ಅಂಗಾಂಗ ದಾನಿಗಳ ಕುಟುಂಬದ ಸದಸ್ಯರಿಗೆ ಪ್ರತಿವರ್ಷ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಂಸಾ ಪತ್ರಗಳನ್ನು ನೀಡಿ ಗೌರವಿಸಬೇಕು ಎಂದು ರಾಜ್ಯ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿರುವುದು ಶ್ಲಾಘನೀಯ. ಸರ್ಕಾರದ ಈ ಹೆಜ್ಜೆ ದಾನಿಯ ಕುಟುಂಬದವರಿಗೆ ಕೃತಜ್ಞತೆ ಸಲ್ಲಿಸುವುದರ ಜೊತೆಯಲ್ಲಿಯೇ ಅಂಗಾಂಗ ದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿಯೂ ಸಫಲವಾಗಬಹುದು.

ಅಂಗಾಂಗ ದಾನವು ಮಿದುಳು ನಿಷ್ಕ್ರಿಯವಾದ ವ್ಯಕ್ತಿಯಿಂದ ಮಾತ್ರ ಸಾಧ್ಯ. ಸಾವಿನ ಹಾಸಿಗೆಯಲ್ಲಿರುವ ಹತ್ತಿರದ ಸಂಬಂಧಿಯ ಅಂಗಾಂಗವನ್ನು ದಾನ ಮಾಡಲು ಕುಟುಂಬದವರಿಗೆ ಉದಾತ್ತ ಮನಃಸ್ಥಿತಿ ಬೇಕು. ತಮ್ಮ ಬಂಧುವನ್ನು ಕಳೆದುಕೊಳ್ಳುವ ನೋವಿನಲ್ಲಿರುವ ಅವರು ಇನ್ನೊಂದು ಜೀವವನ್ನು ಉಳಿಸುವಂತಹ ವಿಚಾರ ಮಾಡುವುದೇ ಒಂದು ಶ್ರೇಷ್ಠ ಸಂಗತಿ. ಪ್ರಜ್ಞಾಹೀನ ಸ್ಥಿತಿಯಲ್ಲಿರುವ ವ್ಯಕ್ತಿಯ ಶ್ವಾಸಕೋಶ, ಹೃದಯದಂತಹ ಅಂಗಾಂಗಗಳು ಕ್ಷಮತೆಯಿಂದಲೇ ಕಾರ್ಯನಿರ್ವಹಿಸುತ್ತಿರುತ್ತವೆ.

ಅಪಘಾತವಾದಾಗ ಇಂತಹ ಸನ್ನಿವೇಶ ಸಾಮಾನ್ಯ. ನಟ ಸಂಚಾರಿ ವಿಜಯ್ ಮತ್ತು ಚಿಕ್ಕಮಗಳೂರಿನ ಬಾಲಕಿ ರಕ್ಷಿತಾಳನ್ನು ಇಲ್ಲಿ ಸ್ಮರಿಸಬಹುದು. ಮಿದುಳಿಗೆ ಶಾಶ್ವತ ಪೆಟ್ಟಾಗಿ ಅದು ಪುನಃ ಮೊದಲಿನಂತೆ ಕಾರ್ಯನಿರ್ವಹಿಸುವ ಸಾಧ್ಯತೆ ಶೂನ್ಯ ಎಂದು ನರಶಸ್ತ್ರಚಿಕಿತ್ಸಕರ ತಂಡವು ದೃಢೀಕರಿಸಿದ ಮೇಲೆಯೇ ಅಂಗಾಂಗ ದಾನದ ಪ್ರಶ್ನೆ ಬರುವುದು. ರೋಗಿಯ ಸಂಬಂಧಿಗಳು ಅನುಮತಿ ಕೊಟ್ಟರೆ ಆಸ್ಪತ್ರೆಯವರು ಆ ದಿಕ್ಕಿನಲ್ಲಿ ಮುಂದುವರಿಯಬಹುದು. ಒಂದು ವೇಳೆ ಅವರು ನಿರಾಕರಿಸಿದರೆ ಅದು ಸಾಧ್ಯವಾಗುವುದಿಲ್ಲ.

ಬದಲಿ ಅಂಗಾಂಗ ಜೋಡಣೆಯ ಅವಶ್ಯಕತೆ ಇರುವ ರೋಗಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅಂಗಾಂಗ ಮತ್ತು ಅಂಗಾಂಗ ಕಸಿ ಸಂಸ್ಥೆಯಲ್ಲಿ (ಸೊಟ್ಟೊ / ನೊಟ್ಟೊ) ಹೆಸರು ನೋಂದಣಿ ಮಾಡಿಸಿರುತ್ತಾರೆ. ಅಂಗಾಂಗಗಳು ಲಭ್ಯ ಎಂದು ಗೊತ್ತಾದ ಕೂಡಲೇ ವೈದ್ಯರ ತಂಡವು ಸಂಸ್ಥೆಯ ಪಟ್ಟಿಯಲ್ಲಿರುವ ರೋಗಿಗಳನ್ನು ಬದಲಿ ಜೋಡಣೆಗಾಗಿ ಸರದಿಯ ಪ್ರಕಾರ ಆಯ್ದುಕೊಳ್ಳುತ್ತದೆ. ರೋಗಿಯ ದೇಹದ ಕ್ಷಮತೆಯನ್ನು ಪರಿಗಣನೆಯಲ್ಲಿ ಇಟ್ಟುಕೊಂಡು ಅಂಗಾಂಗ, ರಕ್ತ ಮತ್ತು ಇತರ ಅಂಶಗಳು ಹೊಂದಾಣಿಕೆಯಾದರೆ ಶಸ್ತ್ರಚಿಕಿತ್ಸೆಗೆ ಮುಂದಾಗುತ್ತದೆ. ದಾನಿಯಿಂದ ಅಂಗಾಂಗಗಳನ್ನು ತೆಗೆಯುವ ಪ್ರಕ್ರಿಯೆಯನ್ನು ಒಂದು ತಂಡ ನಡೆಸುತ್ತಿದ್ದರೆ, ಮತ್ತೊಂದು ತಂಡ ಅದನ್ನು ರೋಗಿಗೆ ಅಳವಡಿಸಲು ಸಿದ್ಧತೆ ಆರಂಭಿಸಿರುತ್ತದೆ. ಏಕೆಂದರೆ ಮುಖ್ಯ ಅಂಗಾಂಗಗಳಾದ ಹೃದಯ, ಯಕೃತ್ತು, ಮೂತ್ರಪಿಂಡದಂತಹವನ್ನು ದಾನಿಯಿಂದ ಬೇರ್ಪಡಿಸಿದ ಕೆಲವೇ ಗಂಟೆಗಳಲ್ಲಿ ರೋಗಿಗೆ ಅಳವಡಿಸಬೇಕು. ಈ ದಿಸೆಯಲ್ಲಿ ಜೀರೊ ಟ್ರಾಫಿಕ್ ವ್ಯವಸ್ಥೆಯ ಪಾತ್ರ ಕೂಡ ಮಹತ್ವದ್ದು.

ಅಂಗಾಂಗ ಬೇರ್ಪಡಿಸುವವರೆಗೂ ದಾನಿಗೆ ಕೃತಕ ಉಸಿರಾಟದ ವ್ಯವಸ್ಥೆ, ದ್ರವಾಂಶ ಹಾಗೂ ಇನ್ನಿತರ ಪೌಷ್ಟಿಕಾಂಶಗಳ ಪೂರೈಕೆ ನಡೆಯುತ್ತಲೇ ಇರಬೇಕು. ಏಕೆಂದರೆ, ಬೇರ್ಪಡುವ ಅಂಗಾಂಗಗಳು ಆರೋಗ್ಯವಾಗಿದ್ದು ರೋಗಿಗೆ ಕಸಿ ಮಾಡಿದ ನಂತರವೂ ಅಷ್ಟೇ ಕ್ಷಮತೆಯಿಂದ ಕಾರ್ಯನಿರ್ವಹಿಸುವುದು ಬಹಳ ಮುಖ್ಯ. ಇಂತಹ ಸೌಲಭ್ಯಗಳು ಕೆಲವೇ ಆಸ್ಪತ್ರೆಗಳಲ್ಲಿ ಇರುವುದರಿಂದ ಇದೊಂದು ಸಂಕೀರ್ಣ ಪ್ರಕ್ರಿಯೆ.

ಸಹಜ ಮರಣಾನಂತರ ನೇತ್ರದಾನ ಮತ್ತು ದೇಹದಾನ ಮಾತ್ರ ಸಾಧ್ಯ. ಈ ಪ್ರಕ್ರಿಯೆಯ ಬಗ್ಗೆ ಜನರಲ್ಲಿ ಅರಿವು ಕಡಿಮೆ ಎಂದೇ ಹೇಳಬಹುದು. ಇತ್ತೀಚೆಗೆ ಮರಣ ಹೊಂದಿದ ಆತ್ಮೀಯರೊಬ್ಬರ ದೇಹವನ್ನು ಹೊರದೇಶದಿಂದ ಬರಲಿದ್ದ ಅವರ ಪುತ್ರನಿಗೆ ಕಾಯಬೇಕಾಗಿದ್ದ ಸಲುವಾಗಿ ಶೀತಲ ಶೇಖರಣಾ ವ್ಯವಸ್ಥೆಯಲ್ಲಿ ಇಡಲಾಗಿತ್ತು. ಆ ರೀತಿ ಇರಿಸಿದ ದೇಹವನ್ನು ಮೃತ ವ್ಯಕ್ತಿಯ ಆಶಯದಂತೆ ವೈದ್ಯಕೀಯ ಕಾಲೇಜಿಗೆ ದಾನ ಮಾಡಬಹುದು ಎಂದೇ ಸಂಬಂಧಿಗಳು ತಿಳಿದಿದ್ದರು. ಸಮೀಪದ ಕಾಲೇಜಿನ ಅಂಗರಚನಾಶಾಸ್ತ್ರದ ಮುಖ್ಯಸ್ಥರಲ್ಲಿ ವಿಚಾರಿಸಿದಾಗ, ಮರಣ ಹೊಂದಿದ ಆರು ತಾಸುಗಳ ಒಳಗಾಗಿಯೇ ದೇಹವನ್ನು ಅಧ್ಯಯನಕ್ಕೆ ಬೇಕಾಗುವಂತೆ ವಿಶೇಷ ಪ್ರಕ್ರಿಯೆಗೆ ಒಳಪಡಿಸಬೇಕಾಗಿತ್ತು, ಈಗ ಅದು ಸಾಧ್ಯವಾಗದು ಎಂಬ ಉತ್ತರ ಬಂತು. ಇದರಿಂದ ಸಂಬಂಧಿಗಳು ಬೇಸರಗೊಂಡರು.

ತಮ್ಮ ದೇಹವನ್ನು ವೈದ್ಯಕೀಯ ವಿದ್ಯಾಲಯಗಳಿಗೆ ದಾನ ಮಾಡಲು ಇಚ್ಛಿಸುವವರು ಹತ್ತಿರದ ವೈದ್ಯಕೀಯ ಸಂಸ್ಥೆಯನ್ನು ಮೊದಲೇ ಸಂಪರ್ಕ ಮಾಡಿ ಆ ಬಗ್ಗೆ ತಿಳಿಸಿರಬೇಕು. ಮರಣ ಸಂಭವಿಸಿದ ಕೂಡಲೇ ಸಂಸ್ಥೆಯ ಸಂಬಂಧಪಟ್ಟ ಸಿಬ್ಬಂದಿಗೆ ಕರೆ ಮಾಡಿ ತಿಳಿಸಬೇಕು. ಸಹಜ ಸಾವಿನ ನಂತರ ಹೆಚ್ಚು ಜನರು ನೇತ್ರದಾನಕ್ಕೆ ಮುಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ದೇಹದಾನ ಮಾಡುವವರ ಸಂಖ್ಯೆ ತೀರಾ ಕಡಿಮೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಶರೀರದ ಅಂಗಾಂಗ ರಚನೆಯ ಅಧ್ಯಯನಕ್ಕೆ, ಸಂಶೋಧನೆಗೆ ಮತ್ತು ವಸ್ತುಸಂಗ್ರಹಾಲಯದಲ್ಲಿ ಅಂಗಾಂಗ ಮಾದರಿಗಳನ್ನು ಸಂಗ್ರಹಿಸಲು ಈ ರೀತಿ ದಾನ ಮಾಡಿದ ದೇಹಗಳು ಅವಶ್ಯ.

3ಡಿ ತಂತ್ರಜ್ಞಾನದ ‘ವರ್ಚುವಲ್ ಡಿಸೆಕ್ಷನ್ ಟೇಬಲ್’ ಇತ್ತೀಚಿನ ದಿನಗಳಲ್ಲಿ ಕೆಲವು ವಿದ್ಯಾಲಯಗಳಲ್ಲಿ ಲಭ್ಯವಿದ್ದರೂ ಶವಛೇದನ ಮಾಡಿ ಅಧ್ಯಯನ ಮಾಡಿದಾಗ ಸಿಗುವ ಆಳದ ಜ್ಞಾನ ವಿಭಿನ್ನವಾದದ್ದು. ಆದ್ದರಿಂದ, ದೇಹದಾನಕ್ಕೆ ಮುಂದಾದ ಕುಟುಂಬದ ಸದಸ್ಯರಿಗೆ ದಾನ ಪಡೆದ ವೈದ್ಯಕೀಯ ಸಂಸ್ಥೆ ಮತ್ತು ಜಿಲ್ಲಾಡಳಿತವು ಸಾರ್ವಜನಿಕ ಸಮಾರಂಭಗಳಲ್ಲಿ ಗೌರವ ಸೂಚಿಸುವ ಪರಿಪಾಟವನ್ನು ಬೆಳೆಸಿಕೊಳ್ಳಬೇಕು.

ಲೇಖಕಿ: ರೋಗಲಕ್ಷಣ ಶಾಸ್ತ್ರಜ್ಞೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.