ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಆರೋಗ್ಯ ಹಕ್ಕು: ಪಂಚ ಸೂತ್ರ

Published 5 ಏಪ್ರಿಲ್ 2024, 0:11 IST
Last Updated 5 ಏಪ್ರಿಲ್ 2024, 0:11 IST
ಅಕ್ಷರ ಗಾತ್ರ

ಸಾವು, ನೋವು, ಅಸಮರ್ಥತೆಯ ಭಯ ಜಗತ್ತನ್ನು ಕಾಡುತ್ತಿದೆ. ಇವುಗಳ ಹಿಂದೆ ಯಾವ ಕಾರಣಗಳಿವೆ ಎಂಬ ಪ್ರಶ್ನೆಗೆ ಇಂದು ಉತ್ತರ ವೈವಿಧ್ಯಮಯ. ಸೋಂಕು ರೋಗಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾ, ವೈರಸ್‍ಗಳಷ್ಟೇ ನಮ್ಮ ಜೀವನಶೈಲಿ, ಆಹಾರ, ವಾತಾವರಣ, ನಮ್ಮನ್ನು ಆವರಿಸಿರುವ ತಾಂತ್ರಿಕ ಸಾಧನಗಳು ಆರೋಗ್ಯದ ಸಮಸ್ಯೆಗಳನ್ನು ದಿಢೀರ್ ಎಂದು ತಂದು, ದೀರ್ಘಕಾಲಿಕವಾಗಿ ಅವುಗಳನ್ನು ನಮ್ಮ ಜೀವನದಲ್ಲಿ ಉಳಿಸಿಬಿಡುವ ಅಪಾಯದ ಹೊತ್ತು ಇದು. ಇಂತಹ ಪರಿಸ್ಥಿತಿಯಲ್ಲಿ ಈ ಬಾರಿಯ ‘ವಿಶ್ವ ಆರೋಗ್ಯ ದಿನ’ದ (ಏ. 7) ‘ನನ್ನ ಆರೋಗ್ಯ, ನನ್ನ ಹಕ್ಕು’ ಎಂಬ ಧ್ಯೇಯವಾಕ್ಯವು ಆರೋಗ್ಯಕ್ಕೂ ಅದಕ್ಕಿರುವ ಸಾಮಾಜಿಕ, ಜೈವಿಕ, ಆರ್ಥಿಕ ನಂಟುಗಳಿಗೂ ಆರೋಗ್ಯದ ಚಿಂತನೆಯನ್ನು ವಿಸ್ತರಿಸುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಒಂದು ಸಮಿತಿಯು ಆರೋಗ್ಯ ಸೇವೆ, ಮಾಹಿತಿಗಳನ್ನು ಪಡೆಯಲು ಜನರಿಗೆ ಯಾವ ಅಡ್ಡಿಗಳಿವೆ ಎಂಬ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿದೆ. ಅದು ಹೇಳಿರುವಂತೆ, ಜಗತ್ತಿನ ಕನಿಷ್ಠ 140 ದೇಶಗಳು ತಮ್ಮ ಸಂವಿಧಾನದಲ್ಲಿ ಆರೋಗ್ಯವನ್ನು ‘ಮಾನವ ಹಕ್ಕು’ಗಳಲ್ಲಿ ಒಂದಾಗಿಸಿವೆ. ಆದರೆ ಹಾಗೆ ಮಾಡಿದ ಮಾತ್ರಕ್ಕೆ ಅದು ಅನುಷ್ಠಾನಗೊಂಡಿದೆ ಎಂಬುದಕ್ಕೆ ಖಾತರಿಯಿಲ್ಲ.

ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಗಳು ‘ಪ್ರಗತಿಪರ’ ಎನ್ನುವಂತೆ ಆಗಿವೆ. ಜನರ ತಿಳಿವಳಿಕೆ ಹೆಚ್ಚಿದೆ. ಮಾಹಿತಿ ಧಾರಾಳವಾಗಿ ಲಭ್ಯವಿದೆ. ಎಷ್ಟೋ ವಿಧದ ವಿಮಾ ಯೋಜನೆಗಳು, ಕಡಿಮೆ ಬೆಲೆಗೆ ಸಿಗುವ ಔಷಧಿಗಳು ಆರೋಗ್ಯ ಸೇವೆ ಸುಲಭವಾಗಿ ಕೈಗೆಟಕುವಂತೆ ಮಾಡಿವೆ. ಆದರೆ ಆರೋಗ್ಯದ ಗುಣಮಟ್ಟ ಹೆಚ್ಚಿದೆಯೇ? ಸ್ವತಃ ಜನರು ಕೈ ಜೋಡಿಸದೆ, ಆಡಳಿತ ವ್ಯವಸ್ಥೆಗಳು ಮಾತ್ರ ತಮ್ಮ ಕೆಲಸ ಮುಂದುವರಿಸಿದರೆ ‘ನ್ಯಾಯಯುತ ಸಮಾನತೆ’ ಎನ್ನುವುದು ಅರ್ಧಂಬರ್ಧ ಮಾತ್ರ
ಸಾಧ್ಯವಾಗಬಹುದು.

‘ಆರೋಗ್ಯವೂ ಒಂದು ಹಕ್ಕು’ ಎಂಬುದರ ಅರಿವು ಮೊದಲ ಹೆಜ್ಜೆಯಾಗಬೇಕು. ಇದಕ್ಕೆ ತಕ್ಕ ಸಮಯ ಮಕ್ಕಳ ಬಾಲ್ಯವೇ. ವಿಜ್ಞಾನದ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಬೇಕು ಎನ್ನುವ ಶಾಲೆಗಳು ಮತ್ತು ಪೋಷಕರು, ಮಕ್ಕಳು ಸ್ವತಃ ಆರೋಗ್ಯದ ಬಗ್ಗೆ ಗಮನಹರಿಸುವುದನ್ನು, ಪ್ರಾಯೋಗಿಕವಾಗಿ ದಿನಚರಿಯಲ್ಲಿ ಆರೋಗ್ಯಕರ ಊಟ, ನಿದ್ರೆ, ವ್ಯಾಯಾಮ, ಆಟಗಳನ್ನು ಪಾಲಿಸುವುದನ್ನು ಪ್ರೋತ್ಸಾಹಿಸದಿರುವುದು ಅಚ್ಚರಿಯ ಸಂಗತಿ.

ಮಕ್ಕಳೊಂದಿಗೆ ಸಮಯ ಕಳೆಯದಿರುವುದು, ಆಟದ ಬದಲು ಯಂತ್ರಗಳ ವ್ಯಸನವನ್ನು ಹಿಡಿಸುವುದು, ಒಂದೇ ಸಮನೆ ಓದುತ್ತಾ ಅಂಕ ಗಳಿಕೆಯ ಹಿಂದೆ ಓಡುವಂತೆ ಮಾಡುವುದು ಇವೆಲ್ಲದರ ಮೂಲಕ ಆರೋಗ್ಯದ ಹಕ್ಕನ್ನು ಪ್ರತಿನಿತ್ಯ ಮಕ್ಕಳಿಂದ ನಾವು ಕಸಿಯುತ್ತಿದ್ದೇವೆ! ಜೀವನದ ಮತ್ತೊಂದು ತುದಿಯಲ್ಲಿರುವ ಹಿರಿಯ ನಾಗರಿಕರ ಆರೋಗ್ಯದ ಹಕ್ಕುಗಳನ್ನಂತೂ ಕೇಳುವವರೇ ಇಲ್ಲ! ಹಿರಿಯರನ್ನು ಗೌರವಿಸುವ ಸಮಾಜ ನಮ್ಮದು ಎಂದು ಮೇಲ್ನೋಟಕ್ಕೆ ಅನ್ನಿಸಿದರೂ, ಆರೋಗ್ಯ ಕಾಳಜಿಯ ವಿಷಯದಲ್ಲಿ ಇದು ಕಂಡುಬರದಿರುವುದು ಸಾಮಾನ್ಯ.

ನೇರವಾಗಿ ಆರೋಗ್ಯ ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿದ ಮತ್ತೊಂದು ನಿದರ್ಶನವೂ ನೆನಪಾಗುತ್ತಿದೆ. ಹಸಿವು ಮತ್ತು ಬಡತನದಿಂದ ನರಳುವ ಜಗತ್ತಿನಲ್ಲಿ ಸುಮಾರು 100 ಕೋಟಿ ಜನರಿಗೆ ಜನ್ಮದಾಖಲೆಯೇ ಇಲ್ಲ. ಅದೇನು ದೊಡ್ಡದು?! ಮುಂಬೈನ ಕೊಳೆಗೇರಿಯೊಂದರಲ್ಲಿ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಪೋಲಿಯೊಪೀಡಿತ ಬಾಲಕಿಯೊಬ್ಬಳು ಬಿದ್ದಿದ್ದನ್ನು ನೋಡಿದರು. ಕತ್ತಲ ಕೋಣೆಯೊಂದರಲ್ಲಿ ತನ್ನ ಜೀವನವನ್ನು ಕಳೆಯುತ್ತಿದ್ದ ಆಕೆ ಪೌಷ್ಟಿಕ ಆಹಾರ ಕಂಡಿರಲಿಲ್ಲ. ಆರೋಗ್ಯ
ಮೇಲ್ವಿಚಾರಕರಿಗೆ ‘ಮೊದಲು ಇವಳ ಜನ್ಮದಾಖಲೆ ಪತ್ರವನ್ನು ನಾವು ಮಾಡಿಸಬೇಕು!’ ಎಂದಾಕೆ ಹೇಳಿದರು. ‘ಅರೆ ಮೊದಲು ಆಕೆಯ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಕೊಡಿಸಬೇಕಲ್ಲವೇ?’ ಎಂದರೆ, ‘ಅದನ್ನು ಮಾಡಬೇಕೆಂದೇ ನಾನು ಜನ್ಮದಾಖಲೆ ಪತ್ರ ಬೇಕು ಅಂದದ್ದು’ ಎಂದಾಕೆ ಹೇಳಿದರು! ಅಂದರೆ, ಅಧಿಕೃತವಾಗಿ ಸರ್ಕಾರಿ ದಾಖಲೆಗಳಲ್ಲಿರದ ಯಾವುದೇ ವ್ಯಕ್ತಿ ಸರ್ಕಾರದ ಆರೋಗ್ಯ ಸೌಲಭ್ಯಗಳನ್ನು ಪಡೆಯಲೂ ಅರ್ಹವಾಗುವುದಿಲ್ಲ! ಬದುಕುವುದಕ್ಕೆ ಹೋಗಲಿ, ಘನತೆಯ ಅಂತ್ಯಸಂಸ್ಕಾರ ಬೇಕೆಂದರೂ ಚಿತಾಗಾರದಲ್ಲಿ ಮೃತ ವ್ಯಕ್ತಿಯ ‘ಆಧಾರ್’ ಕಾರ್ಡು ಬೇಕೇ ಬೇಕು! ಮೊನ್ನೆ ಒಬ್ಬ ಆತ್ಮೀಯರು ಹೇಳಿದ್ದು ‘ಒಂದೊಮ್ಮೆ ನಮ್ಮ ಅಜ್ಜಿಯ ಅಂತ್ಯಕ್ರಿಯೆಗೆ ಚಿತಾಗಾರದವರು ಆಧಾರ್ ಅಪ್‌ಡೇಟ್ ಆಗಿರಲೇಬೇಕು ಎಂದಿದ್ದರೆ ನಾನೇನು ಮಾಡಬೇಕಿತ್ತು?!’

ಆರೋಗ್ಯದ ಹಕ್ಕು ಎಲ್ಲರದ್ದಾಗಬೇಕೆಂದರೆ ನಾವು 5 ಸೂತ್ರಗಳತ್ತ ಗಮನಹರಿಸಬೇಕು. ಚಿಕಿತ್ಸೆಗೆ ಜನರು ಬರುವ ಅಂತರವನ್ನು ವಿವಿಧ ರೀತಿಗಳಲ್ಲಿ ಕಡಿಮೆ ಮಾಡಬೇಕು. ಆರೋಗ್ಯಕ್ಕೆ ಸಂಬಂಧಿಸಿದ ಬಜೆಟ್ ಏರಬೇಕು. ಪ್ರಕ್ರಿಯೆ ಸರಳವಾಗಿಸಲು ಹೊಸ ಆಲೋಚನೆಗಳು ಬೇಕು. ಆರೋಗ್ಯ ಸೇವೆಗಳಿಗೆ ಅವಶ್ಯಕವಾದ ಜನ್ಮದಾಖಲೆಯಂತಹ ದಾಖಲೀಕರಣಕ್ಕೆ ಇರುವ ವ್ಯವಸ್ಥೆಯನ್ನು ಸುಲಭವಾಗಿಸಬೇಕು. ಆರೋಗ್ಯ ಸೇವೆ ಪಡೆಯುವ ಫಲಾನುಭವಿಗಳು ತಮ್ಮ ಸಕಾರಾತ್ಮಕ ಅನುಭವಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕು.

ಜನಪ್ರತಿನಿಧಿಗಳು ಸರ್ಕಾರಿ ಆಸ್ಪತ್ರೆಗಳಿಗೆ ದಿಢೀರ್‌ ಭೇಟಿ ನೀಡಿ ಸಿಬ್ಬಂದಿಯ ಮೇಲೆ ಹರಿಹಾಯುವ ಚಿತ್ರಣಕ್ಕೆ ಬದಲು, ಸರ್ಕಾರಿ ಆಸ್ಪತ್ರೆಗಳಲ್ಲಿ ಯಶಸ್ವಿ ಚಿಕಿತ್ಸೆ ಪಡೆದಿರುವುದು ಮಾಧ್ಯಮಗಳಲ್ಲಿ ಪ್ರಸಾರಗೊಂಡು, ಸರ್ಕಾರಿ ಆರೋಗ್ಯ ವ್ಯವಸ್ಥೆಯ ಬೇಡಿಕೆ ಹೆಚ್ಚಿಸಬೇಕು. ಆರೋಗ್ಯ ಅವರವರ ಹಕ್ಕಾಗಿ ಪ್ರತಿಯೊಬ್ಬರಿಗೂ ದೊರಕುವತ್ತ ಸಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT