ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ನೀಗೋಣ ‘ಶಕ್ತಿ ಬಡತನ’

Last Updated 13 ಜೂನ್ 2022, 20:30 IST
ಅಕ್ಷರ ಗಾತ್ರ

ಗಾಳಿಗೂ ತೂಕವುಂಟು- ಇದು ಶಾಲೆಯಲ್ಲಿ ಮಕ್ಕಳಿಗೆ ಪ್ರಯೋಗಸಹಿತ ಬೋಧಿಸುವ ಮೊದಲ ವಿಜ್ಞಾನ ಪಾಠ. ಪೆಟ್ರೋಲು, ನೈಸರ್ಗಿಕ ಅನಿಲ, ಖನಿಜ ಅಕ್ಷಯವೇನಲ್ಲ. ಇದನ್ನು ಅರಿತೂ ಅವನ್ನು ಎಗ್ಗಿಲ್ಲದೆ ಬಳಸುತ್ತಿದ್ದೇವೆ. ಸೌರಶಕ್ತಿ, ಜಲಶಕ್ತಿ ಹಾಗೂ ವಾಯುಶಕ್ತಿ- ಇವು ವರಸದೃಶ ಪುನರ್ ನವೀಕರಿಸಬಹುದಾದ ಅದಮ್ಯ ಚೈತನ್ಯಗಳು. ಈ ಒಂದೊಂದು ಶಕ್ತಿಗೂ ಮರುರೂಪ ನೀಡುವುದು ಅನಿವಾರ್ಯವಾಗಿದೆ.

ಇಂಧನ, ಅನಿಲ, ಖನಿಜದ ಮಿತವ್ಯಯ ಸಾಧಿಸದಿದ್ದರೆ ಜಾಗತಿಕ ತಪನದ ಸಮಸ್ಯೆ ಬಿಗಡಾಯಿಸೀತು. ಪರಿಣಾಮವಾಗಿ ಸೌರಶಕ್ತಿ ಹಾಗೂ ವಾಯುಶಕ್ತಿಯ ಉತ್ಪಾದನೆ ತ್ರಾಸವಾಗುವುದು! ಹಾಗಾಗಿ ಒಂದು ಅರ್ಥದಲ್ಲಿ ಭೂಮಾತೆ ಕಾವೇರುವ ಮೂಲಕ ನಮಗೆ ಹಿತಮಿತವಾಗಿ ಉರುವಲುಗಳನ್ನು ಬಳಸುವಂತೆ ಎಚ್ಚರಿಸುತ್ತಾಳೆ. ಭಾರತದಲ್ಲಿ ವಿಶೇಷವಾಗಿ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಸ್ಥಿರ, ಏಕಪ್ರಕಾರದ, ವೇಗದ ವಾಯುವಿನ ಹರಿವಿದ್ದು ವಾಯುಶಕ್ತಿಯ ಉತ್ಪಾದನೆಗೆ ವಿಪುಲ ಅವಕಾಶವಿದೆ.

ಬಿಗಡಾಯಿಸುತ್ತಿರುವ ‘ಶಕ್ತಿ ಬಡತನ’ ನೀಗುವ ದಿಸೆಯಲ್ಲಿ ಗಾಳಿಯ ಬಾಗಿಲು ತಟ್ಟುವುದು ಮಹತ್ವದ ಹೆಜ್ಜೆ. ಬೀಸುವ ಗಾಳಿಯಲ್ಲಿ ನಿಹಿತವಾಗಿರುವ ಚೈತನ್ಯ ವಿಶಿಷ್ಟ. ಇತರ ವಿದ್ಯುಚ್ಛಕ್ತಿ ಮೂಲಗಳಿಗೆ ಇಂಧನ ಅಗತ್ಯ. ಆದರೆ ವಾಯುಶಕ್ತಿಗೆ ಇಂಧನವೂ ಬೇಡ, ಸ್ಥಳೀಯವಾಗಿ ಅದು ಲಭ್ಯವಿರುವುದರಿಂದ ಸಾಗಾಣಿಕೆಯ ಸಮಸ್ಯೆಯೂ ಇಲ್ಲ. ವಾಯುಶಕ್ತಿಯ ಬಳಕೆಯಿಂದ ಇಂಗಾಲದ ಉತ್ಸರ್ಜನೆಯ ರಗಳೆಯಿಲ್ಲ. ಪೆಟ್ರೋಲ್, ಕಲ್ಲಿದ್ದಲು, ನೈಸರ್ಗಿಕ ಅನಿಲ, ಕಟ್ಟಿಗೆ ಉರಿಸಿದರೆ ಅಪಾರ ಪ್ರಮಾಣದ ಇಂಗಾಲದ ಡೈಆಕ್ಸೈಡ್ ವಾತಾವರಣ ಸೇರುತ್ತದೆ.

ಇಂದಿಗೆ ವಿಶ್ವದ 91 ದೇಶಗಳು ವಿದ್ಯುಚ್ಛಕ್ತಿಗೆ ಮಾರುತವನ್ನೇ ನಂಬಿವೆ. ಇದರ ಫಲವಾಗಿ ವರ್ಷಕ್ಕೆ 100 ಕೋಟಿಗಿಂತಲೂ ಹೆಚ್ಚು ಟನ್ನುಗಳಷ್ಟು ಇಂಗಾಲದ ಡೈ ಆಕ್ಸೈಡ್ ವಾತಾವರಣ ಸೇರುವುದು ತಪ್ಪಿದೆ. ಕಳೆದ ಅರ್ಧ ಶತಮಾನದಲ್ಲಿ ಸರಾಸರಿ ಜಾಗತಿಕ ತಾಪಮಾನದ ಏರಿಕೆ 0.5 ಡಿಗ್ರಿ ಸೆಲ್ಸಿಯಸ್. ಒಟ್ಟು ಬಳಕೆಯಾಗುವ ಶಕ್ತಿ ಸಂಪನ್ಮೂಲಗಳ ಪೈಕಿ ಅರ್ಧದಷ್ಟು ವಾಯುವಿನದೇ ಕಾರುಬಾರಾದರೆ, 2050ರ ವೇಳೆಗೆ ಜಾಗತಿಕ ತಾಪಮಾನದ ಏರಿಕೆಯ ಪ್ರಮಾಣವನ್ನು ಶೂನ್ಯಕ್ಕಿಳಿಸಲು ಸಾಧ್ಯ.

ವಾಸ್ತವವಾಗಿ ವಾಯುಶಕ್ತಿಯ ಬಳಕೆ ಬಹು ಪ್ರಾಚೀನವಾದುದೇ. 5,000 ವರ್ಷಗಳ ಹಿಂದೆಯೇ ಈಜಿಪ್ಟಿಯನ್ನರಿಗೆ ನೈಲ್ ನದಿ ದಾಟಲು ಮಾರುತವೇ ಬಲ, ದಿಕ್ಕು. ಕ್ರಿ.ಪೂ. 2000ದ ಸುಮಾರಿನಲ್ಲಾಗಲೇ ಅಫ್ಗಾನಿಸ್ತಾನದಲ್ಲಿ 30 ಅಡಿ ಎತ್ತರದಲ್ಲಿ, 16 ಅಡಿ ಉದ್ದದ ರೆಕ್ಕೆಗಳುಳ್ಳ ಗಾಳಿಗಿರಣಿಗಳನ್ನು ಸ್ಥಾಪಿಸಲಾಗಿತ್ತು. ರೆಕ್ಕೆಗಳ ಆವರ್ತನಗಳು ಕಾಳನ್ನು ಹಿಟ್ಟಾಗಿಸುವ, ಬಟ್ಟೆ, ಪಾತ್ರೆ ತೊಳೆಯಲು ಅಥವಾ ನೀರೆತ್ತಲು, ಹರಿಸಲು ಯಾಂತ್ರಿಕ ಶಕ್ತಿಯಾಗುತ್ತಿದ್ದವು. ನಮ್ಮ ಪರಂಪರೆಯಲ್ಲಿ ಕಾಳಿನಿಂದ ಹೊಟ್ಟು ಬೇರ್ಪಡಿಸಲು ಕೇರುವುದು, ತೂರುವುದು ರೂಢಿಗತವಾಗಿದೆ.

2007ರಲ್ಲಿ ‘ಯುರೋಪಿಯನ್ ವಿಂಡ್ ಪವರ್ ಅಸೋಸಿಯೇಷನ್’ ಪ್ರತಿವರ್ಷ ಜೂನ್ 15ನ್ನು ‘ಜಾಗತಿಕ ವಾಯುಶಕ್ತಿ ದಿನ’ ಎಂದು ಸಾರಿತು. ವಾಯುಶಕ್ತಿಯ ಸಾಮರ್ಥ್ಯ ಮಾಪನ ಮತ್ತು ಅದರ ಶಕ್ತಿ ಉತ್ಪಾದಕ ವ್ಯವಸ್ಥೆಯನ್ನು ಪುನರ್ ರೂಪಿಸುವ ಸಾಧ್ಯತೆಗಳ ಮರುಶೋಧ, ಇಂಗಾಲಮುಕ್ತ ಅರ್ಥವ್ಯವಸ್ಥೆ, ಉದ್ಯೋಗಾವಕಾಶಗಳ ಕುರಿತ ಚರ್ಚೆ ಆಚರಣೆಯ ಉದ್ದೇಶ. 1951ರಲ್ಲೇ ಭಾರತದಲ್ಲಿ ಗಾಳಿಗಿರಣಿಗಳ ಸ್ಥಾಪನೆ ಆರಂಭಗೊಂಡಿತು. ಕಳೆದ ಫೆಬ್ರುವರಿ ತಿಂಗಳ ಕೊನೆಗೆ ದಾಖಲಾದ ವಾಯುಶಕ್ತಿ ಉತ್ಪಾದನೆಯ ಪ್ರಮಾಣ 39,000 ಮೆಗಾವಾಟ್‌. ಜಗತ್ತಿನಲ್ಲೇ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಚಿತ್ರದುರ್ಗ, ಗದಗ, ಚಿಕ್ಕಮಗಳೂರು ಜಿಲ್ಲೆಗಳು ಈ ದಿಸೆಯಲ್ಲಿ ಹೆಚ್ಚು ಪ್ರಗತಿ ಸಾಧಿಸಿವೆ.

ಗಾಳಿಗಿರಣಿಗಳ ಯೋಜನೆ ಅಕ್ಷರಶಃ ಪರಿಸರಸ್ನೇಹಿ. ಬೆಟ್ಟ, ಗುಡ್ಡಗಳನ್ನು ನೆಲಸಮ ಮಾಡಬೇಕಿಲ್ಲ, ಮರಗಳನ್ನು ಉರುಳಿಸಬೇಕಿಲ್ಲ, ಸಮುದಾಯಗಳನ್ನು ಗುಳೆಯೆಬ್ಬಿಸುವ ಅಗತ್ಯವಿಲ್ಲ, ಗಾಳಿಗೆ ಕಾಸು ತೆರಬೇಕಿಲ್ಲ. ಪೆಟ್ರೋಲ್, ಡೀಸೆಲ್, ಅನಿಲದ ಏರುಬೆಲೆಗಳನ್ನು ಶಪಿಸುವ ಬದಲು ಸರಳವೂ ಸರಾಗವೂ ಆದ ಮಾರುತ ಶಕ್ತಿಯ ಉತ್ಪಾದನೆಗೆ ಮತ್ತೂ ಹೆಚ್ಚು ಕಾಳಜಿಯಿಂದ ಮುಂದಾಗುವುದು ಜಾಣತನ.

ಗಾಳಿಗಿರಣಿಯ ರೆಕ್ಕೆಗಳು ವಿದ್ಯುತ್ ಉತ್ಪಾದಿಸುವ ಎಂಜಿನ್ನಿನ ತಿರುಬಾನಿಯನ್ನು ಚಾಲೂಗೊಳಿಸುತ್ತವೆ. ವೇಗದಲ್ಲಿ ಬೀಸುವ ಗಾಳಿಯಿಂದ ಒಂದು ಅಶ್ವಶಕ್ತಿಯಷ್ಟು ವಿದ್ಯುಚ್ಛಕ್ತಿ ಉತ್ಪಾದಿಸಬಹುದು. ಇಷ್ಟಾದರೂ ವಾಯುಶಕ್ತಿ ನೆಚ್ಚುವಲ್ಲಿ ಎರಡು ವಿವಾದಾತ್ಮಕ ಸಂಗತಿಗಳಿವೆ. ರೆಕ್ಕೆಗಳಿಗೆ ಪಕ್ಷಿಗಳು, ಬಾವಲಿಗಳು ಆಕಸ್ಮಿಕವಾಗಿ ಸಿಕ್ಕಿ ಮೃತಪಡುವುದು. ಇನ್ನೊಂದು, ತಿರುಬಾನಿಗಳ ಸದ್ದು. ಅಂದಹಾಗೆ ವಾಯುಶಕ್ತಿಯು ಗಾಳಿಯ ರಭಸವನ್ನು ಅವಲಂಬಿಸುವುದರಿಂದ ಬಿಟ್ಟು ಬಿಟ್ಟು ಅದು ಒದಗುತ್ತದೆ. ಆದ್ದರಿಂದ ನಿರಂತರ ವಿದ್ಯುತ್ ಉತ್ಪಾದನೆಗೆ ಈ ನ್ಯೂನತೆ ತುಂಬಲು ಇನ್ನೊಂದು ಶಕ್ತಿ ಮೂಲದ ಅಗತ್ಯವಿದೆ.

ಗಾಳಿ ಬಿರುಸಾಗಿ ಬೀಸಿ ಕಾಡು ಉರಿಸೀತು, ಮೆಲ್ಲಗೆ ಬೀಸಿ ದೀಪ ಆರಿಸೀತು ಕೂಡ. ಅದನ್ನು ಮಣಿಸುವುದು ನಮ್ಮ ವಿವೇಕಕ್ಕೆ ಬಿಟ್ಟಿದೆ. ಒಂದು ಅರ್ಥದಲ್ಲಿ ವಾಯುಶಕ್ತಿ ಆಚಂದ್ರಾರ್ಕವಾಗಿ ಸಿಗುವಂಥದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT