗ ಗೊತ್ತಾಗುವುದೆಂದರೆ, ನಮ್ಮ ಸಂವಿಧಾನ ನಿರೂಪಿಸುವ ರಾಷ್ಟ್ರಕಲ್ಪನೆಯಲ್ಲೇ ರಾಜ್ಯಗಳ ಅಧಿಕಾರ ವ್ಯಾಪ್ತಿ ಸೀಮಿತವಾಗಿದ್ದು ಈಗ ಅದನ್ನು ರಾಷ್ಟ್ರೀಯ ಏಕತೆಯ ಹೆಸರಿನಲ್ಲಿ ಇನ್ನಷ್ಟು ಸೀಮಿತಗೊಳಿಸುವ ಪ್ರಯತ್ನಗಳು ನಡೆದಿವೆ.

ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಗಳನ್ನು ರಾಷ್ಟ್ರೀಯ ಏಕತೆಗೆ ವಿರುದ್ಧವೆಂದು ಭಾವಿಸಲಾಗುತ್ತಿದೆ. ಇದರ ಕಾರ್ಯರೂಪವೇ ಕೇಂದ್ರ ಸರ್ಕಾರದ ಇಲಾಖೆಗಳ ಕೆಳದರ್ಜೆಯ ಹುದ್ದೆಗಳಿಗಾಗಿಯಾದರೂ ಇದ್ದ ರಾಜ್ಯ ಮಟ್ಟದ ನೇಮಕಾತಿ ವ್ಯವಸ್ಥೆಗಳನ್ನು ರದ್ದುಗೊಳಿಸಿ ಅವನ್ನು ಕೇಂದ್ರ ನೇಮಕಾತಿ ವ್ಯವಸ್ಥೆಗಳಾಗಿ ಪರಿವರ್ತಿಸಲಾರಂಭಿಸಿರುವುದು. ರಾಜ್ಯ ನೇಮಕಾತಿ ವ್ಯವಸ್ಥೆ ಇದ್ದಾಗ ‘ರಾಜ್ಯದ ಭಾಷೆಯ ಓದು ಬರಹದ ಪರಿಚಯವಿರಬೇಕು’ ಎಂಬ ಷರತ್ತು ಇರುತ್ತಿತ್ತು. ಈಗ ಅದನ್ನು ತೆಗೆದು ಹಾಕಿ ಕೇಂದ್ರೀಯ ನೇಮಕಾತಿ ವ್ಯವಸ್ಥೆ ಮೂಲಕ ರಾಜ್ಯದ ಕೇಂದ್ರ ಸೇವೆಗಳಿಗೆ ಕನ್ನಡೇತರರನ್ನು ತುಂಬುವ ಕೆಲಸ ನಡೆದಿದೆ.

ವಿಷಾದದ ಸಂಗತಿ ಏನೆಂದರೆ, ಈ ಸೇವೆಗಳ ರಾಜ್ಯ ಮಟ್ಟದ ಅಧಿಕಾರಿಗಳು ರಾಜ್ಯ ಭಾಷೆಗಳ ಪರಿಚಯವಿರುವ ಷರತ್ತು ಇಲ್ಲದಿದ್ದರೆ ಸೇವೆಯ ಗುಣಮಟ್ಟ ಕೆಡುವುದೆಂದು ತಿಳಿಸಿದ್ದರೂ ಕೇಂದ್ರ ಸರ್ಕಾರ ಇವರ ಈ ಅಭಿಪ್ರಾಯವನ್ನು ಲೆಕ್ಕಿಸದೆ (ಕರ್ನಾಟಕದ ಮಟ್ಟಿಗೆ) ಕನ್ನಡಿಗರ ಮೇಲೆ ಸವಾರಿ ನಡೆಸಿದೆ. ಅದು ರಾಷ್ಟ್ರೀಯತೆಯ ಹೆಸರಿನಲ್ಲಿ ಬಹುಭಾಷಾ- ಸಂಸ್ಕೃತಿಗಳ ರಾಷ್ಟ್ರೀಯ ಲಕ್ಷಣಗಳನ್ನೆಲ್ಲ ಅಳಿಸಿಹಾಕಿ ರಾಷ್ಟ್ರವನ್ನು ಒಳಗಿಂದ ದುರ್ಬಲಗೊಳಿಸುತ್ತಿದೆಯಷ್ಟೆ.

ಇದು ಕಳೆದ ಐದಾರು ವರ್ಷಗಳಿಂದ ಅವ್ಯಾಹತವಾಗಿ ನಡೆದಿದ್ದರೂ ಕನ್ನಡದ ಜನ ಈ ಬಗ್ಗೆ ಗಂಭೀರವಾದ ಪ್ರತಿಭಟನೆಯನ್ನೇ ಮಾಡಿಲ್ಲ. ನಮ್ಮ ಐದು ಕೋಟಿ ಕನ್ನಡಿಗರ ಪರವಾಗಿ ಮಾತಾಡುವ ಸರ್ಕಾರವೂ, ಅದರ ಅಧಿಪತಿಗಳೂ, ಪ್ರತಿನಿಧಿಗಳೂ ಏನೂ ಮಾಡುತ್ತಿಲ್ಲ. ಅವರಿಗೆ ಯಾವುದೇ ಕಾಮಗಾರಿ- ಕಂಟ್ರಾಕ್ಟರ್‌ಗಳ ಸಂಬಂಧವಿಲ್ಲದ ರಾಜ್ಯದ ಜನರ ಯಾವುದೇ ಹಿತಾಸಕ್ತಿಗಳನ್ನು ಕುರಿತ ಯಾವುದೇ ಗಂಭೀರ ಚಿಂತನೆಗೆ ಪುರುಸೊತ್ತಿಲ್ಲದಾಗಿದೆ.

ಇತ್ತೀಚೆಗೆ ಕೆಳ ಹಂತದ ನ್ಯಾಯಾಲಯಗಳಲ್ಲಿನ ಮತ್ತು ಗ್ರಾಹಕ ರಕ್ಷಣಾ ವೇದಿಕೆಗಳ ನ್ಯಾಯಾಧೀಶರ ಹುದ್ದೆಗಳ ಭರ್ತಿಗೂ ಕೇಂದ್ರೀಯ ಪ್ರವೇಶ ಪರೀಕ್ಷೆ ಮತ್ತು ನೇಮಕಾತಿಯ ಪ್ರಸ್ತಾಪ ಬಂದಿದ್ದರೂ ಕನ್ನಡಿಗರಿಂದಾಗಲೀ ಕರ್ನಾಟಕ ಸರ್ಕಾರದಿಂದಾಗಲೀ ಒಂದು ಸೊಲ್ಲೂ ಇಲ್ಲ. ನ್ಯಾಯದಾನಕ್ಕೆ ಸಂಬಂಧಿಸಿದಂತೆ ಈ ಪ್ರಸ್ತಾಪಗಳ ಪರಿಣಾಮಗಳು ಏನಾಗಬಹುದೆಂಬ ಅರಿವಾದರೂ ಸರ್ಕಾರಕ್ಕಿದೆಯೇ? ಇನ್ನು ಕನ್ನಡ, ಕನ್ನಡಿಗರ ಹಿತ ಕಾಪಾಡುವ ಹೆಸರಿನಲ್ಲಿ ಚಳವಳಿಗಳು, ವೇದಿಕೆಗಳು, ಸೇನೆಗಳು, ಕ್ರಿಯಾಸಮಿತಿಗಳು, ರಂಗಗಳು, ಪರಿಷತ್ತುಗಳು ಈಗ ಪೊಗದಸ್ತಾಗಿ ಬೆಳೆದು ನಿಂತಿವೆ. ಅವುಗಳಿಂದಲೂ ಈ ಬಗ್ಗೆ ಒಂದು ಸೊಲ್ಲೂ ಇಲ್ಲ!

ಇನ್ನು ಕೆಲವೇ ದಿನಗಳಲ್ಲಿ ಧಾರವಾಡದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕನ್ನಡಮ್ಮನ ಹಬ್ಬ ನಡೆಯಲಿದೆ. ಅದೂ ರಾಜ್ಯದ ಮುಖ್ಯಮಂತ್ರಿಗಳ ವೈಯಕ್ತಿಕ ಒಲವಿಗನುಸಾರವಾಗಿ ಕನ್ನಡ ಶಾಲೆಗಳನ್ನು ಹಂತಾನುಹಂತವಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಲು ನಿರ್ಧರಿಸಿರುವ ಸಂದರ್ಭದಲ್ಲಿ. ಹಾಗಾದರೆ ಯಾತಕ್ಕಾಗಿ, ಯಾರಿಗಾಗಿ ಈ ಹಬ್ಬ? ಗೋಕಾಕ್ ಚಳವಳಿ
ಮಾದರಿಯ ಚಳವಳಿಯ ಬೆದರಿಕೆಯ ಮತ್ತೊಂದು ಹುಸಿ ಗುಟುರು ಹಾಕಿ ಹಬ್ಬದ ತೀರ್ಥ- ಪ್ರಸಾದ ಇತ್ಯಾದಿಗಳನ್ನು ತಿಂದು ಕುಡಿದು ಮನೆಗೆ ಮರಳಲು? ಹಾಗಿಲ್ಲದೆ ಕನ್ನಡದ ಹಿರಿಯ ಸಾಹಿತಿಯೊಬ್ಬರು ‘ಕನ್ನಡದ ಸಮಸ್ಯೆ ಇದ್ದದ್ದೇ, ಹಾಗಂತ ಕನ್ನಡದ ಹಬ್ಬಗಳು ನಿಲ್ಲಬಾರದು’ ಎಂದು ಹೇಳಿಯಾರೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT