ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ವಾಣಿಜ್ಯೀಕರಣ ಮತ್ತು ಔದ್ಯೋಗಿಕ ವಿಸ್ತರಣೆಯೇ ಪ್ರಧಾನ ಗುರಿ ಆಗಿರುವುದರಿಂದ, ಎಲ್ಲ ಕ್ಷೇತ್ರಗಳೂ ಸಹಜವಾಗಿ ತಮ್ಮ ಆಂತರಿಕ ಶುದ್ಧತೆಯನ್ನು ಕಳೆದುಕೊಳ್ಳುತ್ತಿವೆ. ಸಾಮಾನ್ಯ ಪರಿಭಾಷೆಯಲ್ಲಿ ನಾವು ಬಳಸುವ ‘ಕಲಬೆರಕೆ’ ಎಂಬ ಅಶುದ್ಧತೆಯ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಆಧುನಿಕ ನಾಗರಿಕತೆಯಲ್ಲಿ ಜನಬಳಕೆಗೆ ತೆರೆದುಕೊಳ್ಳುವ ಎಲ್ಲ ವಲಯಗಳೂ ಮಾರುಕಟ್ಟೆಯನ್ನು ಆಕರ್ಷಿಸಲು, ತನ್ಮೂಲಕ ಬಂಡವಾಳ- ಸಂಪತ್ತನ್ನು ವೃದ್ಧಿಸಿಕೊಳ್ಳಲು ಈ ಪ್ರಕ್ರಿಯೆಯನ್ನು ಅವಲಂಬಿಸುವುದನ್ನು ಗಮನಿಸಬಹುದು. ಇದಕ್ಕೆ ತಿರುಮಲ ತಿರುಪತಿ ಲಾಡು ಇತ್ತೀಚಿನ ಸೇರ್ಪಡೆ.
ತಿರುಪತಿಯ ಪ್ರಸಾದ ಎಂದೇ ಜನರು ಭಕ್ತಿಭಾವದಿಂದ ಸೇವಿಸುವ ಲಾಡು ಈಗ ರಾಜಕೀಯ ಮೇಲಾಟಕ್ಕೆ ಸಿಲುಕಿದೆ. ಪ್ರಸಿದ್ಧ ದೇವಸ್ಥಾನಗಳು ವಾಣಿಜ್ಯೀಕರಣಗೊಂಡು ಮಾರುಕಟ್ಟೆಯ ಒಂದು ಭಾಗವಾದಂತೆಲ್ಲಾ ಅಲ್ಲಿನ ಪ್ರತಿ ಚಟುವಟಿಕೆಯೂ ಲಾಭ, ನಷ್ಟದ ಲೆಕ್ಕಾಚಾರದಲ್ಲಿ ನಡೆಯುತ್ತದೆ.
ತಿರುಪತಿಯ ಲಾಡು ತಯಾರಿಕೆಗೆ ಅಗತ್ಯವಾದ ಸಾಮಗ್ರಿಗಳ ಖರೀದಿಯನ್ನು ಹೊರಗುತ್ತಿಗೆಗೆ ನೀಡಿರುವು
ದರಿಂದ, ಇದು ಸಹ ಒಂದು ಔದ್ಯೋಗಿಕ ಉತ್ಪನ್ನವೇ ಆಗಿದೆ. ಹೀಗಾಗಿ, ಸಹಜವಾಗಿಯೇ ಉದ್ಯಮಿ ತನ್ನ ಲಾಭ ಹೆಚ್ಚಿಸಿಕೊಳ್ಳಲು ವಾಮಮಾರ್ಗಗಳ ಮೊರೆ ಹೋಗುವ ಸಾಧ್ಯತೆ ಇರುತ್ತದೆ. ಇದರ ಸತ್ಯಾಸತ್ಯತೆ ಏನೇ ಇರಲಿ, ಬಂಡವಾಳಶಾಹಿ ಆರ್ಥಿಕತೆಯಲ್ಲಿ ದೈವ-ದೈವೀಕ ಸ್ಥಾನಗಳು ಮತ್ತು ಆಚರಣೆಗಳೆಲ್ಲವೂ ಸರಕೀಕರಣಕ್ಕೆ (ಕಮಾಡಿಫಿಕೇಷನ್) ಒಳಗಾಗುವುದರಿಂದ, ಭಕ್ತಾದಿಗಳ ಕೈಸೇರುವ ಲಾಡುವಿನಂತಹ ಪ್ರಸಾದಗಳು ಸಹ ಮಾರುಕಟ್ಟೆಯ ತಂತ್ರಗಳಿಂದ ಹೊರತಾಗುವುದಿಲ್ಲ.
‘ಅತಿ ಕಡಿಮೆ ವೆಚ್ಚದಲ್ಲಿ ಅತಿ ಹೆಚ್ಚು ಲಾಭ’ ಗಳಿಸು
ವುದು ಯಾವುದೇ ಮಾರುಕಟ್ಟೆಯ ಮೂಲಮಂತ್ರ ಆಗಿರುವುದರಿಂದ ಇಲ್ಲಿ ಸಹ ಕಲಬೆರಕೆ ನಡೆದಿ
ರುವ ಸಾಧ್ಯತೆ ಇರುತ್ತದೆ. ಆದರೆ ಈ ವಿವಾದವನ್ನೂ ತನ್ನ ಲಾಭಕ್ಕೆ ಬಳಸಿಕೊಳ್ಳುವ ಅಧಿಕಾರ ರಾಜಕಾರಣದತ್ತ ಗಮನಹರಿಸಿದಾಗ ಕಾಣುವುದಾದರೂ ಏನು?
ನವ ಉದಾರವಾದಿ ಆರ್ಥಿಕತೆಯಲ್ಲಿ ರಾಜಕೀಯ ಸಹ ಕೊಡು–ಕೊಳ್ಳುವಿಕೆಯ, ಖರೀದಿ-ಬಿಕರಿ ಮಾರುಕಟ್ಟೆಯ ಜಗುಲಿಯೇ ಆಗಿದೆ. ಹಿಂದಿನ ಐದಾರು ದಶಕಗಳಿಂದಲೂ ಭಾರತದ ಗ್ರಾಹಕ ಮಾರುಕಟ್ಟೆಯನ್ನು
ಆಕ್ರಮಿಸಿರುವ ಈ ‘ಕಲಬೆರಕೆ’ ಈಗ ಜನರ ಶ್ರದ್ಧಾಭಕ್ತಿಗೆ ನೇರವಾಗಿ ನಾಟಿರುವುದರಿಂದ ರಾಜಕೀಯ ಸ್ವರೂಪವನ್ನೂ ಪಡೆದಿದೆ. ಆದರೆ ಜನಸಾಮಾನ್ಯರು ಸೇವಿಸುವ ಅಡುಗೆ ಎಣ್ಣೆ, ತರಕಾರಿ, ದವಸ ಧಾನ್ಯಗಳಿಂದ ಹಿಡಿದು, ಜೀವರಕ್ಷಣೆಗಾಗಿ ಬಳಸುವ ಔಷಧಿಗಳವರೆಗೂ ವಿಸ್ತರಿಸಿರುವ ಕಲಬೆರಕೆಯ ಬಗ್ಗೆ ಯಾವ ಪಕ್ಷವಾದರೂ ದನಿ ಎತ್ತಿರುವುದುಂಟೇ? ಕುಡಿಯುವ ನೀರಿನ ಅತಿಯಾದ ಕಲಬೆರಕೆಯಿಂದ ತಳಸಮಾಜದಲ್ಲಿ ರೋಗರುಜಿನಗಳು ಹೆಚ್ಚಾಗಿರುವ ಬಗ್ಗೆಯೂ ವಿಜ್ಞಾನಿಗಳು ಆಗಿಂದಾಗ್ಗೆ ಎಚ್ಚರಿಸುತ್ತಲೇ ಇದ್ದಾರೆ. ತಿರುಪತಿ ಲಾಡು ವಿವಾದದ ನಡುವೆಯೇ ಬಿಸಿಯೂಟ ಸೇವಿಸಿದ ಮಕ್ಕಳು ಅಸ್ವಸ್ಥರಾಗಿರುವ ಸುದ್ದಿ ಕೇಳಿಬಂದಿದೆ.
ಹಾಗೆಯೇ ಇದಾವುದೂ ಜನಪ್ರತಿನಿಧಿಗಳ ಅಥವಾ ಅಧಿಕಾರ ರಾಜಕಾರಣದ ಪರಿಭಾಷೆಯಲ್ಲಿ ‘ಭಾವನೆಗಳಿಗೆ ಧಕ್ಕೆ ಉಂಟುಮಾಡುವುದಿಲ್ಲ’. ಹಾಗಾಗಿ ಈ ಕಲಬೆರಕೆಯೊಡನೆ ಹೊಂದಾಣಿಕೆ ಮಾಡಿಕೊಂಡು ಬದುಕುವುದನ್ನು ಸಾಮಾನ್ಯರೇ ರೂಢಿಸಿಕೊಳ್ಳು
ವಂತಾಗಿದೆ. ಈ ಭಾವನಾತ್ಮಕ ರಾಜಕಾರಣದ ಮತ್ತೊಂದು ಆಯಾಮವನ್ನು ಇತ್ತೀಚೆಗೆ ಕರ್ನಾಟಕದ ಸಾರ್ವಜನಿಕ ವಲಯವನ್ನು ಆವರಿಸಿರುವ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ, ಭ್ರಷ್ಟಾಚಾರ, ಭೂ ಅತಿಕ್ರಮಣದಂತಹ ವಿವಾದಗಳಲ್ಲಿ ಗುರುತಿಸಬೇಕಿದೆ.
ಶಾಸಕರೊಬ್ಬರು ಈ ಹಿಂದೆ ಸಚಿವರಾಗಿದ್ದಾಗ ತನ್ನ ಮೇಲೆ ವಿಕಾಸಸೌಧದ ಕಚೇರಿಯ ಒಳಗೇ ಅತ್ಯಾಚಾರ ಎಸಗಿದ್ದರು ಎಂಬ ಮಹಿಳೆಯೊಬ್ಬರ ಆರೋಪ ಏನನ್ನು ತೋರಿಸುತ್ತದೆ? ಸಂವಿಧಾನ ಮತ್ತು
ಪ್ರಜಾಪ್ರಭುತ್ವದ ಶುದ್ಧತೆಯನ್ನು ಬಿಂಬಿಸಬೇಕಾದ ಆಡಳಿತಕೇಂದ್ರವೊಂದು ಕಲಬೆರಕೆಯಾಗಿದೆ
ಎಂದಲ್ಲವೇ? ಈ ನೈತಿಕ ಕಲಬೆರಕೆ ಏಕೆ ನಮ್ಮ ರಾಜಕೀಯ- ನಾಗರಿಕ ಪ್ರಜ್ಞೆಯನ್ನು ನಾಟುವುದಿಲ್ಲ?
ನವ ಉದಾರವಾದ ಮತ್ತು ಭಾವನಾತ್ಮಕ ರಾಜಕಾರಣಕ್ಕೆ ಸಿಲುಕಿ ಇಡೀ ನಾಗರಿಕ ಪ್ರಪಂಚವೇ ಇಂತಹ ಕಲಬೆರಕೆಗಳೊಡನೆ ಹೊಂದಾಣಿಕೆ ಮಾಡಿಕೊಂಡು ಬದುಕುವ ಪರಿಸ್ಥಿತಿಯಲ್ಲಿ ಇದೆ. ಇದನ್ನು ಸರಿಪಡಿಸುವುದು ಕಷ್ಟವಾದರೂ ಜಾಗೃತಿ ಮೂಡಿಸುವ ನೈತಿಕ ಜವಾಬ್ದಾರಿ ಇರುವ ವಿದ್ಯುನ್ಮಾನ ಮಾಧ್ಯಮಗಳು ವೃತ್ತಿಧರ್ಮದ ನೈತಿಕ ಕಲಬೆರಕೆಯ ಪರಾಕಾಷ್ಠೆ ತಲುಪಿರುವುದನ್ನು ದರ್ಶನ್, ಪ್ರಜ್ವಲ್, ಮುಡಾ, ಮುನಿರತ್ನ ಪ್ರಕರಣಗಳಲ್ಲಿ ನೋಡುತ್ತಿದ್ದೇವೆ. ಮಾಧ್ಯಮ ವಲಯದ ವೃತ್ತಿಶುದ್ಧತೆಯನ್ನೇ ಮರೆತಂತಿರುವ ಕೆಲವು ಸುದ್ದಿಮನೆಗಳು ಬಿತ್ತರಿಸುವ ಬ್ರೇಕಿಂಗ್ ನ್ಯೂಸ್‌ಗಳು ಸಹ, ಆಯಾ ಮಾರುಕಟ್ಟೆಯ ಅವಶ್ಯಕತೆಗಳಿಗೆ ಅನುಗುಣವಾಗಿ ಕಲಬೆರಕೆಗೆ ಒಳಗಾಗಿರುವುದು ಸುಡು ವಾಸ್ತವ.
ಸಮಾಜದ ಓರೆಕೋರೆಗಳನ್ನು ತಿದ್ದಬೇಕಾದ
ಜವಾಬ್ದಾರಿಯನ್ನೇ ಮರೆತಿರುವ ಅಧಿಕಾರ ರಾಜಕಾರಣ, ಮಾಧ್ಯಮ, ಆಡಳಿತ ವ್ಯವಸ್ಥೆ ಹಾಗೂ ಜನಪ್ರತಿನಿಧಿಗಳು ತಾವು ಪೋಷಿಸುತ್ತಿರುವ ಕಲಬೆರಕೆಯ ಸಮಾಜದತ್ತ ಒಮ್ಮೆಯಾದರೂ ಕಣ್ಣು ಹಾಯಿಸಿರುವುದುಂಟೇ?
ಶುದ್ಧೀಕರಣ ಆಗುವುದೇ ಆದರೆ ಈಗ ತುರ್ತಾಗಿ ಮೇಲಿನಿಂದ ಕೆಳಗಿನವರೆಗೆ ಇಡೀ ಆಡಳಿತ ವ್ಯವಸ್ಥೆಯ ಶುದ್ಧೀಕರಣ ಆಗಬೇಕಿದೆ. ಇದಕ್ಕೆ ಯಾವುದೇ ಧಾರ್ಮಿಕ ವಿಧಿವಿಧಾನಗಳು ಬೇಕಿಲ್ಲ. ಸಾಂವಿಧಾನಿಕ ಪ್ರಜ್ಞೆ ಮತ್ತು ಸಾಮಾಜಿಕ ನೈತಿಕತೆ-ಜವಾಬ್ದಾರಿ ಇದ್ದರೆ ಸಾಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.