ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಅದ್ದೂರಿ ಮದುವೆ, ಅಗೋಚರ ಪ್ರಭಾವ

ಉಳ್ಳವರು ಖರ್ಚು ಮಾಡುವುದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂಬ ವಾದವನ್ನು ಒಪ್ಪುವ ಮೊದಲು, ಅದರಿಂದಾಗುವ ಅಗೋಚರ ಪರಿಣಾಮಗಳ ಕುರಿತೂ ಯೋಚಿಸಬೇಕಿದೆ
Published 28 ಏಪ್ರಿಲ್ 2024, 21:53 IST
Last Updated 28 ಏಪ್ರಿಲ್ 2024, 21:53 IST
ಅಕ್ಷರ ಗಾತ್ರ

ಭಾರತದ ಅತ್ಯಂತ ಸಿರಿವಂತ ಕುಟುಂಬ ಈಚೆಗೆ ನಡೆಸಿದ, ಸುಮಾರು ಸಾವಿರದ ಇನ್ನೂರು ಕೋಟಿ ರೂಪಾಯಿ ವೆಚ್ಚದ ಪ್ರೀ ವೆಡ್ಡಿಂಗ್‌ ಹತ್ತಾರು ಬಗೆಯ ಚರ್ಚೆಗಳಿಗೆ ಕಾರಣವಾಯಿತು. ಇದು, ದೇಶದಲ್ಲಿರುವ ಬಡತನ ಮತ್ತು ಸಿರಿತನದ ನಡುವಿನ ವೈರುಧ್ಯವನ್ನು ತೋರಿಸುತ್ತದೆ ಎಂಬುದು ಒಂದು ಅಭಿಪ್ರಾಯವಾದರೆ, ಅದೆಷ್ಟೋ ಮಂದಿಗೆ ಉದ್ಯೋಗ, ವ್ಯವಹಾರ ಸಿಕ್ಕಿತು ಎನ್ನುವುದು ಮತ್ತೊಂದು ಅಭಿಪ್ರಾಯ. ಇನ್ನು, ‘ಅವರ ದುಡ್ಡು ಅವರು ಖರ್ಚು ಮಾಡಿಕೊಂಡರೆ ನಿಮಗೇನು ನಷ್ಟ?’ ಎಂಬುದು ಮತ್ತೊಂದು ವಾದ. ಇವೆಲ್ಲವನ್ನೂ ಬದಿಗಿಟ್ಟು ನೋಡಿದಾಗ, ಈ ಹೊಸ ಕಾರ್ಯಕ್ರಮ ಮಧ್ಯಮ ವರ್ಗಕ್ಕೆ ತರಲಿರುವ ಹೊಸ ಸಮಸ್ಯೆಯ ಬಗ್ಗೆ ಯೋಚಿಸುವಂತಾಗಿ ಒಂದು ಕ್ಷಣ ಗಾಬರಿಯಾಯಿತು.

ನಮ್ಮ ದೇಶದ ಶ್ರೀಮಂತರು ಸಾಮಾನ್ಯವಾಗಿ ಸೆಲೆಬ್ರಿಟಿಗಳನ್ನು ಅನುಕರಿಸುತ್ತಾರೆ, ಶ್ರೀಮಂತರನ್ನು ಮಧ್ಯಮ ವರ್ಗದವರು, ಮಧ್ಯಮವರ್ಗದವರನ್ನು ಬಡವರು ಅನುಕರಣೆ ಮಾಡುತ್ತಾರೆ. ಅದರಲ್ಲೂ ಮದುವೆಯಂತಹ ವಿಚಾರದಲ್ಲಿ ಈ ಅನುಕರಣೆ ಜೋರಾಗಿಯೇ ನಡೆಯುತ್ತದೆ. ಮೊದಲು ಮದುವೆಯ ದಿನ ಮಾತ್ರ ಅದ್ದೂರಿಯಾದ ಕಾರ್ಯಕ್ರಮ ನಡೆಯುತ್ತಿತ್ತು. ಮದುವೆ ಹಿಂದಿನ ದಿನ ಉಂಗುರ ಬದಲಾಯಿಸಿಕೊಂಡು ನಿಶ್ಚಿತಾರ್ಥದ ಶಾಸ್ತ್ರ ಮಾಡುತ್ತಿದ್ದರು. ನಂತರ ಬೀಗರೂಟ ಇರುತ್ತಿತ್ತು. ಮದುವೆಯ ಹಿಂದಿನ ದಿನ ಅರಸಿನ, ಬಳೆಶಾಸ್ತ್ರದಂತಹ ಸಂಪ್ರದಾಯಗಳು ಅವುಗಳ ಪಾಡಿಗೆ ಅವು ನಡೆದುಕೊಂಡು ಹೋಗುತ್ತಿದ್ದವು.

ಕೆಲ ವರ್ಷಗಳಿಂದ ನಿಶ್ಚಿತಾರ್ಥವೂ ಮದುವೆಯಷ್ಟೇ ಭರ್ಜರಿಯಾಗಿ ಆಗಲು ಪ್ರಾರಂಭವಾಯಿತು. ಕಾಲ ಕಳೆದಂತೆ ಹೊಸ ಹೊಸ ಆಚರಣೆಗಳು ಸೇರಿಕೊಳ್ಳುತ್ತಾ ಮದುವೆ ಎನ್ನುವುದು ಒಂದೆರಡು ಕಾರ್ಯಕ್ರಮಗಳಿಗೆ ಸೀಮಿತವಾಗದೆ ಹಲವಾರು ಕಾರ್ಯಕ್ರಮಗಳ ಒಟ್ಟು ಮೊತ್ತ ಎನ್ನುವಂತಾಗಿದೆ. ಈಗಂತೂ ಪ್ರೀ ವೆಡ್ಡಿಂಗ್‌ ಶೂಟ್‌ ಆಗಬೇಕು, ಸಂಗೀತ್ ಕಾರ್ಯಕ್ರಮ, ಮೆಹೆಂದಿ, ಮದುವೆ ದಿನ ಒಂದು ರಿಸೆಪ್ಷನ್‌, ನಂತರ ಒಂದು ರಿಸೆಪ್ಷನ್‌! ಅಷ್ಟೇ ಅಲ್ಲ ಆಯಾ ಕಾರ್ಯಕ್ರಮಕ್ಕೆ ತಕ್ಕಂತೆ ಉಡುಗೆ ತೊಡುಗೆ, ಪ್ರತಿಯೊಂದಕ್ಕೂ ವಿಡಿಯೊ, ಫೋಟೊ...

ಮೊದಲೆಲ್ಲ ಹೆಚ್ಚೆಂದರೆ ಐವತ್ತು ಮಂದಿಯನ್ನು ಒಳಗೊಂಡು ಈ ಕಾರ್ಯಕ್ರಮಗಳು ನಡೆದುಹೋಗುತ್ತಿದ್ದವು. ಈಗ ಎಲ್ಲ ಕಾರ್ಯಕ್ರಮಗಳೂ ಭರ್ಜರಿಯಾಗಿಯೇ ನಡೆಯಬೇಕು. ಪ್ರತಿ ಕಾರ್ಯಕ್ರಮಕ್ಕೂ ವಿವಿಧ ಬಗೆಯ ಊಟದ ಮೆನು, ದುಬಾರಿ ಉಡುಗೆಯ ಖರ್ಚು, ಮೇಕಪ್‌ ಖರ್ಚು... ಬಂಗಾರದ ಬೆಲೆಯಂತೂ ದಿನದಿನಕ್ಕೂ ಏರುತ್ತಲೇ ಇದೆ. ಇನ್ನು ಉಳ್ಳವರು ಮಾಡುವ ಡೆಸ್ಟಿನೇಶನ್‌ ವಿವಾಹವನ್ನು ಮೇಲ್ಮಧ್ಯಮ ವರ್ಗದವರು ಸಾಲಸೋಲ ಮಾಡಿಕೊಂಡು ಮಾಡುತ್ತಾರೆ. ಹೀಗಾಗಿ, ಒಂದು ಮದುವೆ ಮಾಡಿ ಮುಗಿಸುವಷ್ಟರಲ್ಲಿ ಹೆಣ್ಣು ಹೆತ್ತವರು ಮಾತ್ರವಲ್ಲ ಗಂಡು ಹೆತ್ತವರೂ ಸುಸ್ತಾಗಿ ಹೋಗುತ್ತಾರೆ. ಹೀಗಾಗಿಯೇ ಕುಟುಂಬವು ಹೊರಲಾರದಷ್ಟು ಸಾಲದ ಹೊರೆಯನ್ನು ಹೊರಬೇಕಾಗುತ್ತದೆ. ಕೆಲವರಂತೂ ಚೇತರಿಸಿ
ಕೊಳ್ಳುವುದಕ್ಕೇ ಕಷ್ಟವಾಗುವ ಮಟ್ಟದಲ್ಲಿ ಸಾಲದ ಶೂಲಕ್ಕೆ ಸಿಕ್ಕಿಹಾಕಿಕೊಂಡು ಬಿಡುತ್ತಾರೆ.

ಇದಕ್ಕೆಲ್ಲ ಕಾರಣ ಸಮಾಜದ ಕಾಣದ ಒತ್ತಡ! ದಿನಬೆಳಗಾದರೆ ಒಬ್ಬೊಬ್ಬ ಸೆಲೆಬ್ರಿಟಿ ಒಂದೊಂದು ರೀತಿಯಲ್ಲಿ ವಿವಾಹವಾದ ಸುದ್ದಿಗಳು ವಿಡಿಯೊ, ಫೋಟೊಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಂದು ಬೀಳುತ್ತಿರುತ್ತವೆ. ಊರಿನಲ್ಲೇ ಯಾರದ್ದೋ ಮಗಳ ಭರ್ಜರಿ ಮದುವೆಯ ಚಿತ್ರಗಳು ಸಂಬಂಧಿಕರ ವಾಟ್ಸ್‌ಆ್ಯಪ್‌ ಸ್ಟೇಟಸ್ಸಿನಲ್ಲಿ ಎಲ್ಲರಿಗೂ ಪ್ರದರ್ಶಿತವಾಗುತ್ತಿರುತ್ತವೆ. ನೆನಪಿರಲಿ, ಕರ್ನಾಟಕದಲ್ಲಿ ಈ ಮೊದಲು ಮೆಹಂದಿ, ಸಂಗೀತ್‌ದಂತಹ ಕಾರ್ಯಕ್ರಮಗಳು ಇರಲಿಲ್ಲ. ಹಿಂದಿ ಸಿನಿಮಾ, ಧಾರಾವಾಹಿಗಳನ್ನು ಕನ್ನಡದವರೂ ನಕಲು ಮಾಡಿದ್ದರ ಫಲವಾಗಿ, ಇಂದು ಮದುವೆಗಳಲ್ಲಿ ಇಂತಹ ಕಾರ್ಯಕ್ರಮಗಳು ಇರಲೇಬೇಕು ಎನ್ನುವಂತಾಗಿದೆ.

ಹೀಗಿರುವಾಗ, ಮದುವೆಯ ಕೆಲ ತಿಂಗಳ ಮೊದಲೇ ಪ್ರೀ ವೆಡ್ಡಿಂಗ್‌ ಎಂಬ ಹೊಸ ಪದ್ಧತಿ ಶುರು ಮಾಡಿದ ಕುಟುಂಬದ ನಡೆ ಅವರಿಗೆ ಮಾತ್ರ ಸಂಬಂಧಪಟ್ಟಿದ್ದಲ್ಲ. ಕ್ರಮೇಣ ಶ್ರೀಮಂತ ಕುಟುಂಬಗಳು ಇದನ್ನು ಶುರು ಮಾಡುತ್ತವೆ. ಈಗಾಗಲೇ ಇಷ್ಟು ಕಾರ್ಯಕ್ರಮಗಳಿರುವಾಗ ಮತ್ತೊಂದು ಕಾರ್ಯಕ್ರಮದ ಸೇರ್ಪಡೆ ಮತ್ತಷ್ಟು ಹೊರೆಯೇ. ಹೀಗೆ ಮಧ್ಯಮವರ್ಗದವರ ಮೇಲೆ ಮತ್ತೊಂದು ಕಾರ್ಯಕ್ರಮವನ್ನು ಆಯೋಜಿಸಲೇಬೇಕಾದ ಒತ್ತಡ ಬೀಳುತ್ತದೆ. ಮಧ್ಯಮ ವರ್ಗ, ಕೆಳಮಧ್ಯಮ ವರ್ಗ, ಬಡವರು ಎಲ್ಲರೂ ಈ ತಳವಿಲ್ಲದ ಕೂಪದಲ್ಲಿ ಬೀಳುತ್ತಾ ಹೋಗುತ್ತಾರೆ. ಉಳ್ಳವರ ಇಂತಹ ಒಂದೊಂದು ನಡೆಯೂ ಗೊತ್ತೇ ಆಗದ ರೀತಿಯಲ್ಲಿ ಮಧ್ಯಮ, ಬಡ ವರ್ಗದವರನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ.

ಉಳ್ಳವರು ಖರ್ಚು ಮಾಡುವುದರಿಂದ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತವೆ ಎಂಬ ಜನಪ್ರಿಯ ವಾದವನ್ನು ‘ಹೌದಲ್ಲವೇ?’ ಎಂದು ಒಪ್ಪುವ ಮೊದಲು, ಗೋಚರಿಸದ ಈ ರೀತಿಯ ಪರಿಣಾಮಗಳ ಕುರಿತೂ ಯೋಚಿಸಬೇಕಿದೆ. ಅಂಬಾನಿ ಅವರಂತಹವರು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದರೂ ಅದು ಅವರ ಆದಾಯದ ಶೇಕಡ 1ಕ್ಕಿಂತಲೂ ಕಡಿಮೆ ಪ್ರಮಾಣ ಆಗಿರುತ್ತದೆ. ಆದರೆ ತಮ್ಮ ಜೀವಮಾನದ ಉಳಿತಾಯವೂ ಸಾಲದೆ ಸಾಲ ಮಾಡಿ ಅದ್ದೂರಿಯಾಗಿ ಮದುವೆ ಮಾಡುವ ಜನರಿಗೆ ಅದು ಅರ್ಥವಾಗುವುದೇ ಇಲ್ಲ. ಅರ್ಥವಾದರೂ ಸಾಮಾಜಿಕ ಒತ್ತಡ ಅವರ ಕೈಕಟ್ಟಿ
ಹಾಕಿಬಿಡುತ್ತದೆ!

ಮದುವೆ ಎನ್ನುವುದು ದೊಡ್ಡಸ್ತಿಕೆಯ ಪ್ರದರ್ಶನ ಆಗಿ, ಸಮಾಜದಲ್ಲಿ ಒಳಗೊಳಗೇ ಸ್ಪರ್ಧೆಯಾಗಿ ಮಾರ್ಪಡುತ್ತಿದೆ. ಹೀಗಾಗಿ, ಯಾರಿಗೆ ಬೇಕೋ ಅವರು ಅದ್ದೂರಿಯಾಗಿ ಮಾಡಿಕೊಳ್ಳಲಿ, ಬೇಡದವರು ಸುಮ್ಮನಿದ್ದರಾಯಿತು ಎನ್ನುವಷ್ಟು ಈ ಸಂಗತಿ ಸರಳವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT